Saving Tips: ಮಕ್ಕಳಿಗೆ ಉಳಿತಾಯದ ಮಹತ್ವ ಹೇಳ್ತಿರೋ ಈ ಬ್ಯಾಂಕ್‌ನಲ್ಲಿದೆ ಪುಟಾಣಿಗಳ ಖಾತೆ
ಪಾಕೆಟ್ ಮನಿ ಸಿಗ್ತಿದ್ದಂತೆ ಅಥವಾ ಬೇರೆ ಯಾರೋ ಮಕ್ಕಳ ಕೈಗೆ ಹಣ ನೀಡಿದ್ರೆ ಪಾಲಕರು ಅದನ್ನು ತೆಗೆದುಕೊಂಡು ಖರ್ಚು ಮಾಡ್ತಾರೆ. ಕೆಲ ಮಕ್ಕಳ ಪಿಗ್ಗಿ ಬ್ಯಾಂಕ್ ನಲ್ಲಿ ನಾಲ್ಕೈದು ಚಿಲ್ಲರೆ ಶಬ್ಧ ಮಾಡ್ತಿರುತ್ತದೆ. ಇದೇ ಡಬ್ಬದಲ್ಲಿರುವ ಹಣವನ್ನು ಬ್ಯಾಂಕ್ ಗೆ ಹಾಕಿ ಬಡ್ಡಿ ಜೊತೆ ಉಳಿತಾಯ ಮಾಡಿದ್ರೆ ಎಷ್ಟು ಒಳ್ಳೆಯದಲ್ವಾ? ಅದನ್ನೇ ಈ ಬ್ಯಾಂಕ್ ಮಾಡ್ತಿದೆ.

ಅನೇಕ ಹಣಕಾಸು ಸಂಸ್ಥೆಗಳು, ಸಹಕಾರಿ ಸಂಘಗಳು ಗ್ರಾಮೀಣ ಜನರಿಗೆ ವಿವಿಧ ರೀತಿಯ ಸಾಲ, ಸೌಲಭ್ಯಗಳನ್ನು ನೀಡುತ್ತವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಕೃಷಿಕರಿಗೆ, ಉದ್ಯೋಗಿಗಳಿಗೆ ಇದರಿಂದ ಹಲವು ರೀತಿಯ ಪ್ರಯೋಜನಗಳು ಸಿಗುತ್ತವೆ. ಸಹಕಾರಿ ಸಂಘಗಳು ಸಾಮಾನ್ಯ ಜನರ ಬೆನ್ನೆಲುಬು ಅಂದ್ರೆ ತಪ್ಪಾಗಲಾರದು. ಸಾಮಾನ್ಯವಾಗಿ ಎಲ್ಲ ಬ್ಯಾಂಕ್ (Bank) ಗಳು ವಯಸ್ಕರಿಗೆ ಸಾಲ ಸೌಲಭ್ಯ, ಠೇವಣಿ ಅವಕಾಶವನ್ನು ನೀಡುತ್ತದೆ. ಮಕ್ಕಳ ಹೆಸರಲ್ಲಿ ಪಾಲಕರು ಖಾತೆ ತೆರೆದು ಹಣ ಠೇವಣಿ ಮಾಡ್ತಾರೆ. ಆದ್ರೆ ಗುಜರಾತಿನ ಸಾಬರ್ಕಂಡಾ ಜಿಲ್ಲೆಯಲ್ಲಿರುವ ಮಕ್ಕಳ ಬ್ಯಾಂಕ್ ಭಿನ್ನವಾಗಿದೆ. ದಲಿತ ಮತ್ತು ಆದಿವಾಸಿ ಸಮುದಾಯದವರೇ ಹೆಚ್ಚಿರುವ ಈ ಜಿಲ್ಲೆಯ ಈಡರ್ (Eider ) ಎಂಬಲ್ಲಿ ‘ಬಾಲ ಗೋಪಾಲ ಬ್ಯಾಂಕ್’ (Bala Gopal Bank) 2009 ರಿಂದಲೂ ನಡೆಯುತ್ತಿದೆ. ಈ ಬ್ಯಾಂಕಿನಲ್ಲಿ 18 ವರ್ಷಕ್ಕಿಂತ ಚಿಕ್ಕ ವಯಸ್ಸಿನ ಮಕ್ಕಳೆಲ್ಲರೂ ಖಾತೆ ತೆರೆಯಬಹುದಾಗಿದೆ.
