ತಿಂಗಳಿಗೆ 42 ರೂ. ಪಾವತಿಸಿದ್ರೆ ಸಾಕು, ನೆಮ್ಮದಿಯ ನಿವೃತ್ತಿ ಬದುಕು ನಿಮ್ಮದು!
ನಿವೃತ್ತಿ ಬದುಕಿಗಾಗಿ ಒಂದಿಷ್ಟು ಉಳಿಸಬೇಕೆಂದು ಯೋಚಿಸೋರಿಗೆ ಅಟಲ್ ಪಿಂಚಣಿ ಯೋಜನೆ ಅತ್ಯುತ್ತಮ ಆಯ್ಕೆ.ತಿಂಗಳಿಗೆ 42 ರೂ. ಉಳಿಸಿದ್ರೂ ವೃದ್ಧಾಪ್ಯದಲ್ಲಿ ಕನಿಷ್ಠ 1000ರೂ.ನಿಂದ ಗರಿಷ್ಠ5000ರೂ. ಪಿಂಚಣಿ ಪಡೆಯಬಹುದು.
ನಿವೃತ್ತಿ ಬದುಕನ್ನು ನೆಮ್ಮದಿಯಿಂದ ಕಳೆಯಲು ಅಟಲ್ ಪಿಂಚಣಿ ಯೋಜನೆ (ಎಪಿವೈ) ನೆರವು ನೀಡುತ್ತದೆ. ಇದು ಕೇಂದ್ರ ಸರ್ಕಾರದ ಪಿಂಚಣಿ ಯೋಜನೆಯಾಗಿದ್ದು, ಡ್ರೈವರ್, ಟೈಲರ್, ಕಮ್ಮಾರ, ಬಡಗಿ, ದಿನಗೂಲಿ ನೌಕರ ಮುಂತಾದ ಅಸಂಘಟಿತ ವಲಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ. 2015ರ ಜೂನ್‌ನಲ್ಲಿ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗಿತ್ತು. ಅಟಲ್ ಪಿಂಚಣಿ ಯೋಜನೆಯನ್ನು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್‌ಆರ್‌ಡಿಎ) ನಿರ್ವಹಿಸುತ್ತಿದ್ದು, ದೇಶದ ಎಲ್ಲ ಬ್ಯಾಂಕ್‌ಗಳು ಈ ಯೋಜನೆಯ ಅನುಷ್ಠಾನದ ಹೊಣೆ ಹೊತ್ತಿವೆ. ಹೀಗಾಗಿ ನೀವು ಖಾತೆ ಹೊಂದಿರೋ ಯಾವುದೇ ಬ್ಯಾಂಕ್‌ನಲ್ಲಿ ಈ ಯೋಜನೆಗೆ ಹೂಡಿಕೆ ಮಾಡಬಹುದು. ಅಲ್ಲದೆ, ಪಿಎಫ್‌ಆರ್‌ಡಿಎ ಇ-ಎನ್‌ಪಿಎಸ್ ಮೂಲಕ ಆನ್‌ಲೈನ್ ನೋಂದಾಣಿ ವ್ಯವಸ್ಥೆ ಕೂಡ ಇದೆ.
ಯಾರು ಅರ್ಹರು?
18-40 ವಯಸ್ಸಿನ ಯಾವುದೇ ಭಾರತೀಯ ನಾಗರಿಕ ಅಟಲ್ ಪಿಂಚಣಿ ಯೋಜನೆ ಚಂದಾದಾರನಾಗಲು ಅರ್ಹತೆ ಹೊಂದಿದ್ದಾನೆ. ಆದ್ರೆ ಎಪಿವೈ ಖಾತೆ ಹೊಂದಲು ಆತ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿರೋದು ಅಗತ್ಯ.
ತಿಂಗಳಿಗೆ ಎಷ್ಟು ಹಣ ಕಟ್ಟಬೇಕು?
