ಆರ್ಥಿಕ ಮುಗ್ಗಟ್ಟು: BSNL ಉದ್ಯೋಗಿಗಳಿಗೆ ಇನ್ನೂ ಬಂದಿಲ್ಲ ಸಂಬಳ
ಕಳೆದೈದು ವರ್ಷಗಳಿಂದ ಭಾರೀ ನಷ್ಟವನ್ನು ಅನುಭವಿಸುತ್ತಿರುವ ಸರ್ಕಾರಿ ಸ್ವಾಮ್ಯದ BSNL; ಮಾರ್ಚ್ ಅರ್ಧ ತಿಂಗಳು ಕಳೆದರೂ ಇನ್ನೂ ಖಾತೆಗೆ ಜಮೆಯಾಗದ ವೇತನ; ಸಂಸ್ಥೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕ್ಲಿಷ್ಟಕರ ಪರಿಸ್ಥಿತಿ
ನವದೆಹಲಿ: ಸರ್ಕಾರಿ ಸ್ವಾಮ್ಯದ BSNLನ ಪುನರುತ್ಥಾನ ಅಥವಾ ಮುಚ್ಚುಗಡೆಯ ಬಗ್ಗೆ ಚಿಂತನೆ ನಡೆಯುತ್ತಿರುವ ಬೆನ್ನಲ್ಲೇ, ಸಂಸ್ಥೆಯ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳಿನ ಸಂಬಳ ಇನ್ನೂ ಖಾತೆಗೆ ಜಮೆಯಾಗದಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಮಾರ್ಚ್ ತಿಂಗಳಿನ12 ದಿನಗಳು ಕಳೆದರೂ, BSNLನ ಸುಮಾರು 1.76 ಲಕ್ಷ ಉದ್ಯೋಗಿಗಳಿಗೆ ಇನ್ನೂ ಫೆಬ್ರವರಿ ತಿಂಗಳಿನ ವೇತನ ಜಮೆಯಾಗಿಲ್ಲ. BSNL ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಂತಹ ಸಂಕೀರ್ಣ ಸನ್ನಿವೇಶ ಎದುರಾಗಿದೆ.
BSNL ಉದ್ಯೋಗಿಗಳ ಸಂಘವು ಕೇಂದ್ರ ಟೆಲಿಕಾಂ ಸಚಿವ ಮನೋಜ್ ಸಿನ್ಹಾ ಭೇಟಿಯಾಗಿ ಸಂಬಳಕ್ಕಾಗಿ ಹಣ ಬಿಡುಗಡೆ ಮಾಡಲು ಮಂಗಳವಾರ ಮನವಿ ಮಾಡಿದ್ದಾರೆ.
ಇದನ್ನೂ ಓದಿ: BSNL ಮುಚ್ಚುವ ಭೀತಿ: ಗ್ರಾಹಕ, ನೌಕರರಿಗೆ ಆತಂಕ
MTNLನ 23 ಸಾವಿರ ಉದ್ಯೋಗಿಗಳ ವೇತನಕ್ಕಾಗಿ ಕೇಂದ್ರ ದೂರಸಂಪರ್ಕ ಇಲಾಖೆಯು ಈಗಾಗಲೇ ₹171 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ, BSNL ಉದ್ಯೋಗಿಗಳು ಇನ್ನೂ ಸ್ವಲ್ಪ ಕಾಯಬೇಕಾಗಿದೆ.
BSNL ಉದ್ಯೋಗಿಗಳಿಗೆ ಸಂಬಳ ನೀಡುವಂತಾಗಲು ಮಾ.21, ಹೋಳಿ ಹಬ್ಬದೊಳಗೆ ಫಂಡನ್ನು ಬಿಡುಗಡೆ ಮಾಡುವುದಾಗಿ ಇಲಾಖೆಯು ಹೇಳಿದೆ. BSNL ಉದ್ಯೋಗಿಗಳಿಗೆ ವೇತನ ನೀಡಲು ಸುಮಾರು ₹850 ಕೋಟಿಯ ಅಗತ್ಯವಿದೆ.
ಕಳೆದ ಐದು ವರ್ಷಗಳಿಂದ BSNL ಸತತವಾಗಿ ನಷ್ಟವನ್ನು ಅನುಭವಿಸುತ್ತಿದೆ. 2017ರಲ್ಲಿ ₹4786 ಕೋಟಿ ನಷ್ಟವನ್ನು ಅನುಭವಿಸಿದ್ದ BSNL, 2018ರಲ್ಲಿ 8000 ಕೋಟಿ ನಷ್ಟದಲ್ಲಿತ್ತು. 2019ರಲ್ಲಿ ಅದಿನ್ನೂ ಹೆಚ್ಚಾಗುವ ಸಾಧ್ಯತೆ ಇದೆ.