* ಬಿಬಿಎಂಪಿ ಬಜೆಟ್ ಬಗ್ಗೆ ಆರ್ಥಿಕ ತಜ್ಞರಿಂದ ತೀವ್ರ ಟೀಕೆ* ಆಯವ್ಯಯ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಕಷ್ಟ ಎಂಬ ಅಭಿಪ್ರಾಯ* ಸರ್ಕಾರದ ಅನುದಾನವೇ ಪಾಲಿಕೆಗೆ ಊರುಗೋಲು
ಬೆಂಗಳೂರು(ಏ.02): ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಪಾಲಿಕೆ ವ್ಯಾಪ್ತಿಯ ಆರು ಲಕ್ಷ ‘ಬಿ’ ಖಾತಾ ಆಸ್ತಿಗಳನ್ನು ‘ಎ’ ಖಾತಾ ಆಗಿ ಬದಲಾವಣೆ ಮಾಡುವ ಬಗ್ಗೆ ಪ್ರಸ್ತಾಪಿಸುತ್ತಿದಂತೆ ಬಿಬಿಎಂಪಿ ಆಯವ್ಯಯದಲ್ಲಿ(BBMP Budget) ಬರೋಬ್ಬರಿ 1 ಸಾವಿರ ಕೋಟಿ ಆದಾಯ ನಿರೀಕ್ಷಿಸಿ ಬಿಬಿಎಂಪಿ ಬಜೆಟ್ ಗಾತ್ರವನ್ನು 10 ಸಾವಿರ ಕೋಟಿಗೆ ಹಿಗ್ಗಿಸಲಾಗಿದೆ.
ಬಿ ಖಾತಾ ಎ ಖಾತಾವಾಗಿ ಬದಲಾವಣೆ ಮಾಡುವ ಬಗ್ಗೆ ಕಳೆದ ಒಂದು ದಶಕದಿಂದ ಪ್ರಯತ್ನಗಳು ನಡೆಯುತ್ತಿವೆ. ಕಾನೂನುಗಳಲ್ಲಿನ ಅಡ್ಡಿ ಹಿನ್ನೆಲೆಯಲ್ಲಿ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಿದ್ದರೂ ರಾಜ್ಯ ಬಜೆಟ್‌ನಲ್ಲಿ(Karnataka Budget) ಕರ್ನಾಟಕ(Karnataka) ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ಹಾಗೂ ಕರ್ನಾಟಕ ಭೂ ಕಂದಾಯ ಅಧಿನಿಯಮಗಳಡಿ ಪರಿಶೀಲಿಸುವುದಾಗಿ ಹೇಳಿರುವ ಭರವಸೆಯನ್ನು ನೆಪವಾಗಿಟ್ಟುಕೊಂಡು ಬಜೆಟ್ ಗಾತ್ರವನ್ನು ಹೆಚ್ಚಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ದಾಖಲೆಯ ತೆರಿಗೆ ಸಂಗ್ರಹಿಸಿದರೂ ನಿಗದಿತ ಗುರಿ ಮುಟ್ಟದ ಬಿಬಿಎಂಪಿ..
