ಚಂದ್ರಯಾನ-3 ಲ್ಯಾಂಡಿಂಗ್ ಸಂಭ್ರಮಕ್ಕೆ ಇರೋದಿಲ್ಲ ಪ್ರಧಾನಿ ನರೇಂದ್ರ ಮೋದಿ!
ಭಾರತದ ಬಹುನಿರೀಕ್ಷಿತ ಚಂದ್ರಯಾನ-3 ಅಂತಿಮ ಘಟ್ಟಕ್ಕೆ ತಲುಪಿದ್ದು, ಆಗಸ್ಟ್ 23 ರಂದು ಚಂದ್ರನ ನೆಲ ಸ್ಪರ್ಶಿಸುವುದು ನಿಗದಿಯಾಗಿದೆ. ಆದರೆ, ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಇಸ್ರೋ ಕೇಂದ್ರಕ್ಕೆ ಬಂದು ಖುದ್ದು ವೀಕ್ಷಣೆ ಸಾಧ್ಯವಾಗೋದಿಲ್ಲ.
ನವದೆಹಲಿ (ಆ.18): ಭಾರತದ ಅತ್ಯಂತ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆ ಇನ್ನೇನು ಅಂತಿಮ ಘಟ್ಟದಲ್ಲಿದೆ. ಚಂದ್ರನ ಕಕ್ಷೆಯಲ್ಲಿ ಪ್ರಪಲ್ಶನ್ ಮಾಡ್ಯುಲ್‌ನಿಂದ ವಿಕ್ರಮ್ ಲ್ಯಾಂಡರ್ ಬೇರ್ಪಟ್ಟಿದೆ. ಚಂದ್ರನ ಸನಿಹ ತಲುಪಿರುವ ಚಿತ್ರಗಳನ್ನು ಕೂಡ ವಿಕ್ರಮ್ ಲ್ಯಾಂಡರ್ ಭೂಮಿಗೆ ಕಳುಹಿಸಿಕೊಟ್ಟಿದೆ. ಆಗಸ್ಟ್ 23ರ ಸಂಜೆ 5.47ಕ್ಕೆ ಚಂದ್ರಯಾನ-3 ನೌಕೆ ಚಂದ್ರನ ಮೇಲ್ಮೈ ಮೇಲೆ ಇಳಿಯಲಿದೆ ಎಂದು ಇಸ್ರೋ ಈಗಾಗಲೇ ಅಧಿಕೃತವಾಗಿ ತಿಳಿಸಿದೆ. ಆದರೆ, ಭಾರತದ ಈ ಐತಿಹಾಸಿಕ ಕ್ಷಣವನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಇರೋದಿಲ್ಲ. ಚಂದ್ರಯಾನ-2 ಸಂದರ್ಭದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗುವ ದಿನದಂದು ಸ್ವತಃ ಪ್ರಧಾನಿ ಮೋದಿ ಇಸ್ರೋ ಕೇಂದ್ರಕ್ಕೆ ಆಗಮಿಸಿದ್ದರು. ಸಾಫ್ಟ್ ಲ್ಯಾಂಡಿಂಗ್‌ನಲ್ಲಿ ಆದ ಸಮಸ್ಯೆಯಿಂದ ಯೋಜನೆ ವಿಫಲವಾಗಿದೆ ಎಂದು ಘೋಷಿಸುವ ವೇಳೆ ಅಂದಿನ ಇಸ್ರೋ ಅಧ್ಯಕ್ಷರಾಗಿದ್ದ ಕೆ. ಶಿವನ್ ಭಾವುಕರಾಗಿದ್ದರು. ಅವರನ್ನು ಸ್ವತಃ ಪ್ರಧಾನಿ ಮೋದಿ ಅಪ್ಪಿಕೊಂಡು ಚಿಕ್ಕ ಮಗುವಿಗೆ ಸಮಾಧಾನ ಮಾಡುವಂತೆ ಸಂತೈಸಿದ್ದರು. ಆದರೆ, ಚಂದ್ರಯಾನ-3ಯ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗುವ ವೇಳೆ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಇಸ್ರೋ ಕೇಂದ್ರದಲ್ಲಿ ಹಾಜರಿ ಇರೋದಿಲ್ಲ.
ಅದಕ್ಕೆ ಕಾರಣವೆಂದರೆ, ಆಗಸ್ಟ್ 22 ರಿಂದ 24ರವರೆಗೆ 15ನೇ ಬ್ರಿಕ್ಸ್ ಶೃಂಗಸಭೆಗಾಗಿ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ಗೆ ಪ್ರಯಾಣ ಮಾಡಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ಶುಕ್ರವಾರ ಅಧಿಕೃತವಾಗಿ ವೇಳಾಪಟ್ಟಿ ಪ್ರಕಟಿಸಿದೆ. ಚಂದ್ರಯಾನ-3 ಐತಿಹಾಸಿಕ ಕಾರ್ಯಕ್ರಮದ ಕಾರಣಕ್ಕಾಗಿಯೇ ಪ್ರಧಾನಿ ನರೇಂದ್ರ ಮೋದಿ ಮೊದಲು ಬ್ರಿಕ್ಸ್ ಶೃಂಗಸಭೆಗೆ ತೆರಳುತ್ತಿಲ್ಲ ಎಂದು ಪಿಎಂಓ ತಿಳಿಸಿತ್ತು.
Chandrayaan-3 vs Lunar-25: ಆಮೆ-ಮೊಲದ ಸ್ಪೇಸ್ ರೇಸ್‌ನಲ್ಲಿ ಗೆಲ್ಲೋದ್ ಯಾರು?
ಆದರೆ, ದಕ್ಷಿಣ ಆಫ್ರಿಕಾದ ಅಧ್ಯಕ್ಷರ ಅಧಿಕೃತ ಮನವಿಯ ಬಳಿಕ ಪ್ರಧಾನಿ ಮೋದಿ ಮನಸ್ಸು ಬದಲಿಸಿ ಶೃಂಗಸಭೆಗೆ ತೆರಳುವ ನಿರ್ಧಾರ ಮಾಡಿದ್ದಾರೆ. ಬ್ರಿಕ್ಸ್ ಸಭೆಯ ಬಳಿಕ ಆಗಸ್ಟ್ 25 ರಂದು ಪ್ರಧಾನಿ ನರೇಂದ್ರ ಮೋದಿ ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿತ್ಸೋಟಾಕಿಸ್ ಅವರ ಆಹ್ವಾನದ ಮೇರೆಗೆ ಗ್ರೀಸ್ ದೇಶಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ. 40 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಗ್ರೀಸ್‌ಗೆ ಭೇಟಿ ನೀಡುತ್ತಿರುವುದು ಇದು ಮೊದಲ ಬಾರಿ ಆಗಿರಲಿದೆ.
Chandrayaan 3: ಚಂದ್ರನ ಚಿತ್ರ ಭೂಮಿಗೆ ಕಳಿಸಿದ ವಿಕ್ರಮ್ ಲ್ಯಾಂಡರ್!