ಸಾರಿಗೆ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು, ಹೀಗಾಗಿ ಸಂಸ್ಥೆ ಆಸ್ತಿ ಅಡ ತೀರ್ಮಾನ: ಸಚಿವ ಬಿ. ಶ್ರೀರಾಮುಲು!
*ಅಡ ಇಟ್ಟ ಎಲ್ಲ ವರಮಾನ ಸಿಬ್ಬಂದಿಗಳ ಭವಿಷ್ಯದ ನಿಧಿ ಸಲುವಾಗಿ
*ಬಡ್ಡಿ ವಿಚಾರದ ಸಲುವಾಗಿ ಅಡಮಾನ ಇಡಲಾಗಿದೆ
*ಸಿಬ್ಬಂದಿಗಳಿಗೆ ಒಂದೂವರೆ ತಿಂಗಳ ಸಂಬಳ ಬಾಕಿ ಇದೆ
*ವಾರದಲ್ಲಿ ಒಂದೂವರೆ ತಿಂಗಳ ಬಾಕಿ ಸಂಬಳ ಕೊಡಲಾಗುವದು
ಬೆಂಗಳೂರು (ಮಾ. 13): ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಮೂರು ನಿಗಮಗಳ ವಾಣಿಜ್ಯ ಸಂಕೀರ್ಣಗಳನ್ನು ಅಡಮಾನ ಇರಿಸಿ ಸಾಲ ಪಡೆದು ಸಾರಿಗೆ ನೌಕರರ ಭವಿಷ್ಯ ನಿಧಿಗೆ ಬಳಸಿಕೊಳ್ಳಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದರು. ಈ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಚಿವ ಬಿ. ಶ್ರೀರಾಮುಲು ಸಿಬ್ಬಂದಿಗಳ ಭವಿಷ್ಯದ ನಿಧಿ ಸಲುವಾಗಿ ವರಮಾನ ಅಡ ಇಡಲಾಗಿದೆ ಎಂದು ಹೇಳಿದ್ದಾರೆ. "ಬಡ್ಡಿ ವಿಚಾರದ ಸಲುವಾಗಿ ಅಡಮಾನ ಇಡಲಾಗಿದೆ. ಸಿಬ್ಬಂದಿಗಳಿಗೆ ಒಂದೂವರೆ ತಿಂಗಳ ಸಂಬಳ ಬಾಕಿ ಇದೆ. ವಾರದಲ್ಲಿ ಒಂದೂವರೆ ತಿಂಗಳ ಬಾಕಿ ಸಂಬಳ ಕೊಡಲಾಗುವದು. ನಂತರ ಇಲಾಖೆಯ ಎಲ್ಲ ಸಿಬ್ಬಂದಿಗಳಿಗೆ ಪ್ರತಿ ತಿಂಗಳ ಸಂಬಳ ಕೊಡಲಾಗುವದು" ಎಂದು ಅವರು ಹೇಳಿದ್ದಾರೆ.
ಹಿಂದಿನ ಹಾಗೂ ಈಗಿನ ಮುಖ್ಯಮಂತ್ರಿಗಳು ಮೂರುಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ ಎಂದು ತಿಳಿಸಿರುವ ಸಚಿವರು "ಚಾಲಕ ಮತ್ತು ನಿರ್ವಾಹಕ ಸಿಬ್ಬಂದಿ ಸಂಬಳಕ್ಕಾಗಿ ಕಾಯಬಾರದು. ಹೀಗಾಗಿ ಈ ಅಡಮಾನ ಇಡುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ವೈಯಕ್ತಿಕವಾಗಿ ಇಲ್ಲಿ ಬಳಕೆ ಮಾಡುವುದು ಏನೂ ಇಲ್ಲ. ಎಲ್ಲವೂ ಭವಿಷ್ಯದ ನಿಧಿ ಸಲುವಾಗಿ ಕೊಟ್ಟಿದ್ದು. ಇಲಾಖೆ ದಿವಾಳಿಯಾಗಿದೆ ಅನ್ನುವ ವಿಚಾರದ ಹಿಂದೆ ಲಾಭದಾಯಕದ ಉದ್ದೇಶವಿಲ್ಲ. ಸಾರಿಗೆ ಸಂಸ್ಥೆಗಳು ಕೇವಲ ಸೇವಾರ್ಥ ಸಂಸ್ಥೆಯಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ, ಶ್ರೀರಾಮುಲು ಭವಿಷ್ಯ
