ಬಿಎಂಟಿಸಿ ‘ಡಿಜಿಟಲ್‌ ಪಾಸ್‌’ ಲೋಕಾರ್ಪಣೆ: ಕ್ಯುಆರ್‌ ಕೋಡ್‌ ತೋರಿಸಿ ಪ್ರಯಾಣ

*  ಕಾಗದ ರಹಿತ, ಕ್ಯಾಶ್‌ಲೆಸ್‌ ವಹಿವಾಟಿಗೆ ಬಿಎಂಟಿಸಿ ಉತ್ತೇಜನ
*  ಇನ್ಮುಂದೆ ‘ಟುಮೊಕ್‌’ ಆ್ಯಪಲ್ಲೇ ಸಿಗುತ್ತೆ ಡೈಲಿ, ಮಂಥ್ಲಿ ಪಾಸ್‌
*  ಮೊದಲಿಗೆ ವೋಲ್ವೋ, 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯ 

BMTC Starts Digital Pass Service in Bengaluru grg

ಬೆಂಗಳೂರು(ಏ.07):  ಬಿಎಂಟಿಸಿ ಬಸ್‌ನಲ್ಲಿ ಕಾಗದ ರಹಿತ ಮತ್ತು ಕ್ಯಾಶ್‌ ಲೆಸ್‌ ವಹಿವಾಟು(Cashless Transaction) ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ‘ಡಿಜಿಟಲ್‌ ಪಾಸ್‌’(Digital Pass) ಪರಿಚಯಿಸಿದೆ. ಪ್ರಯಾಣಿಕರು ಬಸ್‌ ಪಾಸ್‌ ಪಡೆಯಲು ಬಿಎಂಟಿಸಿ ಕಚೇರಿಗಳಿಗೆ ಹೋಗಬೇಕಿಲ್ಲ. ಬಿಎಂಟಿಸಿ ಪರಿಚಯಿಸಿರುವ ಟುಮೊಕ್‌ ಮೊಬೈಲ್‌ ಆ್ಯಪ್‌ನಲ್ಲಿ ಪಾಸ್‌ ಖರೀದಿಸಬಹುದಾಗಿದೆ.

ಶಾಂತಿನಗರದ ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಟುಮೊಕ್‌ ಸಂಸ್ಥೆಯ ಸಹಭಾಗಿತ್ವದಲ್ಲಿ ರೂಪಿಸಿರುವ ‘ಟುಮೊಕ್‌ ಆ್ಯಪ್‌’ ಅನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಬುಧವಾರ ಬಿಡುಗಡೆ ಮಾಡಿ ಮಾತನಾಡಿದರು.
ಇಷ್ಟು ದಿನ ಬಿಎಂಟಿಸಿ ಪ್ರಯಾಣಿಕರು(Passengers) ಪಾಸ್‌ ಪಡೆಯುವುದಕ್ಕೆ ಟಿಟಿಎಂಸಿ(TTMC) ಅಥವಾ ಬಸ್‌ ನಿಲ್ದಾಣಗಳಿಗೆ ಹೋಗಬೇಕಿತ್ತು. ಸಂಸ್ಥೆ ಕಾಗದ ರೂಪದ ಬಸ್‌ ಪಾಸ್‌ ಮುದ್ರಣ ಮಾಡಿ ವಿತರಣೆ ಮಾಡಲಾಗುತ್ತಿತ್ತು. ಇದೀಗ ಪ್ರಯಾಣಿಕರೇ ನೇರವಾಗಿ ಟುಮೊಕ್‌ ಮೊಬೈಲ್‌ ಆ್ಯಪ್‌(Mobile App) ಮೂಲಕ ಹಣ ಪಾವತಿಸಿ ದಿನ, ವಾರ ಹಾಗೂ ತಿಂಗಳ ಪಾಸ್‌ ಖರೀದಿಸಬಹುದಾಗಿದೆ ಎಂದು ತಿಳಿಸಿದರು.

