Asianet Suvarna News Asianet Suvarna News

ಷೇರುಮಾರುಕಟ್ಟೆಯಲ್ಲಿ ರಕ್ತಪಾತ, ಒಂದೇ ದಿನ 40 ಲಕ್ಷ ಕೋಟಿ ನಷ್ಟ!

ಲೋಕಸಭೆ ಚುನಾವಣೆಯಲ್ಲಿ ಮೋದಿ ನೇತೃತ್ವದ ಬಿಜೆಪಿ ಮ್ಯಾಜಿಕ್‌ ನಂಬರ್‌ 272 ತಲುಪಲು ವಿಫಲವಾಗಿದ್ದು, ಮಾರುಕಟ್ಟೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರಿದೆ. ಒಂದೇ ದಿನ 40 ಲಕ್ಷ ಕೋಟಿ ನಷ್ಟ ಉಂಟಾಗಿದೆ.

Bloodshed Indian Market Rs 40 Lakh Crore Eroded On June 4 is Relief Soon san
Author
First Published Jun 4, 2024, 4:21 PM IST

ಮುಂಬೈ (ಜೂ.4): ಒಂದೆರಡಲ್ಲ, ಬರೋಬ್ಬರಿ 40 ಲಕ್ಷ ಕೋಟಿ ರೂಪಾಯಿ ನಷ್ಟ. ಭಾರತದ ಷೇರುಮಾರುಕಟ್ಟೆ ಇಡೀ ವರ್ಷ ಮಾಡಿದ್ದ ಗಳಿಕೆ ಒಂದೇ ದಿನದಲ್ಲಿಯೇ ನಿರ್ನಾಮವಾಗಿದೆ. ಇದು ಡಿ ಸ್ಟ್ರೀಟ್‌ನಲ್ಲಿ ಕಳೆದ ನಾಲ್ಕು ವರ್ಷಗಳಲ್ಲೇ ಅತ್ಯಂತ ಕೆಟ್ಟ ದಿನವಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಏಕಾಂಗಿಯಾಗಿ ಮ್ಯಾಜಿಕ್‌ ನಂಬರ್‌ 272 ರೀಚ್‌ ಆಗಲು ವಿಫಲವಾಗಿದೆ. ಆದರೆ, ಎನ್‌ಡಿಎ ಮೈತ್ರಿಕೂಟ ಬಹುಮತ ಸಾಧಿಸಲು ಯಶಸ್ವಿಯಾಗಿದ್ದರೂ, ಸರ್ಕಾರದ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ. ಚುನಾವಣೆಯಲ್ಲಿ ಮೋದಿ ಸರ್ಕಾರ ಏಕಾಂಗಿಯಾಗಿ ಮ್ಯಾಜಿಕ್‌ ನಂಬರ್‌ ತಲುಪಲು ವಿಫಲವಾಗಿದ್ದು ಮಾರುಕಟ್ಟೆಯ ಮೇಲೂ ತೀಕ್ಷ್ಣ ಪರಿಣಾಮ ಬೀರಿದ್ದು, ಇಂಟ್ರಾಡೇ ಟ್ರೇಡ್‌ನಲ್ಲಿ ಒಂದೇ ದಿನ ಹೂಡಿಕೆದಾರರು 40 ಲಕ್ಷ ಕೋಟಿ ಹಣವನ್ನು ಕಳೆದುಕೊಂಡಿದ್ದಾರೆ. ಸೋಮವಾರ ಮಾರುಕಟ್ಟೆ ಮುಕ್ತಾಯದ ವೇಳೆ ಬಿಎಸ್‌ಇ ಲಿಸ್ಟೆಡ್‌ ಕಂಪನಿಗಳ ಮಾರುಕಟ್ಟೆ ಬಂಡವಾಳವು 426 ಲಕ್ಷ ಕೋಟಿ ಇತ್ತು. ಆದರೆ, ಮಧ್ಯಾಹ್ನದ ವೇಳೆಗೆ ಇದು ಸರಿಸುಮಾರು 386 ಲಕ್ಷ ಕೋಟಿಗೆ ಇಳಿದಿತ್ತು. ಎಕ್ಸಿಟ್‌ ಪೋಲ್‌ಗಳು ಮೋದಿ ನೇತೃತ್ವದ ಬಿಜೆಪಿ ಮುನ್ನಡೆ ನೀಡಿದ್ದವು, ಆದರೆ, ಮತ ಎಣಿಕೆಯಲ್ಲಿ ಅಧಿಕಾರದ ಹಗ್ಗಜಗ್ಗಾಟ ಬಿಗಿಯಿದ್ದ ಕಾರಣಕ್ಕೆ ಇನ್ವೆಸ್ಟರ್‌ಗಳು ಆಘಾತ ಎದುರಿಸಿದ್ದಾರೆ.

