ಬಂಡವಾಳ ಬಂಪರ್‌ ಮೊದಲ ದಿನವೇ ದಾಖಲೆಯ .7.6 ಲಕ್ಷ ಕೋಟಿ ಹೂಡಿಕೆ 3 ದಿನದ ಹೂಡಿಕೆ ಸಮಾವೇಶಕ್ಕೆ ಮೋದಿ ಚಾಲನೆ ನಿರೀಕ್ಷೆಗೂ ಮೀರಿದ ಹೂಡಿಕೆ ಇನ್ನೆರಡು ದಿನದಲ್ಲಿ ಮತ್ತಷ್ಟುನಿರೀಕ್ಷೆ ಕರ್ನಾಟಕದ ಬಗ್ಗೆ ಉದ್ಯಮಿಗಳ ಪ್ರಶಂಸೆ

ಬೆಂಗಳೂರು (ನ.3) : ರಾಜ್ಯಕ್ಕೆ ಬಂಡವಾಳ ಆಕರ್ಷಿಸಲು ಹಮ್ಮಿಕೊಂಡಿರುವ 3 ದಿನಗಳ ‘ಜಾಗತಿಕ ಹೂಡಿಕೆದಾರರ ಸಮಾವೇಶ’ ನಿರೀಕ್ಷೆಗೂ ಮೀರಿ ಫಲ ನೀಡಿದ್ದು, ಮೊದಲ ದಿನವೇ ಬರೋಬ್ಬರಿ 7.6 ಲಕ್ಷ ಕೋಟಿ ರು. ಬಂಡವಾಳ ಹೂಡಿಕೆಯ ಒಪ್ಪಂದಗಳಿಗೆ ಸಹಿ ಬಿದ್ದಿದೆ. ತನ್ಮೂಲಕ 5 ಲಕ್ಷ ಕೋಟಿ ರು. ಹೂಡಿಕೆ ನಿರೀಕ್ಷಿಸಿದ್ದ ಐದನೇ ಜಾಗತಿಕ ಹೂಡಿಕೆದಾರರ ಸಮಾವೇಶವು ನಿರೀಕ್ಷೆಗಿಂತ ಹೆಚ್ಚು ಯಶಸ್ವಿಯಾದಂತಾಗಿದೆ. ಇನ್ನೆರಡು ದಿನದಲ್ಲಿ ಇನ್ನಷ್ಟುಹೂಡಿಕೆ ನಿರೀಕ್ಷಿಸಲಾಗಿದೆ.

ದೇಶದ ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಬೆಂಗಳೂರಿನ ಅರಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ವರ್ಚುಯಲ್‌ ಮೂಲಕ ಚಾಲನೆ ನೀಡಿ, ‘ಡಬಲ್‌ ಎಂಜಿನ್‌ ಸರ್ಕಾರದ ಶಕ್ತಿಯು ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಮಾಡಿ’ ಎಂದು ಹೂಡಿಕೆದಾರರಿಗೆ ಕರೆ ನೀಡಿದರು.

‘ಕರ್ನಾಟಕವು ತಂತ್ರಜ್ಞಾನ ಹಾಗೂ ಸಂಸ್ಕೃತಿಯ ಅದ್ಭುತ ಸಂಗಮ. ವಾಸ್ತುಶಿಲ್ಪ ಮತ್ತು ಸ್ಟಾರ್ಚ್‌ ಅಪ್‌ ಪರಿಸರ ವ್ಯವಸ್ಥೆಗೆ ಹೆಸರುವಾಸಿ ಸ್ಥಳ. ಇಲ್ಲಿ ನಡೆಯುತ್ತಿರುವ ಹೂಡಿಕೆ ಪಾಲುದಾರಿಕೆಗಳು ಉತ್ತಮ ಫಲ ನೀಡಲಿವೆ. ಇದು ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗವಕಾಶ ಸೃಷ್ಟಿಸಲಿವೆ’ ಎಂದು ಕೊಂಡಾಡಿದರು. ಬಳಿಕ ಸಮಾವೇಶದ ವೇದಿಕೆಯಲ್ಲಿ ನಡೆದ ಹೂಡಿಕೆ ಒಪ್ಪಂದಗಳ ಘೋಷಣೆ ಕಾರ್ಯಕ್ರಮದಲ್ಲಿ 7.6 ಲಕ್ಷ ಕೋಟಿ ರು. ಮೊತ್ತದ ಹೂಡಿಕೆಗಳನ್ನು ಘೋಷಿಸಲಾಯಿತು.