ಪಾಲಿಕೆ ಸ್ವಂತ ಮೂಲಗಳಿಂದ ನಿರೀಕ್ಷಿಸಿರುವ ಆದಾಯದಲ್ಲಿ ಸುಮಾರು ಶೇ.20ರಷ್ಟು ಆದಾಯ ಖಾತಾ ಬದಲಾವಣೆಯಿಂದಲೇ ಬರುವುದಾಗಿ ಬಜೆಟ್‌ನಲ್ಲಿ ನಿರೀಕ್ಷಿಸಲಾಗಿದೆ. ಈ ಆದಾಯದ ನಿರೀಕ್ಷೆಯಲ್ಲಿ ಸಾರ್ವಜನಿಕರ ಕಾಮಗಾರಿಗಳಿಗೆ ಭಾರೀ ಮೊತ್ತದ ಹಣವನ್ನು ವೆಚ್ಚ ಮಾಡಲು ಪ್ರಸ್ತಾಪಿಸಲಾಗಿದೆ. ಈ ಬಗ್ಗೆ ತಜ್ಞರಿಂದ ಟೀಕೆಗಳು ವ್ಯಕ್ತವಾಗಿದ್ದು, ಪಾಲಿಕೆ ಪ್ರತಿವರ್ಷದಂತೆ ಗಾಳಿಗೋಪುರ ನಿರ್ಮಿಸಿದೆ. ಆಯವ್ಯಯ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನ ಮಾಡಲು ಕಷ್ಟ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಆಸ್ತಿ ತೆರಿಗೆ ವಿವಿಧ ಕರಗಳಿಂದ 3,680 ಕೋಟಿ, ತೆರಿಗೇತರ ಮೂಲದಿಂದ .23.23 ಕೋಟಿ, ಆಸಾಧಾರಣಾ ಆದಾಯದ ಮೂಲದಿಂದ 489.30 ಕೋಟಿ ನಿರೀಕ್ಷಿಸಿದೆ.
ಸರ್ಕಾರದ ಅನುದಾನವೇ ಪಾಲಿಕೆಗೆ ಊರುಗೋಲು
ಬಿಬಿಎಂಪಿ 2022-23ನೇ ಸಾಲಿನಲ್ಲಿ ಒಟ್ಟು 10,480 ಕೋಟಿ ವೆಚ್ಚದ ಬಜೆಟ್ ಮಂಡಿಸಿದೆ. ಆದರೆ, ಬಿಬಿಎಂಪಿಗೆ ತೆರಿಗೆ, ಕರ ಹಾಗೂ ತೆರಿಗೇತರ ಆದಾಯ, ಅಸಾಧಾರಣ ಆದಾಯ (ಗುತ್ತಿಗೆದಾರರ ಇಎಂಡಿ, ಭದ್ರತಾ ಠೇವಣಿ) ಸೇರಿದಂತೆ ಇತರೆ ಮೂಲದಿಂದ 6,468 ಕೋಟಿ ಆದಾಯದ ನಿರೀಕ್ಷೆ ಇದೆ. ಉಳಿದಂತೆ .4,012 ಕೋಟಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನವನ್ನು ನಂಬಿಕೊಂಡಿದೆ. ರಾಜ್ಯ ಸರ್ಕಾರ(Government of Karnataka) 2022-23ನೇ ಸಾಲಿನಲ್ಲಿ ವಿಶೇಷ ಅನುದಾನ(Special Grant) ಸೇರಿದಂತೆ ಒಟ್ಟು .3,576 ಕೋಟಿ ಹಾಗೂ ಕೇಂದ್ರ ಸರ್ಕಾರ(Central Government) 436 ಕೋಟಿ ಅನುದಾನ ನೀಡುವುದಾಗಿ ಹೇಳಿದೆ.
ಸಾರ್ವಜನಿಕ ಕಾಮಗಾರಿಗೆ 6.91 ಕೋಟಿ
ವಾರ್ಡ್ ಕಾಮಗಾರಿಗಳಿಗೆ ಒಟ್ಟು .924 ಕೋಟಿ ಮೀಸಲಿಡಲಾಗಿದೆ. ಹಳೇ ವಾರ್ಡುಗಳಿಗೆ ತಲಾ .4 ಕೋಟಿ, ಹೊಸ ವಾರ್ಡುಗಳಿಗೆ ತಲಾ .6 ಕೋಟಿ ಮೀಸಲಿಡಲಾಗಿದೆ. 2021-22ನೇ ಸಾಲಿನಲ್ಲಿ ಕೇವಲ .102 ಕೋಟಿ ಮೀಸಲಿಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಭಾರೀ ಮೊತ್ತದ ಅನುದಾನವನ್ನು ಮೀಸಲಿಡಲಾಗಿದೆ. ಇನ್ನು ನಗರದ ಆರ್ಟಿರಿಯಲ್ ಮತ್ತು ಸಬ್‌ಆರ್ಟಿರಿಯಲ್ ರಸ್ತೆಗಳ ವಾರ್ಷಿಕ ನಿರ್ವಹಣೆಗೆ .60 ಕೋಟಿ ಮೀಸಲಿಡಲಾಗಿದೆ. ಪಾದಚಾರಿ ಮಾರ್ಗ, ಮೇಲ್ಸೇತುವೆ, ಚರಂಡಿ ದುರಸ್ತಿ ಮತ್ತು ನಿರ್ವಹಣೆಗೆ .20 ಕೋಟಿ ಮೀಸಲಿಡಲಾಗಿದೆ.
