ಬೆಂಗಳೂರು ಸಾರ್ವಜನಿಕರೇ ಎಚ್ಚರ : ರಿಮೋಟ್ ಕಂಟ್ರೋಲ್ ಬಳಸಿ ತೂಕದ ಯಂತ್ರದಿಂದ ಮೋಸ
ಬೆಂಗಳೂರಲ್ಲಿ ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಮಾಂಸದ ಅಂಗಡಿ, ಕೋಳಿ ಮತ್ತು ಮೀನು ಮಾರಾಟ ಅಂಗಡಿಗೆ ಹೋಗೋರಿಗೆ ನೋಡ ನೋಡುತ್ತಿದ್ದಂತೆಯೇ ಕಣ್ಣಿಗೆ ಮಣ್ಣೆರಚೋ ಖದೀಮರ ಗ್ಯಾಂಗ್ ಬೀಡುಬಿಟ್ಟಿದೆ.

ಬೆಂಗಳೂರು (ಮಾ.18): ರಾಜ್ಯ ರಾಜಧಾನಿ ಬೆಂಗಳೂರು ನಿವಾಸಿಗಳೇ ಹಾಗೂ ಗ್ರಾಹಕರೇ ಎಚ್ಚರ. ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಮಾಂಸದ ಅಂಗಡಿ, ಕೋಳಿ ಮತ್ತು ಮೀನು ಮಾರಾಟ ಅಂಗಡಿಗೆ ಹೋಗೋರಿಗೆ ನೋಡ ನೋಡುತ್ತಿದ್ದಂತೆಯೇ ಕಣ್ಣಿಗೆ ಮಣ್ಣೆರಚೋ ಖದೀಮರ ಗ್ಯಾಂಗ್ ಬೀಡುಬಿಟ್ಟಿದೆ.
ಯ್ಯೂಟೂಬ್ ನೋಡಿಕೊಂಡು ಜನರಿಗೆ ಮೋಸ ಮಾಡುವುನ್ನು ಕಲಿತು ಅಂಗಡಿಗಳಿಗೆ ಬರುವ ಗ್ರಾಹಕರಿಗೆ ಮೋಸ ಮಾಡುವುದಕ್ಕೆಂದೇ ಬೆಂಗಳೂರಲ್ಲಿ ಗ್ಯಾಂಗ್‌ವೊಂದು ಕಾರ್ಯ ನಿರ್ವಹಿಸುತ್ತಿದೆ. ಅವರು ಮೋಸ ಮಾಡಿದ ಗ್ರಾಹಕರಲ್ಲಿ ನೀವೂ ಆಗಿರಬಹುದು. ಈವರೆಗೆ ನಿಮಗೆ ಗೊತ್ತಿಲ್ಲದೇ ಮೋಸವಾಗಿರಬಹುದು. ಆದರೆ, ಈ ಸ್ಟೋರಿಯನ್ನು ಓದಿದ ನಂತರವಾದರೂ ನೀವು ಅಂಗಡಿಗಳಿಗೆ ಹೋದ ವೇಳೆ ತೂಕದಲ್ಲಿ ಮೋಸ ಮಾಡುವಂತಹ ಖತರ್ನಾಕ್ ಗ್ಯಾಂಗ್‌ನಿಂದ ಕೊಂಚ ಎಚ್ಚರವಹಿಸಿ. ಇಲ್ಲಿದೆ ನೋಡಿ ಮೋಸ ಮಾಡುವ ಗ್ಯಾಂಗ್‌ನ ಸಂಪೂರ್ಣ ವಿವರ.
ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ: ಇನ್ನೂ 5 ದಿನ ಮಳೆ..!
ತೂಕದ ಯಂತ್ರದಲ್ಲಿ ಪಿಸಿಬಿ ಬೋರ್ಡ್ ಅಳವಡಿಕೆ: ಬೆಂಗಳೂರಲ್ಲಿ ಗ್ರಾಹಕರ ಮುಂದೆಯೇ ಕಣ್ಣಿಗೆ ಮಣ್ಣೆರಚೋ ಖದೀಮರು, ತಾವು ವಸ್ತುಗಳನ್ನು ತೂಗಿ ಕೊಡುವಂತಹ ಸ್ಕೇಲ್‌ನಲ್ಲಿ ಭಾರೀ ಪ್ರಮಾಣದ ಅವ್ಯವಹಾರ ಮಾಡುತ್ತಿದ್ದಾರೆ. ಈ ಬಗ್ಗೆ ಸುಳಿವು ಸಿಕ್ಕ ಕೂಡಲೇ ಕೆಲವು ಅಂಡಗಿ ಮುಂಗಟ್ಟುಗಳ ಮೇಲೆ ದಾಳಿ ಮಾಡಿದ ಪಶ್ಚಿಮ ವಿಭಾಗ ಪೊಲೀಸರು ತೂಕದ ಯಂತ್ರದಲ್ಲಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ (ಪಿಸಿಬಿ) ಮಾದರಿಯ ಚಿಪ್ ಅಳವಡಿಸಿಕೊಂಡು ರಿಮೋಟ್ ಕಂಟ್ರೋಲ್ ಮೂಲಕ ತೂಕದಲ್ಲಿ ಮೋಸ ಮಾಡುತ್ತಿದ್ದರು. ಜೊತೆಗೆ, ಹೆಚ್ಚುವರಿ ಬಟನ್ ಮೂಲಕ ತೂಕದಲ್ಲಿ ಬದಲಾವಣೆ ಮಾಡಿ ವಂಚನೆ ಮಾಡುತ್ತಿದ್ದುದು ಗಮನಕ್ಕೆ ಬಂದಿದೆ.
