12,755 ಕೋಟಿ ತಲುಪಿದ ಬಿಬಿಎಂಪಿ ಬಜೆಟ್!| ನಾಲ್ಕು ದಿನ ಚರ್ಚಿಸಿ .2000 ಕೋಟಿ ಹೆಚ್ಚಿಸಿಕೊಂಡ ಪಾಲಿಕೆ ಸದಸ್ಯರು| ಬಿ ಖಾತಾ ಎ ಖಾತಾ ಬದಲಾವಣೆ ಲೆಕ್ಕಾಚಾರದಲ್ಲಿ ಬಜೆಟ್ ಪರಿಷ್ಕರಣೆ| ಕಾಂಗ್ರೆಸ್, ಜೆಡಿಎಸ್ ಕ್ಷೇತ್ರ, ವಾರ್ಡ್‌ಗಳಿಗೆ ಮತ್ತಷ್ಟುಅನುದಾನ
ಬೆಂಗಳೂರು[ಫೆ.24]: ಬಿಬಿಎಂಪಿ ವ್ಯಾಪ್ತಿಯ ‘ಬಿ’ ಖಾತಾ ನಿವೇಶನಗಳಿಗೆ ‘ಎ’ ಖಾತಾ ನೀಡಲು ಮುಂದಾಗಿರುವ ಬಿಬಿಎಂಪಿ, ಈ ಖಾತಾ ಬದಲಾವಣೆಯಿಂದ ಬರಬಹುದೆಂದು ಅಂದಾಜಿಸಿರುವ ಆದಾಯವನ್ನು ಗಮನದಲ್ಲಿಟ್ಟುಕೊಂಡು 2019-20ನೇ ಸಾಲಿನ ಬಜೆಟ್ ಗಾತ್ರವನ್ನು .10,691 ಕೋಟಿಗಳಿಂದ ಏಕಾಏಕಿ 12,755 ಕೋಟಿಗಳಿಗೆ ಪರಿಷ್ಕರಿಸಿ ಅನುಮೋದಿಸಿದೆ.
ಇದರಿಂದ, ಫೆ.18ರಂದು ಮಂಡನೆಯಾಗಿದ್ದ ಬಿಬಿಎಂಪಿಯ ಪ್ರಸಕ್ತ ಸಾಲಿನ ಬಜೆಟ್ ಬಗ್ಗೆ ಕಳೆದ ನಾಲ್ಕು ದಿನಗಳಿಂದ ಕೌನ್ಸಿಲ್ ಸಭೆಯಲ್ಲಿ ನಡೆದ ಚರ್ಚೆ ಬಳಿಕ .2064 ಕೋಟಿ ಹೆಚ್ಚಳವಾಗಿದೆ. ಆಸ್ತಿ ತೆರಿಗೆ ಆದಾಯ ಸೇರಿದಂತೆ ಪಾಲಿಕೆಯ ಆದಾಯ ಮೂಲಗಳನ್ನು ಏಕಾಏಕಿ ಪರಿಷ್ಕರಿಸಿ ಬಜೆಟ್ ಗಾತ್ರವನ್ನು 12,755 ಕೋಟಿಗೆ ಹೆಚ್ಚಳ ಮಾಡಲಾಗಿದೆ.
ಹಲವು ಹೊಸ ಯೋಜನೆಗಳು, ಸೇರ್ಪಡೆ, ತಿದ್ದುಪಡಿ ಮೂಲಕ ಪರಿಷ್ಕರಿಸಿರುವ ಈ ಪರಿಷ್ಕೃತ ಬಜೆಟ್‌ಗೆ ಪ್ರತಿಪಕ್ಷ ಬಿಜೆಪಿ ಸದಸ್ಯರ ವಿರೋಧ ಹಾಗೂ ಪ್ರತಿಭಟನೆ ನಡುವೆಯೇ ಆಡಳಿತ ಪಕ್ಷ ಶನಿವಾರ ಕೌನ್ಸಿಲ್ ಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದು, ಸರ್ಕಾರದ ಅನುಮೋದನೆಗೆ ಕಳುಹಿಸಲು ತೀರ್ಮಾನಿಸಲಾಯಿತು.