ರಾಜ್ಯದಿಂದಲೇ 1 ಲಕ್ಷ ಕೋಟಿ ಡಾಲರ್‌ ಕೊಡುಗೆ- ಸಿಎಂ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಕೊರೋನಾ ವೇಳೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಆರ್ಥಿಕತೆ ಸ್ಥಗಿತಗೊಂಡಿತ್ತು. ನಮ್ಮ ರಾಜ್ಯದಲ್ಲಿ ಕೊರೋನಾ ಬಳಿಕ ನಿರೀಕ್ಷೆಗಿಂತ 13 ಸಾವಿರ ಕೋಟಿ ರು. ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲೂ ರಾಜ್ಯ ಮುಂದಿದ್ದು, ದೇಶದಲ್ಲಿ 2ನೇ ಸ್ಥಾನದಲ್ಲಿದೆ. ಕೇಂದ್ರ ಸರ್ಕಾರ 5 ಟ್ರಿಲಿಯನ್‌ (ಲಕ್ಷ ಕೋಟಿ) ಡಾಲರ್‌ ಆರ್ಥಿಕ ಗುರಿ ಹೊಂದಿದೆ. ಈ ಗುರಿಗೆ ಕರ್ನಾಟಕ ರಾಜ್ಯದಿಂದಲೇ 1 ಟ್ರಿಲಿಯನ್‌ ಡಾಲರ್‌ ಕೊಡುಗೆ ನೀಡಲಿದ್ದೇವೆ’ ಎಂದರು.

ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಮಾತನಾಡಿ, ‘ರಾಜ್ಯವು ಹೂಡಿಕೆದಾರರಿಗೆ ಪ್ರಶಸ್ತ ಸ್ಥಳ. ಐಟಿ-ಬಿಟಿ, ಸ್ಟಾರ್ಚ್‌ಅಪ್‌, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿರುವ ಮೂಲಸೌಕರ್ಯ, ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ವಿಶೇಷ ಸೌಕರ್ಯಗಳನ್ನು ಬಳಸಿಕೊಂಡು ಉದ್ಯಮವನ್ನು ಬೆಳೆಸಲು ಹೂಡಿಕೆ ಮಾಡಬಹುದು’ ಎಂದರು.

ವಿಶ್ವದರ್ಜೆ ಮೂಲಸೌಕರ್ಯ- ನಿರಾಣಿ:

ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮಾತನಾಡಿ, ‘ರಾಜ್ಯದಲ್ಲಿ ಬಂಡವಾಳ ಹೂಡಿಕೆ ಮಾಡುವವರಿಗೆ ನಮ್ಮ ಸರ್ಕಾರ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಿದ್ದು, ಉದ್ದಿಮೆದಾರರು ಬಂಡವಾಳ ಹೂಡಲು ಮುಂದೆ ಬರಬೇಕು. ದೇಶದ ಯಾವುದೇ ರಾಜ್ಯಗಳು ನೀಡದಷ್ಟುಸೌಲಭ್ಯಗಳನ್ನು ನಮ್ಮ ಸರ್ಕಾರ ನೀಡಿದೆ. ನಮ್ಮಲ್ಲಿರುವ ಕೈಗಾರಿಕಾ ನೀತಿಗಳು, ಪರಿಸರ ಸ್ನೇಹಿ ವಾತಾವರಣದಿಂದಾಗಿ ವಿಶ್ವದ ಮುಂಚೂಣಿಯಲ್ಲಿರುವ ಉದ್ಯಮಿಗಳು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಿದ್ದಾರೆ. ಈ ಉದ್ಯಮಿಗಳಿಗೆ ನಮ್ಮ ಸರ್ಕಾರ ರತ್ನಗಂಬಳಿ ಹಾಕಲಿದೆ’ ಎಂದರು.

‘ಬೆಂಗಳೂರು ಹೊರತುಪಡಿಸಿ 2 ಮತ್ತು 3ನೇ ಹಂತದ ನಗರಗಳಲ್ಲಿ ಹೂಡಿಕೆಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಕಲಬುರಗಿ ಸೇರಿದಂತೆ ಮತ್ತಿತರ ನಗರಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುತ್ತಿದೆ. ತನ್ಮೂಲಕ ಬಿಯಾಂಡ್‌ ಬೆಂಗಳೂರನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಇದೇ ವೇಳೆ ಟೊಯೋಟಾ ಕಿರ್ಲೋಸ್ಕರ್‌ ಉಪಾಧ್ಯಕ್ಷ ವಿಕ್ರಮ್‌ ಎಸ್‌. ಕಿರ್ಲೋಸ್ಕರ್‌, ವಿಪ್ರೋ ಅಧ್ಯಕ್ಷ ರಿಷಾದ್‌ ಪ್ರೇಮ್‌ ಜಿ, ಸ್ಟೆರ್ಲೈಟ್‌ ಪವರ್‌ ವ್ಯವಸ್ಥಾಪಕ ನಿರ್ದೇಶಕ ಪ್ರತೀಕ್‌ ಅಗರ್‌ವಾಲ್‌ ಅವರು ರಾಜ್ಯದಲ್ಲಿರುವ ಹೂಡಿಕೆ ಸ್ನೇಹಿ ವಾತಾವರಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್‌, ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪೀಯೂಷ್‌ ಗೋಯೆಲ್‌, ಸಂಸದೀಯ ವ್ಯವಹಾರ ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ, ಕೇಂದ್ರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಐಟಿ-ಬಿಟಿ ಖಾತೆ ರಾಜ್ಯಸಚಿವ ರಾಜೀವ್‌ ಚಂದ್ರಶೇಖರ್‌, ಸಚಿವರಾದ ಡಾ.ಸಿ.ಎನ್‌. ಅಶ್ವತ್ಥನಾರಾಯಣ್‌, ಎಂಟಿಬಿ ನಾಗರಾಜ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಹಲವರು ಹಾಜರಿದ್ದರು.

