ಬೀರಾ 91 ತನ್ನ ಹೆಸರನ್ನು ಬದಲಾಯಿಸಲು ಹೋಗಿ 80 ಕೋಟಿ ರೂಪಾಯಿ ಕಳೆದುಕೊಂಡಿದೆ. ಕಂಪನಿಯ ಹೆಸರನ್ನು ಬದಲಾಯಿಸಿದ್ದರಿಂದ ಬಿಯರ್ ಮಾರಾಟ ಸ್ಥಗಿತಗೊಂಡು ದೊಡ್ಡ ನಷ್ಟವಾಗಿದೆ.
ಕೆಲವೊಮ್ಮೆ ಹೆಸರು ಬದಲಿಸಿದರೆ ಲಕ್ ಕುದುರುತ್ತೆ ಅಂತ ಹೇಳುವುದನ್ನು ನೀವು ಕೇಳಿರಬಹುದು. ಅನೇಕ ಸೆಲೆಬ್ರಿಟಿಗಳು, ಸಿನಿಮಾ ತಾರೆಯರು ತಮ್ಮ ಹೆಸರು ಬದಲಿಸಿಕೊಂಡ ನಂತರ ಅದೃಷ್ಟ ಒಲಿಯಿತು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇಲ್ಲೊಂದು ಕಡೆ ಬಿಯರ್ ಬ್ರಾಂಡೊಂದು ಹೆಸರು ಬದಲಿಸಲು ಹೋಗಿ 80 ಕೋಟಿ ರೂಪಾಯಿ ಕಳೆದುಕೊಂಡಿದೆ. ಹೌದು ಬೀರಾ 91 ಹೆಸರನ್ನು ನೀವು ಕೇಳಿರಬಹುದು. ಇದು ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಬಿಯರ್ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಆದರೆ ಈ ಸಂಸ್ಥೆ ತನ್ನ ಬ್ರಾಂಡ್ ಹೆಸರಿನಲ್ಲಿ ಮಾಡಿದ ಸಣ್ಣ ಬದಲಾವಣೆಯೊಂದು ದೊಡ್ಡ ನಷ್ಟಕ್ಕೆ ಕಾರಣವಾಗಿದೆ. ಈಗಾಗಲೇ ಜನಪ್ರಿಯವಾದ ಬ್ರಾಂಡ್‌ಗಳಲ್ಲಿ ಅಥವಾ ಹೆಸರಿನಲ್ಲಿ ಮಾಡುವ ಸಣ್ಣದೊಂದು ಬದಲಾವಣೆ ದೊಡ್ಡ ಹಾನಿಗೂ ಕಾರಣವಾಗಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಬೀರಾಗೆ ದುಬಾರಿಯಾದ ಹೆಸರು ಬದಲಾವಣೆ
ಭಾರತ ಮೂಲದ ಈ ಬೀರಾ ಬಿಯರ್ ಬ್ರಾಂಡ್‌ನ್ನು ಅಂಕುರ್ ಜೈನ್ ಎಂಬುವವರು 2015 ರಲ್ಲಿ ಸ್ಥಾಪಿಸಿದ್ದರು. ಆದಾಗಲೇ ಜನಪ್ರಿಯವಾಗಿದ್ದರೂ ಅವರು ತಮ್ಮ ಈ ಬಿಯರ್ ಬ್ರಾಂಡ್‌ನ ಹೆಸರಿನಲ್ಲಿ ಸಣ್ಣ ಬದಲಾವಣೆ ಮಾಡಿದ್ದರಿಂದ ಸುಮಾರು 80 ಕೋಟಿ ನಷ್ಟ ಅನುಭವಿಸಿದ್ದಾರೆ. ಯೋಜಿಸಿದ್ದ 2026 ರ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಗೆಗೂ ಮೊದಲು ಬೀರಾ 91 ತನ್ನ ಕಂಪನಿಯ ಹೆಸರನ್ನು ಬಿ9 ಬೆವರೇಜಸ್ ಪ್ರೈವೇಟ್ ಲಿಮಿಟೆಡ್ ಬದಲು ಬಿ9 ಬೆವರೇಜಸ್ ಲಿಮಿಟೆಡ್ ಎಂದು ಬದಲಾಯಿಸಿತು. ಈ ಬದಲಾವಣೆಯು ಚಿಕ್ಕದಾಗಿ ಕಂಡುಬಂದರೂ ಕೂಡ ಇದು ಹಲವಾರು ತಿಂಗಳುಗಳ ಕಾಲ ಬಿಯರ್‌ನ ಮಾರಾಟವನ್ನು ಸ್ಥಗಿತಗೊಳಿಸುವಂತೆ ಮಾಡಿತು ಇದರಿಂದಾಗಿ ಕಂಪನಿಯು ತನ್ನ ಹೊಸ ಉತ್ಪನ್ನದ ಲೇಬಲ್‌ನ ನೋಂದಣಿಯನ್ನು ಪೂರ್ಣಗೊಳಿಸಿದಾಗ ಸುಮಾರು 80 ಕೋಟಿ ರೂ.ಗಳ ದಾಸ್ತಾನು ಬಾಕಿ ಉಳಿಯಿತು ಎಂದು ಆಂಗ್ಲ ಮಾಧ್ಯಮ ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಆದಾಯವನ್ನು ಮೀರಿಸಿದ ನಷ್ಟ
