ಬೆಂಗಳೂರಲ್ಲಿ ಕೇವಲ 20 ರೂ.ಗೆ ಇಳಿಕೆಯಾದ ಟೊಮೆಟೊ ಬೆಲೆ
ದೇಶಾದ್ಯಂತ ಕಳೆದ ಎರಡು ತಿಂಗಳಿಂದ 100 ರೂ.ಗಳಿಂದ 150 ರೂ.ವರೆಗೆ ಮಾರಾಟ ಮಾಡಲಾಗುತ್ತಿದ್ದ ಟೊಮೆಟೊ ಬೆಲೆ ಈಗ ತೀವ್ರ ಕುಸಿತವಾಗಿದ್ದು, ಕೇವಲ 20 ರೂ,ಗೆ ಒಂದು ಕೆ.ಜಿ. ಮಾರಾಟ ಆಗುತ್ತಿದೆ.

ಬೆಂಗಳೂರು (ಆ.28): ದೇಶಾದ್ಯಂತ ಕಳೆದ ಎರಡು ತಿಂಗಳಿಂದ 100 ರೂ.ಗಳಿಂದ 150 ರೂ.ವರೆಗೆ ಮಾರಾಟ ಮಾಡಲಾಗಿದೆ. ಆದರೆ ಈಗ ಮಾರುಕಟ್ಟೆಗೆ ಟೊಮೆಟೊ ಪೂರೈಕೆ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕೇವಲ 20 ರೂ.ಗೆ ಇಳಿಕೆಯಾಗಿದೆ.
ಟೊಮೆಟೊ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಜನರಿಗೆ ಗುಡ್ ನ್ಯೂಸ್ ಸಿಕ್ಕಂತಾಗಿದೆ. ತರಕಾರಿಯ ಕೆಂಪು ಸುಂದರಿ ಬೆಲೆಯಲ್ಲಿ ಭಾರಿ ಇಳಿಕೆಯಾಗಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿಯೇ ಕೇವಲ 20 ರೂಪಾಯಿಗೆ ಮಾರಾಟ ಆಗುತ್ತಿದೆ. ಕಳೆದ ಎರಡು ತಿಂಗಳಿಂದ ಗ್ರಾಹಕರಿಗೆ ಶಾಕ್ ಮೇಲೆ ಶಾಕ್ ನೀಡ್ತಿದ್ದ ಟೊಮೆಟೊವನ್ನು ಬೆಳೆಯುವ ರೈತರ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗಿದೆ. ಆದ್ದರಿಂದ ರಾಜ್ಯದ ಎಲ್ಲ ಮಾರುಕಟ್ಟೆಗೆ ಯಥೇಚ್ಛವಾಗಿ ಟೊಮೆಟೋ ಲೋಡ್‌ಗಳು ಆಗಮಿಸುತ್ತಿವೆ. ಆದರೆ, ಸ್ಥಳೀಯವಾಗಿ ದೇಶದ ಎಲ್ಲ ಮಾರುಕಟ್ಟೆಗಳಿಗೂ ಟೊಮೆಟೊ ಆವಕ ಹೆಚ್ಚಾಗಿದ್ದರಿಂದ ಕರ್ನಾಟಕದ ಟೊಮೆಟೊ ಖರೀದಿ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬೆಳೆದ ಟೊಮೆಟೊ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಆಗುತ್ತಿದ್ದು, ಬೆಲೆಯಲ್ಲಿ ತೀವ್ರ ಕುಸಿತ ಕಂಡುಬಂದಿದೆ.