ಪ್ರಮುಖವಾಗಿ ಪರಿಷ್ಕೃತ ಬಜೆಟ್‌ನಲ್ಲಿ 2019-20ನೇ ಸಾಲಿಗೆ ಮೊದಲು ಅಂದಾಜಿಸಿದ್ದ 3500 ಕೋಟಿ ಆಸ್ತಿ ತೆರಿಗೆ ಗುರಿಯನ್ನು 4000 ಕೋಟಗೆ ಹೆಚ್ಚಿಸಲಾಗಿದೆ. ಇದರಿಂದ ಮೊದಲಿಗಿಂತ ಇನ್ನೂ 500 ಕೋಟಿ ಹೆಚ್ಚುವರಿ ಆಸ್ತಿ ತೆರಿಗೆ ಸಂಗ್ರಹದ ನಿರೀಕ್ಷೆ ಮಾಡಿದಂತಾಗಿದೆ. ಅದೇ ರೀತಿ ಮೊದಲು ನಿರೀಕ್ಷಿಸಲಾಗಿದ್ದ ಕಟ್ಟಡ ಪರವಾನಗಿ ಶುಲ್ಕವನ್ನು 250 ಕೋಟಿಗಳಿಂದ 500 ಕೋಟಿಗೆ, ಖಾತಾ ವರ್ಗಾವಣೆ ಶುಲ್ಕವನ್ನು 100 ಕೋಟಿಯಿಂದ .200 ಕೋಟಿಗೆ, ಕಾಂಪೌಂಡಿಂಗ್ ಶುಲ್ಕವನ್ನು 200 ಕೋಟಿಯಿಂದ 300 ಕೋಟಿಗೆ, ನಿರೀಕ್ಷಿಸಲಾಗಿದ್ದ ಭದ್ರತಾ ಠೇವಣಿ ಮೊತ್ತವನ್ನು 100ರಿಂದ 200 ಕೋಟಿಗೆ, 525 ಕೋಟಿ ನಿರೀಕ್ಷಿಸಿದ್ದ ಆರೋಗ್ಯ ಕರವನ್ನು 600 ಕೋಟಿಗೆ, ಗ್ರಂಥಾಲಯ ಕರವನ್ನು 210 ಕೋಟಿಯಿಂದ 240 ಕೋಟಿಗೆ, ಭಿಕ್ಷಾಟನೆ ಕರವನ್ನು 105 ಕೋಟಿಯಿಂದ, 120 ಕೋಟಿಗೆ ಹೀಗೆ ಇನ್ನೂ ಹಲವು ಪಾಲಿಕೆ ಆದಾಯ ಮೂಲಗಳನ್ನು ಹೆಚ್ಚಿಸಿ ಪರಿಷ್ಕೃತ ಬಜೆಟ್‌ಗೆ ಒಪ್ಪಿಗೆ ಪಡೆಯಲಾಗಿದೆ.
ಹೀಗೆ ಅಂದಾಜಿಸಿರುವ ಆದಾಯವನ್ನು ಹಲವು ಹೊಸ ಕಾಮಗಾರಿಗಳ ಸೇರ್ಪಡೆ, ಮೇಯರ್, ಸದಸ್ಯರ ವೈದ್ಯಕೀಯ ವಿಚೇಚನಾ ಅನುದಾನ ಹೆಚ್ಚಳ, ವಾರ್ಡ್‌ವಾರು ವಿಶೇಷ ಅಭಿವೃದ್ಧಿ ಕಾಮಗಾರಿಗಳು, ಶಾಲಾ ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ, ಜಯನಗರ, ರಾಜರಾಜೇಶ್ವರಿ ನಗರ ಮತ್ತು ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳಿಗೆ ಹೆಚ್ಚುವರಿ ಅನುದಾನ ಹಂಚಿಕೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ.
