ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಗೆ ನೋಂದಣಿ ಮಾಡಿಲ್ವಾ? ಗಡುವು ವಿಸ್ತರಣೆ; ಕೊನೆಯ ದಿನದ ಬಗ್ಗೆ ಇಲ್ಲಿದೆ ಮಾಹಿತಿ..
Fasal Bima Yojana ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಣಿಗೆ ಜುಲೈ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ, ಹೆಚ್ಚಿನ ರೈತರು ಯೋಜನೆಗೆ ಸೇರಬಹುದು ಅನ್ನೋ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಗಡುವು ವಿಸ್ತರಣೆಯಾಗಿದೆ.
ನವದೆಹಲಿ (ಆಗಸ್ಟ್ 5, 2023): ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ನೋಂದಣಿಗೆ ಗಡುವನ್ನು ಕೇಂದ್ರ ಸರ್ಕಾರ ವಿಸ್ತರಿಸಿದೆ. ಈ ಹಿಂದೆ ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಣಿಗೆ ಜುಲೈ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ ಕೆಲವು ರಾಜ್ಯಗಳು ಗಡುವನ್ನು ವಿಸ್ತರಿಸಲು ಒತ್ತಾಯಿಸಿದ ಕಾರಣ ಕೆಲ ರಾಜ್ಯಗಳ ಗಡುವು ವಿಸ್ತರಣೆಯಾಗಿದ್ದು, ಇದೇ ರೀತಿ ಕರ್ನಾಟಕದಲ್ಲೂ ನೋಂದಣಿಗೆ ಇನ್ನೂ ಕೆಲ ದಿನಗಳ ಕಾಲ ಅವಕಾಶ ನೀಡಿದೆ.
ಪಿಎಂಎಫ್‌ಬಿವೈ ಅಡಿಯಲ್ಲಿ ನೋಂದಣಿಗೆ ಜುಲೈ 31 ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಆದರೆ, ಹೆಚ್ಚಿನ ರೈತರು ಯೋಜನೆಗೆ ಸೇರಬಹುದು ಅನ್ನೋ ಕಾರಣಕ್ಕೆ ಹಲವು ರಾಜ್ಯಗಳಲ್ಲಿ ಗಡುವು ವಿಸ್ತರಣೆಯಾಗಿದೆ. ಕರ್ನಾಟಕದಲ್ಲಿ ಆಗಸ್ಟ್ 16 ರವರೆಗೆ ನೋಂದಣಿಗೆ ಕಾಲಾವಕಾಶ ನೀಡಲಾಗಿದೆ. ಕರ್ನಾಟಕ ರೈತ ಪ್ರಧಾನ್ ಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅಗ್ರಿಕಲ್ಚರ್ ಇನ್ಶೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ವತಿಯಿಂದ 2023-24 ರ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರಾಜ್ಯದ 9 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸುವುದಾಗಿ ಅಧಿಸೂಚನೆ ಹೊರಡಿಸಿದೆ.
ಇದನ್ನು ಓದಿ: ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಆಮದು ನಿಷೇಧ ಇಲ್ಲ; ಐಟಿ ಸಚಿವಾಲಯ ಸ್ಪಷ್ಟನೆ: ಪರವಾನಗಿ ನಿರ್ಬಂಧ ಆದೇಶ ಮುಂದೂಡಿಕೆ
ಇದೇ ರೀತಿ, ಉತ್ತರ ಪ್ರದೇಶದ ರೈತರು ತಮ್ಮನ್ನು ನೋಂದಾಯಿಸಿಕೊಳ್ಳಲು ಕೊನೆಯ ದಿನಾಂಕವನ್ನು ಆಗಸ್ಟ್ 10 ಕ್ಕೆ ಮುಂದೂಡಲಾಗಿದೆ ಎಂದು ರಾಜ್ಯ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. "ಉತ್ತರ ಪ್ರದೇಶದಲ್ಲಿ, ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (ಪಿಎಂಎಫ್‌ಬಿವೈ) ಅಡಿಯಲ್ಲಿ ನೋಂದಣಿಗೆ ಗಡುವನ್ನು ಆಗಸ್ಟ್ 10 ರವರೆಗೆ ವಿಸ್ತರಿಸಲಾಗಿದೆ" ಎಂದು ಯುಪಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದರು.
