* ಪಾಲಿಕೆ ಸದಸ್ಯರ ಅನುಪಸ್ಥಿತಿಯಲ್ಲಿ ಸತತ 2ನೇ ಬಾರಿ ಬಜೆಟ್ ಮಂಡನೆ* ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿರಿಂದ ಮಂಡನೆ* ಬಜೆಟ್ ಗಾತ್ರ 9,000 ಕೋಟಿ?
ಬೆಂಗಳೂರು(ಮಾ.29): ಬಿಬಿಎಂಪಿಯ(BBMP) 2022-23ನೇ ಸಾಲಿನ ಆಯವ್ಯಯ(Budget) ಮಾ.30ರ ಬುಧವಾರ ಮಧ್ಯಾಹ್ನ 3 ಗಂಟೆಗೆ ಮಂಡನೆಯಾಗಲಿದೆ. ಪಾಲಿಕೆ ಸದಸ್ಯರ ಅನುಪಸ್ಥಿತಿಯಲ್ಲಿ ಮಂಡನೆಯಾಗುತ್ತಿರುವ ಸತತ ಎರಡನೇ ಆಯವ್ಯಯ ಇದಾಗಿದೆ. ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಬಜೆಟ್ ಮಂಡಿಸಲಿದ್ದಾರೆ. ಮಲ್ಲೇಶ್ವರದ ಐಪಿಪಿ ಕೇಂದ್ರದಲ್ಲಿ ಆಯವ್ಯಯ ಮಂಡನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, ಸುಮಾರು 9 ಸಾವಿರ ಕೋಟಿ ರು. ಮೊತ್ತದ ಆಯವ್ಯಯ ಮಂಡನೆಯಾಗಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಹೊಸ ಯೋಜನೆ ಕೈ ಹಾಕುವ ಸಾಧ್ಯತೆ ಕಡಿಮೆ:
ಕಳೆದ 2 ವರ್ಷಗಳಿಂದ ಕಾಡಿದ ಕೋವಿಡ್(Covid-19) ಸಾಂಕ್ರಾಮಿಕ ರೋಗದಿಂದ ಪಾಲಿಕೆಗೂ ಆರ್ಥಿಕ ಸಂಕಷ್ಟ ಕಾಡಿದ್ದರಿಂದ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿರಲಿಲ್ಲ. ಕಳೆದ 3 ವರ್ಷಗಳಿಂದ ಕಾಮಗಾರಿ ಪೂರ್ಣಗೊಳಿಸಿದ ಗುತ್ತಿಗೆದಾರರಿಗೆ 3,500 ಕೋಟಿ ರು. ಬಿಲ್ ಪಾವತಿಸುವುದು ಬಾಕಿಯಿದೆ. ಜತೆಗೆ, 4,200 ಕೋಟಿ ರು. ಮೊತ್ತದ ಕಾಮಗಾರಿಗಳಿಗೆ ವರ್ಕ್ ಆರ್ಡರ್ ಕೊಡಲಾಗಿದ್ದು, ಸುಮಾರು 4 ಸಾವಿರ ಕೋಟಿ ರು. ಕಾಮಗಾರಿಗೆ ಜಾಬ್ ಕೋಡ್ ಹಂಚಿಕೆ ಮಾಡಲಾಗಿದೆ. ಒಟ್ಟಾರೆ ಪಾಲಿಕೆಗೆ 12 ಸಾವಿರ ಕೋಟಿ ರು. ಗಿಂತ ಅಧಿಕ ಆರ್ಥಿಕ ಹೊರೆಯಿದೆ. ಜತೆಗೆ, ರಾಜ್ಯ ಸರ್ಕಾರದಿಂದ ಸುಮಾರು 8 ಸಾವಿರ ಕೋಟಿ ರು. ಬಾಕಿ ಬರಬೇಕಿದೆ. ಆದ್ದರಿಂದ ಪಾಲಿಕೆ ಮೇಲೆ ಅಂದಾಜು 20 ಸಾವಿರ ಕೋಟಿ ರು. ಆರ್ಥಿಕ ಹೊರೆಯಿದ್ದು, ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವ ಸಾಧ್ಯತೆ ತೀರಾ ಕಡಿಮೆಯಿದೆ.
