ಪೆಟ್ರೋಲ್ ದರ ಗಗನಕ್ಕೆ: ದ್ವಿಚಕ್ರ ವಾಹನ ಮಾರಾಟ ಪ್ರಪಾತಕ್ಕೆ..!
* ದೀಪಾವಳಿ ಹಬ್ಬ ಸನಿಹದಲ್ಲಿದ್ದರೂ ಮಾರಾಟ ಅಷ್ಟಕಷ್ಟೇ
* ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿದ ಬೇಡಿಕೆ
* ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ ರೈತರ ಸಮಸ್ಯೆ
ಕೆ.ಎಂ. ಮಂಜುನಾಥ್
ಬಳ್ಳಾರಿ(ಅ.27): ಪೆಟ್ರೋಲ್(Petrol) ಬೆಲೆ ದಿನ ದಿನಕ್ಕೆ ಗಗನಮುಖಿ ಆಗುತ್ತಿದ್ದಂತೆಯೇ ದ್ವಿಚಕ್ರ ವಾಹನ(Bike) ಖರೀದಿ ಜಿಲ್ಲೆಯಲ್ಲಿ ತೀವ್ರ ಇಳಿಮುಖ ಕಂಡಿದ್ದು, ಹೊಸದಾಗಿ ವಾಹನ ಖರೀದಿಯ ಉತ್ಸುಕದಲ್ಲಿರುವವರು ಎಲೆಕ್ಟ್ರಿಕ್ ವಾಹನಗಳತ್ತ ಮನಸ್ಸು ಹಾಯಿಸುತ್ತಿದ್ದಾರೆ!
ಇದರಿಂದ ಈ ಬಾರಿಯ ದಸರಾ(Dasara) ಹಬ್ಬದಲ್ಲಿ(Festival) ಹೀರೋ(Hero), ಸುಜಕಿ(Suzuki), ಹೊಂಡಾ(Honda), ಟಿವಿಎಸ್(TVS) ಸೇರಿದಂತೆ ಪ್ರಮುಖ ಕಂಪನಿಗಳ ವಾಹನ ಮಾರಾಟದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಎಲೆಕ್ಟ್ರಿಕ್ ವಾಹನಗಳ(Electric Vehicles)ಖರೀದಿಯಲ್ಲಿ ಏರಿಕೆ ಕಂಡು ಬಂದಿದೆ.
ಕಳೆದ ಮೂರು ವರ್ಷದ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈ ಬಾರಿ ದ್ವಿಚಕ್ರ ವಾಹನ ಖರೀದಿದಾರರ ಸಂಖ್ಯೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ. ಕೋವಿಡ್(Covid19) ಅಲೆಯ ಹೊಡೆತದಿಂದಾದ ಆರ್ಥಿಕ ಹಿಂಜರಿತ ಹಾಗೂ ಉದ್ಯೋಗ(Job) ನಾಶಗಳು ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
6,999 ರೂಪಾಯಿ ಡೌನ್‌ಪೇಮೆಂಟ್, 5.55% ಬಡ್ಡಿ; ಭರ್ಜರಿ ಆಫರ್ ಘೋಷಿಸಿದ ಹೀರೋ ಮೋಟೋಕಾರ್ಪ್!
ದೀಪಾವಳಿ ನಿರೀಕ್ಷೆಯೂ ಇಲ್ಲ:
ಕಳೆದ ವರ್ಷದ ದಸರಾ ಹಬ್ಬದ ದಿನವೊಂದೇ ಹೀರೋ ಕಂಪನಿಯ 200 ವಾಹನಗಳ ಮಾರಾಟವಾಗಿದ್ದವು. ಈ ಬಾರಿ ಬರೀ 43 ಮಾತ್ರ ಖರೀದಿಯಾಗಿವೆ. ಖರೀದಿಯಲ್ಲಿ ನಗರ ಹಾಗೂ ಗ್ರಾಮೀಣರು ಸಮಬಲ ಇರುತ್ತಿದ್ದರು. ಆದರೆ, ಈ ಬಾರಿ ಗ್ರಾಮೀಣ ಭಾಗದಲ್ಲಿ ಶೇ. 10ರಷ್ಟು ಸಹ ಜನರು ವಾಹನ ಖರೀದಿಸಲು ಬಂದಿಲ್ಲ ಎನ್ನುತ್ತಾರೆ ನಗರದ ‘ಅನ್ನಪೂರ್ಣ ಹಿರೋ’ ಶೋರೂಂನ ಮಾಲೀಕ ಪ್ರಶಾಂತ್.