ಪ್ರಮುಖವಾಗಿ ಮೊದಲು 15 ಕೋಟಿ ಮೀಸಲಿಟ್ಟಿದ್ದ ಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಮತ್ತೆ 10 ಕೋಟಿ ಹೆಚ್ಚುವರಿ ಅನುದಾನ ನೀಡಲಾಗಿದೆ. ಇನ್ನು ಬಿಟಿಎಂ ಬಡಾವಣೆ ಕ್ಷೇತ್ರಕ್ಕೆ ಮೊದಲು ನೀಡಲಾಗಿದ್ದ 10 ಕೋಟಿ ಜೊತೆಗೆ ಈಗ ಇನ್ನೂ .15 ಕೋಟಿ ನೀಡಲಾಗಿದೆ. ಮೇಯರ್ ಅವರು ಪ್ರತಿನಿಧಿಸುವ ಜಯನಗರ ವಾರ್ಡ್‌ನ ಮಾಧವನ್ ಪಾರ್ಕ್ ಮತ್ತು ಇತರೆ ಉದ್ಯಾನಗಳ ಅಭಿವೃದ್ಧಿಗೆ .5 ಕೋಟಿ, ಕೃಷ್ಣರಾವ್ ಉದ್ಯಾನವನ ಸುಧಾರಣಾ ಕಾರ್ಯಗಳಿಗೆ 5 ಕೋಟಿ, ಜಯನಗರ ವಾಣಿಜ್ಯ ಸಂಕೀರ್ಣ ದುರಸ್ತಿಗೆ 10 ಕೋಟಿ, ಮೇಯರ್ ವಿವೇಚನೆಯ ವೈದ್ಯಕೀಯ ಅನುದಾನದ ಮೊತ್ತವನ್ನು 4 ಕೋಟಿಯಿಂದ 10 ಕೋಟಿಗೆ ಹೆಚ್ಚಿಸಲಾಗಿದ್ದು, ಸದಸ್ಯರ ವಿವೇಚನೆಯ ವೈದ್ಯಕೀಯ ವಿವೇಚನಾ ಮೊತ್ತವನ್ನು ತಲಾ 6 ಲಕ್ಷಕ್ಕೆ ಹೆಚ್ಚಿಸಿದ್ದು, ಇದಕ್ಕಾಗಿ ಮೊದಲು ನೀಡಿದ್ದ ಒಟ್ಟಾರೆ 59 ಕೋಟಿಗಳ ಬಜೆಟ್ ಮೊತ್ತವನ್ನು 118 ಕೋಟಿಗೆ ಪರಿಷ್ಕರಿಸಲಾಗಿದೆ.
ಉಳಿದಂತೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಮಾಧ್ಯಮ ಕೇಂದ್ರ ಸ್ಥಾಪನೆಗೆ ಮೀಸಲಿಟ್ಟಿದ್ದ 1 ಕೋಟಯನ್ನು 3 ಕೋಟಿಗೆ, ಪತ್ರಕರ್ತರು, ಮಾಧ್ಯಮದವರ ವೈದ್ಯಕೀಯ ವೆಚ್ಚಕ್ಕಾಗಿ ಮೀಸಲಿಟ್ಟಿರುವ ಅನುದಾನವನ್ನು 50 ಲಕ್ಷದಿಂದ 1 ಕೋಟಿಗೆ, ಕೆಲ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳ ವಿಶೇಷ ಕಾಮಗಾರಿಗಳಿಗೆ ತಲಾ .1 ಕೋಟಿ ಇದ್ದ ಅನುದಾನವನ್ನು ತಲಾ 7 ಕೋಟಿಗೆ ಹೆಚ್ಚಿಸಲಾಗಿದೆ. ಕೆಲ ಹೊಸ ವಾರ್ಡುಗಳನ್ನು ಸೇರಿಸಿ 46 ಕೋಟಿ ಇದ್ದ ಮೀಸಲು ಹಣವನ್ನು 525 ಕೋಟಗೆ ಪರಿಷ್ಕರಿಸಲಾಗಿದೆ.