ಬಾಳೆಹಣ್ಣು ದರದಲ್ಲಿ ಮಧ್ಯವರ್ತಿಗಳ ಗೋಲ್‌ಮಾಲ್: ರೈತರಿಂದ 25 ರೂ.ಗೆ ಖರೀದಿ, ಗ್ರಾಹಕರಿಗೆ 120 ರೂ. ಮಾರಾಟ
ಬೆಂಗಳೂರು ಮಾರುಕಟ್ಟೆಗೆ 1,000 ಲಾರಿ ಲೋಡ್ ಟೊಮೆಟೊ ಆಗಮನ: ಇನ್ನು ಬೆಂಗಳೂರಿನ ಮಾರುಕಟ್ಟೆಗೆ ಪತ್ರಿ ನಿತ್ಯ ಒಂದು ಸಾವಿರಕ್ಕೂ ಹೆಚ್ಚು ಟೊಮೆಟೊ ಲಾರಿಗಳು ಆಗಮಿಸುತ್ತಿವೆ. ಹೀಗಾಗಿ ನಗರದಲ್ಲಿ ಟೊಮೆಟೊ ಬೆಲೆ 20 ರೂ.ಗೆ ಇಳಿಕೆಯಾಗಿದೆ. ಇನ್ನು ಕಳೆದ ವಾರವಷ್ಟೇ 100 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೋ ದರ ಇದ್ದಕ್ಕಿದ್ದಂತೆ ಕುಸಿತವಾಗಿದೆ. ಇನ್ನು ರಾಜ್ಯದ ಕೋಲಾರ, ಮಂಡ್ಯ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹೊರ ರಾಜ್ಯಗಳಾದ ಆಂಧ್ರಪ್ರದೇಶ, ತೆಲಂಗಾಣ ಸೇರಿ ವಿವಿಧ ಕಡೆಗಳಿಂದ ಟೊಮೆಟೊ ಲೋಡ್‌ಗಳು ಬೆಂಗಳೂರಿನ ಮಾರುಕಟ್ಟೆಗೆ ಆಗಮಿಸುತ್ತಿವೆ.
400 ರೂ.ಗೆ ಒಂದು ಕ್ರೇಟ್ ಮಾರಾಟ: ಈ ಹಿಂದೆ ಪ್ರತಿ ಕ್ರೇಟ್‌ಗೆ 2000 ರೂ.ಗೆ ಮಾರಾಟ ಆಗುತ್ತಿದ್ದ ಟೊಮೆಟೊ, ಈಗ ಪ್ರತಿ ಕ್ರೇಟ್‌ಗೆ 250 ರಿಂದ 400 ರೂಗೆ ಮಾತ್ರ ಮಾರಾಟ ಆಗುತ್ತಿದೆ. ಇನ್ನು ಹೈ ಬ್ರೀಡ್ ಟೊಮೆಟೊ ಕೂಡ ಪ್ರತಿ ಕ್ರೇಟ್ ಗೆ 250 ರಿಂದ 450 ರೂ.ಗೆ ಬಿಡ್ ಆಗುತ್ತಿದೆ. ಇನ್ನು ಕ್ರೇಟ್ ಪಡೆದು ಚಿಲ್ಲರೆ ವ್ಯಾಪಾರ ಮಾಡುವವರು 20 ರೂ.ಗೆ ಒಂದು ಕೆ.ಜಿ. ಮಾರಾಟ ಮಾಡುತ್ತಿದ್ದಾರೆ. ಇನ್ನು ಮನೆ ಮನೆಗೆ ತಳ್ಳುಗಾಡಿಗಳು ಮತ್ತು ಆಟೋಗಳಲ್ಲಿ ಬಂದು ಟೊಮೆಟೊ ಮಾರಾಟ ಮಾಡುವವರು ಪ್ರತಿ ಕೆ.ಜಿಗೆ 20 ರೂ.ಗಳಿಂದ 30 ರೂ.ಗೆ ಮಾರಾಟ ಮಾಡುತ್ತಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆ ವೇಳೆ ಟೊಮೆಟೊಗೆ 50 ರೂ. ನಿಗದಿ ಮಾಡಿದ್ದ ಸರ್ಕಾರ: ನವದೆಹಲಿ (ಆ.14): ಭಾರತದಲ್ಲಿ ಇದೇ ಮೊದಲ ಬಾರಿಗೆ ಟೊಮೆಟೊ ಬೆಲೆ 200ರ ಗಡಿ ತಲುಪಿ ದಾಖಲೆ ಬರೆದಿತ್ತು.