ಈ ಮಧ್ಯೆ, ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಯ ಪ್ರಕಾರ, PMFBY ಅಡಿಯಲ್ಲಿ ನೋಂದಣಿಯ ಕೊನೆಯ ದಿನಾಂಕವನ್ನು ಮಹಾರಾಷ್ಟ್ರದಲ್ಲಿ ಆಗಸ್ಟ್ 3, ಒಡಿಶಾ ಮತ್ತು ಅಸ್ಸಾಂನಲ್ಲಿ ಆಗಸ್ಟ್ 5, ಯುಪಿ ಮತ್ತು ರಾಜಸ್ಥಾನದಲ್ಲಿ ಆಗಸ್ಟ್ 10, ಗೋವಾದಲ್ಲಿ ಆಗಸ್ಟ್ 15, ಮಣಿಪುರ, ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಆಗಸ್ಟ್ 16 ರವರೆಗೆ ವಿಸ್ತರಿಸಲಾಗಿದೆ. ಹಾಗೆ, ಶುಂಠಿ ಬೆಳೆಗಾರರಿಗೆ ಮೇಘಾಲಯದಲ್ಲಿ ಆಗಸ್ಟ್ 7 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ಆ್ಯಪಲ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ: iPhone 15 ರಿಲೀಸ್ ಡೇಟ್ ಬಹಿರಂಗ; ಹೊಸ ಫೋನ್‌ನಲ್ಲಿರಲಿದೆ ಈ ಫೀಚರ್ಸ್!
ಇನ್ನೊಂದೆಡೆ, ಜುಲೈ 30 ರಂದು ಪಿಎಂಎಫ್‌ಬಿವೈಯ 2023 ಖಾರಿಫ್ ಋತುವಿನಲ್ಲಿ ದೇಶಾದ್ಯಂತ 48.50 ಲಕ್ಷಕ್ಕೂ ಹೆಚ್ಚು ರೈತರು ತಮ್ಮನ್ನು ನೋಂದಾಯಿಸಿಕೊಂಡಾಗ ಕೇಂದ್ರವು ಒಂದೇ ದಿನಕ್ಕೆ ಗರಿಷ್ಠ ಸಂಖ್ಯೆಯ ನೋಂದಣಿಗಳನ್ನು ಸ್ವೀಕರಿಸಿದೆ ಎಂದು ಅಧಿಕಾರಿ ಹೇಳಿದರು. "ಇದು ಒಂದೇ ದಿನದಲ್ಲಿ 41.10 ಲಕ್ಷ ನೋಂದಣಿಯ 2019 ರ ದಾಖಲೆಯನ್ನು ಮುರಿದಿದೆ" ಎಂದು ಡೇಟಾವನ್ನು ಉಲ್ಲೇಖಿಸಿ ಅಧಿಕಾರಿ ಹೇಳಿದರು.
ಇಲ್ಲಿಯವರೆಗೆ, ಡೇಟಾ ಪ್ರಕಾರ, 2023 ರ ಖಾರಿಫ್ ಋತುವಿಗಾಗಿ ದೇಶದಾದ್ಯಂತ 3 ಕೋಟಿಗೂ ಹೆಚ್ಚು ರೈತರು PMFBY ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ದೇಶದ ಆರ್ಥಿಕತೆ ಪ್ರಗತಿಗೆ ಸಾಕ್ಷಿ: ಭಾರತದ ರೇಟಿಂಗ್ ಹೆಚ್ಚಿಸಿ ಚೀನಾ ರೇಟಿಂಗ್ ಇಳಿಸಿದ Morgan Stanley ಸಂಸ್ಥೆ