Bengaluru: ರಾತ್ರೋ ರಾತ್ರಿ ಬಿಬಿಎಂಪಿ ಬಜೆಟ್ ಮಂಡನೆ..!
ರಸ್ತೆ ಗುಂಡಿ ಭರ್ತಿಗಿಲ್ಲ ಹಣ
ನಗರದಲ್ಲಿ ರಸ್ತೆ ಗುಂಡಿ ಅವಾಂತರ ಪಾಲಿಕೆ ಅಧಿಕಾರಿಗಳ ಗಮನಕ್ಕಿದ್ದರೂ ಸಹ ಆಯವ್ಯಯದಲ್ಲಿ ಹೊಸದಾಗಿ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಹಳೆ ಬಿಲ್‌ಗಳ ಪಾವತಿಗೆ .61.36 ಲಕ್ಷ ಮೀಸಲಿಡಲಾಗಿದೆ. ಇನ್ನು ಕತ್ತರಿಸಿದ ರಸ್ತೆಗಳನ್ನು ಮರು ಭರ್ತಿಗೆ ಈ ಬಾರಿ ಯಾವುದೇ ಅನುದಾನವನ್ನು ಮೀಸಲಿಟ್ಟಿಲ್ಲ.
ರಾಜಕಾಲುವೆ:
ಬೃಹತ್ ಮಳೆ ನೀರುಗಾಲುವೆಗಳ ವಾರ್ಷಿಕ ನಿರ್ವಹಣೆಗೆ .40 ಕೋಟಿ, ತುರ್ತು ಮೀಸಲು ಕಾಮಗಾರಿಗೆ .100 ಕೋಟಿ, ಹೂಳು ತೆಗೆಯುವುದಕ್ಕೆ .50 ಲಕ್ಷ ಮೀಸಲಿರಿಸಲಾಗಿದೆ. ಬೀದಿ ದೀಪಗಳ ನಿರ್ವಹಣಗೆ ಒಟ್ಟು .82.11 ಕೋಟಿ ಅನುದಾನ ನೀಡಲಾಗಿದೆ. ಈ ಪೈಕಿ ಹೊಸ ಕಾಮಗಾರಿ .73 ಕೋಟಿ, ಪ್ರಗತಿಯಲ್ಲಿರುವ ಕಾಮಗಾರಿ .4.63 ಕೋಟಿ ಹಾಗೂ ಬಾಕಿ ಬಿಲ್ ಪಾವತಿಗೆ .4.48 ಕೋಟಿ ಮೀಸಲಿಡಲಾಗಿದೆ.
