ಬೆಂಗಳೂರು [ಜೂ.30] :  ರಾಜ್ಯದಲ್ಲಿ ಉತ್ಪಾದನೆ ಕುಂಠಿತಗೊಂಡಿರುವುದರಿಂದ ಏಲಕ್ಕಿಗೆ ಇದೀಗ ಚಿನ್ನದ ಬೆಲೆ ಬಂದಿದೆ!

ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಸಾಗುತ್ತಿರುವ ಏಲಕ್ಕಿಗೆ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 5 ಸಾವಿರ ರು.ವರೆಗೂ ಬೆಲೆ. ಇದರೊಂದಿಗೆ ಇತರೆ ಸಾಂಬಾರ ಪದಾರ್ಥಗಳ ಬೆಲೆಯೂ ದ್ವಿಗುಣಗೊಂಡಿದೆ. ಕಳೆದ ವರ್ಷ ಕೆ.ಜಿ.ಗೆ 800 -1000 ರು. ಆಸುಪಾಸಿನಲ್ಲಿದ್ದ ಬೆಲೆ ಇದೀಗ 3 ಸಾವಿರದ ಗಡಿ ದಾಟಿದೆ. ಕಳೆದ ಆರು ತಿಂಗಳ ಹಿಂದೆ ಏಲಕ್ಕಿ ಕೆ.ಜಿ. 1400ರಿಂದ 1800 ರು. ಬೆಲೆಗೆ ಖರೀದಿಯಾಗುತ್ತಿತ್ತು. ಕೆಲ ತಿಂಗಳಿನಿಂದ ಧಾರಣೆಯಲ್ಲಿ ವ್ಯತ್ಯಾಸವಾಗುತ್ತಿದೆ.

ಬೆಂಗಳೂರು ಸಗಟು ಮಾರುಕಟ್ಟೆಯಲ್ಲಿ ಮೇ ತಿಂಗಳಲ್ಲಿ 2000ದಿಂದ 2100 ರು.ಗೆ ಖರೀದಿಯಾಗುತ್ತಿದ್ದ ಉತ್ತಮ ಗುಣಮಟ್ಟದ ಏಲಕ್ಕಿ ಬೆಲೆ ನಂತರ ಕೆ.ಜಿ.ಗೆ 2900-3200 ರು.ಗೆ ತಲುಪಿತ್ತು. ಮಧ್ಯಮ ಗುಣಮಟ್ಟದ ಏಲಕ್ಕಿ 1800ರಿಂದ 2800 ರು.ಗೆ ಜಿಗಿದಿತ್ತು. ಸದ್ಯ ಮಧ್ಯಮ ಗುಣಮಟ್ಟದ ಏಲಕ್ಕಿ ಕೆ.ಜಿ. 3000, ಸಾಧಾರಣ ತಳಿ ಕೆ.ಜಿ. 4000, ಉತ್ತಮ-ಅತ್ಯುತ್ತಮ ಕೆ.ಜಿ. 5000 ರು.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ಮಾರಾಟಗಾರರು ಇನ್ನೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಎಪಿಎಂಸಿಗೆ ದಿನನಿತ್ಯ ಸರಬರಾಜಾಗುತ್ತಿದ್ದ ಏಲಕ್ಕಿ ಪ್ರಮಾಣದಲ್ಲೂ ಇಳಿಕೆಯಾಗಿದೆ ಎಂದು ಎಪಿಎಂಸಿ ವ್ಯಾಪಾರಿಗಳು ತಿಳಿಸಿದರು.

ತೋಟಗಾರಿಕೆ ಇಲಾಖೆ ಪ್ರಕಾರ 2017-18ರಲ್ಲಿ ರಾಜ್ಯದಲ್ಲಿ 15,855 ಹೆಕ್ಟೇರ್‌ ಪ್ರದೇಶದಲ್ಲಿ ಒಟ್ಟು 1,649 ಟನ್‌ ಮಾತ್ರ ಏಲಕ್ಕಿ ಉತ್ಪಾದನೆಯಾಗಿದೆ. ಅತಿ ಹೆಚ್ಚು ಏಲಕ್ಕಿ ಬೆಳೆಯುವ ಕೊಡಗಿನಲ್ಲಿ 7647 ಹೆಕ್ಟೇರ್‌ ಪ್ರದೇಶದಲ್ಲಿ 504 ಟನ್‌ ಮಾತ್ರ ಇಳುವರಿ ಬಂದಿದೆ. ಹಾಸನ ಜಿಲ್ಲೆಯ 4991 ಹೆಕ್ಟೇರ್‌ನಲ್ಲಿ 538 ಟನ್‌ ಏಲಕ್ಕಿ ಉತ್ಪಾದನೆಯಾಗಿದೆ. 2018-19ರಲ್ಲಿ ಶೇ.60ರಷ್ಟುಬೆಳೆ ನಷ್ಟವಾಗಿದೆ.

