ನವದೆಹಲಿ[ಮಾ.16]: ದೇಶದ ಬಹುದೊಡ್ಡ ದೂರಸಂಪರ್ಕ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ನ ಎಲ್ಲ ಉದ್ಯೋಗಿಗಳ ಫೆಬ್ರವರಿ ತಿಂಗಳ ವೇತನವನ್ನು ಕೊನೆಗೂ ಪಾವತಿಸಲಾಗಿದೆ. ಈ ಮೂಲಕ ವೇತನವಿಲ್ಲದೇ ಪರದಾಡುತ್ತಿದ್ದ ನೌಕರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆರ್ಥಿಕ ಮುಗ್ಗಟ್ಟಿನ ಕಾರಣ ವೇತನ ಬಟವಡೆ ವಿಳಂಬವಾಗಿದೆ.

ಶುಕ್ರವಾರ ಮಾತನಾಡಿದ ಬಿಎಸ್‌ಎನ್‌ಎಲ್‌ ಮುಖ್ಯಸ್ಥ ಹಾಗೂ ನಿರ್ವಹಣಾ ನಿರ್ದೇಶಕ ಅನುಪಮ್‌ ಶ್ರೀವಾಸ್ತವ ಅವರು, ‘ಬಿಎಸ್‌ಎನ್‌ಎಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ 1.76 ಲಕ್ಷ ಉದ್ಯೋಗಿಗಳಿಗೆ ಫೆಬ್ರವರಿ ತಿಂಗಳ ವೇತನವನ್ನು ಶುಕ್ರವಾರ ಪಾವತಿಸಲಾಗಿದೆ. ಈ ಹಿಂದೆ ಗ್ರಾಹಕರು ಎದುರಿಸುತ್ತಿದ್ದ ಯಾವುದೇ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಎದುರಾಗದಂತೆ ದಕ್ಷತೆಯಿಂದ ಉದ್ಯೋಗಿಗಳು ಕಾರ್ಯ ನಿರ್ವಹಿಸಲಿದ್ದಾರೆ,’ ಎಂದು ತಿಳಿಸಿದ್ದಾರೆ.

ಇದೇ ವೇಳೆ, ಮಾರುಕಟ್ಟೆಯಲ್ಲಿ ತನ್ನ ಷೇರು ಮತ್ತು ಆದಾಯವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಬಿಎಸ್‌ಎನ್‌ಎಲ್‌ ಘೋಷಣೆ ಮಾಡಿದೆ.