ಕಳೆದೆರಡು ತಿಂಗಳಿಂದ ಏರಿಕೆಯ ಹಾದಿಯಲ್ಲೇ ಇದ್ದ ಟೊಮೆಟೋ ಬೆಲೆ ಇಳಿಕೆಯತ್ತ ಸಾಗುತ್ತಿದೆ. ಇದಾದ ಬಳಿಕ ಟೊಮೆಟೊ ಬೆಲೆ ಇಳಿಕೆಯಾದರೂ 100ರ ಅಸುಪಾಸಿನಲ್ಲಿದೆ. ಇದೀಗ ಕೇಂದ್ರ ಸರ್ಕಾರ ಸ್ವಾತಂತ್ರ್ಯ ದಿನಾಚರಣೆಗೆ ಸಿಹಿ ಸುದ್ದಿ ನೀಡಿದೆ. ಟೊಮೆಟೋ ಬೆಲೆ ಪ್ರತಿ ಕೆಜಿಗೆ 50 ರೂಪಾಯಿ ಎಂದು ನಿಗದಿಪಡಿಸಿದೆ. ಮಾರುಗಟ್ಟೆಯಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಹೀಗಾಗಿ ಪ್ರತಿ ಕೆಜಿಗೆ 50 ರೂಪಾಯಿ ಬೆಲೆಯನ್ನು ಸರ್ಕಾರ ನಿಗದಿ ಮಾಡಿದೆ. ಹಣದುಬ್ಬರ ಇಳಿಯದ ಕಾರಣ ರೇಪೋ ಬಡ್ಡಿದರವನ್ನು ಶೇ.6.5ರಲ್ಲೇ ಮುಂದುವರಿಸುವುದಾಗಿ ಆರ್‌ಸಿಬಿ ಘೋಷಿಸಿತ್ತು. ಇದರ ಬೆನ್ನಲ್ಲೇ ಆಗಸ್ಟ್ ತಿಂಗಳಲ್ಲಿ ಟೊಮೆಟೊ ಬೆಲೆ ಏರಿಕೆಯಾಗುವ ಆತಂಕ ಎದುರಾಗಿತ್ತು. ಆದರೆ ಆಗಸ್ಟ್ ತಿಂಗಳ ಆರಂಭದಿಂದಲೇ ಟೊಮೆಟೋ ಬೆಲೆ ಇಳಿಕೆಯಾಗಲು ಆರಂಭಿಸಿತ್ತು. ಇದೀಗ 70 ರೂಪಾಯಿಂದ 50 ರೂಪಾಯಿಗೆ ಇಳಿಕೆಯಾಗಿದೆ.
ಸ್ವಾತಂತ್ರ್ಯ ದಿನಾಚರಣೆಗೆ ಗುಡ್ ನ್ಯೂಸ್, ಟೊಮೆಟೋ ಪ್ರತಿ ಕೆಜಿ ಬೆಲೆ 50 ರೂಪಾಯಿ ಮಾತ್ರ!
ಹಣದುಬ್ಬರ, ಬೆಲೆ ಏರಿಕೆ ಮತ್ತು ಬೇಡಿಕೆಗಳನ್ನು ಪೂರೈಸಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಟೊಮೆಟೋ ಬೆಲೆ ನಿಯಂತ್ರಣಕ್ಕಾಗಿ ದೇಶಕ್ಕೆ ನೇಪಾಳದಿಂದ ಟೊಮೆಟೋ ಆಮದು ಮಾಡಿಕೊಳ್ಳಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದರು. ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯಲ್ಲಿ ಸರ್ಕಾರದ ಪರ ಮಾತನಾಡಿದ ನಿರ್ಮಲಾ ಮೊಜಾಂಬಿಕ್‌ನಿಂದ ತೊಗರಿ ಬೇಳೆ, ಮ್ಯಾನ್ಮಾರ್‌ನಿಂದ ಉದ್ದಿನ ಬೇಳೆ ಆಮದು ಮಾಡಿಕೊಳ್ಳಲಾಗುವುದು. ಈಗಾಗಲೇ ಸುಮಾರು 3 ಲಕ್ಷ ಟನ್ ಈರುಳ್ಳಿಯನ್ನು ಸಂಗ್ರಹಿಸಲಾಗಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದಿಂದ ಟೊಮೆಟೋಗಳನ್ನು ಖರೀದಿಸಿ ಉತ್ತರ ಭಾರತದ ಇತರ ರಾಜ್ಯಗಳಲ್ಲಿ ಎನ್‌ಎಎಫ್‌ಇಡಿ ಮೂಲಕ ವಿತರಿಸಲಾಗುತ್ತಿದೆ. ಈವರೆಗೆ ಎನ್‌ಎಎಫ್‌ಇಡಿ 8.84 ಲಕ್ಷ ಕೇಜಿ ಟೊಮೆಟೋಗಳನ್ನು ವಿತರಿಸಿದೆ. ಆಂಧ್ರಪ್ರದೇಶ ಮತ್ತು ಕರ್ನಾಟಕಗಳಲ್ಲಿ ಟೊಮೆಟೋ ಸಗಟು ದರ ಕಡಿಮೆಯಾಗುತ್ತಿದೆ ಎಂದರು.