Bengaluru: ಮಿನರ್ವ ಟು ಹಡ್ಸನ್ ವೃತ್ತಕ್ಕೆ ಫ್ಲೈಓವರ್: ಬಿಬಿಎಂಪಿ ಸಿದ್ಧತೆ
ಯಾವುದಕ್ಕೆ ಆದ್ಯತೆ?:
ಪ್ರತಿ ವಾರ್ಡ್‌ನ ಮೂಲಸೌಕರ್ಯಗಳ ನಿರ್ವಹಣಾ ಕಾರ್ಯಕ್ಕೆ ಕನಿಷ್ಠ 3 ಕೋಟಿ ರು. ಮೀಸಲಿಡುವುದು, ನನೆಗುದಿಗೆ ಬಿದ್ದಿರುವ ‘ಬಿ’ ಖಾತೆಯ ಆಸ್ತಿಗಳಿಗೆ ‘ಎ’ ಖಾತೆ ನೀಡಿ ಸಂಪನ್ಮೂಲ ಕ್ರೋಢೀಕರಿಸುವುದು, ತೆರಿಗೆ ವ್ಯಾಪ್ತಿಗೆ ಒಳಪಡದ 5 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಗುರುತಿಸಿ ತೆರಿಗೆ ವ್ಯಾಪ್ತಿಗೆ ತರವುದು, ಅನಧಿಕೃತ ಕಟ್ಟಡಗಳ ಪತ್ತೆ ಕಾರ್ಯಕ್ಕೆ ಚುರುಕು ನೀಡವುದು, ಸ್ವಯಂ ಘೋಷಣಾ ಪದ್ಧತಿಯಡಿ ಆಸ್ತಿ ಘೋಷಣೆ ಮಾಡಿಕೊಂಡು ತೆರಿಗೆ ಪಾವತಿಸುತ್ತಿರುವ ಆಸ್ತಿಗಳನ್ನು ಪರಿಶೀಲನೆ ಮಾಡುವುದು, ಒಂಟಿ ಮನೆಗಳಿಗೆ ಹೆಚ್ಚಿನ ಅನುದಾನ(Grants) ಕೊಡುವುದು, ಬೀದಿದೀಪಗಳ ನಿರ್ವಹಣೆ ಹಾಗೂ ಎಲ್‌ಇಡಿ ಬೀದಿದೀಪ ಅಳವಡಿಕೆ ಕಾರ್ಯಕ್ಕೆ ವೇಗ ನೀಡುವುದು, ಮಾರುಕಟ್ಟೆಗಳ ನವೀಕರಣ, 243 ಹೈಟೆಕ್ ಆರೋಗ್ಯ ಕೇಂದ್ರ ಸ್ಥಾಪನೆ, ನಗರದ ರಸ್ತೆಗಳ ಗುಣಮಟ್ಟ ಹಾಗೂ ಪಾದಚಾರಿ ಮಾರ್ಗ ಸುಧಾರಣೆಗೆ ಸಂಬಂಧಿಸಿದಂತೆ ವಿಶೇಷ ಅನುದಾನ ಮೀಸಲಿಡುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ಬಿಬಿಎಂಪಿ ಹೆಸರನ್ನು ‘ಬೃಹತ್ ಬಿಜೆಪಿ ಪಾಲಿಕೆ’ ಎಂದು ಬದಲಿಸಿ: ಸೌಮ್ಯಾರೆಡ್ಡಿ
ತೆರಿಗೆಯೇತರ ಆದಾಯ ಹೆಚ್ಚಳ ಗುರಿ
ಕಳೆದ ವರ್ಷ ಪಾಲಿಕೆಗೆ ಆಸ್ತಿ ತೆರಿಗೆಯಿಂದ 4 ಸಾವಿರ ಕೋಟಿ ರು., ಕಟ್ಟಡ ಪರವಾನಗಿ, ಉದ್ಯಮ ಪರವಾನಗಿ, ಕಟ್ಟಡಗಳ ಬಾಡಿಗೆ ಇತ್ಯಾದಿ ಸೇರಿ 1,200 ಕೋಟಿ ರು. ತೆರಿಗೆಯೇತರ ಆದಾಯ ಸಂಗ್ರಹಣೆ ಗುರಿ ಹೊಂದಲಾಗಿತ್ತು. ಆದರೆ, ಈ ವರ್ಷ ತೆರಿಗೆಯೇತರ ಆದಾಯವನ್ನು 1,600 ಕೋಟಿ ರು. ಗೆ ಹೆಚ್ಚಳ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ. ಜತೆಗೆ, ಎಸ್‌ಎಫ್‌ಸಿ ಅನುದಾನ ಸೇರಿಸಿ ಹೆಚ್ಚಿನ ಆದಾಯ ತೋರಿಸಲು ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳಿಂದ ತಿಳಿದುಬಂದಿದೆ.
ವಿತ್ತೀಯ ಹೊಣೆಗಾರಿಕೆ ಕಾಯ್ದೆ ಜಾರಿ ಸವಾಲು
ಪಾಲಿಕೆ ವ್ಯಾಪ್ತಿಯಲ್ಲಿ 2022-23ನೇ ಸಾಲಿಗೆ ಅನ್ವಯ ಆಗುವಂತೆ ಬಿಬಿಎಂಪಿ ವಿತ್ತೀಯ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ ಕಾಯ್ದೆ-2021ರ ಕಾಯ್ದೆ ಅನ್ವಯ ಮಾಡಿಕೊಳ್ಳುವಂತೆ ಸರ್ಕಾರ ಮಾ.11ರಂದು ಆದೇಶ ಹೊರಡಿಸಿದೆ. ಹೀಗಾಗಿ, ಪಾಲಿಕೆ ವಾಸ್ತವಿಕ ಆದಾಯಕ್ಕೆ ತಕ್ಕಷ್ಟೇ ವೆಚ್ಚ ಮಾಡುವ ರೀತಿಯಲ್ಲಿ ಹೊಂದಾಣಿಕೆ ಮಾಡಿ ಬಜೆಟ್ ಮಂಡಿಸಬೇಕಾದ ಸವಾಲು ಪಾಲಿಕೆ ಅಧಿಕಾರಿಗಳ ಮೇಲಿದೆ. ಹೀಗಾಗಿ, ಕೆಲವು ಯೋಜನೆಗಳಿಗೆ ಕತ್ತರಿ ಬಿಳುವ ಸಾಧ್ಯತೆ ಇದೆ.
ಬಿಬಿಎಂಪಿ ಪ್ರಸಕ್ತ ಸಾಲಿನ ಆಯವ್ಯಯವನ್ನು ಬುಧವಾರ ಮಂಡನೆಗೆ ಆಡಳಿತಾಧಿಕಾರಿಗಳು ನಿರ್ದೇಶಿಸಿದ್ದಾರೆ. ಸಾಕಷ್ಟುಚರ್ಚೆ ಮಾಡಿ ಜನರಿಗೆ ಅನುಕೂಲವಾಗುವಂತೆ ಬಜೆಟ್ ರೂಪಿಸಲಾಗಿದೆ ಅಂತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