ಯೂಟ್ಯೂಬ್ ನೋಡಿಕೊಂಡು ವೈರ್ ಬದಲಾವಣೆ: ಸೋಮಶೇಖರ್ ಮತ್ತು ನವೀನ್ ಕುಮಾರ್ ಮಾಪನ ಶಾಸ್ತ್ರ ಇಲಾಖೆಯಿಂದ ಲೈಸನ್ಸ್ ಪಡೆದು ಸ್ಕೇಲ್ ಸರ್ವಿಸ್ ಮಾಡೊ ಕೆಲಸ ಮಾಡುತ್ತಿದ್ದರು. ಯೂಟ್ಯೂಬ್ ನೋಡಿ ತೂಕದ ಯಂತ್ರದಲ್ಲಿ ವೈಯರ್ ಬದಲಾವಣೆ ಮಾಡುವುದನ್ನು ಕಲಿತುಕೊಂಡಿದ್ದರು. ಕಳೆದ ಮೂರು ವರ್ಷದಿಂದ ತೂಕದ ಯಂತ್ರದಲ್ಲಿನ ವೈರ್ ಅನ್ನು ಬದಲಾವಣೆ ಮಾಡಿ ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು. ತೂಕದ ಯಂತ್ರದಲ್ಲಿ ಮೋಸ ಮಾಡುವುದಕ್ಕೆ ಸಂಚು ರೂಪಿಸಿ ವೈರ್ ಬದಲಾವಣೆ ಮಾಡುತ್ತಿದ್ದವನ್ನು ಪೊಲೀಸರು ಬಂಧಿಸಿದ ಕೂಡಲೇ ವಂಚನೆ ಮಾಡುತ್ತಿದ್ದ ಎಲ್ಲ ಅಂಗಡಿಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.
17 ಆರೋಪಿಗಳನ್ನು ಜೈಲಿಗಟ್ಟಿದ ಪೊಲೀಸರು: ಇನ್ನು ತೂಕದ ಯಂತ್ರದಿಂದ ಮೋಸ ಮಾಡುವ ಖದೀಮರ ಗ್ಯಾಂಗ್ ನ್ಯಾಯಬೆಲೆ ಅಂಗಡಿ, ಗುಜರಿ ಅಂಗಡಿ, ಮಾಂಸದ ಅಂಗಡಿ, ಕೋಳಿ ಮತ್ತು ಮೀನು ಮಾರಾಟ ಅಂಗಡಿಗಳಲ್ಲಿ ನಿರಂತರವಾಗಿ ಕಳೆದ ಎರಡು ವರ್ಷಗಳಿಂದ ಕಾರ್ಯನಿರತವಾಗಿದೆ. ಹೀಗೆ ತೂಕದಲ್ಲಿ ಬದಲಾವಣೆ ಮಾಡಿ ವಂಚಿಸುತ್ತಿದ್ದ 17 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ವಿವಿಧ ಅಂಗಡಿಗಳಲ್ಲಿ ವ್ಯಾಪಾರ ಮಾಡುತ್ತಿದ್ದ, ನವೀನ್ ಕುಮಾರ್, ಸೋಮಶೇಖರ್, ವಿನೇಶ್ ಪಟೇಲ್, ರಾಜೇಶ್, ವ್ಯಾಟರಾಯನ್, ಮೇಘನಾಧಮ್, ಲೋಕೆಶ್ ಕೆ, ಲೋಕೆಶ್ ಎಸ್, ಗಂಗಾಧರ್, ಚಂದ್ರಶೇಖರಯ್ಯ, ಅನಂತಯ್ಯ, ರಂಗನಾಥ್, ಶಿವಣ್ಣ, ಸನಾವುಲ್ಲಾ, ವಿಶ್ವನಾಥ್, ಮಹಮದ್ ಈಶಾಕ್, ಮಧುಸುದನ್ ಅವರನ್ನು ಬಂಧಿಸಲಾಗಿದೆ.
ಬೆಂಗಳೂರು: ಫ್ಲೆಕ್ಸ್ ಕಟ್ಟುವ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ಮಾರಾಮಾರಿ
ದೂರು ಕೊಟ್ಟ ಅಧಿಕಾರಿಗೆ ಬೆದರಿಕೆ ಹಾಕಿದ್ದ ಆರೋಪಿ: ಈ ಹಿಂದೆ 2020ರಲ್ಲಿ ಸ್ಕೇಲ್ ನಲ್ಲಿ ಬದಲಾವಣೆ ಮಾಡಿ ನವೀನ್ ಕುಮಾರ್ ಸಿಕ್ಕಿಬಿದ್ದಿದ್ದನು. ಈತನ ವಿರುದ್ಧ ಕೆ.ಪಿ ಅಗ್ರಹಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ವೇಳೆ ದೂರು ನೀಡಿದ್ದ ಅಸಿಸ್ಟೆಂಟ್ ಕಂಟ್ರೋಲರ್ ಗೆ ನವೀನ್ ಕುಮಾರ್ ಬೆದರಿಕೆ ಹಾಕಿದ್ದನು. ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು. ಈಗ ಸಾರ್ವಜನಿಕರಿಗೆ ಮೋಸ ಮಾಡುವ ಜಾಲವನ್ನು ವಿಸ್ತರಿಸಿಕೊಂಡು ಹಣ ಗಳಿಸುತ್ತಿದ್ದ ಮುಖ್ಯ ಆರೋಪಿಗಳಾದ ಸೋಮಶೇಖರ್, ನವೀನ್ ಕುಮಾರ್ ಸೇರಿದಂತೆ 17 ಆರೋಪಿಗಳನ್ನು ಬಂಧಿಸಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.