BMTC: ಎಲೆಕ್ಟ್ರಿಕ್‌ ಬಸ್‌ಗಳ ಗುತ್ತಿಗೆಯಲ್ಲಿ ಅವ್ಯವಹಾರ ನಡೆದಿಲ್ಲ: ಸಚಿವ ಶ್ರೀರಾಮುಲು

3 ತಿಂಗಳು ಪ್ರಯೋಗ:

ಸದ್ಯ ಪ್ರಾಯೋಗಿಕವಾಗಿ ಬಿಎಂಟಿಸಿ ವೋಲ್ವೋ ಬಸ್‌ಗಳು ಹಾಗೂ ಸುಮಾರು 200 ಸಾಮಾನ್ಯ ಬಸ್‌ಗಳಲ್ಲಿ ಪರಿಚಯಿಸಲು ಉದ್ದೇಶಿಸಿದ್ದು, ಸಾಮಾನ್ಯ ಬಸ್‌ಗಳಲ್ಲಿ ನಿರ್ವಾಹಕರಿಗೇ ಕ್ಯುಆರ್‌ ಕೋಡ್‌ ನೀಡಲಾಗಿರುತ್ತದೆ. ಆ ಕ್ಯುಆರ್‌ ಕೋಡ್‌ ಅನ್ನು ಪಾಸುಗಳನ್ನು ಹೊಂದಿದ ಪ್ರಯಾಣಿಕರು ಸ್ಕ್ಯಾನ್‌ ಮಾಡಬೇಕಾಗುತ್ತದೆ. ಮೂರು ತಿಂಗಳು ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಎಲ್ಲಾ ಬಸ್‌ಗಳಿಗೂ ವಿಸ್ತರಿಸಲಾಗುವುದು ಎಂದರು.

ಮುಂದಿನ ದಿನಗಳಲ್ಲಿ ರಿಯಾಯಿತಿ:

ರಿಯಾಯಿತಿ ದರದಲ್ಲಿ ಈಗಾಗಲೇ ಬಸ್‌ ಪಾಸ್‌ ನೀಡಲಾಗುತ್ತಿದೆ. ಸಂಸ್ಥೆಯ ಸದ್ಯ ಡಿಜಿಟಲ್‌ ಪಾಸ್‌ ಪಡೆಯುವ ಪ್ರಯಾಣಿಕರಿಗೆ ಯಾವುದೇ ರಿಯಾಯಿತಿ ನೀಡುತ್ತಿಲ್ಲ. ಆದರೆ, ಮುಂದಿನ ದಿನಗಳಲ್ಲಿ ರಿಯಾಯಿತಿ ನೀಡಲಾಗುವುದು. ಇನ್ನೂ, ಸದ್ಯ ಪ್ರಯಾಣಿಕರು ಯಾವಾಗ ಪಾಸ್‌ ಖರೀಸಿದರೂ ಆ ತಿಂಗಳ 1ನೇ ತಾರೀಕಿನಿಂದ 31ರ ವರೆಗೆ ಆ ಪಾಸ್‌ ವ್ಯಾಲಿಡಿಟಿ ಇರುತ್ತಿತ್ತು. ಈ ವ್ಯವಸ್ಥೆಯಲ್ಲಿ ಯಾವ ತಾರೀಖಿಗೆ ಪಾಸ್‌ ಪಡೆಯುತ್ತಾರೋ ಅಲ್ಲಿಂದ 30 ದಿನದ ವರೆಗೆ ಪಾಸ್‌ ವ್ಯಾಲಿಡಿಟಿ ಇರುವ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಅನ್ಬುಕುಮಾರ್‌ ಭರವಸೆ ನೀಡಿದರು.

ಡಿಜಿಟಲ್‌ ಪಾಸ್‌ ಪಡೆಯುವುದು ಹೇಗೆ?

ಪ್ಲೇ ಸ್ಟೋರ್‌ನಲ್ಲಿ ಟುಮೊಕ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಮೊಬೈಲ್‌ ಸಂಖ್ಯೆ ಹಾಗೂ ಹೆಸರು, ವಯಸು ಸೇರಿದಂತೆ ಕನಿಷ್ಠ ವಿವರ ನಮೂದಿಸಬೇಕು. ಯಾವುದಾರೂ ಸರ್ಕಾರಿ ಗುರುತಿನ ಸಂಖ್ಯೆ ನಮೂದಿಸಬೇಕು. ಇತ್ತಿಚಿನ ಫೋಟೋ ಅಪ್‌ಲೋಡ್‌ ಮಾಡಬೇಕು. ಬಳಿಕ ಪಾಸ್‌ ಮೊತ್ತವನ್ನು ಫೋನ್‌ ಪೇ, ಗೂಗಲ್‌ ಪೇ, ಕ್ರೆಡಿಟ್‌ ಅಥವಾ ಡೆಬಿಟ್‌ ಕಾರ್ಡ್‌ ಮೂಲಕ ಪಾವತಿಸಿ ಪಾಸ್‌ ಪಡೆಯಬಹುದು. ಪ್ರತಿ ನಿರ್ವಾಹಕರಿಗೆ ಒಂದು ಕ್ಯೂಆರ್‌ ಕೋಡ್‌ ನೀಡಲಾಗಿರುತ್ತದೆ. ಡಿಜಿಟಲ್‌ ಪಾಸ್‌ ಹೊಂದಿರುವ ಪ್ರಯಾಣಿಕರು ಆ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ಪ್ರಯಾಣಿಸಬಹುದಾಗಿದೆ.