ಕಂಪನಿಯ ಅನುಸರಣೆಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ( compliance-related issues)(ಒಂದು ಕಂಪನಿ ಅಥವಾ ವ್ಯಕ್ತಿಯು ಕಾನೂನುಗಳು, ನಿಯಮಗಳು, ಉದ್ಯಮ ಮಾನದಂಡಗಳು ಅಥವಾ ಆಂತರಿಕ ನೀತಿಗಳನ್ನು ಪಾಲಿಸಲು ವಿಫಲವಾದರೆ ಅದನ್ನು ಅನುಸರಣಾ ಸಮಸ್ಯೆ ಎಂದು ಕರೆಯಲಾಗುತ್ತದೆ.)ಅನುಸರಣಾ ಸಮಸ್ಯೆಗಳು ಸಣ್ಣ ಉಲ್ಲಂಘನೆಗಳಿಂದ ಹಿಡಿದು ಕಾನೂನಿನ ಗಂಭೀರ ಉಲ್ಲಂಘನೆಗಳವರೆಗೆ ಇರಬಹುದು) ಬಿಯರ್‌ನ ಮಾರಾಟವು ಶೇಕಡಾ 22 ರಷ್ಟು ಕಡಿಮೆಯಾಗಿತ್ತು ಮತ್ತು 2023-24 ರ ಆರ್ಥಿಕ ವರ್ಷದಲ್ಲಿ ನಷ್ಟವು ಶೇಕಡಾ 68 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ. ವರದಿಯ ಪ್ರಕಾರ, ಬಿ9 ಬೆವರೇಜಸ್ 2023-24 ರಲ್ಲಿ ರೂ 748 ಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದ್ದು, ಅದರ ಒಟ್ಟು ಮಾರಾಟದ ಆದಾಯವಾದ ರೂ 638 ಕೋಟಿಯನ್ನು ಮೀರಿದೆ ಎಂದು ವರದಿಯಾಗಿದೆ.
ಕಂಪೆನಿ ಹೆಸರು ಬದಲಿಸಿದ ಗೌತಮ್ ಅದಾನಿ, ಷೇರು ಕುಸಿತ! ಮರುನಾಮಕರಣದ ಉದ್ದೇಶವೇನು?
ಹೆಸರು ಬದಲಾವಣೆಯಿಂದಾಗಿ, ನಾವು 4-6 ತಿಂಗಳ ಅವಧಿಯಲ್ಲಿ ಲೇಬಲ್‌ಗಳನ್ನು ಮರು ನೋಂದಾಯಿಸಿ ರಾಜ್ಯಗಳಾದ್ಯಂತ ಮರು ಅರ್ಜಿ ಸಲ್ಲಿಸಬೇಕಾಯಿತು. ಇದರ ಪರಿಣಾಮವಾಗಿ ನಮ್ಮ ಉತ್ಪನ್ನಗಳಿಗೆ ಬೇಡಿಕೆಯಿದ್ದರೂ ಹಲವಾರು ತಿಂಗಳುಗಳವರೆಗೆ ಅಕ್ಷರಶಃ ಯಾವುದೇ ಮಾರಾಟವಾಗಲಿಲ್ಲ" ಎಂದು ಬಿ9 ಬೆವರೇಜಸ್ ಸಂಸ್ಥಾಪಕ ಅಂಕುರ್ ಜೈನ್ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ. ಬೀರಾ 91 ತನ್ನ ವಿಸ್ತರಣೆಗೆ ಹೊಸ ಹಣವನ್ನು ಸಂಗ್ರಹಿಸಲು ಮಾರುಕಟ್ಟೆಯಲ್ಲಿ ಐಪಿಒವನ್ನು(Initial public offering) ಕೂಡ ಯೋಜಿಸಿತ್ತು. ಪ್ರಸ್ತುತ ಭಾರತದ ಬಿಯರ್ ಮಾರುಕಟ್ಟೆಯು ಮೈಕ್ರೋಬ್ರೂವರೀಸ್, ಕ್ರಾಫ್ಟ್ ಬಿಯರ್ ತಯಾರಕರು ಮತ್ತು ಜಾಗತಿಕ ಬ್ರೂವರ್‌ಗಳ ನಡುವೆ ಸ್ಪರ್ಧೆ ಹೆಚ್ಚಿದೆ. ವರದಿಗಳ ಪ್ರಕಾರ, ಬಿಯರ್ ಕಂಪನಿಯ ಬೆಳವಣಿಗೆಗೆ ಗಮನಾರ್ಹ ಬಂಡವಾಳ ವೆಚ್ಚ ಮತ್ತು ಕಾರ್ಯನಿರತ ಬಂಡವಾಳದ ಹಂಚಿಕೆ ಅಗತ್ಯವಿದೆ ಎಂದು ಕಂಪನಿ ಹೇಳಿದೆ. ಪ್ರಸ್ತುತ ಬೀರಾ 91ಗೆ ಸಿಕ್ವೊಯಾ ಕ್ಯಾಪಿಟಲ್ ಇಂಡಿಯಾ, ಬೆಲ್ಜಿಯಂ ಮೂಲದ ಸೋಫಿನಾ ಮತ್ತು ಜಪಾನ್‌ನ ಕಿರಿನ್ ಹೋಲ್ಡಿಂಗ್ಸ್ ಹೂಡಿಕೆ ಮಾಡಿದೆ.
Zomato ಈಗ 'ಎಟರ್ನಲ್': ಹೆಸರು ಬದಲಿಸಿದ್ದೇಕೆ? ಇನ್ಮುಂದೆ ಸರ್ಚ್ ಮಾಡೋದು ಹೇಗೆ?
