ನವದೆಹಲಿ(ನ.12): ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಭರ್ಜರಿ 2 ಲಕ್ಷ ಕೋಟಿ ರು. ಮೊತ್ತದ ಯೋಜನೆಯೊಂದನ್ನು ಬುಧವಾರ ಘೋಷಿಸಿದೆ. ಉತ್ಪಾದನೆ ಆಧರಿತ 10 ವಲಯಗಳಿಗೆ ಮುಂದಿನ 5 ವರ್ಷಗಳಿಗೆ ಅನ್ವಯವಾಗುವಂತೆ 2 ಲಕ್ಷ ಕೋಟಿ ರು.ಮೊತ್ತದ ಉತ್ಪಾದನೆ ಆಧರಿತ ಪ್ರೋತ್ಸಾಹಕ ಯೋಜನೆ ಇದಾಗಿದೆ.

ಈ ಯೋಜನೆಯು ದೇಶೀಯ ಉತ್ಪಾದನೆ ಹೆಚ್ಚಳ, ಆಮದು ಕಡಿತ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯ ಮೂಲಕ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದ್ದಾರೆ. ಬುಧವಾರ 1.45 ಲಕ್ಷ ಕೋಟಿ ರು.ಮೌಲ್ಯದ ಯೋಜನೆ ಘೋಷಿಸಿದ್ದು, ಇದರ ಜೊತೆಗೆ ಈ ಹಿಂದೆ ಅನುಮೋದನೆ ಪಡೆದಿದ್ದ 50000 ಕೋಟಿ ರು.ಮೌಲ್ಯದ ಯೋಜನೆ ಸೇರಿ ಒಟ್ಟು ಮೊತ್ತ 2 ಲಕ್ಷ ಕೋಟಿ ರು.ಮೌಲ್ಯದ್ದಾಗಿರಲಿದೆ ಎಂದು ಅವರು ತಿಳಿಸಿದ್ದಾರೆ.

ಯೋಜನೆ ವ್ಯಾಪ್ತಿಗೆ ಒಳಪಡಲಿರುವ ಕ್ಷೇತ್ರಗಳೆಂದರೆ ಅಡ್ವಾನ್ಸ್‌ ಕೆಮಿಸ್ಟ್ರಿ ಸೆಲ್‌, ಎಲೆಕ್ಟ್ರಾನಿಕ್ಸ್‌ ಮತ್ತು ಟೆಕ್ನಾಲಜಿ, ಆಟೋಮೊಬೈಲ್‌ ಮತ್ತು ಆಟೋ ಬಿಡಿಭಾಗ, ಫಾರ್ಮಸ್ಯುಟಿಕಲ್ಸ್‌ ಮತ್ತು ಔಷಧ, ಟೆಲಿಕಾಂ ಮತ್ತು ನೆಟ್‌ವರ್ಕಿಂಗ್‌ ಉತ್ಪನ್ನ, ಟೆಕ್ಸ್‌ಟೈಲ್‌, ಆಹಾರ, ಸೋಲಾಲ್‌ ಪಿವಿ, ವೈಟ್‌ಗೂಡ್ಸ್‌, ವಿಶೇಷ ಸ್ಟೀಲ್‌.

ಈ ನಡುವೆ ಸಂಪುಟ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿರುವ ವಾಣಿಜ್ಯ ಮತ್ತು ಕೈಗಾರಿಕಾ ಖಾತೆ ಸಚಿವ ಪಿಯೂಷ್‌ ಗೋಯಲ್‌, ಸರ್ಕಾರದ ಪ್ಯಾಕೇಜ್‌ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ, ಉತ್ಪಾದನೆ ಹೆಚ್ಚಳಕ್ಕೆ ಮತ್ತು ರಫ್ತು ಉತ್ತೇಜನಕ್ಕೆ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.