ಎಪಿವೈಗೆ ಮಾಸಿಕ ಎಷ್ಟು ಹಣ ಪಾವತಿಸಬೇಕೆಂಬುದು ಆ ವ್ಯಕ್ತಿಯ ವಯಸ್ಸಿನ ಮೇಲೆ ನಿರ್ಧರಿಸಲಾಗುತ್ತದೆ. 18 ವರ್ಷದ ವ್ಯಕ್ತಿ 42ರೂ. ನಿಂದ 210 ರೂ. ತನಕ ಪಾವತಿಸಬೇಕಾಗುತ್ತದೆ. ಅದೇ 40ನೇ ವಯಸ್ಸಿನಲ್ಲಿ ಈ ಯೋಜನೆಯಲ್ಲಿ ಹಣ ತೊಡಗಿಸೋ ವ್ಯಕ್ತಿ ಮಾಸಿಕ 291ರೂ. ನಿಂದ 1,454 ರೂ. ತನಕ ಪಾವತಿಸಬೇಕಾಗುತ್ತದೆ. ಒಂದು ವೇಳೆ ತಿಂಗಳಿಗೆ ಸರಿಯಾಗಿ ಹಣ ಪಾವತಿಸಲು ಸಾಧ್ಯವಾಗದಿದ್ರೆ ಕನಿಷ್ಠ 1 ರೂ.ನಿಂದ ಗರಿಷ್ಠ10 ರೂ. ತನಕ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಒಂದು ವರ್ಷದ ತನಕ ಯಾವುದೇ ಪಾವತಿ ಮಾಡದಿದ್ರೆ ಅಂಥ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಎರಡು ವರ್ಷದ ತನಕ ಯಾವುದೇ ಕಂತು ಕಟ್ಟದಿದ್ರೆ ಆ ಖಾತೆಯನ್ನು ಮುಚ್ಚಲಾಗುತ್ತದೆ. ಉಳಿತಾಯ ಖಾತೆಯಿಂದ ಪ್ರತಿ ತಿಂಗಳು ಹಣ ನೇರವಾಗಿ ಈ ಯೋಜನೆ ಖಾತೆಗೆ ಜಮಾ ಆಗುವಂತೆ ಮಾಡೋ ಅಟೋಮ್ಯಾಟಿಕ್ ಡೆಬಿಟ್ ಸೌಲಭ್ಯ ಕೂಡ ಲಭ್ಯವಿದೆ.
ವರ್ಷಕ್ಕೊಮ್ಮೆ ಮಾರ್ಪಾಡಿಗೆ ಅವಕಾಶ
ವರ್ಷಕ್ಕೊಮ್ಮೆ ಪಿಂಚಣಿ ಮೊತ್ತವನ್ನು ಹೆಚ್ಚಳ ಅಥವಾ ಇಳಿಕೆ ಮಾಡಲು ಅವಕಾಶ ನೀಡಲಾಗಿದೆ. ಹೀಗಾಗಿ ಆದಾಯಕ್ಕೆ ಅನುಗುಣವಾಗಿ ಚಂದಾದಾರರು ತಮ್ಮ ಪಿಂಚಣಿ ಮೊತ್ತದಲ್ಲಿ ಏರಿಳಿಕೆ ಮಾಡಬಹುದು. ಹೆಚ್ಚಳ ಮಾಡಿದ ಸಮಯದಲ್ಲಿ ಹೆಚ್ಚಿನ ಮೊತ್ತವನ್ನು ಠೇವಣಿ ಮಾಡಬೇಕು. ಇಳಿಕೆ ಮಾಡಿದ ಸಮಯದಲ್ಲಿ ಹೆಚ್ಚುವರಿ ಕೊಡುಗೆಗಳನ್ನು ಚಂದಾದಾರರಿಗೆ ಹಿಂತಿರುಗಿಸಲಾಗುತ್ತದೆ.
ಮಗು ನಿರೀಕ್ಷೆಯಲ್ಲಿರೋ ದಂಪತಿ ಫೈನಾನ್ಷಿಯಲ್ ಪ್ಲ್ಯಾನ್ ಹೇಗಿರಬೇಕು?