ಕೋವಿಡ್‌ ಕಾಲದಲ್ಲಿ ಕರ್ನಾಟಕದ ಕೆಲಸಕ್ಕೆ ರಾಜೀವ್‌ ಚಂದ್ರಶೇಖರ್‌ ಮೆಚ್ಚುಗೆ

ಯಾವ್ಯಾವ ಕ್ಷೇತ್ರಗಳಲ್ಲಿ ಹೂಡಿಕೆ?

ಸಮಾವೇಶದ ವೇದಿಕೆಯಲ್ಲಿ ನಡೆದ ಹೂಡಿಕೆ ಒಪ್ಪಂದಗಳ ಘೋಷಣೆ ಕಾರ್ಯಕ್ರಮದಲ್ಲಿ 7.6 ಲಕ್ಷ ಕೋಟಿ ರು. ಮೊತ್ತದ ಹೂಡಿಕೆಗಳನ್ನು ಘೋಷಿಸಲಾಯಿತು. ಈ ಪೈಕಿ ಉತ್ಪಾದನೆ ಹಾಗೂ ಗ್ರೀನ್‌ ಹೈಡ್ರೊಜೆನ್‌ ಕ್ಷೇತ್ರದಲ್ಲಿ 2.91 ಲಕ್ಷ ಕೋಟಿ ರು., ಉತ್ಪಾದನೆ ಕ್ಷೇತ್ರದಲ್ಲಿ 70,381 ಕೋಟಿ ರು., ಮೂಲಸೌಕರ್ಯ ಹಾಗೂ ಲಾಜಿಸ್ಟಿಕ್ಸ್‌ 43,500 ಕೋಟಿ ರು., ಕೋರ್‌ ಸೆಕ್ಟರ್‌ (ಉತ್ಪಾದನೆ) 25,024 ಕೋಟಿ ರು., ನವೀಕರಿಸಬಹುದಾದ ಇಂಧನ 1.29 ಲಕ್ಷ ಕೋಟಿ ರು. ಘೋಷಿಸಲಾಗಿದೆ. ವಿದ್ಯುತ್‌ಚಾಲಿತ ವಾಹನ, ಸೆಮಿಕಂಡಕ್ಟರ್‌ ವಿಭಾಗಕ್ಕೂ ಹೂಡಿಕೆ ಹರಿದುಬಂದಿದೆ.

ಭಾರತದಲ್ಲಿ ಹೂಡಿಕೆ ಸುರಕ್ಷಿತ: ಮೋದಿ

ಇಂದಿನ ಆರ್ಥಿಕ ಅನಿಶ್ಚಿತತೆಯ ಯುಗದ ನಡುವೆಯೂ ಭಾರತದ ಆರ್ಥಿಕತೆ ಬಲಿಷ್ಠವಾಗಿದೆ. ಇಲ್ಲಿ ಬಂಡವಾಳ ಹೂಡುವುದು ಎಂದರೆ ಇಡೀ ಜಗತ್ತಿನಲ್ಲಿ ಬಂಡವಾಳ ಹೂಡಿದಂತೆ. ಪ್ರಜಾಪ್ರಭುತ್ವದಲ್ಲಿ ಹೂಡಿಕೆ ಮಾಡಿದಂತೆ. ಈ ಹೂಡಿಕೆ ಅತ್ಯಂತ ಪಾರದರ್ಶಕ ಹಾಗೂ ಸುರಕ್ಷಿತ. ಅಭಿವೃದ್ಧಿಯ ವಿಚಾರದಲ್ಲಿ ಕರ್ನಾಟಕ ಬೇರೆ ದೇಶಗಳಿಗೂ ಸವಾಲು ಒಡ್ಡುತ್ತಿದೆ.

- ನರೇಂದ್ರ ಮೋದಿ ಪ್ರಧಾನಿ

ನಮ್ಮ ಸರ್ಕಾರದಿಂದಲೇ 2025ರಲ್ಲಿ ಜಿಮ್‌: ಸಿಎಂ

ರಾಜ್ಯದಲ್ಲಿ ಮುಂದಿನ ಅವಧಿಗೂ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಈ ನಂಬಿಕೆಯನ್ನು ಹೂಡಿಕೆದಾರರು ಹೊಂದಿರುವುದರಿಂದಲೇ ದೊಡ್ಡ ಪ್ರಮಾಣದ ಹೂಡಿಕೆ ಹರಿದುಬಂದಿದೆ. ಈ ವಿಶ್ವಾಸ ನಮಗೂ ಇದೆ. ಹೀಗಾಗಿಯೇ 2025ರ ಜನವರಿಗೆ ಮುಂದಿನ ಆವೃತ್ತಿಯ ಜಾಗತಿಕ ಹೂಡಿಕೆದಾರರ ಸಮಾವೇಶವನ್ನೂ ಘೋಷಿಸುತ್ತಿದ್ದೇನೆ.

- ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