ಲಕ್ಷಾಂತರ ಜೀವಗಳನ್ನು ಉಳಿಸುತ್ತಿದೆ ಬೆಂಗಳೂರಿನ ಫಾರ್ಮುಲಾ 1 ಕಾರಿನ ತಂತ್ರಜ್ಞಾನ
ಆರೋಗ್ಯ ಕ್ಷೇತ್ರಕ್ಕೆ ಕಾಲಿಟ್ಟ ಫಾರ್ಮುಲಾ 1 ಕಾರಿನ ತಂತ್ರಜ್ಞಾನ. ಲಕ್ಷಾಂತರ ಜೀವಗಳನ್ನು ಉಳಿಸುತ್ತಿದೆ ಬೆಂಗಳೂರಿನ ಸ್ಟಾರ್ಟ್ ಅಪ್
ಯಾವ ಆಸ್ಪತ್ರೆಗೆ ಹೋದರೂ ವೈದ್ಯರು ಅಲ್ಲಿರುವ ಎತ್ತರದ ಮಂಚ ತೋರಿಸಿ ''ಇಲ್ಲಿ ಮಲಗಿ'' ಎನ್ನುತ್ತಾರೆ. ನಂತರ ರಕ್ತದೊತ್ತಡ, ಎದೆಬಡಿತ, ನಾಡಿಮಿಡಿತ, ಕಣ್ಣು, ಹೊಟ್ಟೆ, ಬೆನ್ನು ಇವನ್ನೆಲ್ಲ ಪರೀಕ್ಷೆ ಮಾಡುತ್ತಾರೆ. ಆಮೇಲೆ ಏನು ಕಾಯಿಲೆ ಎಂದು ಹೇಳಿ ಔಷಧಿ ಕೊಡುತ್ತಾರೆ. ಇದನ್ನು ಈಗಲೂ ದೊಡ್ಡ, ಸಣ್ಣ ಕ್ಲಿನಿಕ್ಕುಗಳೆನ್ನದೇ ಎಲ್ಲ ಕಡೆಯೂ ಅನುಸರಿಸಲಾಗುತ್ತದೆ.
ಈ ವೈದ್ಯರ ಬದಲಿಗೆ ಮಂಚವೇ ನಮಗೇನೇನು ತೊಂದರೆ ಇದೆ ಅಂತ ಹೇಳುವಂತಾದರೆ? ಅಂಥದ್ದೊಂದು ತಂತ್ರಜ್ಞಾನವನ್ನು ಇದೀಗ ಬೆಂಗಳೂರಿನ ಸ್ಟಾರ್ಟಪ್ ಸಂಸ್ಥೆ ಡೊಝೀ ಅಂಥದ್ದೊಂದು ತಂತ್ರಜ್ಞಾನವನ್ನು ಅಳವಡಿಸಿಕೊಂಡು ರೋಗಿಗಳ ಹೃದಯಬಡಿತ, ರಕ್ತದೊತ್ತಡ, ಉಸಿರಾಟದ ಮಾದರಿಗಳನ್ನು ಒದಗಿಸುವ ಸೆನ್ಸರ್ ಗಳನ್ನು ಸಿದ್ಧಪಡಿಸಿದೆ.
ಇದರ ಹಿಂದಿರುವುದು ಫಾರ್ಮುಲಾ 1 ರೇಸಿಂಗ್ ಕಾರುಗಳಲ್ಲಿರುವ ತಂತ್ರಜ್ಞಾನ. ಆಧುನಿಕ ಫಾರ್ಮುಲಾ ವನ್ ಕಾರುಗಳನ್ನು ಅತ್ಯಂತ ಬುದ್ಧಿವಂತ ಮೆಷಿನ್‌ಗಳೆಂದು ಕರೆಯಲಾಗುತ್ತದೆ. ಅವುಗಳಲ್ಲಿರುವ ನೂರಾರು ಸೆನ್ಸರುಗಳು, ರಾಶಿ ರಾಶಿ ದತ್ತಾಂಶಗಳನ್ನು ಒದಗಿಸುತ್ತವೆ. ಅದನ್ನಿಟ್ಟುಕೊಂಡು ಎದುರಾಳಿ ಕಾರುಗಳನ್ನು ಹಿಂದಿಕ್ಕಲು ಬೇಕಾದ ಮಾಹಿತಿಯನ್ನು ನೀಡುತ್ತವೆ.
