ಬೆಂಗಳೂರಿನಲ್ಲಿ ಸ್ಕೂಟರ್‌ಗೆ ಆಟೋ ಟಚ್ ಆಯ್ತು ಎಂಬ ಕಾರಣಕ್ಕೆ ಯುವತಿಯೊಬ್ಬಳು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ನಡೆದಿದೆ. 

ಬೆಂಗಳೂರು (ಮೇ.31): ಸ್ಕೂಟರ್‌ಗೆ ಆಟೋ ಟಚ್ ಆಯ್ತು ಎಂಬ ಕಾರಣಕ್ಕೆ ಹೊರರಾಜ್ಯದ ಯುವತಿಯೋರ್ವಳು ನಗರದ ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆ ಬೆಳ್ಳಂದೂರು ಸರ್ಕಲ್‌ನಲ್ಲಿ ಶನಿವಾರ ಸಂಜೆ 4:30 ರ ಸುಮಾರಿಗೆ ನಡೆದಿದೆ.ಈ ಘಟನೆಯ ವಿಡಿಯೋ ಆಟೋ ಚಾಲಕನ ಮೊಬೈಲ್‌ನಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಆಗಿದ್ದೇನು?

ಸ್ಕೂಟರ್‌ನಲ್ಲಿ ಬಂದಿದ್ದ ಯುವತಿಯ ವಾಹನಕ್ಕೆ ಆಟೋ ಸ್ವಲ್ಪ ಟಚ್ ಆಗಿದೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಯುವತಿ, ಆಟೋ ಚಾಲಕನೊಂದಿಗೆ ವಾಗ್ವಾದಕ್ಕಿಳಿದಿದ್ದಾಳೆ. ಮಾತಿಗೆ ಮಾತು ಬೆಳೆದು, ಯುವತಿ ತನ್ನ ಚಪ್ಪಲಿಯನ್ನು ತೆಗೆದು ಆಟೋ ಚಾಲಕನಿಗೆ ಹೊಡೆದಿದ್ದಾಳೆ. ಈ ಘಟನೆಯಿಂದ ಆಕ್ರೋಶಗೊಂಡ ಚಾಲಕ ಮಹಿಳೆಯ ಅತಿರೇಕದ ವರ್ತನೆಯನ್ನ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾನೆ.

ಸ್ಥಳೀಯರು ಘಟನೆಯನ್ನು ಗಮನಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ, ಆಟೋ ಚಾಲಕ ಮತ್ತು ಯುವತಿ ಇಬ್ಬರೂ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿದ್ದಾರೆ. ಪೊಲೀಸರು ಘಟನೆಯ ಕುರಿತು ವಿಚಾರಣೆ ಆರಂಭಿಸಿದ್ದು, ಇಬ್ಬರಿಂದಲೂ ಹೇಳಿಕೆ ಪಡೆಯುತ್ತಿದ್ದಾರೆ.

ಈ ಘಟನೆಯು ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲಕರ ನಡುವಿನ ಘರ್ಷಣೆ ಮತ್ತು ಕಿರಿಕಿರಿಯಿಂದ ಉಂಟಾಗುವ ಸಮಸ್ಯೆಗಳ ಕುರಿತು ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಹೊರರಾಜ್ಯದ ಜನರು ಕನ್ನಡಿಗರ ಮೇಲೆ ಹಲ್ಲೆ ಮಾಡುವ, ಬೆದರಿಕೆಯೊಡ್ಡುವ ಘಟನೆಗಳು ದಿನೇದಿನೆ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.