ಇನ್ನು, ಬಜೆಟ್ ಮಂಡಿಸಿದ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಗೋಪಾಲಯ್ಯ ಅವರ ವೃಷಭಾವತಿನಗರ ವಾರ್ಡ್‌ಗೂ ಸಾಕಷ್ಟುಹೆಚ್ಚುವರಿ ಅನುದಾನ ಪರಿಷ್ಕೃತ ಬಜೆಟ್‌ನಲ್ಲಿ ದೊರೆತಿದೆ. ಕಾಂಗ್ರೆಸ್, ಜೆಡಿಎಸ್ ಶಾಸಕರ ವಿಧಾನಸಭಾ ಕ್ಷೇತ್ರಗಳಿಗೆ ಮತ್ತಷ್ಟುಅನುದಾನ ದೊರೆತಿದೆ. ದಾಸರಹಳ್ಳಿ ಕ್ಷೇತ್ರಕ್ಕೆ 20 ಕೋಟಿ ಬದಲು 70 ಕೋಟಿ, ಹೆಬ್ಬಾಳ ಕ್ಷೇತ್ರಕ್ಕೆ .20ಕ್ಕೆ ಬದಲಾಗಿ .30 ಕೋಟಿ, ಕೆಆರ್.ಪುರ ಕ್ಷೇತ್ರಕ್ಕೆ 50 ಕೋಟಿ, ಜಯನಗರ, ಬಿಟಿಎಂ ಕ್ಷೇತ್ರಗಳಿಗೆ ತಲಾ 40 ಕೋಟಿ, ಚಾಮರಾನಗರ ಪೇಟೆ 25 ಕೋಟಿ ಅನುದಾನ ಮೀಸಲಿಡಲಾಗಿದೆ. ಅದೇ ರೀತಿ ವಿಜಯನಗರ, ಪುಲಿಕೇಶಿನಗರ, ಶಾಂತಿನಗರ, ಶಿವಾಜಿನಗರ, ಬ್ಯಾಟರಾಯನಪುರ, ಸರ್ವಜ್ಞನಗರ ಕ್ಷೇತ್ರಗಳಿಗೆ ತಲಾ 20 ಕೋಟಿ ಒದಗಿಸಲಾಗಿದೆ. ಗಾಂಧಿನಗರ, ಯಶವಂತಪುರಕ್ಕೆ ತಲಾ 30 ಕೋಟಿ ನೀಡಲಾಗಿದೆ. ಬಿಜೆಪಿ ಶಾಸಕರಿರುವ ಪದ್ಮನಾಭನಗರ, ರಾಜಾಜಿನಗರ, ಮಲ್ಲೇಶ್ವರ, ಸಿ.ವಿ.ರಾಮನ್ ನಗರ, ಬಸವನಗುಡಿ, ಚಿಕ್ಕಪೇಟೆ, ಬೆಂಗಳೂರು ದಕ್ಷಿಣ ಕ್ಷೇತ್ರಗಳಿಗೆ ತಲಾ 5 ಕೋಟಿ ಬದಲು 10 ಕೋಟಿ ನೀಡಲಾಗಿದೆ. ಮಹಾಲಕ್ಷ್ಮಿಲೇಔಟ್ ಕ್ಷೇತ್ರಕ್ಕೆ ಇನ್ನೂ 20 ಕೋಟಿ ಹೆಚ್ಚುವರಿ ಅನುದಾನ ದೊರೆತಿದೆ.