ಎಷ್ಟು ಪಿಂಚಣಿ ಲಭಿಸುತ್ತದೆ?
ಎಪಿವೈ ಮೂಲಕ ಚಂದಾದಾರರು ಮಾಸಿಕ ಕನಿಷ್ಠ 1,000 ರೂ. ನಿಂದ ಗರಿಷ್ಠ 5,000 ರೂ. ತನಕ ಪಿಂಚಣಿ ಪಡೆಯಬಹುದು. ಚಂದಾದಾರರು ಈ ಯೋಜನೆಯಲ್ಲಿ ತೊಡಗಿಸಿದ ಹಣದ ಶೇ.50ರಷ್ಟು ಅಥವಾ ವಾರ್ಷಿಕ 1000ರೂ. ಇದ್ರಲ್ಲಿ ಯಾವುದು ಕಡಿಮೆಯೋ ಅದನ್ನು ಕೇಂದ್ರ ಸರ್ಕಾರ ಕೊಡುಗೆಯಾಗಿ ನೀಡುತ್ತದೆ. ಈ ಕೊಡುಗೆ ಸರ್ಕಾರದ ಯಾವುದೇ ಸಾಮಾಜಿಕ ಭದ್ರತೆ ಯೋಜನೆ ಹಾಗೂ ಆದಾಯ ತೆರಿಗೆ ವ್ಯಾಪ್ತಿಗೊಳಪಡದವರಿಗೆ ಮಾತ್ರ ಅನ್ವಯಿಸುತ್ತದೆ.
ಆದಾಯ ತೆರಿಗೆ ಪ್ರಯೋಜನ
ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗೋ ಎಲ್ಲ ತೆರಿಗೆ ಪ್ರಯೋಜನಗಳು ಈ ಯೋಜನೆಗೂ ಅನ್ವಯಿಸುತ್ತದೆ. ಆದಾಯ ತೆರಿಗೆ ಕಾಯ್ದೆಯ 80 ಸಿಸಿಡಿ (ಐಬಿ) ಸೆಕ್ಷನ್ ಅಡಿಯಲ್ಲಿ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದು.
ಮರಣ ಹೊಂದಿದ್ರೆ?
ಒಂದು ವೇಳೆ ಚಂದಾದಾರ ಮರಣ ಹೊಂದಿದ್ದಲ್ಲಿ ಆತ ಅಥವಾ ಆಕೆಯ ಸಂಗಾತಿಗೆ ಪಿಂಚಣಿ ಹಣ ನೀಡಲಾಗುತ್ತದೆ. ಸಂಗಾತಿಯ ಮರಣದ ಬಳಿಕ ಈ ಹಣವನ್ನು ಅವರು ನಾಮನಿರ್ದೇಶಿಸಿದ ವ್ಯಕ್ತಿಗೆ ನೀಡಲಾಗುತ್ತದೆ.
ಇ-ರುಪಿ ಅಂದ್ರೆ ಏನು? ಇದ್ರ ಪ್ರಯೋಜನಗಳೇನು?
ಅವಧಿಗೆ ಮುನ್ನನಿರ್ಗಮಿಸಬಹುದಾ?
60 ವರ್ಷಕ್ಕಿಂತ ಮೊದಲು ನಿರ್ಗಮಿಸಲು ಅವಕಾಶವಿಲ್ಲ. ಆದ್ರೆ ವಿಶೇಷ ಸಂದರ್ಭಗಳಲ್ಲಿ ಅಂದ್ರೆ ಚಂದಾದಾರ ಮರಣ ಹೊಂದಿದ್ದಲ್ಲಿ ಅಥವಾ ಗಂಭೀರ ಕಾಯಿಲೆಗೆ ತುತ್ತಾದಾಗ ಅವಧಿಗೂ ಮುನ್ನ ಎಪಿವೈಯಿಂದ ನಿರ್ಗಮಿಸಬಹುದು.