ನವದೆಹಲಿ(ನ.04):: ಬ್ಯಾಂಕ್‌ಗಳಲ್ಲಿನ ಉಚಿತವಾಗಿ ಮಾಡುವ ನಗದು ವ್ಯವಹಾರ ಮಿತಿ ಇಳಿಕೆ ಮತ್ತು ನಂತರದ ಪ್ರತಿ ವ್ಯವಹಾರಕ್ಕೆ ಹೆಚ್ಚಿನ ಸೇವಾ ಶುಲ್ಕ ವಿಧಿಸುವ ವಿವಾದಾತ್ಮಕ ನಿರ್ಧಾರವನ್ನು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಆಫ್‌ ಬರೋಡಾ ಕೈಬಿಟ್ಟಿದೆ. ಬ್ಯಾಂಕ್‌ನ ನಿರ್ಧಾರಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರೊಂದಿಗೆ ಕೊರೋನಾ ಸಂಕಷ್ಟಕಾಲದಲ್ಲೂ ಬ್ಯಾಂಕ್‌ನಲ್ಲಿ ನಿಗದಿ ಮೀರಿದ ವ್ಯವಹಾರಕ್ಕೆ ಭಾರೀ ಶುಲ್ಕ ಕಟ್ಟಬೇಕಾದ ಪ್ರಮೇಯದಿಂದ ಗ್ರಾಹಕರು ಪಾರಾಗುವಂತಾಗಿದೆ. ಜೊತೆಗೆ ಇತರೆ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಇದೇ ಹಾದಿಯನ್ನು ಹಿಡಿಯುವ ಸಾಧ್ಯತೆಯನ್ನು ತಕ್ಷಣಕ್ಕೆ ಮುಂದೂಡಿದಂತೆ ಆಗಿದೆ.

ಅದರ ಬೆನ್ನಲ್ಲೇ ಮಂಗಳವಾರ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ಹಣಕಾಸು ಸಚಿವಾಲಯ, ಬ್ಯಾಂಕ್‌ ಆಫ್‌ ಬರೋಡಾ ಉಚಿತ ವ್ಯವಹಾರದ ಮಿತಿಯನ್ನು 5ರಿಂದ 3ಕ್ಕೆ ಇಳಿಸಿತ್ತು. ಇದರ ಹೊರತಾಗಿ ಇತರೆ ಯಾವುದೇ ಸರ್ಕಾರಿ ಬ್ಯಾಂಕ್‌ಗಳು ಸೇವಾ ಶುಲ್ಕ ಹೆಚ್ಚು ಮಾಡಿಲ್ಲ. ಕೊರೋನಾ ಹಿನ್ನೆಲೆಯಲ್ಲಿ ಸದ್ಯ ಅಂಥ ಚಿಂತನೆಯೂ ಇಲ್ಲ ಎಂದು ಹೇಳುವ ಮೂಲಕ ಜನರ ಆಕ್ರೋಶಕ್ಕೆ ಮಣಿದಿದೆ.

ನ.1ರಿಂದ ಜಾರಿಗೆ ಬರುವಂತೆ ಬ್ಯಾಂಕ್‌ ಆಫ್‌ ಬರೋಡಾ, ಪ್ರತೀ ತಿಂಗಳ ಉಚಿತ ಠೇವಣಿ ಮತ್ತು ವಿತ್‌ಡ್ರಾವಲ್‌(ಹಣ ಹಿಂಪಡೆತ) ಮಿತಿಯನ್ನು 5ರಿಂದ 3ಕ್ಕೆ ಇಳಿಸಿತ್ತು. ಜೊತೆಗೆ ಉಚಿತ ಮಿತಿಯ ನಂತರದ ಪ್ರತಿ ಠೇವಣಿಗೆ ಮೆಟ್ರೋ ನಗರಗಳಲ್ಲಿ 50 ರು. ಮತ್ತು ಇತರೆ ನಗರಗಳಲ್ಲಿ 40 ರು. ಶುಲ್ಕ. ಹಣ ಹಿಂಪಡೆತಕ್ಕೆ ಮೆಟ್ರೋ ಸಿಟಿಗಳಲ್ಲಿ 125 ರು. ಮತ್ತು ಇತರೆ ನಗರಗಳಲ್ಲಿ 100 ರು. ಶುಲ್ಕ ವಿಧಿಸುವುದಾಗಿ ಹೇಳಿತ್ತು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ವಿಪಕ್ಷ ಕಾಂಗ್ರೆಸ್‌ ಕೂಡಾ ಇದನ್ನು ಕಟುವಾಗಿ ಟೀಕಿಸಿತ್ತು.