ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸೋರಿಗೆ TDS ಕುರಿತ ಈ ಮಾಹಿತಿ ತಿಳಿದಿರೋದು ಅಗತ್ಯ
ಅನಿವಾಸಿ ಭಾರತೀಯರಿಂದ ಆಸ್ತಿ ಖರೀದಿಸಿದ್ರೆ ಟಿಡಿಎಸ್ ಕಡಿತ ಮಾಡಲಾಗುತ್ತದಾ? ಎಂಬ ಪ್ರಶ್ನೆ ಕಾಡಬಹುದು. ಮಾರಾಟ ಮಾಡಿದ ವ್ಯಕ್ತಿ ಹಣ ಭಾರತದಲ್ಲಿ ಇರದಿದ್ದರೂ ಶೇ.20ರಷ್ಟು ಟಿಡಿಎಸ್ ಜೊತೆಗೆ ಸರ್ಚಾರ್ಜ್ ಹಾಗೂ ಸೆಸ್ ಅನ್ನು ಕಡಿತಗೊಳಿಸೋದು ಅಗತ್ಯ. ಟಿಡಿಎಸ್ ಕಡಿತದ ಮೊತ್ತ ಜಾಸ್ತಿಯಾಗಿದ್ರೆ ಅಂಥ ಸಂದರ್ಭಗಳಲ್ಲಿ ಮಾರಾಟಗಾರ ನಿರ್ದಿಷ್ಟ ಕಡಿಮೆ ತೆರಿಗೆ ಕಡಿತದ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ನವದೆಹಲಿ (ಏ.27): ಆಸ್ತಿ ಖರೀದಿಸುವಾಗ ತೆರಿಗೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಕೂಡ ಮಾಹಿತಿ ಹೊಂದಿರೋದು ಅಗತ್ಯ. ಆಸ್ತಿ ಖರೀದಿ ಸಂದರ್ಭದಲ್ಲಿ ಈ ತೆರಿಗೆ ವೆಚ್ಚಗಳನ್ನು ಕೂಡ ತೆರಿಗೆದಾರ ಭರಿಸಬೇಕಾದ ಕಾರಣ ಈ ಬಗ್ಗೆ ತಿಳಿದಿರೋದು ಉತ್ತಮ. ಇನ್ನು ನೀವು ಅನಿವಾಸಿ ಭಾರತೀಯನಿಂದ (ಎನ್ ಆರ್ ಐ) ಆಸ್ತಿ ಖರೀದಿಸುತ್ತಿದ್ರೆ ಆಗ ಟಿಡಿಎಸ್ ಕಡಿತ ಮಾಡೋದು ಅಗತ್ಯವೇ? ಹೌದು. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 195ರ ಅನ್ವಯ ಯಾವಾಗ ಅನಿವಾಸಿ ಭಾರತೀಯ (ಎನ್ ಆರ್ ಐ) ಆಸ್ತಿ ಮಾರಾಟ ಮಾಡುತ್ತಾನೋ ಆವಾಗ ಶೇ.20ರಷ್ಟು ಟಿಡಿಎಸ್ ಜೊತೆಗೆ ಸರ್ಚಾರ್ಜ್ ಹಾಗೂ ಸೆಸ್ ಅನ್ನು ಖರೀದಿದಾರ ಕಡಿತಗೊಳಿಸೋದು ಅಗತ್ಯ. ಒಂದು ವೇಳೆ ಚರಾ ಆಸ್ತಿಯನ್ನು ಎರಡು ವರ್ಷಕ್ಕಿಂತ ಕಡಿಮೆ ಅವಧಿಗೆ ಹೊಂದಿದ್ದರೆ, ಟಿಡಿಎಸ್ ದರ ಅಧಿಕವಾಗಿರುತ್ತದೆ (ಶೇ.30+ ಸರ್ ಚಾರ್ಜ್). ಇನ್ನು ಟಿಡಿಎಸ್ ಕಡಿತಕ್ಕೆ ಯಾವುದೇ ಕನಿಷ್ಠ ಮಿತಿಯಿಲ್ಲ. ಇನ್ನು ಆಸ್ತಿ ಮಾರಾಟದಿಂದ ಹಣ ಪಡೆದ ವ್ಯಕ್ತಿ ಭಾರತದಲ್ಲಿ ಇದ್ದಾನೋ ಇಲ್ಲವೋ ಟಿಡಿಎಸ್ ಅಂತೂ ಕಡಿತವಾಗುತ್ತದೆ. ಇನ್ನು ಟಿಡಿಎಸ್ ಕಡಿತದ ಮೊತ್ತ ಜಾಸ್ತಿಯಾಗಿದ್ರೆ ಅಂಥ ಸಂದರ್ಭಗಳಲ್ಲಿ ಮಾರಾಟಗಾರ ನಿರ್ದಿಷ್ಟ ಕಡಿಮೆ ತೆರಿಗೆ ಕಡಿತದ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಕೆ ಮಾಡಬಹುದು.
