ಮುಂಬೈ

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಹಂಚಿಕೆಯಾಗುವ ತೆರಿಗೆಯ ಪಾಲು ಶೇ.53.4ರಿಂದ ಶೇ.48.6ಕ್ಕೆ ಇಳಿಕೆಯಾಗಿದೆ. ಒಟ್ಟು ಎಂಟು ರಾಜ್ಯಗಳಿಗೆ ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯನ್ನು ಕಡಿತಗೊಳಿಸಿದ್ದು, ಇದರಲ್ಲಿ ಅತಿಹೆಚ್ಚು ನಷ್ಟಮಾಡಿಕೊಂಡ ರಾಜ್ಯ ಕರ್ನಾಟಕ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಇಂಡಿಯಾ ರೇಟಿಂಗ್ಸ್‌ ಕಂಪನಿ 14 ಮತ್ತು 15ನೇ ಹಣಕಾಸು ಆಯೋಗದ ವರದಿಗಳ ಅನುಸಾರ ರಾಜ್ಯಗಳಿಗೆ ಬದಲಾಗಿರುವ ಕೇಂದ್ರ ಸರ್ಕಾರದ ತೆರಿಗೆಯ ಪಾಲು ಮತ್ತು ಅನುದಾನದ ಹಂಚಿಕೆಯ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಯಾವ್ಯಾವ ರಾಜ್ಯಗಳಿಗೆ 2011-12ನೇ ಸಾಲಿನಿಂದ 2019-20ನೇ ಸಾಲಿನ ನಡುವಿನಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಕಡಿತವಾಗಿದೆ ಎಂಬ ವಿವರಗಳಿವೆ. ಅದರ ಪ್ರಕಾರ ಕರ್ನಾಟಕಕ್ಕೆ ಅತಿಹೆಚ್ಚು, ಅಂದರೆ 118 ಬೇಸಿಕ್‌ ಪಾಯಿಂಟ್‌ (ಬಿಪಿಎಸ್‌)ಗಳಷ್ಟುತೆರಿಗೆ ಕಡಿತವಾಗಿದ್ದು, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹಂಚುವ ತನ್ನ ಆದಾಯದ ಒಟ್ಟು ಶೇ.48.6ರಷ್ಟುಮೊತ್ತದಲ್ಲಿ ಕರ್ನಾಟಕಕ್ಕೆ ನೀಡುವ ಪಾಲನ್ನು ಶೇ.3.64ಕ್ಕೆ ಇಳಿಕೆ ಮಾಡಿದೆ. ಉತ್ತರ ಪ್ರದೇಶವು ಕೇಂದ್ರದ ತೆರಿಗೆ ಪಾಲಿನಲ್ಲಿ ಅತಿಹೆಚ್ಚು ಪಡೆಯುತ್ತಿದ್ದು, ಅದು ಶೇ.17.94ರಷ್ಟಾಗಿದೆ. ಅಂದರೆ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ಈ ವರ್ಷ 100 ರು. ಹಂಚಿಕೆ ಮಾಡಬೇಕು ಎಂದು ತೆಗೆದಿಟ್ಟಿದ್ದರೆ, ಅದರಲ್ಲಿ 17.94 ರು. ಉತ್ತರ ಪ್ರದೇಶಕ್ಕೂ, 3.6 ರು. ಕರ್ನಾಟಕಕ್ಕೂ ಸಿಗುತ್ತದೆ. ಅತಿಹೆಚ್ಚು ತೆರಿಗೆ ಪಾಲು ಕಳೆದುಕೊಂಡ 2ನೇ ರಾಜ್ಯ ಕೇರಳ ಮತ್ತು ಮೂರನೇ ರಾಜ್ಯ ತೆಲಂಗಾಣ ಆಗಿದೆ.

ಕೇಂದ್ರದಿಂದ ಅತಿಹೆಚ್ಚು ತೆರಿಗೆಯ ಪಾಲು ಪಡೆಯುವ 5 ರಾಜ್ಯಗಳು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ಆಗಿವೆ.

ಯಾವ ರಾಜ್ಯಕ್ಕೆ ಎಷ್ಟುನಷ್ಟ?

ರಾಜ್ಯ - ನಷ್ಟ(ಬಿಪಿಎಸ್‌) - ಸಿಗುವ ತೆರಿಗೆ ಪಾಲು

ಕರ್ನಾಟಕ - 118 - 3.64%

ಕೇರಳ - 60 - 1.93%

ತೆಲಂಗಾಣ - 40 - 2.10%

ಆಂಧ್ರ ಪ್ರದೇಶ - 35 - 4.05%

ಉತ್ತರ ಪ್ರದೇಶ - 27 - 17.93%

ಅಸ್ಸಾಂ - 24 - 3.13%

ಒಡಿಶಾ - 22 - 4.53%

ತಮಿಳುನಾಡು - 2 - 4.08%

ಯಾವ ರಾಜ್ಯಕ್ಕೆ ಲಾಭ?

ರಾಜ್ಯ - ಲಾಭ (ಬಿಪಿಎಸ್‌) - ಸಿಗುವ ತೆರಿಗೆ ಪಾಲು

ಮಹಾರಾಷ್ಟ್ರ - 64 - 6.32%

ರಾಜಸ್ಥಾನ - 38 - 6.03%

ಅರುಣಾಚಲ ಪ್ರದೇಶ - 33 - 1.76%

ಗುಜರಾತ್‌ - 31 - 3.48%