ನವದೆಹಲಿ(ಜು.02): ಸಾರ್ವಜನಿಕ ವಲಯದ ಸಂಸ್ಥೆಗಳು ಒಂದೊಂದಾಗಿ ಆರ್ಥಿಕ ಸಂಕಷ್ಟದಲ್ಲಿ ಸಿಕ್ಕು ನರಳುತ್ತಿವೆ. ತೀವ್ರ ಆರ್ಥಿಕ ಸಂಕಷ್ಟದಲ್ಲಿ ಬಳಲುತ್ತಿರುವ ಸಾರ್ವಜನಿಕ ಟೆಲಿಕಾಂ ಸಂಸ್ಥೆ BSNL, ತನ್ನ ನೌಕರರಿಗೆ ವೇತನ ನಿಡಲು ಪರದಾಡಿತ್ತು.

ಇದೀಗ ಮತ್ತೊಂದು ಸಾರ್ವಜನಿಕ ಸಂಸ್ಥೆಯಾದ ಏರ್ ಇಂಡಿಯಾ ತನ್ನ ನೌಕರರಿಗೆ ವೇತನ ನೀಡಲು ಹೆಣಗುತ್ತಿದೆ. ಈ ಅಕ್ಟೋಬರ್ ಬಳಿಕ ತನ್ನ ನೌಕರರಿಗೆ ವೇತನ ನೀಡುವುದು ಕಷ್ಟ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ.

ಹೌದು, ಸಾಲದ ಸುಳಿಯಲ್ಲಿ ಸಿಲುಕಿರುವ ಏರ್ ಇಂಡಿಯಾ  ವಿಮಾನಯಾನ ಸಂಸ್ಥೆ, ಮುಂಬರುವ ಅಕ್ಟೋಬರ್ ಬಳಿಕ ತನ್ನ ನೌಕರರಿಗೆ ವೇತನ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಈಗಾಗಲೇ ಏರ್ ಇಂಡಿಯಾಗೆ ಕೇಂದ್ರ ಸರ್ಕಾರ 7 ಸಾವಿರ ಕೋಟಿ ರೂ. ಆರ್ಥಿಕ ಸಹಾಯ ನೀಡಿದ್ದು, ಇದರಲ್ಲಿ ಕೇವಲ 2,500 ರೂ. ಮಾತ್ರ ಈಗ ಉಳಿದುಕೊಂಡಿದೆ.

ಈ ಹಿನ್ನೆಲೆಯಲ್ಲಿ ಮುಂಬರುವ ಅಕ್ಟೋಬರ್’ನಿಂದ ನೌಕರರಿಗೆ ವೇತನ ನೀಡಲು ಕಷ್ಟಸಾಧ್ಯವಾಗಲಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.