ಬಾಲ ಗೋಪಾಲ ಬ್ಯಾಂಕ್ ಆರಂಭಿಸಿದ್ದು ಯಾರು? : ಈ ಬ್ಯಾಂಕ್ ಕೋ ಆಪರೇಟಿವ್ ಆಧಾರದ ಮೇಲೆ ನಡೆಯುತ್ತದೆ. ಈ ಮಕ್ಕಳ ಬ್ಯಾಂಕ್ ಅನ್ನು ಈಡರ್ ನ ತಾಲೂಕು ಪಂಚಾಯತ್ ಅಧ್ಯಕ್ಷ ಅಶ್ವಿನ್ ಭಾಯಿ ಪಟೇಲ್ ಎನ್ನುವವರು 2009ರಲ್ಲಿ ಸ್ಥಾಪಿಸಿದರು. ಅಂದಿನಿಂದ ಸತತ 14 ವರ್ಷಗಳ ಕಾಲ ಇದು ಸಫಲವಾಗಿ ನಡೆಯುತ್ತ ಬಂದಿದೆ. 2009ರಿಂದ ಇಲ್ಲಿಯವರೆಗೆ 325 ಹಳ್ಳಿಯ 17 ಸಾವಿರಕ್ಕೂ ಹೆಚ್ಚಿನ ಮಕ್ಕಳು ಈ ಬ್ಯಾಂಕ್ ನಲ್ಲಿ ಅಕೌಂಟ್ ತೆರೆದಿದ್ದಾರೆ. ಅವರಲ್ಲಿ ಅನೇಕರು ಈಗ 18 ವರ್ಷ ಮೇಲ್ಪಟ್ಟವರಾಗಿದ್ದಾರೆ. ಅವರ ಉನ್ನತ ಶಿಕ್ಷಣಕ್ಕೆ ಬೇಕಾಗುವ ಹಣವನ್ನು ಬಡ್ಡಿ ಸಮೇತ ನೀಡಲಾಗಿದೆ. 17000 ಸದಸ್ಯರನ್ನು ಹೊಂದಿರುವ ಈ ಬ್ಯಾಂಕ್ 16 ಕೋಟಿಗೂ ಹೆಚ್ಚಿನ ಹಣವನ್ನು ಜಮಾ ಮಾಡಿಕೊಂಡಿದೆ. ಇಲ್ಲಿ ಪ್ರತಿಶತ 6 ರಷ್ಟು ಬಡ್ಡಿದರ ನಿಗದಿಪಡಿಸಲಾಗಿದೆ.
ಒಂದೇ ಒಂದು ಬಾಟಲ್ ಎಣ್ಣೆ ಮಾರದೇ 2,600 ಕೋಟಿ ರೂ ಸಂಗ್ರಹಿಸಿದ ಅಬಕಾರಿ ಇಲಾಖೆ
ಮಕ್ಕಳೇ ಹಣ ಕೂಡಿಡುತ್ತಾರೆ : ಈ ಬಾಲ ಗೋಪಾಲ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮಕ್ಕಳಿಗೆ ಒಂದು ಬಾಕ್ಸ್ ನೀಡಲಾಗುತ್ತದೆ. ಮಕ್ಕಳು ತಮ್ಮ ಹಣವನ್ನು ಅದರಲ್ಲಿ ಹಾಕಬೇಕು. ಪ್ರತಿ ತಿಂಗಳೂ ಬ್ಯಾಂಕ್ ನ ಸಿಬ್ಬಂದಿ ಬಂದು ಮಕ್ಕಳ ಉಳಿತಾಯದ ಹಣವನ್ನು ಸಂಗ್ರಹಿಸಿ ಮಕ್ಕಳಿಗೆ ಅದರ ರಸೀದಿಯನ್ನು ನೀಡುತ್ತಾರೆ. ಈ ರೀತಿ ಉಳಿತಾಯ ಮಾಡೋದ್ರಿಂದ ಈಗ ಸಾಮಾನ್ಯವಾಗಿ ಎಲ್ಲ ಮಕ್ಕಳ ಖಾತೆಯಲ್ಲೂ 1ರಿಂದ 4 ಲಕ್ಷ ಹಣ ಸಂಗ್ರಹವಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಅಶ್ವಿನ್ ಭಾಯಿ ಪಟೇಲ್ ಹೇಳಿದ್ದಾರೆ.