ಬಂಡವಾಳ ಗಳಿಕೆ, ತೆರಿಗೆ ಹೊಣೆಗಾರಿಕೆ ಲೆಕ್ಕಾಚಾರ
ಮಾರಾಟ ಬೆಲೆ ಆರ್ಹ ಮಾರುಕಟ್ಟೆ ಮೌಲ್ಯಕ್ಕಿಂತ ಕಡಿಮೆಯಿಲ್ಲ ಎಂಬುದಕ್ಕೆ ಆಸ್ತಿ ಮಾರಾಟಗಾರರು ಸ್ಟ್ಯಾಂಪ್ ಡ್ಯೂಟಿ ಮೌಲ್ಯಮಾಪನ ಪಡೆಯಬೇಕು. ಸ್ಟ್ಯಾಂಪ್ ಡ್ಯೂಟಿ ಮೌಲ್ಯ ಅಥವಾ ಮಾರಾಟದ ಮೌಲ್ಯ ಪರಿಗಣಿಸಿ ಆತ/ಆಕೆ ಬಂಡವಾಳ ಗಳಿಕೆ ಹಾಗೂ ಸಂಬಂಧಿತ ತೆರಿಗೆ ಬಾಧ್ಯತೆ ಅಥವಾ ಹೊಣೆಗಾರಿಕೆ ಎಷ್ಟಿದೆ ಎಂಬುದನ್ನು ಲೆಕ್ಕ ಹಾಕಬೇಕು. ಒಂದು ವೇಳೆ ಪಾವತಿಸಬೇಕಾದ ಅಂತಿಮ ತೆರಿಗೆ (ತೆರಿಗೆ ಬಾಧ್ಯತೆ) ಹಾಗೂ ಟಿಡಿಎಸ್ ನಡುವೆ ಗಣನೀಯ ವ್ಯತ್ಯಾಸ ಅಥವಾ ನಷ್ಟ ಕಂಡುಬಂದರೆ, ಮಾರಾಟಗಾರ ನಿರ್ದಿಷ್ಟ ಕಡಿಮೆ ತೆರಿಗೆ ಕಡಿತದ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಲು ಸೂಕ್ತ ಕಾರಣ ಸಿಕ್ಕಂತಾಗುತ್ತದೆ.
Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ
ಖರೀದಿದಾರನ ಬಳಿ ಟ್ಯಾನ್ ಅಗತ್ಯ
ಎನ್ ಆರ್ ಐಯಿಂದ ಆಸ್ತಿ ಖರೀದಿಸಿದ್ರೆ ಖರೀದಿದಾರರ ಟ್ಯಾನ್ (TAN) ಹೊಂದಿರೋದು ಅಗತ್ಯ. ಒಂದು ವೇಳೆ ಖರೀದಿದಾರನ ಬಳಿ ಟ್ಯಾನ್ ಇರದಿದ್ದರೆ ಆತ ಅಥವಾ ಆಕೆ ಫಾರ್ಮ್ 49Bನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ರೆ 7ರಿಂದ 10 ದಿನಗಳೊಳಗೆ ತೆರಿಗೆ ಕಡಿತ ಖಾತೆ ಸಂಖ್ಯೆ (TAN) ಸಿಗುತ್ತದೆ.