ಕೆನರಾ ಬ್ಯಾಂಕ್‌ಗೆ ಅಡಮಾನ: ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಪ್ರಶ್ನೆಗೆ ಉತ್ತರಿಸಿದ್ದ ಸಚಿವರು, ದಕ್ಷಿಣ ಕರ್ನಾಟಕದ ಕೆಎಸ್‌ಆರ್‌ಟಿಸಿ ಯಾವುದೇ ವಾಣಿಜ್ಯ ಸಂಕೀರ್ಣವನ್ನು ಅಡಮಾನ ಇಟ್ಟಿಲ್ಲ. ಆದರೆ ಬಿಎಂಟಿಸಿಯಿಂದ ಬೆಂಗಳೂರಿನ ಶಾಂತಿನಗರದ ವಾಣಿಜ್ಯ ಸಂಕೀರ್ಣದ ಕಟ್ಟಡವನ್ನು ಕೆನರಾ ಬ್ಯಾಂಕ್‌ಗೆ ಅಡಮಾನ ಇಟ್ಟಿದ್ದು 390 ಕೋಟಿ ರು.(ಶೇ.8.6 ಬಡ್ಡಿ)ಸಾಲ ಪಡೆದಿದೆ. ಈ ಹಣವನ್ನು ಭವಿಷ್ಯ ನಿಧಿಗೆ ಬಳಸಿಕೊಳ್ಳಲಾಗಿದೆ" ಎಂದು ಹೇಳಿದ್ದರು
"ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು 2019-20ರಲ್ಲಿ 16.39 ಎಕರೆ ಜಮೀನು ಅಡಮಾನವಿಟ್ಟು 100 ಕೋಟಿ ರು.(ಶೇ.8 ಬಡ್ಡಿ)ಸಾಲ ಪಡೆದಿದ್ದೇವೆ. ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಾಣಿಜ್ಯ ಸಂಕೀರ್ಣ ಅಡಮಾನದಿಂದ 50 ಕೋಟಿ ರು.ಗಳನ್ನು ಶೇ.7.20 ಬಡ್ಡಿ ದರದಲ್ಲಿ ಸಾಲ ಪಡೆದಿದ್ದು ಭವಿಷ್ಯ ನಿಧಿಗೆ ಬಳಸಲು ವಿನಿಯೋಗ ಮಾಡಲಾಗಿದೆ" ಸಚಿವರು ಮಾಹಿತಿ ನೀಡಿದ್ದರು.
ಇದನ್ನೂ ಓದಿ: Ballari: ಇನ್ನು 10 ವರ್ಷ ರಾಜಕೀಯದಲ್ಲಿ ಇರುತ್ತೇನೋ ಇಲ್ಲವೋ ಗೊತ್ತಿಲ್ಲ: ಶ್ರೀರಾಮುಲು
ಭವಿಷ್ಯ ನಿಧಿಗಾಗಿ ಸಾಲ: ರಾಜ್ಯ ಸರ್ಕಾರ ಕೋವಿಡ್ 19 ಸಂಕಷ್ಟದಿಂದ ಸಾರಿಗೆ ಇಲಾಖೆ ನಷ್ಟದಲ್ಲಿದ್ದಾಗ ಸುಮಾರು 2958 ಕೋಟಿ ರು.ಗಳನ್ನು ನೀಡಿದ್ದರಿಂದ ಸಾರಿಗೆ ಸಿಬ್ಬಂದಿಗೆ ನಿಗದಿತ ಅವಧಿಯಲ್ಲಿ ವೇತನ, ನಿರ್ವಹಣೆಗೆ ಸಹಕಾರಿಯಾಯಿತು. ಆದರೂ ಭವಿಷ್ಯ ನಿಧಿಗಾಗಿ ಸಾಲ ಮಾಡಬೇಕಾಗಿದೆ. ವಾಣಿಜ್ಯದ ದೃಷ್ಟಿಯಿಂದ ಸಾರಿಗೆ ಸಂಸ್ಥೆಯನ್ನು ನಡೆಸುತ್ತಿಲ್ಲ. ಸೇವಾ ದೃಷ್ಟಿಯಿಂದ ಸೇವೆ ಒದಗಿಸಲಾಗುತ್ತಿದೆ. ಹಾಗಾಗಿ ಸಾಲ ಮಾಡಬೇಕಾದ ಸನ್ನಿವೇಶ ಬಂದಿದೆ ಎಂದು ಹೇಳಿದ್ದರು.
ನಷ್ಟದಲ್ಲಿರುವ ಸಾರಿಗೆ ಸಂಸ್ಥೆಗಳನ್ನು ಆದಷ್ಟುಶೀಘ್ರ ಲಾಭಕ್ಕೆ ತರಲು ಶ್ರೀನಿವಾಸ ಮೂರ್ತಿ ಸಮಿತಿ ರಚನೆ ಮಾಡಿದ್ದು, ಸಂಸ್ಥೆಯನ್ನು ಲಾಭದತ್ತ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ. ಕೋವಿಡ್‌ನಿಂದ ಮರಣ ಹೊಂದಿಗೆ ಸಿಬ್ಬಂದಿಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಈ ಬಗ್ಗೆ ಸಮರ್ಪಕ ದಾಖಲೆಗಳನ್ನು ಸಲ್ಲಿಸುವಂತೆ ಕುಟುಂಬಸ್ಥರಿಗೆ ಸೂಚನೆ ನೀಡಲಾಗಿದೆ. ಹಾಗೆಯೇ ಸಂಸ್ಥೆಯ ಉಳಿದ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಿ ಪರಿಹರಿಸುವ ಭರವಸೆಯನ್ನು ಸಚಿವ ಶ್ರೀರಾಮುಲು ನೀಡಿದ್ದರು.