ಕಸ ನಿರ್ವಹಣೆಗೆ 1,469 ಕೋಟಿ
ಘನತ್ಯಾಜ್ಯ ಸ್ವಚ್ಛತೆ ಮತ್ತು ಸಾಗಣೆಗೆ .600 ಕೋಟಿ, ಎನ್‌ಜಿಟಿ ಆದೇಶದಂತೆ ವೈಜ್ಞಾನಿಕ ಭೂಭರ್ತಿ ಕೇಂದ್ರಗಳ ವಿನ್ಯಾಸ, ಸ್ಥಾಪನೆ ಮತ್ತು ಕಾರ್ಯಾಚರಣೆಗೆ .100 ಕೋಟಿ, ಭೂ ಭರ್ತಿ ಕೇಂದ್ರಗಳ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು .125 ಕೋಟಿ ನೀಡಲಾಗಿದೆ. ಮಿಟ್ಟಿಗಾನಹಳ್ಳಿಯ ಭೂಭರ್ತಿ ಪ್ರದೇಶದ ಅಭಿವೃದ್ಧಿಗೆ 75 ಕೋಟಿ ರು., ಕನ್ನೂರಿನ ವೈಜ್ಞಾನಿಕ ಭೂಭರ್ತಿ ಕೇಂದ್ರದ ಸುತ್ತಮುತ್ತಲಿನ ಗ್ರಾಮಗಳ ಅಭಿವೃದ್ಧಿಗೆ 50 ಕೋಟಿ ರು. ನೀಡಲಾಗಿದೆ. ಉಳಿದಂತೆ ಬೆಳ್ಳಳ್ಳಿ ಕ್ವಾರಿ, ಪ್ರಾಥಮಿಕ ಕಸ ಸಂಗ್ರಹ ಕೇಂದ್ರಗಳ ಸ್ಥಾಪನೆಗೆ, ಮಂಡೂರು, ಸುಬ್ಬರಾಯನಪಾಳ್ಯ, ಲಿಂಗದೀರನಹಳ್ಳಿ, ಕನ್ನಹಳ್ಳಿ, ದೊಡ್ಡ ಬಿದರಕಲ್ಲು ಘಟಕದ ಸುತ್ತಮುತ್ತಲಿನಲ್ಲಿ ಈ ಹಿಂದೆ ಕೈಗೊಂಡ ಅಭಿವೃದ್ಧಿ ಕಾಮಗಾರಿಯ ಬಾಕಿ ಬಿಲ್ ಪಾವತಿಗೆ 37.31 ಕೋಟಿ ರು. ಮೀಸಲಿಡಲಾಗಿದೆ.
ಕಸ ವಿಲೇವಾರಿಗೆ 3600 ವಾಹನ
ನಗರದ ಕಸ ವಿಲೇವಾರಿಗೆ ಬಿಬಿಎಂಪಿಯಿಂದ 3,600 ಹೊಸ 4 ಚಕ್ರದ ಸಿಎನ್‌ಜಿ ಅಥವಾ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿವರಿಯಾಗಿ ಸೇರ್ಪಡೆಗೊಳಿಸುವುದು. ಎರಡು ಹೊಸ ಭೂಭರ್ತಿ ಕೇಂದ್ರ ಸ್ಥಾಪನೆ. ಬಿಡದಿಯಲ್ಲಿ ವೇಸ್ಟ್ ಟು ಎನರ್ಜಿ ಘಟಕವನ್ನು 6 ತಿಂಗಳಲ್ಲಿ ಕಾರ್ಯಾರಂಭಗೊಳಿಸುವುದು. ಪೌರಕಾರ್ಮಿಕರಿಗೆ 225 ಸುವಿಧಾ ಕ್ಯಾಬಿನ್‌ಗಳನ್ನುಸ್ಥಾಪನೆಗೆ ಯೋಜಿಸಲಾಗಿದೆ.