SHOPPING TIPS: ಸೂಪರ್ ಮಾರ್ಕೆಟಲ್ಲಿ ಕಡಿಮೆ ಬಿಲ್ ಆಗ್ಬೇಕೆಂದ್ರೆ ಈ ಟ್ರಿಕ್ಸ್ ಟ್ರೈ ಮಾಡಿ
ಈ ಬ್ಯಾಂಕಿನ ಉದ್ದೇಶವೇನು? : ಚಿಕ್ಕಂದಿನಿಂದಲೇ ಮಕ್ಕಳಿಗೆ ಹಣದ ಮಹತ್ವ ಮತ್ತು ಉಳಿತಾಯದ ಬಗ್ಗೆ ತಿಳಿಸಿಕೊಡುವುದು ಈ ಬ್ಯಾಂಕ್ ನ ಮೂಲ ಉದ್ದೇಶವಾಗಿದೆ. ಚಿಕ್ಕ ವಯಸ್ಸಿನಲ್ಲೇ ಮಾದಕ ವ್ಯಸನಗಳಿಗೆ ಬಲಿಯಾಗುವ ಮಕ್ಕಳನ್ನು ಅದರಿಂದ ದೂರ ಮಾಡಿ ಅವರ ಕೈಯಿಂದಲೇ ಹಣದ ಉಳಿತಾಯ ಮಾಡಿಸುತ್ತೇವೆ. ಇದರಿಂದ ಅವರಿಗೆ ಹಣಕಾಸಿನ ವ್ಯವಹಾರದ ಬಗ್ಗೆಯೂ ತಿಳುವಳಿಕೆ ಮೂಡುತ್ತದೆ. ವ್ಯರ್ಥವಾಗಿ ಹಣದ ದುರುಪಯೋಗವಾಗುವುದು ಕೂಡ ತಪ್ಪುತ್ತದೆ. ಅವರು ಚಿಕ್ಕಂದಿನಲ್ಲಿ ಉಳಿತಾಯ ಮಾಡಿದ ಹಣವೇ ನಂತರ ಅವರ ವಿದ್ಯಾಭ್ಯಾಸಕ್ಕೆ ಅಥವಾ ಕೃಷಿ ಹಾಗೂ ಇನ್ನಿತರ ಉದ್ಯೋಗಗಳಿಗೆ ಬಳಕೆಯಾಗುತ್ತದೆ ಎಂದು ಅಶ್ವಿನ್ ಭಾಯಿ ಪಟೇಲ್ ಹೇಳುತ್ತಾರೆ.
ಅನೇಕ ಕುಟುಂಬಗಳಲ್ಲಿ ಮನೆಯ ಹಿರಿಯರು ಕುಡಿತಕ್ಕಾಗಿ ಖರ್ಚು ಮಾಡುವ ಹಣವನ್ನು ಉಳಿಸಿ ಅದನ್ನು ಬ್ಯಾಂಕಿನಲ್ಲಿ ಜಮಾ ಮಾಡಲಾಗುತ್ತಿದೆ. ಇದರ ಹೊರತಾಗಿ ಸಂಬಂಧಿಕರು ಮಕ್ಕಳಿಗೆ ನೀಡುವ ಚಿಕ್ಕ ಮೊತ್ತದ ಹಣ ಹಾಗೂ ಶಾಲೆಯ ರಜೆಯ ದಿನಗಳಲ್ಲಿ ಮಕ್ಕಳು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ದುಡಿದ ಹಣವನ್ನು ಕೂಡ ಸ್ವತಃ ಮಕ್ಕಳೇ ಬ್ಯಾಂಕ್ ನಲ್ಲಿ ಜಮಾ ಮಾಡುತ್ತಾರೆ. ಈ ರೀತಿ ಮಕ್ಕಳಿಗೆ ಹಣದ ಮಹತ್ವವನ್ನು ತಿಳಿಸಿ ಅವರಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸುವ ಮೂಲಕ ಈ ಬಾಲ ಗೋಪಾಲ ಬ್ಯಾಂಕ್ ಹೊಸ ಸಂಚಲನವನ್ನು ಮೂಡಿಸಿದೆ.