ಕಳೆದ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದಾಗಿ ಕೇರಳ ಹಾಗೂ ಮಡಿಕೇರಿಯಲ್ಲಿ ಏಲಕ್ಕಿ ಬೆಳೆ ನಾಶವಾಗಿತ್ತು. ಕೇರಳ ಮಾರುಕಟ್ಟೆಯಲ್ಲಿ ಅಕ್ಟೋಬರ್‌ ಮಾಸದಲ್ಲಿ ಕೆ.ಜಿ. ಏಲಕ್ಕಿ 1300ರು.ವರೆಗೆ ಹೆಚ್ಚಳಗೊಂಡಿತ್ತು. ಯಥೇಚ್ಛವಾಗಿ ಏಲಕ್ಕಿ ಬೆಳೆಯುತ್ತಿದ್ದ ಪ್ರದೇಶಗಳಲ್ಲೂ ರೋಗಬಾಧೆ, ಹವಾಮಾನ ವೈಪರೀತ್ಯ ಕಾರಣಗಳಿಂದ ಬೆಳೆಗಾರರು ಕಾಫಿ ಬೆಳೆಯುವತ್ತ ಮುಖ ಮಾಡಿದ್ದಾರೆ. ಈಗ ಧಾರಣೆ ಹೆಚ್ಚಾಗಿರುವುದರಿಂದ ರೈತರು ಮತ್ತೆ ಏಲಕ್ಕಿ ಬೆಳೆಯುವತ್ತ ಆಸಕ್ತಿ ತೋರುತ್ತಿದ್ದಾರೆ ಎನ್ನುತ್ತಾರೆ ಬೆಳೆಗಾರರು.

ಕಳೆದ ವರ್ಷ ಜೂನ್‌ ತಿಂಗಳಲ್ಲಿ ಬೆಲೆ ಸ್ಥಿರವಾಗಿತ್ತು. ಆದರೆ, ಈ ಬಾರಿ ಎರಡು ದಿನಕ್ಕೊಮ್ಮೆ ಬೆಲೆ ಏರಿಳಿತ ಕಾಣುತ್ತಿದೆ. ಕಳೆದ ವರ್ಷ ಇಳುವರಿಯೂ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಗುಣಮಟ್ಟಆಧರಿಸಿ ಎರಡೂವರೆ ಸಾವಿರಕ್ಕೂ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ. ಏಲಕ್ಕಿಯನ್ನು ಹೆಚ್ಚು ದಿನ ಸಂಗ್ರಹಿಸಲು ಸಾಧ್ಯವಿಲ್ಲ. ಹೆಚ್ಚು ಒಣಗಿದಂತೆ ತೂಕ ಇಳಿಕೆಯಾಗುತ್ತಾ ಬರುತ್ತದೆ. ಆಗ ಬೆಲೆಯೂ ಕಡಿಮೆಯಾಗುತ್ತದೆ. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿ ಹೊಸ ಬೆಳೆ ಬರುವವರೆಗೆ ಬೆಲೆಯಲ್ಲಿ ಹೆಚ್ಚಳವಾಗಲಿದೆ ಎಂದು ಸಗಟು ಮಾರಾಟಗಾರರಾದ ಜ್ಯೋತಿ ಪ್ಯಾಕರ್ಸ್‌ನ ಮದನ್‌ಕುಮಾರ್‌ ಮಾಹಿತಿ ನೀಡಿದರು.

ಸಾಂಬಾರ ಪದಾರ್ಥಗಳು ದುಬಾರಿ:

ಏಲಕ್ಕಿ ಬೆಳೆಯೊಂದಿಗೆ ಸಾಂಬಾರ ಪದಾರ್ಥಗಳಾದ ಚಕ್ಕೆ, ಅನಾನಸ್‌ ಹೂವು, ಮರಾಠಿ ಮೊಗ್ಗು, ಜಾಪತ್ರೆ, ಜಾಯಿಕಾಯಿ, ಗಸಗಸೆ ಬೆಲೆಯೂ ದ್ವಿಗುಣಗೊಂಡಿದೆ. ಈ ಹಿಂದೆ ಸಗಟು ದರ ಕೆ.ಜಿ.ಗೆ 300 ರು. ಒಳಗೆ ದೊರೆಯುತ್ತಿದ್ದ ಚಕ್ಕೆ ಕೆ.ಜಿ.ಗೆ 3250-3500 ರು.ಗೆ ಏರಿಕೆಯಾಗಿದೆ. ಜಾಪತ್ರೆ ಕೆ.ಜಿ. 1400-2000 ರು.ಗೆ ಏರಿದೆ. ಮೆಣಸು ಕೆ.ಜಿ. 800ಕ್ಕೆ ಮಾರಾಟವಾಗುತ್ತಿದೆ. ಏಲಕ್ಕಿ ಬೆಳೆಯುವವರ ಸಂಖ್ಯೆಯೂ ಕಡಿಮೆಯಾಗಿದೆ. ಇಳುವರಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದ್ದರಿಂದ ಬಹುತೇಕ ರೈತರ ಬಳಿ ಮಾರಾಟ ಮಾಡಲು ಏಲಕ್ಕಿ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಲೆ ಇದ್ದರೂ ಬೆಳೆ ಇಲ್ಲ ಎನ್ನುವ ಸ್ಥಿತಿ ರೈತರದ್ದು ಎಂದು ಬೆಂಗಳೂರು ಎಪಿಎಂಸಿ ವರ್ಕರ್ಸ್‌ ಯೂನಿಯನ್‌ ಅಧ್ಯಕ್ಷ ಪರಮೇಶ್ ತಿಳಿಸಿದರು. 

ಚಕ್ಕೆ (ದಾಲ್ಚಿನ್ನಿ)    2000ರು.    3250-3500 ರು.

ಲವಂಗ    650 ರು.    800 ರು.

ಅನಾನಸ್‌ ಹೂ    450 ರು.    600 ರು.

ಮರಾಠಿ ಮೊಗ್ಗು 700 ರು.    900ರು.

ಜಾಪತ್ರೆ    1400ರು.    2000 ರು.

ಜಾಯಿಕಾಯಿ    500ರು.    750 ರು.

ಗಸಗಸೆ 600ರು.    950ರು.

ಮೆಣಸು    450ರು.    800ರು.