ಬೆಂಗಳೂರು ಏರ್‌ಪೋರ್ಟ್ ಸಿಟಿ ಲಿಮಿಟೆಡ್ (ಬಿಎಸಿಎಲ್) ಪ್ರಮುಖ ಹೂಡಿಕೆ ಯೋಜನೆಗಳೊಂದಿಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಎಲ್‌ಆರ್ ಏರ್‌ಪೋರ್ಟ್) ಸುತ್ತಲಿನ ಪ್ರದೇಶವನ್ನು ಅತ್ಯಾಧುನಿಕವಾಗಿ ಪರಿವರ್ತನೆ ಮಾಡಲು ಸಜ್ಜಾಗಿದೆ. 

ಬೆಂಗಳೂರು (ಮೇ.24): ಉದ್ಯಾನಗರಿಯ ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಈಗಾಗಲೇ ತನ್ನ ಟರ್ಮಿನಲ್‌ನ ವಿನ್ಯಾಸ ಹಾಗೂ ಇತರ ಕಾರಣಗಳಿಂದಾಗಿ ಜಗತ್ತಿನ ಬೃಹತ್‌ ವಿಮಾನ ನಿಲ್ದಾಣಗಳಿಗೆ ಸೆಡ್ಡುಹೊಡೆಯಲು ಸಜ್ಜಾಗಿದೆ. ಇದರ ಬೆನ್ನಲ್ಲಿಯೇ ಬೆಂಗಳೂರು ಏರ್‌ಪೋರ್ಟ್‌ ಸಿಟಿ ಲಿಮಿಟೆಡ್‌ ತನ್ನ ಪ್ರಮುಖ ಹೂಡಿಕೆ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕೆಂಪೇಗೌಡ ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ನ ಸುತ್ತಮುತ್ತಲಿನ ಪ್ರದೇಶವನ್ನು ಅತ್ಯಾಧುನಿಕವಾಗಿ ಪರಿವರ್ತನೆ ಮಾಡಲು ಸಜ್ಜಾಗಿದೆ. ಇದರ ಅನ್ವಯ ಈ ಪ್ರದೇಶದಲ್ಲಿ ಎರಡು ಮಿಲಿಯನ್‌ ಚದರ ಅಡಿಯ ಬ್ಯುಸಿನೆಸ್‌ ಪಾರ್ಕ್‌ ಹಾಗೂ 775 ರೂಮ್‌ಗಳನ್ನು ಹೊಂದಿರುವ ಹೋಟೆಲ್‌ಅನ್ನು ಒಳಗೊಂಡಿರಲಿದೆ. ಇದು ವಿಮಾನ ನಿಲ್ದಾಣ ನಗರ ಅಭಿವೃದ್ಧಿಯಲ್ಲಿ ಅತ್ಯಂತ ಮಹತ್ವದ ಹೆಜ್ಜೆ ಎನಿಸಿಕೊಂಡಿದೆ. ಈ ಹೂಡಿಕೆಗಳು ಭವಿಷ್ಯದಲ್ಲಿ ವ್ಯಾಪಾರ ಕೇಂದ್ರಗಳು, ಹಾಸ್ಪಿಟಾಲಿಟಿ ಹಾಗೂ ಮನರಂಜನೆಯ ತಾಣವಾಗಲಿದೆ ಎಂದು ಬಿಎಸಿಎಲ್‌ ತಿಳಿಸಿದೆ.
ತಾಂತ್ರಿಕ ಆವಿಷ್ಕಾರದ ಕಡೆಗೆ ಅತ್ಯಂತ ಧನಾತ್ಮಕವಾಗಿ ಬಿಎಸಿಎಲ್ ದಾಪುಗಾಲು ಇಡುತ್ತಿದ್ದು, ಬಯೋಫಿಲಿಕ್‌ ಪ್ರೇರಿತ ಬ್ಯುಸಿನೆಸ್‌ ಪಾರ್ಕ್‌, ಸಾರ್ವಜನಿಕ ಕ್ಷೇತ್ರದಲ್ಲಿ ಸ್ಮಾರ್ಟ್‌ ಕಾರ್ಯಕ್ಷೇತ್ರಗಳ ಭರವಸೆ ನೀಡುತ್ತದೆ.