ಇಸ್ರೋದಿಂದ ಹೊಸ ವಿಡಿಯೋ ಬಿಡುಗಡೆ, ಚಂದ್ರನ ಮೇಲೆ ಪ್ರಗ್ಯಾನ್ ರೋವರ್, ಸ್ಪಷ್ಟವಾಗಿ
ಈ ದತ್ತಾಂಶಗಳನ್ನು ವಿಶ್ಲೇಷಿಸಲು ಬ್ಯಾಲಿಸ್ಟೋ ಕಾರ್ಡಿಯೋಗ್ರಫಿ(ಬಿಸಿಜಿ) ಎಂಬ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತದೆ. ಇದೇನೂ ಹೊಸ ತಂತ್ರಜ್ಞಾನ ಅಲ್ಲ, ಶತಮಾನಕ್ಕೂ ಹಿಂದೆ ಬಳಕೆಯಲ್ಲಿದ್ದ ಈ ತಂತ್ರಜ್ಞಾನದ ಹೊಸ ಉಪಯೋಗ ಈಗ ಆಗುತ್ತಿದೆ. ಇದರ ಜತೆಗೇ ಯಾಂತ್ರಿಕ ಬುದ್ಧಿಮತ್ತೆ ಅಂದರೆ ಆರ್ಟಿಫಿಷಿಯಲ್ ಇಂಟಿಲಿಜೆನ್ಸ್(AI) ಸಹಾಯದಿಂದ ಮಾನವನ ದೇಹದ ಮೇಲೂ ಕಣ್ಗಾವಲಿಡಲು ಸಾಧ್ಯವಾಗುತ್ತಿದೆ.
ಡೊಝೀ ಹೇಗೆ ಕೆಲಸ ಮಾಡುತ್ತದೆ?
ತಲಾ 16 ಸೆನ್ಸಾರ್‌ಗಳನ್ನು ಒಳಗೊಂಡ 2 ಮ್ಯಾಟ್‌ಗಳನ್ನು ರೋಗಿಯ ಹಾಸಿಗೆ ಕೆಳಗೆ ಇಡಲಾಗುತ್ತದೆ. ರೋಗಿಯ ದೇಹದ ಕಂಪನಗಳನ್ನು ಸಂಗ್ರಹಿಸುವ ಸೆನ್ಸಾರ್‌ಗಳು, ಅವುಗಳನ್ನು ವಿಶ್ಲೇಷಿಸಿ ಕೆಲವೇ ಸೆಕೆಂಡ್‌ಗಳಲ್ಲಿ ಹೃದಯ ಬಡಿತ, ಉಸಿರಾಟದ ಪ್ರಮಾಣ, ರಕ್ತದೊತ್ತಡ, ಇಸಿಜಿ, ದೇಹದ ಉಷ್ಣಾಂಶ, ರಕ್ತದಲ್ಲಿ ಆಮ್ಲಜನಕದ ಪ್ರಮಾಣ(ಎಸ್‌ಪಿಒ2) ಹೀಗೆ ಇನ್ನೂ ಅನೇಕ ದತ್ತಾಂಶಗಳನ್ನು ಪ್ರಕಟಿಸುತ್ತದೆ. ಈ ಉಪಕರಣವು ಇಂಟರ್‌ನೆಟ್ ಆಧಾರಿತವಾಗಿರುವ ಕಾರಣ, ದತ್ತಾಂಶಗಳನ್ನು ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲೂ ವೀಕ್ಷಿಸಬಹುದು.
ಸೆ.2ರಂದು ಸೂರ‍್ಯಯಾನ ಸಾಕಾರ ಸಾಧ್ಯತೆ, ನೇಸರನ ಅಧ್ಯಯನಕ್ಕೆ ತೆರಳಲಿರುವ ಆದಿತ್ಯ ಎಲ್-1
ಈ ಸೆನ್ಸಾರ್‌ಗಳಿಂದ ಲಾಭಗಳೇನು?
ಡೊಝೀ ಉಪಕರಣವನ್ನು ಆಸ್ಪತ್ರೆಗಳ ಯಾವುದೇ ಹಾಸಿಗೆಗೆ ಕೇವಲ 15 ನಿಮಿಷಗಳಲ್ಲಿ ಅಳವಡಿಸಬಹುದು. ಈ ಉಪಕರಣದ ಅಳವಡಿಕೆಯಿಂದ ತೀವ್ರ ನಿಗಾ ಘಟಕ(ಐಸಿಯು)ದ ಮೇಲಿನ ಹೊರೆ ಕಡಿಮೆಯಾಗಲಿದೆ. ಜೊತೆಗೆ ನರ್ಸ್‌ಗಳ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ಸಮೀಕ್ಷೆಯ ಪ್ರಕಾರ, ಕೇವಲ ಬಿ.ಪಿ, ಹೃದಯ ಬಡಿತ ಇತ್ಯಾದಿ ಅಗತ್ಯ ಮಾಹಿತಿಗಳ ಸಂಗ್ರಹಕ್ಕೆಂದೇ ನರ್ಸ್‌ಗಳು ಬಳಸುವ ಶೇ.80ರಷ್ಟು ಸಮಯವನ್ನು ಉಳಿಸಬಹುದು. ಅಂದರೆ ಪ್ರತಿ ರೋಗಿಯ ದತ್ತಾಂಶಗಳನ್ನು ಸಂಗ್ರಹಿಸಲು ಬಳಸುವ ಸಮಯದಲ್ಲಿ ಒಂದು ದಿನಕ್ಕೆ ಸರಾಸರಿ ಎರಡೂವರೆ ಗಂಟೆ ಉಳಿಯಲಿದೆ. ಈ ಸಮಯವನ್ನು ರೋಗಿಗಳ ಆರೈಕೆಗೆ ಸಮರ್ಪಕವಾಗಿ ಬಳಕೆ ಮಾಡಬಹುದು.
