ನವದೆಹಲಿ(ಜು.30): ಮೂರು ದಿನಗಳ ಹಿಂದಷ್ಟೇ ರಾಜ್ಯಗಳಿಗೆ 2019-20ನೇ ಸಾಲಿನ ಜಿಎಸ್‌ಟಿ ಪರಿಹಾರದ ಮೊತ್ತ 1.65 ಲಕ್ಷ ಕೋಟಿ ರು. ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ ಇದೀಗ ಕಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಸದ್ಯಕ್ಕೆ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಹಣ ನೀಡಲು ಸಾಧ್ಯವಾಗದೆ ಹೋಗಬಹುದು ಎಂದು ಸಂಸದೀಯ ಸ್ಥಾಯಿ ಸಮಿತಿಗೆ ಕೇಂದ್ರ ಸರ್ಕಾರ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ರಾಜ್ಯಕ್ಕೆ 18,628 ಕೋಟಿ ರು. ಜಿಎಸ್‌ಟಿ ಪರಿಹಾರ ಬಿಡುಗಡೆ!

ಕೊರೋನಾ ವೈರಸ್‌ನಿಂದ ಉಂಟಾದ ಆರ್ಥಿಕ ಬಿಕ್ಕಟ್ಟಿನಿಂದ ಕೇಂದ್ರ ಸರ್ಕಾರಕ್ಕೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹ ಬಹಳ ಕಡಿಮೆಯಾಗಿದೆ. ಕಳೆದ ವರ್ಷದ ಏಪ್ರಿಲ್‌-ಜೂನ್‌ ತ್ರೈಮಾಸಿಕದಲ್ಲಿ 3.14 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿದ್ದರೆ 2020ರ ಇದೇ ಅವಧಿಯಲ್ಲಿ ಕೇವಲ 1.85 ಲಕ್ಷ ಕೋಟಿ ರು. ಸಂಗ್ರಹವಾಗಿದೆ. ಹೀಗಾಗಿ ಮುಂದಿನ ವರ್ಷದ ಜಿಎಸ್‌ಟಿ ಪರಿಹಾರದ ಹಣವನ್ನು ರಾಜ್ಯಗಳಿಗೆ ನೀಡುವುದು ಅನುಮಾನ ಎಂದು ಜು.28ರಂದು ನಡೆದ ಹಣಕಾಸು ಸ್ಥಾಯಿ ಸಮಿತಿಯ ಸಭೆಯಲ್ಲಿ ಕೇಂದ್ರ ಸರ್ಕಾರ ಹೇಳಿದೆ. ಈ ಸಭೆಯಲ್ಲಿ ವಿಪಕ್ಷಗಳ ಸಂಸದರೂ ಹಾಜರಿದ್ದರು ಎಂದು ತಿಳಿದುಬಂದಿದೆ.

‘2019-20ನೇ ಸಾಲಿನ ಜಿಎಸ್‌ಟಿ ಪರಿಹಾರದ ಹಣವನ್ನು ರಾಜ್ಯಗಳಿಗೆ ಪೂರ್ಣ ಪ್ರಮಾಣದಲ್ಲಿ ನೀಡಲಾಗುವುದು. ಆದರೆ, ಮುಂದಿನ ವರ್ಷದ ಪರಿಹಾರದ ಹಣ ನೀಡಲು ಸಾಧ್ಯವಾಗದೆ ಹೋಗಬಹುದು. ಏಕೆಂದರೆ, ಕೊರೋನಾ ಸಮಸ್ಯೆಯಿಂದಾಗಿ ಜಿಎಸ್‌ಟಿ ಸಂಗ್ರಹ ಇನ್ನಷ್ಟುಕಡಿಮೆಯಾಗಬಹುದು’ ಎಂದು ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿದೆ.

SBI ಗ್ರಾಹಕರೇ ಗಮನಿಸಿ, ಜುಲೈ 1 ರಿಂದ ATM ಹಣ ಪಡೆಯುವ ನಿಯಮ ಬದಲು!

ದೇಶದಲ್ಲಿ ನಾನಾ ರೀತಿಯ ವಾಣಿಜ್ಯ ತೆರಿಗೆಗಳನ್ನು ರದ್ದುಪಡಿಸಿ ಏಕರೂಪದ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬಂದ ಮೇಲೆ ರಾಜ್ಯಗಳ ಬೊಕ್ಕಸಕ್ಕೆ ನೇರವಾಗಿ ಬರುತ್ತಿದ್ದ ಕೆಲ ತೆರಿಗೆಗಳು ಕೇಂದ್ರ ಸರ್ಕಾರಕ್ಕೆ ಹೋಗುತ್ತಿವೆ. ಈ ಕೊರತೆಯನ್ನು ನೀಗಿಸಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಹಣ ನೀಡುತ್ತಿದೆ. ಇದನ್ನು ನಿಲ್ಲಿಸಿದರೆ ರಾಜ್ಯಗಳ ಆರ್ಥಿಕ ಸ್ಥಿತಿ ಹದಗೆಡುವ ಸಾಧ್ಯತೆಯಿದೆ.