ಕಲ್ಯಾಣ ಕಾರ್ಯಕ್ರಮಕ್ಕೆ 374.34 ಕೋಟಿ
ಲ್ಯಾಪ್‌ಟಾಪ್ ವಿತರಣೆಗೆ(Laptop Distribution) 40 ಕೋಟಿ, ಒಂಟಿ ಮನೆಗಳಿಗೆ 138 ಕೋಟಿ ನೀಡಲಾಗಿದೆ (ಇದರಲ್ಲಿ ಪೌರಕಾರ್ಮಿಕರ ಒಂಟಿಮನೆಗಳಿಗೆ 28 ಕೋಟಿ ಹಾಗೂ ಎಸ್ಸಿ, ಎಸ್ಟಿ ಫಲಾನುಭವಿಗಳಿಗೆ 55 ಕೋಟಿ ಮೀಸಲಿಡಲಾಗಿದೆ), ಅಂಗವಿಕಲರ ಕಲ್ಯಾಣ ಕಾರ್ಯಕ್ರಮಗಳಿಗೆ 31.90 ಕೋಟಿ ಲೈಂಗಿಕ ಅಲ್ಪ ಸಂಖ್ಯಾತರ ಕಲ್ಯಾಣ ಕಾರ್ಯಕ್ರಮಗಳಿಗೆ 6 ಕೋಟಿ ಮೀಸಲಿಡಲಾಗಿದೆ. ಉಳಿದಂತೆ ನಗರ ಅರಣೀಕರಣಕ್ಕೆ 32 ಕೋಟಿ, ಕೆರೆಗಳ ನಿರ್ವಹಣೆಗೆ 25 ಕೋಟಿ, ಬಿಬಿಎಂಪಿ ಶಾಲಾ ಕಾಲೇಜು ಕಟ್ಟಡಗಳ ದುರಸ್ತಿ ಮತ್ತು ನಿರ್ವಹಣೆಗೆ .113 ಕೋಟಿ, ತೋಟಗಾರಿಕೆ ಇಲಾಖೆಗೆ .174.38 ಕೋಟಿ ನೀಡಲಾಗಿದೆ. ಇದರಲ್ಲಿ ಉದ್ಯಾನವನಗಳ ನಿರ್ವಹಣೆಗೆ 85 ಕೋಟಿ ಮೀಸಲಿಡಲಾಗಿದೆ.
BBMP: ಹೆಚ್ಚು ತ್ಯಾಜ್ಯ ಇದ್ದರೆ ನೀವೇ ವಿಲೇವಾರಿ ಮಾಡಿ..!
ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ 12 ಸಾವಿರ ಹೊಲಿಗೆ ಯಂತ್ರಗಳನ್ನು ವಿತರಣೆ, 54 ಸಾವಿರ ಹೊಸ ಬೀದಿ ದೀಪ ಅಳವಡಿಕೆ, 44 ಹೊಸ ರಾತ್ರಿ ತಂಗುದಾಣ ಸ್ಥಾಪನೆ, ಪ್ರತಿ ಆಸ್ತಿಗೆ 43 ಅಂಶಗಳನ್ನೊಳಗೊಂಡ ‘ಇ-ಆಸ್ತಿ’ P್ಟಟpಛ್ಟಿಠಿy ಈaಠಿa ಆasಛಿ ತಂತ್ರಾಂಶ ಜಾರಿ. ಬೆಸ್ಕಾಂ, ಜಲಮಂಡಳಿ ಮತ್ತು ವ್ಯಾಪಾರ ಪರವಾನಗಿಗಳ ದತ್ತಾಂಶಗಳನ್ನು ಸಂಯೋಜಿಸುವ ಮೂಲಕ ಇ-ಆಸ್ತಿ ಡಾಟಾ ಬೇಸನ್ನು ರಚಿಸಲಾಗುತ್ತದೆ. 37 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು. ಬಿಬಿಎಂಪಿ ಅನುದಾನದ ಮೂಲಕ 243 ನಮ್ಮ ಕ್ಲಿನಿಕನ್ನು ಬೆಂಬಲಿಸಲಾಗುವುದು. 34 ಹೊಸ ಉದ್ಯಾನವನ ಅಭಿವೃದ್ಧಿ. ಎರಡು ಹೊಸ ವಿದ್ಯುತ್ ಚಿತಾಗಾರಗಳನ್ನು ನಿರ್ಮಾಣ.
ಇಂದಿರಾ ಕ್ಯಾಂಟೀನ್‌ಗೆ 60 ಕೋಟಿ
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ(Indira Caneteen) ನಿರ್ವಹಣೆಗೆ .60 ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ .70 ಕೋಟಿ ಮೀಸಲಿಡಲಾಗಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ 10 ಕೋಟಿ ಕಡಿಮೆ ಮೀಸಲಿಡಲಾಗಿದೆ. ಇಂದಿರಾ ಕ್ಯಾಂಟೀನ್‌ಗೆ ಆಹಾರ ಪೂರೈಕೆಯನ್ನು ಇಸ್ಕಾನ್‌ಗೆ ಹಸ್ತಾಂತರಿಸುವುದಾಗಿ ಘೋಷಿಸಿದೆ.