ಹೊಸ ಪ್ರಾಜೆಕ್ಟ್‌ನಲ್ಲಿ ಹಸಿರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮಹತ್ವವಾಗಿ ಕೆಲಸ ಮಾಡಲಾಗುತ್ತಿದೆ. ಏರ್‌ಪೋರ್ಟ್ ಸಿಟಿಯಲ್ಲಿ ಮುಂಬರುವ ಮೆಟ್ರೋ ನಿಲ್ದಾಣವು ಉತ್ತರ ಭಾಗದಿಂದ ಬಿಸಿನೆಸ್ ಪಾರ್ಕ್‌ಗೆ ಮಹತ್ವದ ಸಂಪರ್ಕವನ್ನು ಒದಗಿಸುತ್ತದೆ ಮತ್ತು ಅನುಕೂಲಕರ ಪ್ರವೇಶವನ್ನು ನೀಡುತ್ತದೆ.

ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ ಅಂಗಸಂಸ್ಥೆಯಾಗಿರುವ ಬಿಎಸಿಎಲ್‌ನ ಸಿಇಒ ರಾವ್ ಮುನುಕುಟ್ಲ ಮಾತನಾಡಿದ್ದು, 'ಬಿಎಸಿಎಲ್‌ನ ಈ ಹೂಡಿಕೆಯು ಏರ್‌ಪೋರ್ಟ್ ಸಿಟಿಯನ್ನು ವ್ಯವಹಾರಗಳಿಗೆ ಕೇಂದ್ರವಾಗಿ ಪರಿವರ್ತಿಸುವ ನಮ್ಮ ದೃಷ್ಟಿಯನ್ನು ತೆರೆದಿಟ್ಟಿದೆ. . ವಿಶ್ವ ದರ್ಜೆಯ ಮೂಲಸೌಕರ್ಯ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಮೂಲಕ, ಬೆಳವಣಿಗೆಯನ್ನು ಪೋಷಿಸುವ, ಉದ್ಯೋಗಾವಕಾಶಗಳನ್ನು ತರುವ ಮತ್ತು ಪ್ರದೇಶದ ಮೇಲೆ ಸಕಾರಾತ್ಮಕ ಸಾಮಾಜಿಕ-ಆರ್ಥಿಕ ಪ್ರಭಾವವನ್ನು ಉಂಟುಮಾಡುವ ಅಭಿವೃದ್ಧಿಶೀಲ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.

ಏರ್‌ಪೋರ್ಟ್ ಸಿಟಿಯೊಳಗೆ ಆತಿಥ್ಯ ಮತ್ತು ಮನರಂಜನಾ ಪ್ರದೇಶಗಳು ಇರುತ್ತದೆ. ಬಿಸಿನೆಸ್ ಪಾರ್ಕ್‌ನಲ್ಲಿ ಕಾಂಬೊ ಹೋಟೆಲ್ ಮತ್ತು ಕನ್ಸರ್ಟ್ ಅರೆನಾ ಇರುತ್ತದೆ ಎನ್ನಲಾಗಿದೆ.
ಕಾಂಬೊ ಹೋಟೆಲ್ ಭಾರತದ ಅತಿದೊಡ್ಡ ಹಾಸ್ಪಿಟಲಾಟಿ ಸಂಸ್ಥೆಗಳಲ್ಲಿ ಒಂದಾಗಲು ಸಿದ್ಧವಾಗಿದೆ. ಒಟ್ಟು 775 ಕೀಗಳನ್ನು ಒಳಗೊಂಡಿರುವ ಈ ಹೋಟೆಲ್‌ನಲ್ಲಿ ವಿವಾಂಟಾ ಬ್ರಾಂಡ್‌ನ 450 ರೂಮ್‌ಗು ಇದ್ದರೆ, ಜಿಂಜರ್ ಬ್ರ್ಯಾಂಡ್ 325 ರೂಮ್‌ಗಳು ಇರಲಿದೆ. 2026 ರ ಅಂತ್ಯದ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಇದರಂದಾಗಿ ಏರ್‌ಪೋರ್ಟ್‌ ಸಿಟಿ ಉನ್ನತ ಶ್ರೇಣಿಯ ತಾಣವಾಗಿ ಬದಲಾಗಲಿದೆ.