ಸಾರಿಗೆ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು, ಹೀಗಾಗಿ ಸಂಸ್ಥೆ ಆಸ್ತಿ ಅಡ ತೀರ್ಮಾನ: ಸಚಿವ ಬಿ. ಶ್ರೀರಾಮುಲು!

ಸದ್ಯದಲ್ಲಿಯೇ ಡಿಜಿಟಲ್‌ ಟಿಕೆಟ್‌

ಡಿಜಿಟಲ್‌ ಪಾಸ್‌ ವಿತರಿಸುವ ಮಾದರಿಯಲ್ಲಿ ಬಿಎಂಟಿಸಿ ಡಿಜಿಟಲ್‌ ಟಿಕೆಟ್‌ ಸಹ ನೀಡುವುದಕ್ಕೆ ಚಿಂತನೆ ನಡೆಸಲಾಗಿದೆ. ಮೊದಲ ಹಂತದಲ್ಲಿ ಡಿಜಿಟಲ್‌ ಪಾಸ್‌ ವಿತರಣೆ ಮಾಡಲಾಗುತ್ತಿದ್ದು, ಯಶಸ್ವಿಯಾದರೆ ಡಿಜಿಟಲ್‌ ಟಿಕೆಟ್‌ ವಿತರಣೆ ಮುಂದಾಗಲಿದೆ. ಇದರಿಂದ ನಗದು ವಹಿವಾಟು ಇರುವುದಿಲ್ಲ. ಬಸ್‌ಗಳಲ್ಲಿ ಚಿಲ್ಲರೆ ಸಮಸ್ಯೆ ಇರುವುದಿಲ್ಲ. ಆದಾಯ ಸೋರಿಕೆಗೆ ಕಡಿವಾಣ ಬೀಳಲಿದೆ.

ಕಂಡಕ್ಟರ್‌ ಕೆಲಸಕ್ಕೆ ಆಪತ್ತಿಲ್ಲ

ಡಿಜಿಟಲ್‌ ಪಾಸ್‌ ಹಾಗೂ ಟಿಕೆಟ್‌ನಿಂದ ಬಿಎಂಟಿಸಿ ಕಂಡಕ್ಟ​ರ್‌ಗಳ ಕೆಲಸಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಸದ್ಯ ನಗರದಲ್ಲಿ 6,500 ಬಿಎಂಟಿಸಿ ಬಸ್‌ ಸಂಚರಿಸುತ್ತಿವೆ. ಆದರೂ ರಾತ್ರಿ ಮತ್ತು ಸಂಜೆ ಸಮಯದಲ್ಲಿ ಪ್ರಯಾಣಿಕರಿಗೆ ಅಗತ್ಯಕ್ಕೆ ತಕ್ಕಂತೆ ಬಸ್‌ ವ್ಯವಸ್ಥೆ ಮಾಡುವುದಕ್ಕೆ ಸಾಧ್ಯವಿಲ್ಲ. ಇನ್ನಷ್ಟು ನಗರದ ಹೊರ ವಲಯಕ್ಕೂ ಬಸ್‌ ಜಾಲ ವಿಸ್ತರಿಸಬೇಕಿದೆ. ಹಾಗಾಗಿ, ನಿರ್ವಾಹಕರ ಕೆಲಸಕ್ಕೆ ಯಾವುದೇ ತೊಂದರೆ ಆಗದಂತೆ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್‌ ಸ್ಪಷ್ಟಪಡಿಸಿದರು.
 

Latest Videos
Follow Us:
Download App:
  • android
  • ios