Bengaluru Tech Summit 2022: ಇಂದಿನಿಂದ 3 ದಿನ ಬೆಂಗ್ಳೂರು ಟೆಕ್ ಶೃಂಗ, ಸಚಿವ ಅಶ್ವತ್ಥನಾರಾಯಣ
ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮೋದಿ ಉದ್ಘಾಟನೆ, 500 ಉದ್ಯಮಿಗಳು ಭಾಗಿ, ಸಿಎಂ ಅವರಿಂದ ಬೆಳ್ಳಿಹಬ್ಬದ ಸ್ಮರಣಿಕೆ ಬಿಡುಗಡೆ: ಸಚಿವ ಅಶ್ವತ್ಥನಾರಾಯಣ
ಬೆಂಗಳೂರು(ನ.16): ಇತ್ತೀಚಿನ ಯಶಸ್ವಿ ಬಂಡವಾಳ ಹೂಡಿಕೆದಾರರ ಸಮಾವೇಶದ ಬೆನ್ನಲ್ಲೇ ರಾಜ್ಯ ರಾಜಧಾನಿಯ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಬೆಂಗಳೂರು ತಂತ್ರಜ್ಞಾನ ಶೃಂಗದ (ಬಿಟಿಎಸ್-22) ರಜತೋತ್ಸವ ಸಮಾವೇಶ ಬುಧವಾರ ಆರಂಭವಾಗಲಿದೆ. 3 ದಿನಗಳ ಕಾಲ ನಡೆಯಲಿರುವ ಶೃಂಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 10 ಗಂಟೆಗೆ ವರ್ಚುವಲ್ ಮಾಧ್ಯಮದ ಮೂಲಕ ಚಾಲನೆ ನೀಡಲಿದ್ದಾರೆ.
ಮಂಗಳವಾರ ಬೆಂಗಳೂರು ಟೆಕ್ ಸಮ್ಮಿಟ್ ಪೂರ್ವ ಸಿದ್ಧತೆಯನ್ನು ಐಟಿ-ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಪರಿಶೀಲಿಸಿದರು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನ.16ರಿಂದ 18ರವರೆಗೆ ಮೂರು ದಿನಗಳ ಈ ಸಮಾವೇಶ ನಡೆಯಲಿದ್ದು, ಕನಿಷ್ಠ 9 ಒಡಂಬಡಿಕೆಗಳಿಗೆ (ಎಂಒಯು) ಹಾಗೂ 20ಕ್ಕೂ ಹೆಚ್ಚು ಉತ್ಪನ್ನಗಳ ಬಿಡುಗಡೆಗೆ ಸಾಕ್ಷಿಯಾಗಲಿದೆ. ಬೆಳ್ಳಿ ಹಬ್ಬದ ಅಂಗವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಮರಣಿಕೆ ಬಿಡುಗಡೆ ಮಾಡಲಿದ್ದಾರೆ ಎಂದರು.
ದೆಹಲಿ ರೋಡ್ ಶೋ: ನ.16ರಿಂದ ಬಿಟಿಎಸ್-25, 5ಜಿ ಸಹಿತ ಅತ್ಯಾಧುನಿಕ ತಂತ್ರಜ್ಞಾನ ಕುರಿತು ಚರ್ಚೆ, ಅಶ್ವತ್ಥ್
ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಯುಕ್ತ ಅರಬ್ ಸಂಸ್ಥಾನದ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಖಾತೆಯ ಸಹಾಯಕ ಸಚಿವ ಒಮರ್ ಬಿನ್ ಸುಲ್ತಾನ್ ಅಲ್ ಒಲಾಮಾ, ಆಸ್ಪ್ರೇಲಿಯಾದ ವಿದೇಶಾಂಗ ಖಾತೆ ಸಹಾಯಕ ಸಚಿವ ಟಿಮ್ ವ್ಯಾಟ್ಸ್, ಫಿನ್ಲೆಂಡ್‌ನ ವಿಜ್ಞಾನ ಸಚಿವ ಪೆಟ್ರಿ ಹಾನ್ಕೊನೆನ್, ಭಾರತದ ಮೊದಲ ಯೂನಿಕಾರ್ನ್ ಕಂಪನಿ ‘ಇಮ್ಮೊಬಿ’ಯ ಸಂಸ್ಥಾಪಕ ನವೀನ್ ತಿವಾರಿ, ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ (ವರ್ಚುಯಲ್) ಮತ್ತು ಅಮೆರಿಕದ ಕಿಂಡ್ರಿಲ್ ಕಂಪನಿಯ ಸಿಇಒ ಮಾರ್ಟಿನ್ ಶ್ರೋಟರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ವಿವಿಧ ಕಂಪನಿಗಳು ಭಾಗಿ:
ಸಮಾವೇಶದಲ್ಲಿ ದೇಶದ 16 ರಾಜ್ಯಗಳ ವಿವಿಧ ಸ್ಟಾರ್ಟ್ ಅಪ್‌ಗಳು ಪಾಲ್ಗೊಳ್ಳಲಿವೆ. 575ಕ್ಕೂ ಹೆಚ್ಚು ಪ್ರದರ್ಶಕರು, 350ಕ್ಕೂ ಅಧಿಕ ಅಂತಾರಾಷ್ಟ್ರೀಯ ಪರಿಣತ ತಂತ್ರಜ್ಞರು. 5 ಸಾವಿರಕ್ಕಿಂತ ಹೆಚ್ಚು ಉದ್ಯಮಿಗಳು ಸಮಾವೇಶದ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 75 ಗೋಷ್ಠಿಗಳು ನಡೆಯಲಿದ್ದು ಐಓಟಿ-ಡೀಪ್ ಟೆಕ್, ಬಯೋಟೆಕ್, ಸ್ಟಾರ್ಚ್ ಅಪ್, ಜಿಐಎ-1 ಹಾಗೂ ಜಿಐಎ-2 ಎಂದು ಐದು ವಿಭಾಗಗಳನ್ನು ಮಾಡಲಾಗಿದೆ.
ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಸೆಮಿಕಂಡಕ್ಟರ್, ಮಷಿನ್ ಲರ್ನಿಂಗ್, 5ಜಿ, ರೋಬೋಟಿಕ್ಸ್, ಫಿನ್ ಟೆಕ್, ಜೀನ್ ಎಡಿಟಿಂಗ್, ಮೆಡಿ ಟೆಕ್, ಸ್ಪೇಸ್ ಟೆಕ್, ಜೈವಿಕ ಇಂಧನ ಸುಸ್ಥಿರತೆ, ಇ- ಸಂಚಾರ ಹೀಗೆ ವಿವಿಧ ಪ್ರವರ್ಧಮಾನಕ್ಕೆ ಬರುತ್ತಿರುವ ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಸಂವಾದಗಳು ನಡೆಯಲಿವೆ.
ಜಿಐಎ ವಿಭಾಗದಲ್ಲಿ ಜಪಾನ್, ಫಿನ್ಲೆಂಡ್, ನೆದರ್ಲೆಂಡ್, ಡೆನ್ಮಾರ್ಕ್, ಸ್ವೀಡನ್, ಸ್ವಿಜರ್ಲೆಂಡ್, ಜರ್ಮನಿ, ಆಸ್ಪ್ರೇಲಿಯಾ, ಅಮೇರಿಕಾ, ಲಿತುವೇನಿಯ, ಕೆನಡಾ ಸೇರಿದಂತೆ 15ಕ್ಕೂ ಹೆಚ್ಚು ರಾಷ್ಟ್ರಗಳು ತಮ್ಮ ತಾಂತ್ರಿಕ ಪ್ರಗತಿಯ ಬಗ್ಗೆ ಗಮನ ಸೆಳೆಯಲಿವೆ ಎಂದು ಹೇಳಿದರು.
Bengaluru Tech Summit:ಯಶಸ್ವಿಯಾಯ್ತು ಟೆಕ್ ಸಮ್ಮಿಟ್, ರಾಜ್ಯಕ್ಕೆ ಹರಿದು ಬಂತು ಸಾವಿರಾರು ಕೋಟಿ!
ಐಟಿ, ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಮಾತನಾಡಿ, ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಪ್ರೊ ಅಜಯ್ ಕೆ. ಸೂದ್ ಅವರು ಮೊದಲ ದಿನ ಸಂವಾದ ಗೋಷ್ಠಿ ನಡೆಸಿಕೊಡುವರು. ಈ ಸಮಾವೇಶವನ್ನು ಐಟಿ, ಬಿಟಿ ಇಲಾಖೆಯು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್‌ಟಿಪಿಐ) ಸಹಯೋಗದಲ್ಲಿ ಆಯೋಜಿಸಿದೆ ಎಂದು ಹೇಳಿದರು.
ಜನರಿಗೆ ಉಚಿತ ಪ್ರವೇಶ
ಬೆಂಗಳೂರು ಟೆಕ್ ಸಮಿಟ್‌ಗೆ ಪ್ರತಿದಿನ ಮಧ್ಯಾಹ್ನ 2ರಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ಕಲ್ಪಿಸುತ್ತೇವೆ. ಜನರು ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗಳನ್ನು ಖುದ್ದು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ ಎಂದು ಸಚಿವ ಡಾ.ಸಿ.ಎನ್ ಅಶ್ವತ್ಥನಾರಾಯಣ ಅವರು ತಿಳಿಸಿದರು.
ಆನ್‌ಲೈನ್ ವ್ಯವಸ್ಥೆ
ಸಮಾವೇಶದ ಎಲ್ಲಾ ಗೋಷ್ಠಿಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ನೇರವಾಗಿ ಬಿತ್ತರಿಸುವ ವ್ಯವಸ್ಥೆ ಮಾಡಲಾಗಿದೆ. ಹೆಚ್ಚಿನ ಮಾಹಿತಿಗೆ ಜಾಲತಾಣಕ್ಕೆ ಭೇಟಿ ಕೊಡಬಹುದು.