ಮುಂಬೈ(ಡಿ.01):  ಬರೋಬ್ಬರಿ 126 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಹುರಾಷ್ಟ್ರೀಯ ಕಂಪನಿ ಬಾಟಾ ಶೂ ಭಾರತೀಯ ಮೂಲದ ಸಂದೀಪ್ ಕಟಾರಿಯಾ CEO ಆಗಿ ಆಯ್ಕೆಯಾಗಿದ್ದಾರೆ.  ಈ ಮೂಲಕ ವಿಶ್ವದ ಪ್ರಮುಖ ಕಂಪನಿಗಳ ಭಾರತೀಯ CEO ಪಟ್ಟಿ ಇದೀಗ ಬೆಳೆಯುತ್ತಿದೆ. 

ಸಿಇಒ ಸ್ಯಾಲರಿ ಎಷ್ಟಿರಬೇಕು? ಇದು ನಾರಾಯಣ ಮೂರ್ತಿ ಕೊಟ್ಟ ಲೆಕ್ಕಾಚಾರ!..

49 ವರ್ಷದ ಸಂದೀಪ್ ಕಟಾರಿಯ ಭಾರತ ಬಾಟಾ ಶೂ ಸಿಇಓ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅವರಿಗೆ ಗ್ಲೋಬಲ್ ಬಾಟಾ ಶೂ ಕಂಪನಿಯ ಸಿಇಓ ಆಗಿ ಬಡ್ತಿ ನೀಡಲಾಗಿದೆ. ಸದ್ಯ ಸಿಇಓ ಆಗಿರುವ ಅಲೆಕ್ಸಿಸ್ ನಸ್ರಾಡ್ ಸ್ಥಾನವನ್ನು ಸಂದೀಪ್ ಕಟಾರಿಯಾ ತುಂಬಲಿದ್ದಾರೆ.

ಸಂದೀಪ್ ಕಟಾರಿಯಾ ಬಾಟಾ ಶೋ ಗ್ಲೋಬಲ್ ಕಂಪನಿ ಸಿಇಓ ಆಗೋ ಮೂಲಕ ಇದೀಗ ವಿಶ್ವದಲ್ಲಿ ಭಾರತೀಯರ ಪಾರುಪತ್ಯ ಮುಂದುವರಿದಿದೆ. ಗೂಗಲ್ ಸಿಇಓ ಸ್ಥಾನದಲ್ಲಿ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲ, ಮಾಸ್ಟರ್‌ಕಾರ್ಡ್ ಕಂಪನಿಯ ಅಜಯ್ ಬಂಗಾ, ಐಬಿಎಂ ಕಂಪಿಯ ಅರವಿಂದ್ ಕೃಷ್ಣ, ರೆಕಿಟ್ ಬೆನ್ಕಿಸರ್ ಕಂಪನಿಯ ಲಕ್ಷ್ಮಣ್ ನರಸಿಂಹನ್ ಪಟ್ಟಿಗೆ ಇದೀಗ ಸಂದೀಪ್ ಕಟಾರಿಯಾ ಸೇರಿಕೊಂಡಿದ್ದಾರೆ.

ಬಾಟಾ ಶೂ ಕಂಪನಿ ಗ್ಲೋಬಲ್ ಸಿಇಐ ಆಗಿದ್ದ ಅಲೆಕ್ಸಿಸ್ ರಾಜೀನಾಮೆ ನೀಡಿದ ಬೆನ್ನಲ್ಲೇ ಸಂದೀಪ್ ಕಟಾರಿಯಾ ಅವರನ್ನು ಕಂಪನಿ ಗ್ಲೋಬಲ್ ಸಿಇಓ ಆಗಿ ತಕ್ಷಣ ನೇಮಕ ಮಾಡಲಾಗಿದೆ. ಐಐಟಿ ದೆಹಲಿಯಿಂದ ಚಿನ್ನದ ಪದಕ ಪಡೆದಿರುವ ಸಂದೀಪ್ ಕಟಾರಿಯಾ, 24 ವರ್ಷದ ವೃತ್ತಿಪರ ಅನುಭವ ಹೊಂದಿದ್ದಾರೆ. ಯುನಿಲಿವರ್, ಯುಮ್ ಬ್ರಾಂಡ್, ವೋಡಾಫೋನ್ ಇಂಡಿಯಾ ಹಾಗೂ ಯುರೋಪ್ ಕಂಪನಿಗಳು ಕಾರ್ಯನಿರ್ವಹಿಸಿದ್ದಾರೆ.

2017ರಲ್ಲಿ ಬಾಟಾ ಕಂಪನಿಗೆ ಭಾರತದ ಸಿಇಓ ಆಗಿ ನೇಮಕಗೊಂಡ ಸಂದೀಪ್ ಕಟಾರಿಯಾಗೆ ಇದೀಗ 3 ವರ್ಷಗಳಲ್ಲಿ ಗ್ಲೋಬಲ್ ಸಿಇಓ ಆಗಿ ಬಡ್ತಿ ಪಡೆದಿದ್ದಾರೆ. ಸ್ವಿಟ್ಜರ್‌ಲೆಂಡ್ ಮೂಲದ ಬಾಟಾ ಕಂಪನಿ ಅತೀ ಹೆಚ್ಚು ಗ್ರಾಹಕರನ್ನು ಹೊಂದಿರುವುದು ಭಾರತದಲ್ಲಿ. 2019-20ರ ಸಾಲಿನಲ್ಲಿ ಬಾಟಾ ಭಾರತ 3053 ಕೋಟಿ ಆದಾಯಗಳಿಸಿತ್ತು.