ಕೇಂದ್ರ ಸರ್ಕಾರವು ಬಿಎಸ್‌ಎನ್‌ಎಲ್‌ನ 4G ಮತ್ತು 5G ಸೇವೆಗಳನ್ನು ಜಾರಿಗೆ ತರಲು ತ್ವರಿತವಾಗಿ ಕಾರ್ಯನಿರ್ವಹಿಸುತ್ತಿದೆ. ಜುಲೈ ವೇಳೆಗೆ 1 ಲಕ್ಷ 4G ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. 

ನವದೆಹಲಿ: ಸರ್ಕಾರಿ ದೂರಸಂಪರ್ಕ ಕಂಪನಿಯಾಗಿರುವ ಬಿಎಸ್‌ಎನ್‌ಎಲ್ ಬಳಕೆದಾರರು ಹಲವು ದಿನಗಳಿಂದ 4G ಮತ್ತು 5G ಇಂಟರ್‌ನೆಟ್ ಸೇವೆಗಳ ಬಳಕೆಗಾಗಿ ಕಾಯುತ್ತಿದ್ದಾರೆ. 4G ನೆಟ್‌ವರ್ಕ್‌ಗಾಗಿ ಕಾಯುತ್ತಿದ್ದ ಕೋಟ್ಯಂತರ ಬಿಎಸ್‌ಎನ್ಎಲ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಗುಡ್‌ನ್ಯೂಸ್ ನೀಡಿದೆ. 4G ಮತ್ತು 5G ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅತ್ಯಂತ ವೇಗವಾಗಿ ಕೆಲಸ ಮಾಡುತ್ತಿದೆ. ದೇಶದಲ್ಲಿ ಎಲ್ಲಾ ಭಾಗದಲ್ಲಿಯೂ 4G ಮೊಬೈಲ್ ಟವರ್ ಅಳವಡಿಕೆಯಲ್ಲಿ ಕೇಂದ್ರ ಅತ್ಯಂತ ಕ್ಷಿಪ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಸರ್ಕಾರವು ತನ್ನ ಗುರಿಗೆ ಅತ್ಯಂತ ಸಮೀಪದಲ್ಲಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಕೋಟ್ಯಂತರ ಬಿಎಸ್ಎನ್ಎಲ್ ಬಳಕೆದಾರರಿಗೆ ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಿಹಿಯಾದ ಸುದ್ದಿಯೊಂದನ್ನು ನೀಡಿದ್ದಾರೆ. 

ಈ ಹಿಂದೆ ಕೇಂದ್ರ ಸರ್ಕಾರ 2024ರ ದೀಪಾವಳಿ ವೇಳೆಗೆ 4G ಸೇವೆಯನ್ನು ನೀಡುವದಾಗಿ ಘೋಷಣೆ ಮಾಡಿಕೊಂಡಿತ್ತು. ಆದ್ರೆ ಕಾರಣಾಂತರಗಳಿಂದ 4G ಮೊಬೈಲ್ ಟವರ್ ಅಳವಡಿಕೆ ಕಾರ್ಯ ನಿರ್ಧಾನವಾಗಿತ್ತು. ಆದ್ರೆ ಈಗ ಜೂನ್ ಅಥವಾ ಜುಲೈನೊಳಗೆ 4G ಸೇವೆ ಆರಂಭಿಸೋದಾಗಿ ಬಿಎಸ್‌ಎನ್‌ಎಲ್ ಹೇಳಿಕೊಂಡಿದೆ. ಇದೀಗ ಕೇಂದ್ರ ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಈ ವಿಷಯದಲ್ಲಿ ದೊಡ್ಡ ನವೀಕರಣವನ್ನು ನೀಡಿದ್ದಾರೆ. 

1 ಲಕ್ಷ ಮೊಬೈಲ್ ಟವರ್ ಅಳವಡಿಕೆ
4G ಸೇವೆ ನವೀಕರಣದ ಕುರಿತು ಮಾತನಾಡಿರುವ ಜ್ಯೋತಿರಾದಿತ್ಯ ಸಿಂಧಿಯಾ, ಇಲ್ಲಿಯವರೆಗೆ 90 ಸಾವಿರ ಟವರ್ ಸ್ಥಾಪನೆ ಮಾಡಲಾಗಿದೆ. 90ರಲ್ಲಿ 70 ಸಾವಿರ ಟವರ್‌ಗಳಿಗೆ ಹಸಿರು ನಿಶಾನೆ ಸಿಕ್ಕಿದೆ. ಜುಲೈ ವೇಳೆಗೆ 1 ಲಕ್ಷ ಟವರ್ ಅಳವಡಿಸಲಾಗುವುದು. ಟವರ್ ಅಳವಡಿಕೆಯ ನಂತರ ಸೇವೆಯ ಗುಣಮಟ್ಟವನ್ನು ಪರಿಶೀಲಿಸಲಾಗುವುದು. ಸರ್ಕಾರ ಮೊದಲ ಹಂತದಲ್ಲಿ 1 ಲಕ್ಷ 4ಜಿ ಸೇವೆಯ ಟವರ್ ಸ್ಥಾಪಿಸಲಾಗುವುದು. ನಂತರ ಎರಡನೇ ಹಂತದಲ್ಲಿ ಟವರ್ ಸಂಖ್ಯೆಯನ್ನು ವಿಸ್ತರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ. 