ಬೆಂಚ್‌ಮಾರ್ಕ್‌ಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ 50 ಎರಡೂ 8% ಕ್ಕಿಂತ ಹೆಚ್ಚು ಕುಸಿದವು, ಬಿಎಸ್‌ಇ ಮಿಡ್‌ಕ್ಯಾಪ್ ಸೂಚ್ಯಂಕ 10% ಕುಸಿಯಿತು ಮತ್ತು ಬಿಎಸ್‌ಇ ಸ್ಮಾಲ್‌ಕ್ಯಾಪ್ ಇಂಟ್ರಾಡೇ 8% ನಷ್ಟು ನಷ್ಟವನ್ನು ಅನುಭವಿಸಿತು. ಆಡಳಿತಾರೂಢ ಎನ್‌ಡಿಎ(ಎನ್‌ಡಿಎ) ಗೆಲುವಿನ ನಿರೀಕ್ಷೆಯಿಂದ ಉತ್ತೇಜಿತವಾಗಿ  ಗಳಿಸಿದ್ದ ಎಲ್ಲಾ ಲಾಭಗಳು ಮಂಗಳವಾರದ ಆರಂಭದಲ್ಲಿಯೇ ಅಳಿಸಿಹೋಗಿದ್ದವು. ಪ್ರಸ್ತುತ ಮತ ಮತ ಎಣಿಕೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 297 ಸೀಟ್‌ಗಳಲ್ಲಿ ಗೆಲುವು ಕಾಣಲಿದ್ದರೆ, ಇಂಡಿಯಾ ಮೈತ್ರಿ 230 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎನ್ನುವ ಅಂದಾಜಿದೆ.

"ಜೂನ್ 4 ರಂದು, ಲೋಕಸಭಾ ಚುನಾವಣಾ ಫಲಿತಾಂಶಗಳು ಗಮನಾರ್ಹವಾದ ಮಾರುಕಟ್ಟೆ ಪ್ರತಿಕ್ರಿಯೆಗಳಿಗೆ ಕಾರಣವಾಯಿತು, ಇದು ತೀವ್ರವಾದ ರಾಜಕೀಯ ಸ್ಪರ್ಧೆಯನ್ನು ಹಿನ್ನಲೆಯಲ್ಲಿ ದಾಖಲಾಗಿದೆ' ಎಂದು ಚಾಯ್ಸ್ ಬ್ರೋಕಿಂಗ್‌ನ ಇಕ್ವಿಟಿ ಸಂಶೋಧನಾ ವಿಶ್ಲೇಷಕ ಮಂದರ್ ಭೋಜನೆ ಅಭಿಪ್ರಾಯಪಟ್ಟಿದ್ದಾರೆ. ಎಕ್ಸಿಟ್ ಪೋಲ್‌ಗಳು ಸೂಚಿಸಿದಂತೆ ಮಾರುಕಟ್ಟೆಯು ಎನ್‌ಡಿಎಗೆ ಗಮನಾರ್ಹ ಬಹುಮತಕ್ಕೆ ಬೆಲೆ ನೀಡಿದೆ. ಆದಾಗ್ಯೂ, ಅನಿರೀಕ್ಷಿತ ಬಿಗಿಯಾದ ಓಟವು ಹೂಡಿಕೆದಾರರಿಂದ ತ್ವರಿತ ಮತ್ತು ತೀವ್ರ ಪ್ರತಿಕ್ರಿಯೆಯನ್ನು ಉಂಟುಮಾಡಿತು.