ವಿವೇಚನಾ ಅನುದಾನ ಅಭಿವೃದ್ಧಿ ಕಾಮಗಾರಿಗೆ
ಬೆಂಗಳೂರು ನಗರಾಭಿವೃದ್ಧಿ ಉಸ್ತುವಾರಿ ಜವಾಬ್ದಾರಿ ಹೊಂದಿರುವ ಮುಖ್ಯ ಮಂತ್ರಿಗಳ ವಿವೇಚನೆಯಡಿ ಕೈಗೊಳ್ಳುವ ಕಾಮಗಾರಿಗೆ ಪ್ರಸಕ್ತ ಸಾಲಿನಲ್ಲಿ .265.12 ಕೋಟಿ ಮೀಸಲಿಡಲಾಗಿದೆ. ಮೇಯರ್‌ಗೆ .83.50 ಕೋಟಿ, ಉಪ ಮೇಯರ್‌ಗೆ 42.11 ಕೋಟಿ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ವಿವೇಚನೆಗೆ .40.98 ಕೋಟಿ ಮೀಸಲಿಡಲಾಗಿದೆ. ಪ್ರಸ್ತುತ ಪಾಲಿಕೆಯಲ್ಲಿ ಮೇಯರ್, ಉಪ ಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧಿಕಾರದಲ್ಲಿ ಇಲ್ಲದಿರುವುದರಿಂದ ಈ ಅನುದಾನವನ್ನು ಆಡಳಿತಾಧಿಕಾರಿಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಬಳಕೆ ಮಾಡಲಿದ್ದಾರೆ. ಇನ್ನು ಮುಖ್ಯ ಆಯುಕ್ತರಿಗೆ ಪ್ರಸಕ್ತ ಸಾಲಿನಲ್ಲಿ .63.33 ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ .11.90 ಕೋಟಿ ಮಾತ್ರ ಮೀಸಲಿಡಲಾಗಿದೆ. ಕಳೆದ ವರ್ಷಕ್ಕಿಂತ .53 ಕೋಟಿ ಹೆಚ್ಚುವರಿ ಅನುದಾನವನ್ನು ಮೀಸಲಿಡಲಾಗಿದೆ.
ವಿವೇಚನಾ ಅನುದಾನದ ವಿವರ (ಕೋಟಿ ರು)
ವಿವೇಚನೆ 2022-23 2021-22
ಬೆಂಗಳೂರು ನಗರಾಭಿವೃದ್ಧಿ ಸಚಿವರು (ಸಿಎಂ) 265.12 134.20
ಆಡಳಿತಾಧಿಕಾರಿ ವಿವೇಚನಾ ಅನುದಾನ 166.59 196.4
ಮುಖ್ಯ ಆಯುಕ್ತರು 63.33 11.90
ಇಲಾಖಾವಾರು ವೆಚ್ಚ ಮತ್ತು ಆದಾಯ (ಕೋಟಿ ರು)
ಇಲಾಖೆ ವೆಚ್ಚ ಆದಾಯ
ಕೌನ್ಸಿಲ್ 12.46 0.10
ಸಾಮಾನ್ಯ ಆಡಳಿತ 27.92 271.50
ಕಂದಾಯ 454.08 5507.13
ನಗರ ಯೋಜನೆ 22.07 465.56
ಸಾರ್ವಜನಿಕ ಕಾಮಗಾರಿ 6,911.49 4,060.89
ಘನತ್ಯಾಜ್ಯ ನಿರ್ವಹಣೆ 1469.44 128.40
ಸಾರ್ವಜನಿಕ ಆರೋಗ್ಯ(ಸಾಮಾನ್ಯ) 210.63 44.02
ಸಾರ್ವಜನಿಕ ಆರೋಗ್ಯ (ಕ್ಲಿನಿಕಲ್)75.38 09.05
ತೋಟಗಾರಿಕೆ 174.38 0.65
ನಗರ ಅರಣ್ಯ35.30 0.15
ಸಾರ್ವಜನಿಕ ಶಿಕ್ಷಣ 113.41 00.12