ಪೆಟ್ರೋಲ್ ಬೆಲೆ ತೀವ್ರ ಏರಿಕೆ ಹಾಗೂ ಕೋವಿಡ್‌ನಿಂದ ಕಳೆದ ಎರಡು ವರ್ಷಗಳಲ್ಲಿ ಜನರ ಬದುಕಿನ ಮೇಲಾದ ಆರ್ಥಿಕ ಪರಿಣಾಮಗಳು ಹೊಸ ವಾಹನ ಖರೀದಿಗೆ ಜನರು ಬರುತ್ತಿಲ್ಲ. ಏತನ್ಮಧ್ಯೆ ವಾಹನಗಳ ಬೆಲೆ ಏರಿಕೆಯೂ ಆಗಿದೆ. 60 ಸಾವಿರಕ್ಕೆ ಸಿಗುತ್ತಿದ್ದ 100 ಸಿಸಿ ದ್ವಿಚಕ್ರ ವಾಹನ ಇದೀಗ 90 ಸಾವಿರ ದಾಟಿದೆ. ಒಂದೆಡೆ ಪೆಟ್ರೋಲ್ ಬೆಲೆ ಏರಿಕೆ ಮತ್ತೊಂದೆಡೆ ವಾಹನಗಳ ಬೆಲೆ ಏರಿಕೆಯಾದರೆ ಮಧ್ಯಮ ವರ್ಗದವರು ವಾಹನ ಖರೀದಿಸಲು ಹೇಗೆ ಸಾಧ್ಯ?
ದಸರಾಕ್ಕೆ ವಾಹನ ಖರೀದಿಯಾಗಲಿಲ್ಲ. ದೀಪಾವಳಿಗೆ(Deepavali) ಖರೀದಿಯಾಗುತ್ತದೆ ಎಂಬ ನಂಬಿಕೆಯೂ ಇಲ್ಲ. ಗ್ರಾಮೀಣ ಭಾಗದ ರೈತರ(Farmers) ಸಮಸ್ಯೆ ಮತ್ತಷ್ಟೂ ಸಂಕಷ್ಟಕ್ಕೆ ಸಿಲುಕಿದೆ. ಬೆಳೆ ಬಂದರೂ ಬೆಲೆ ಇಲ್ಲದೆ ರೈತರು ಕಂಗಾಲಾಗಿ ಕುಳಿತಿರುವಾಗ ವಾಹನಗಳ ಖರೀದಿ ಮಾಡಲು ಸಾಧ್ಯವಾದೀತೆ ಎಂಬುದು ಪ್ರಶಾಂತ್ ಅವರ ಪ್ರಶ್ನೆ.
ಬುಕ್ಕಿಂಗ್ ಆರಂಭವಾದ ಕೆಲವೇ ನಿಮಿಷದಲ್ಲಿ ಎಲ್ಲಾ ಸೋಲ್ಡೌಟ್, ಯಾವ ಬೈಕಿದು?
ಎಲೆಕ್ಟ್ರಿಕ್ ಬೈಕ್‌ಗಳಿಗೆ ಹೆಚ್ಚಿದ ಬೇಡಿಕೆ:
ನಗರದಲ್ಲಿ ಎಲೆಕ್ಟ್ರಿಕ್ ಬೈಕ್‌ಗಳಿಗೆ(Electric Bike) ಬೇಡಿಕೆ ಹೆಚ್ಚಿದೆ. ವಿವಿಧ ಕಂಪನಿಗಳ ಏಳು ಎಲೆಕ್ಟ್ರಿಕ್ ಬೈಕ್ ಶೋ ರೂಂಗಳು ನಗರದಲ್ಲಿದ್ದು, ಖರೀದಿಗೆ ಬರುವ ಗ್ರಾಹಕರ(Customers) ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ.