ಯಾವೆಲ್ಲ ದಾಖಲೆಗಳು ಅಗತ್ಯ?
ಕಡಿಮೆ ತೆರಿಗೆ ಕಡಿತದ ಪ್ರಮಾಣಪತ್ರಕ್ಕೆ ಫಾರ್ಮ್ 13ರಲ್ಲಿ ಆನ್ ಲೈನ್ ಅರ್ಜಿ ಸಲ್ಲಿಕೆ ಮಾಡಬೇಕು. ಮಾರಾಟಗಾರ ಮೂರು ಸೆಟ್ ಗಳಲ್ಲಿ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು.
*ಪ್ರಸ್ತಾವಿತ ಮಾರಾಟಕ್ಕೆ ಸಂಬಂಧಿಸಿದ ಎಂಒಯು, ಸ್ಟ್ಯಾಂಪ್ ಡ್ಯೂಟಿ ಮೌಲ್ಯಮಾಪನ, ಖರೀದಿ ಒಪ್ಪಂದ, ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಆಸ್ತಿ ಖರೀದಿ ಸಮಯದಲ್ಲಿ ಮಾಡಿದ ಪಾವತಿಯ ಸ್ವೀಕೃತಿ.
*ಆಸ್ತಿ ಮಾರಾಟ ಮಾಡಿದ ಆರ್ಥಿಕ ಸಾಲಿನ ಅಂದಾಜು ಆದಾಯದ ಕ್ರೋಡೀಕೃತ ದಾಖಲೆ. ಈ ಅಂದಾಜು ತೆರಿಗೆ ಲೆಕ್ಕಾಚಾರದಲ್ಲಿ ಆ ವರ್ಷ ಗಳಿಸಿದ ಅಥವಾ ಗಳಿಸಲಿರುವ ಎಲ್ಲ ಆದಾಯ ಹಾಗೂ ಅಂದಾಜು ತೆರಿಗೆ ಬಾಧ್ಯತೆ ಮಾಹಿತಿ ಇರಬೇಕು.
*ಕಳೆದ ನಾಲ್ಕು ವರ್ಷಗಳಲ್ಲಿ ಯಾವುದೇ ತೆರಿಗೆ ಬಾಧ್ಯತೆಯಿರಲಿಲ್ಲ ಎಂಬುದನ್ನು ಸಾಬೀತುಪಡಿಸಲು ಅಗತ್ಯ ದಾಖಲೆಗಳು.
Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ
ಆದಾಯ ತೆರಿಗೆ ಪೋರ್ಟಲ್ ನೋಂದಣಿ ಹಾಗೂ ಅರ್ಜಿ ಸಲ್ಲಿಕೆ
ಮೌಲ್ಯಮಾಪನ ಅಧಿಕಾರಿ ಅರ್ಜಿಯನ್ನು ಪರಿಶೀಲಿಸಿ, ಯಾವುದೇ ಹೆಚ್ಚುವರಿ ಮಾಹಿತಿ ಅಗತ್ಯವಿದ್ರೆ ಕೇಳುತ್ತಾರೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಮೂರರಿಂದ ನಾಲ್ಕು ವಾರಗಳು ಬೇಕಾಗುತ್ತವೆ. ಅರ್ಜಿ ಅರ್ಹವಾಗಿದ್ರೆ ಪ್ರಮಾಣಪತ್ರ ನೀಡುತ್ತಾರೆ ಇಲ್ಲವಾದರೆ ತಿರಸ್ಕರಿಸುತ್ತಾರೆ.ಒಂದು ವೇಳೆ ಟಿಡಿಎಸ್ ಕಡಿತ ಮಾಡಿರೋದು ಅಧಿಕ ಪ್ರಮಾಣದಲ್ಲಿದ್ದರೆ, ಆಗ ಮಾರಾಟಗಾರ ತನ್ನ ಐಟಿಆರ್ ಸಲ್ಲಿಕೆ ಮಾಡಿ, ಹೆಚ್ಚುವರಿ ಟಿಡಿಎಸ್ ಕಡಿತಕ್ಕೆ ರೀಫಂಡ್ ಕ್ಲೇಮ್ ಮಾಡಬಹುದು.