ಮಧ್ಯಾಹ್ನ 2:35 ಕ್ಕೆ, ನಿಫ್ಟಿ 50 5.73% ರಷ್ಟು ಕುಸಿದು 21,931 ಕ್ಕೆ ತಲುಪಿದ್ದರೆ, ಸೆನ್ಸೆಕ್ಸ್ 5.57% ಕುಸಿದು 72,209 ಕ್ಕೆ ತಲುಪಿದೆ. ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಎಂಕ್ಯಾಪ್ ಆ ಸಮಯದಲ್ಲಿ ಸುಮಾರು 388 ಲಕ್ಷ ಕೋಟಿ ರೂಪಾಯಿ ಆಗಿತ್ತು. ನಿಫ್ಟಿ ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ 1,330 ಅಂಕ ಕುಸಿಯಿತು, ಬ್ಯಾಂಕ್ ನಿಫ್ಟಿ 6% ನಷ್ಟು ಕುಸಿತ ಕಂಡಿದೆ. ಪಿಎಸ್‌ಯು ಬ್ಯಾಂಕ್‌ಗಳು, ನಿಫ್ಟಿ ಎನರ್ಜಿ ಮತ್ತು ನಿಫ್ಟಿ ಮೆಟಲ್ಸ್‌ನಲ್ಲಿ ಕಂಡುಬರುವ ಅತ್ಯಂತ ಮಹತ್ವದ ಕುಸಿತದೊಂದಿಗೆ ಎಲ್ಲಾ ವಲಯಗಳು ಕುಸಿತವನ್ನು ಕಂಡಿವೆ. ಗಮನಾರ್ಹವಾಗಿ, PFC, REC ಮತ್ತು ಎಲ್ಲಾ ಅದಾನಿ ಕಂಪನಿಗಳ ಷೇರುಗಳು 20% ಕುಸಿತದೊಂದಿಗೆ ಲೋವರ್ ಸರ್ಕ್ಯೂಟ್‌ ರೀಚ್‌ ಆಗಿದೆ.

ಷೇರು ಮಾರುಕಟ್ಟೆ ಗೂಳಿ ಭರ್ಜರಿ ಓಟ; ಕೈಕೊಟ್ಟ Groww, Zerodha, ಲಾಭ ತಪ್ಪಿಸಿಕೊಂಡ ಹೂಡಿಕೆದಾರ!

2022ರ ಫೆಬ್ರವರಿ 24 ರಂದು ರಷ್ಯಾ-ಉಕ್ರೇನ್ ಯುದ್ಧದ ಸಮಯದಲ್ಲಿ ನಿಫ್ಟಿ 4.78% ನಷ್ಟು ಕುಸಿಯಿತು ಮತ್ತು ಕೋವಿಡ್‌-19 ಕಾರಣದಿಂದಾಗಿ ಜನತಾ ಕರ್ಫ್ಯೂ ಘೋಷಣೆಯ ನಂತರ ಮಾರ್ಚ್ 23, 2020 ರಂದು 13% ನಷ್ಟು ಕುಸಿದಿತ್ತು. ನಿಫ್ಟಿ ಬ್ಯಾಂಕ್ ಸೂಚ್ಯಂಕವು ಮಧ್ಯಾಹ್ನ 12:35 ಕ್ಕೆ 9% ಕ್ಕಿಂತ ಹೆಚ್ಚು ಕುಸಿಯುವುದರೊಂದಿಗೆ ಬ್ಯಾಂಕಿಂಗ್ ವಲಯವು ಮಾರಾಟದ ಭಾರವನ್ನು ಅನುಭವಿಸಿತು. ನಿಫ್ಟಿ ಬ್ಯಾಂಕ್ ಸೂಚ್ಯಂಕದಲ್ಲಿನ ಎಲ್ಲಾ 12 ಷೇರುಗಳು ನಷ್ಟದೊಂದಿಗೆ ವಹಿವಾಟು ನಡೆಸಿದವು, ವಲಯದ ಮೇಲೆ ರಾಜಕೀಯ ಅನಿಶ್ಚಿತತೆಯ ವ್ಯಾಪಕ ಪರಿಣಾಮವನ್ನು ಪ್ರತಿಬಿಂಬಿಸುತ್ತದೆ. ಭಾರತದ ಅತಿದೊಡ್ಡ ಪಿಎಸ್‌ಯು ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಷೇರುಗಳು ಟಾಪ್ ಲೂಸರ್‌ಗಳಾಗಿದ್ದು, 15% ರಷ್ಟು ಕುಸಿದಿದೆ. ಬ್ಯಾಂಕ್ ಆಫ್ ಬರೋಡಾ ಕೂಡ ಸುಮಾರು 15% ನಷ್ಟು ಕುಸಿದಿದೆ, ಆದರೆ ಪಂಜಾಬ್ ನ್ಯಾಷನಲ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ICICI ಬ್ಯಾಂಕ್, HDFC ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಸೇರಿದಂತೆ ಇತರ ಪ್ರಮುಖ ಬ್ಯಾಂಕ್‌ಗಳು 7% ನಷ್ಟು ನಷ್ಟವನ್ನು ವರದಿ ಮಾಡಿದೆ.

ಷೇರುಪೇಟೆಗೆ ಭರ್ಜರಿ ಕಿಕ್: ಸೆನ್ಸೆಕ್ಸ್ 2507 ಅಂಕ ಜಿಗಿತ, ನಿನ್ನೆಯೇ ವಿಜಯೋತ್ಸವ!

Latest Videos
Follow Us:
Download App:
  • android
  • ios