ಇದೇ ವೇಳೆ 5G ಸೇವೆಯ ಕುರಿತು ಮಾತನಾಡಿದ ಕೇಂದ್ರ ಸಚಿವರು, ಶೀಘ್ರದಲ್ಲಿಯೇ ಎಲ್ಲಾ 1 ಲಕ್ಷ ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸಲು ಆರಂಭಿಸಲಿವೆ.ಇದಾದ ನಂತರ ನೆಟ್‌ವರ್ಕ್ ಅನ್ನು 4G ಯಿಂದ 5G ಗೆ ಬದಲಾಯಿಸಲಾಗುತ್ತದೆ. ಆದರೆ, 4G ನೆಟ್‌ವರ್ಕ್‌ನಿಂದ 5G ಗೆ ಬದಲಾಯಿಸುವುದು ಕಷ್ಟವೇನಲ್ಲ. ದೇಶದಲ್ಲಿ ಬಿಎಸ್‌ಎನ್‌ಎಲ್‌ನ 4ಜಿ ಸೇವೆಗಳನ್ನು ಜಾರಿಗೆ ತರಲು ಸರ್ಕಾರ ತನ್ನದೇ ಆದ ಕೋರ್ ಮತ್ತು ಆರ್‌ಎಎನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಭಾರತವು ಈಗ 4G ಮತ್ತು 5G ಅಭಿವೃದ್ಧಿಪಡಿಸಲು ತಮ್ಮದೇ ಆದ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ 4 ರಿಂದ 5 ದೇಶಗಳ ಸಾಲಿಗೆ ಸೇರಿದೆ ಎಂದು ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ಇದನ್ನೂ ಓದಿ: ಜನ ಸಾಮಾನ್ಯರಿಗೆ ಶಾಕ್​! ರ‍್ಯಾಪಿಡೋ, ಉಬರ್ ಬೈಕ್ ಸೇವೆ ಸ್ಥಗಿತ

ಗ್ರಾಹಕರನ್ನು ಕಳೆದುಕೊಳ್ಳುತ್ತಿರುವ ಬಿಎಸ್‌ಎನ್‌ಎಲ್ 
TRAI ಬಿಡುಗಡೆ ಮಾಡಿದ ಇತ್ತೀಚಿನ ಮಾಹಿತಿಯ ಪ್ರಕಾರ, ಬಿಎಸ್‌ಎನ್‌ಎಲ್ ಮತ್ತೆ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಜನವರಿಯಲ್ಲಿ 1.5 ಲಕ್ಷಕ್ಕೂ ಅಧಿಕ ಬಳಕೆದಾರರನ್ನು ಬಿಎಸ್‌ಎನ್ಎಲ್ ಕಳೆದುಕೊಂಡಿದೆ. 2024ರ ಜುಲೈನಲ್ಲಿ ರಿಲಯನ್ಸ್ ಜಿಯೋ ಸೇರಿದಂತೆ ಮೂವರು ಖಾಸಗಿ ಟೆಲಿಕಾಂ ಕಂಪನಿಗಳು ಟ್ಯಾರಿಫ್ ಹೆಚ್ಚಿಸಿಕೊಂಡಿದ್ದವು. ಬೆಲೆ ಏರಿಕೆಯಿಂದಾಗಿ ಲಕ್ಷಾಂತರ ಗ್ರಾಹಕರು ಎಂಎನ್‌ಪಿ ವಿಧಾನದ ಮೂಲಕ ಬಿಎಸ್ಎನ್ಎಲ್‌ ನೆಟ್‌ವರ್ಕ್‌ಗೆ ಬಂದಿದ್ದರು. ಜನವರಿಯಲ್ಲಿ ಬಿಎಸ್ಎನ್ಎಲ್ ಹೊರತುಪಡಿಸಿ, ವೊಡಾಫೋನ್-ಐಡಿಯಾ ಕೂಡ ಗ್ರಾಹಕರನ್ನು ಕಳೆದುಕೊಂಡಿದೆ. ಖಾಸಗಿ ಕಂಪನಿಗಳ ಪೈಕಿ ವೊಡಾಫೋನ್ ಐಡಿಯಾ ಅತಿಹೆಚ್ಚು ಬಳಕೆದಾರರನ್ನು ಕಳೆದುಕೊಂಡಿದೆ. 

ಎರಡನೇ ಅತಿದೊಡ್ಡ ಖಾಸಗಿ ಟೆಲಿಕಾಂ ಕಂಪನಿ ಏರ್‌ಟೆಲ್ ಮುಂಚೂಣಿಯಲ್ಲಿದ್ದು, ಜನವರಿಯಲ್ಲಿ ಕಂಪನಿಯು 16.5 ಲಕ್ಷ ಚಂದಾದಾರರನ್ನು ಸೇರಿಸಿಕೊಂಡಿದೆ. ಇದರ ನಂತರ ಜಿಯೋ ಸರದಿ ಬರುತ್ತದೆ. ಜಿಯೋ 6.86 ಲಕ್ಷ ಗ್ರಾಹಕರನ್ನು ಸೇರಿಸಿಕೊಂಡಿದೆ. ವೊಡಾಫೋನ್-ಐಡಿಯಾ ಮತ್ತು ಬಿಎಸ್ಎನ್ಎಲ್ ಬಗ್ಗೆ ಮಾತನಾಡಿದರೆ, ವೊಡಾಫೋನ್ ಐಡಿಯಾದ 13.4 ಲಕ್ಷ ಗ್ರಾಹಕರು ಕಂಪನಿಯನ್ನು ತೊರೆದಿದ್ದಾರೆ, ಆದರೆ 1.52 ಲಕ್ಷ ಚಂದಾದಾರರು ಬಿಎಸ್ಎನ್ಎಲ್ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ರಿಲಯನ್ಸ್‌ನ ಪೂರ್ಣಾವಧಿ ನಿರ್ದೇಶಕರಾಗಿ ಅನಂತ್ ಅಂಬಾನಿ ನೇಮಕ