++++
ಬಿಬಿಎಂಪಿ ವ್ಯಾಪ್ತಿಯ ಬಿ ಖಾತಾ ನಿವೇಶನಗಳಿಗೆ ಅಭಿವೃದ್ಧಿ ಶುಲ್ಕ ಪಡೆದು ಎ ಖಾತಾ ನೀಡಲು ಅಗತ್ಯ ಕ್ರಮ ಕೈಗೊಳ್ಳುತ್ತಿರುವುದಾಗಿ ಈಗಾಗಲೇ ಪಾಲಿಕೆ ಆಯುಕ್ತರು ಸಭೆಗೆ ತಿಳಿಸಿದ್ದಾರೆ. ಈ ಖಾತಾ ಬದಲಾವಣೆ ಪ್ರಕ್ರಿಯೆ ಜಾರಿಯಾದರೆ ಪಾಲಿಕೆಗೆ ಈ ವರ್ಷ ಸುಮಾರು ಎರಡರಿಂದ ಮೂರು ಸಾವಿರ ಕೋಟಿ ರು.ನಷ್ಟುಹೆಚ್ಚುವರಿ ಆದಾಯ ಬರುವ ನಿರೀಕ್ಷೆ ಇದೆ. ಜೊತೆಗೆ ಹಣ ಉಳಿಸಿ ಠೇವಣಿ ಇಡಬಹುದೆಂಬ ನಿರೀಕ್ಷೆಯೂ ಇದೆ. ಇದನ್ನು ದೃಷ್ಟಿಯಲ್ಲಿಟ್ಟುಕೊಂಡು ಸುಮಾರು .12,750 ಕೋಟಿಗೆ ಹೆಚ್ಚಿಸಿ ಪರಿಷ್ಕರಿಸಿ ಒಪ್ಪಿಗೆ ಪಡೆಯಲಾಗಿದೆ.
-ಗಂಗಾಂಬಿಕೆ, ಬಿಬಿಎಂಪಿ ಮೇಯರ್.
----
ಬಿಬಿಎಂಪಿ ಬಜೆಟ್ ವಾಸ್ತವವಾಗಿರಬೇಕು ಎಂದು ಸರ್ಕಾರ ಈ ಹಿಂದೆಯೇ ಪತ್ರ ಬರೆದಿತ್ತು. ಕಳೆದ ಹತ್ತು ವರ್ಷಗಳ ಪಾಲಿಕೆ ತೆರಿಗೆಯನ್ನು ಗಮನಿಸಿದಾಗ ಮುಂದಿನ ವರ್ಷ .3500 ಕೋಟಿ ತೆರಿಗೆ ಸಂಗ್ರಹ ಸಾಧ್ಯವಾಗುವುದಿಲ್ಲ. ಕೌನ್ಸಿಲ್ ಸಭೆಯಲ್ಲಿ ಸದಸ್ಯರಿಂದ ಒಪ್ಪಿಗೆಯಾಗಿರುವ ಪರಿಷ್ಕೃತ ಬಜೆಟ್‌ಗೆ ನಮ್ಮ ಅಭಿಪ್ರಾಯವನ್ನೂ ಸೇರಿಸಿ ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರ ಎಷ್ಟುಮೊತ್ತದ ಬಜೆಟ್‌ಗೆ ಅನುಮೋದನೆ ನೀಡಬೇಕೆಂದು ತೀರ್ಮಾನಿಸುತ್ತದೆ.
-ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಯುಕ್ತರು.
----
ಇದು ಸಂಪೂರ್ಣ ಬೋಗಸ್ ಹಾಗೂ ಬೊಗಳೆ ಬಜೆಟ್ ಆಗಿದೆ. ಮೊದಲು ಮಂಡಿಸಿದ್ದ ಬಜೆಟ್ ಅವಾಸ್ತವಿಕವಾಗಿತ್ತು, ಪರಿಷ್ಕೃತ ಬಜೆಟ್ ಇನ್ನೂ ಹೆಚ್ಚು ಅವಾಸ್ತವಿಕವಾಗಿದೆ. ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರವೇ ಅನುಮೋದನೆ ನೀಡುವುದಿಲ್ಲ.
-ಪದ್ಮನಾಭರೆಡ್ಡಿ, ಪ್ರತಿಪಕ್ಷದ ನಾಯಕ.