ಇದರಿಂದಾಗಿ ರೋಗಿ ಇಂಟೆನ್ಸಿವ್ ಕೇರ್ ಯೂನಿಟ್ಟಿನಲ್ಲಿ ಇರಬೇಕಾದ ಅವಧಿ ಕಡಿಮೆ ಆಗುತ್ತದೆ. ಆಸ್ಪತ್ರೆ ವೆಚ್ಚವೂ ತಗ್ಗುತ್ತದೆ. ಇನ್ನೊಂದು ವಿಶೇಷ ಎಂದರೆ ಒಂದು ವಾರ್ಡ್‌ನಲ್ಲಿ 10 ರೋಗಿಗಳಿದ್ದರೆ, ಎಲ್ಲಾ 10 ಮಂದಿಯ ದತ್ತಾಂಶವು ಏಕಕಾಲಕ್ಕೆ ಲಭ್ಯವಾಗಲಿದೆ. ಅವರ ಪೈಕಿ ಯಾರ ಹೃದಯ ಬಡಿತ, ಬಿ.ಪಿ. ಏರುಪೇರಾಗುತ್ತಿದೆ ಅನ್ನುವುದೂ ತಕ್ಷಣ ತಿಳಿಯಲಿದೆ.
ಈಗಾಗಲೇ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಹಾಗೂ ಗುಲ್ಬರ್ಗದ ಕೆಲ ಪ್ರತಿಷ್ಠಿತ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳ 1500ಕ್ಕೂ ಹೆಚ್ಚು ಹಾಸಿಗೆಗಳಿಗೆ ಈ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ದೇಶದ ವಿವಿಧ ರಾಜ್ಯಗಳಲ್ಲೂ ಬಳಕೆ ಆರಂಭಗೊಂಡಿದೆ.
ಈ ಐಡಿಯಾ ಹುಟ್ಟಿದ್ಹೇಗೆ?
ಐಐಟಿ ಪದವೀಧರರಾದ ಮುದಿತ್ ಹಾಗೂ ಗೌರವ್, ಡೊಝೀಯ ರುವಾರಿಗಳು. ಇವರಿಬ್ಬರು ಮೆಕ್ಯಾನಿಕಲ್ ಎಂಜಿನಿಯರ್‌ಗಳು. ಎಂಎನ್‌ಸಿವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಬಿಸಿಜಿ ತಂತ್ರಜ್ಞಾನವನ್ನು ಎಫ್1 ಕಾರುಗಳ ಎಂಜಿನ್ ಆರೈಕೆಗೆ ಬಳಸುವುದಾದರೆ, ಮನುಷ್ಯನ ದೇಹದ ಆರೈಕೆಗೇಕೆ ಬಳಸಬಾರದು ಎಂದು ಯೋಚಿಸಿ ಡೊಝೀ ಹುಟ್ಟುಹಾಕಿದರು. ಆರಂಭದಲ್ಲಿ ಸೆನ್ಸಾರ್‌ಗಳನ್ನು ಹಾಸಿಗೆಯ ಮೇಲೆ ಇಟ್ಟು ಪರೀಕ್ಷೆ ನಡೆಸಲಾಗುತ್ತಿತ್ತಂತೆ. ಇವರ ಸಾಕು ಶ್ವಾನ ಸೆನ್ಸಾರ್‌ಗಳ ಶೀಟ್‌ಗಳನ್ನು ಕಡಿದ ಪರಿಣಾಮ, ಅದಕ್ಕೆ ಸಿಗಬಾರದೆಂದು ಸೆನ್ಸಾರ್‌ಗಳನ್ನು ಹಾಸಿಗೆ ಕೆಳಗೆ ಮುಚ್ಚಿಟ್ಟು ಹೊರ ಹೋಗಿದ್ದರಂತೆ. ವಾಪಸ್ ಬಂದು ನೋಡಿದಾಗ ಶ್ವಾನವು ಹಾಸಿಗೆ ಮೇಲೆ ಮಲಗಿತ್ತು. ಅದರ ಹೃದಯ ಬಡಿತ ಸೇರಿ ಇತ್ಯಾದಿ ಮಾಹಿತಿಯು ಮುಂದಿದ್ದ ಸ್ಕ್ರೀನ್ ಮೇಲೆ ದಾಖಲಾಗುತ್ತಿದ್ದನ್ನು ನೋಡಿ, ಸೆನ್ಸಾರ್‌ಗಳನ್ನು ಹಾಸಿಗೆ ಕೆಳಗೆ ಅಳವಡಿಸುವ ಐಡಿಯಾ ಹುಟ್ಟಿಕೊಂಡಿತು.