ಇನ್ನು ಏರ್‌ಪೋರ್ಟ್‌ ಸಿಟಿಯಲ್ಲಿ ಈಗಾಗಲೇ ಇರುವ ಹಾಸ್ಪಿಟಾಲಿಟಿ ಸಂಸ್ಥೆಯೂ ವಿಸ್ತರಣೆ ಕಾಡಣಲಿದೆ. ತಾಜ್‌ ಬೆಂಗಳೂರು ಹೋಟೆಲ್‌ ಈಗಾಗಲೇ 370 ರೂಮ್‌ಗಳನ್ನು ಹೊಂದಿದೆ. ಆದರೆ, ನಗರದಲ್ಲಿ ಪಂಚತಾರಾ ವಾಸ್ತವ್ಯಕ್ಕೆ ಬೇಡಿಕೆ ಹೆಚ್ಚುತ್ತಿರುವ ಕಾರಣ ಈ ಹೋಟೆಲ್‌ ಕೂಡ ತನ್ನ ಸಾಮರ್ಥ್ಯವನ್ನು ವಿಸ್ತರಣೆ ಮಾಡಲಿದೆ.

ಬೆಂಗಳೂರು ವಿಮಾನ ನಿಲ್ದಾಣದ ಪಿಕ್-ಅಪ್ ವಾಹನಗಳ ಶುಲ್ಕ ಸಂಗ್ರಹ ಸ್ಥಗಿತ

ಇನ್ನು 10 ಸಾವಿರ ಮಂದಿಗೆ ವೇದಿಕೆಯಾಗಬಲ್ಲ ಕಾನ್ಸರ್ಟ್‌ ಅರೇನಾವನ್ನೂ ಇದು ಹೊಂದಿರಲಿದೆ. ಮುಂದಿನ ಕೆಲ ವರ್ಷಗಳಲ್ಲಿ ಇದು ಅನಾವರಣಗೊಳ್ಳಲಿದೆ. ಎಂಟರ್‌ಟೇನ್‌ಮೆಂಟ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಇಲ್ಲಿ ಅದ್ದೂರಿಯಾಗಿ ನಡೆಸಬಹುದಾಗಿದೆ. ವೊಕ್ಸೆಲ್‌ಜೆಟ್ ಜರ್ಮನಿಯ ತಾಂತ್ರಿಕ ಸಹಯೋಗದೊಂದಿಗೆ 3D ಮುದ್ರಣ ಸೌಲಭ್ಯವು ಈಗಾಗಲೇ ಜುಲೈ 2022 ರಿಂದ ಏರ್‌ಪೋರ್ಟ್ ಸಿಟಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಹೆಚ್ಚುವರಿಯಾಗಿ, SATS ಸಿಂಗಾಪುರವು ತಾಂತ್ರಿಕವಾಗಿ ಸುಧಾರಿತ ಸೆಂಟ್ರಲ್ ಕಿಚನ್ ಅನ್ನು ಸ್ಥಾಪಿಸಿದೆ, ಮಾರ್ಚ್ 2024 ರಿಂದ ಕಾರ್ಯನಿರ್ವಹಿಸುತ್ತಿದೆ, ದಿನಕ್ಕೆ 170,000 ರೆಡಿ-ಟು-ಈಟ್ ಲಂಚ್‌ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬೆಂಗಳೂರಿನ ಮಳೆಗೆ ವಿಮಾನ ನಿಲ್ದಾಣ ತುಂಬಾ ನೀರು, ವಿನ್ಯಾಸ ಮಾಡಿದ ಎಂಜಿನಿಯರ್‌ ಮೇಲೆ ಪ್ರಯಾಣಿಕರ ಹಿಡಿಶಾಪ