ಸಮಾಜ ಕಲ್ಯಾಣ 374.34 00.024
ಒಟ್ಟು 10,480.93 1 10,484.28
ಮಂಡಿಸಿದ ದಿನವೇ ಲೇಖಾನುದಾನಕ್ಕೆ ಒಪ್ಪಿಗೆ
ವಿಕಾಸಸೌಧದಲ್ಲಿ ಗುರುವಾರ ರಾತ್ರಿ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅಧ್ಯಕ್ಷತೆಯಲ್ಲಿ ಪಾಲಿಕೆ ಹಣಕಾಸು ವಿಭಾಗದ ವಿಶೇಷ ಆಯುಕ್ತೆ ತುಳಸಿ ಮದಿನ್ನೇನಿ ಬಿಬಿಎಂಪಿಯ 2022-23ನೇ ಸಾಲಿನ ಆಯವ್ಯಯ ಮಂಡಿಸಿದ್ದಾರೆ. ಇದಾದ ಮರು ಕ್ಷಣವೇ ಬಜೆಟ್ ಗಾತ್ರದ ಶೇ.30ರಷ್ಟುಅನುದಾನವನ್ನು ಪಾಲಿಕೆ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳುವ ಲೇಖಾನುದಾನಕ್ಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ.
ಪಾಲಿಕೆ ವಿವಿಧ ಮೂಲದ ಆದಾಯದ ವಿವರ :
ಪಾಲಿಕೆ ಸ್ವಂತ ಸಂಪನ್ಮೂಲಗಳು ಅಯವ್ಯಯ ಅಂದಾಜುಗಳು(ಕೋಟಿ ರು.)
ತೆರಿಗೆ ಮತ್ತು ಕರಗಳ ಆದಾಯ: 3680.15
ತೆರಿಗೆಯೇತರ ಆದಾಯ: 2302.23
ಅಸಾಧಾರಣ ಆದಾಯ: 489.30
ಕೇಂದ್ರ ಸರ್ಕಾರದ ಅನುದಾನ- ಬಂಡವಾಳ ಕಾಮಗಾರಿ: 436.01
ರಾಜ್ಯ ಸರ್ಕಾರದ ರಾಜಸ್ವ ಅನುದಾನ 576.58
ರಾಜ್ಯ ಸರ್ಕಾರದ ಅನುದಾನ-ಬಂಡವಾಳ ಕಾಮಗಾರಿಗಳು 3000.01
ಒಟ್ಟು : 10484.28
ಪಾಲಿಕೆ ಪಾವತಿ ವಿವರ:
ಸಿಬ್ಬಂದಿ ವೆಚ್ಚ: 1234.72
ಆಡಳಿತ ವೆಚ್ಚ: 313.51
ಕಾರ್ಯಚರಣೆ ಮತ್ತು ನಿರ್ವಹಣೆ: 3148.12
ಬ್ಯಾಂಕ್ ಸಾಲದ ಮೇಲಿನ ಬಡ್ಡಿ: 12.00
ಕಾರ್ಯಕ್ರಮಗಳ ವೆಚ್ಚ: 456.83
ಬ್ಯಾಂಕ್ ಸಾಲಗಳ ಮರು ಪಾವತಿ: 110.00
ಪಾಲಿಕೆ ಅನುದಾನದ ಸಾರ್ವಜನಿಕ ಕಾಮಗಾರಿ: 1415.13
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸರ್ಕಾರದ ಅನುದಾನ ಕಾಮಗಾರಿ: 3423.13
ಹಿಂಪಾವತಿಸುವ ಠೇವಣಿ: 10.50
ಚಾಲ್ತಿ ಹೊಣೆಗಾರಿಕೆಗಳು(ಕರಗಳು ಮತ್ತು ಸರ್‌ಚಾರ್ಜಗಳು ಪಾವತಿಸಬೇಕಿರುವುದು): 355.98
ಸಾಲ ಮತ್ತು ಮುಂಗಡಗಳು 1.00
ಒಟ್ಟು ಪಾವತಿ: 10480.93