ಎಲೆಕ್ಟ್ರಿಕ್ ಬೈಕ್‌ಗಳ ಶೋರೂಂಗಳಲ್ಲಿ ತಿಂಗಳಿಗೆ 250ಕ್ಕೂ ಹೆಚ್ಚು ಬೈಕ್ ಖರೀದಿಯಾಗುತ್ತಿವೆ. ಈ ಕುರಿತು ಎಲೆಕ್ಟ್ರಿಕ್ ಬೈಕ್ ಶೋರೂಂನ(ಹಿಂದೂಸ್ತಾನ್ ಆಟೋಮೊಬೈಲ್ಸ್) ಮಾಲೀಕ ವಾಸೀಮ್ ‘ಕನ್ನಡಪ್ರಭ’ ಜತೆ ಮಾತನಾಡಿ, ‘ಪೆಟ್ರೋಲ್ ದರ ಏರಿಕೆಯಾಗಿರುವುದರಿಂದ ಎಲೆಕ್ಟ್ರಿಕ್ ಬೈಕ್‌ಗಳ ಖರೀದಿಸುವವರ ಸಂಖ್ಯೆ ಹೆಚ್ಚಾಗಿದೆ. ಖರೀದಿದಾರರ ಸಂಖ್ಯೆ ಏರಿಕೆಯಾದಂತೆ ನಗರದಲ್ಲಿ ಬೈಕ್ ಶೋರೂಂಗಳ ಸಂಖ್ಯೆ ಸಹ ಹೆಚ್ಚಳವಾಗುತ್ತಿದೆ’ ಎಂದು ಹೇಳಿದರು.
ಶ್ರೀಹರಿ ಆಟೋಮೊಬೈಲ್ಸ್‌ನ ಕೋಮಲಾದೇವಿ ಮಾತನಾಡಿ, ‘ತಿಂಗಳಿಗೆ 35ರಿಂದ 40ರವರೆಗೆ ಎಲೆಕ್ಟ್ರಿಕ್ ಬೈಕ್ ಖರೀದಿಯಾಗುತ್ತಿವೆ. ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಪೂರೈಕೆ ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.
ಪ್ರತಿಷ್ಠಿತ ಕಂಪನಿಗಳ ಬೈಕ್‌ಗಳು ರಸ್ತೆಗೆ
ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಬರುವ ವರ್ಷ ಹೊಂಡಾ, ಬಜಾಜ್, ಟಿವಿಎಸ್, ಬಜಾಜ್ ಸೇರಿದಂತೆ ಪ್ರತಿಷ್ಠಿತ ಎಲ್ಲ ಕಂಪನಿಗಳು ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರುಕಟ್ಟೆಗೆ ತರಲಿವೆ. ಈಗಾಗಲೇ ಆ ಪ್ರಕ್ರಿಯೆ ನಡೆದಿದೆ ಎನ್ನುತ್ತಾರೆ ‘ಅನ್ನಪೂರ್ಣ ಹೀರೋ’ ಶೋರೂಂನ ಮಾಲೀಕ ಪ್ರಶಾಂತ್. ಪೆಟ್ರೋಲ್ ದರ ಹೆಚ್ಚಳದಿಂದ ಖರೀದಿಯಿಂದ ಜನರು ದೂರ ಸರಿಯುತ್ತಿದ್ದಾರೆ. ಸಹಜವಾಗಿ ಎಲೆಕ್ಟ್ರಿಕ್ ಬೈಕ್‌ಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ.
ಪೆಟ್ರೋಲ್ ಬೆಲೆ ಏರಿಕೆಯಿಂದ ಈ ಬಾರಿ ವಿಜಯದಶಮಿಗೆ ದ್ವಿಚಕ್ರ ವಾಹನಗಳು ಹೆಚ್ಚು ಖರೀದಿಯಾಗಲಿಲ್ಲ. ಕಳೆದ ವರ್ಷ ಒಂದೇ ದಿನ 200 ವಾಹನ ಮಾರಾಟ ಮಾಡಿದ್ದೆವು. ಈ ಬಾರಿ 43 ಖರೀದಿಯಾಗಿವೆಯಷ್ಟೇ ಎಂದು ‘ಅನ್ನಪೂರ್ಣ ಹೀರೋ’ ಶೋರೂಂನ ಮಾಲೀಕ ಪ್ರಶಾಂತ್ ತಿಳಿಸಿದ್ದಾರೆ.
ಪೆಟ್ರೋಲ್ ರೇಟ್ ಕೇಳಿದ್ರೆ ಕಣ್ಣಲ್ಲಿ ನೀರು ಬರುತ್ತೆ. ಹಳ್ಳಿಜನರು ಬೈಕ್ ಖರೀದಿಸೋದು ಕಷ್ಟ. ಹಿಂಗಾಗಿ ಕರೆಂಟ್ ಬೈಕ್ ತಗೊಳ್ಳಾಕ ಬಂದೀನಿ ಅಂತ ಕುರುಗೋಡು ತಾಲೂಕಿನ ಬೈಲೂರು ಗ್ರಾಮದ ರೈತ ಜಮದಗ್ನಿ ಹೇಳಿದ್ದಾರೆ.