ಉದ್ಯೋಗಿಗಳಿಗೆ ಶುಭ ಸುದ್ದಿ; ಈ ವರ್ಷ ವೇತನದಲ್ಲಿ ಶೇ.10.2ರಷ್ಟು ಏರಿಕೆ ನಿರೀಕ್ಷೆ
ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಭೀತಿ ನಡುವೆ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳಿಗೆ ತುಸು ನೆಮ್ಮದಿ ನೀಡುವ ಸುದ್ದಿ ಇದು. ಇವೈ ಸಂಸ್ಥೆಯ 'ಫ್ಯೂಚರ್ ಆಫ್ ಪೇ' ವರದಿ ಪ್ರಕಾರ 2023ನೇ ಸಾಲಿನಲ್ಲಿ ಭಾರತೀಯ ಉದ್ಯೋಗಿಗಳ ವೇತನದಲ್ಲಿ ಶೇ.10.2ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.
ನವದೆಹಲಿ (ಮಾ.23): ಆರ್ಥಿಕ ಹಿಂಜರಿತದ ಭೀತಿ ಹಿನ್ನೆಲೆಯಲ್ಲಿ ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್, ಟ್ವಿಟ್ಟರ್, ಸೇರಿದಂತೆ ಅನೇಕ ದೈತ್ಯ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ಬೆನ್ನಲ್ಲೇ ಭಾರತೀಯ ಉದ್ಯೋಗಿಗಳಿಗೆ ತುಸು ನೆಮ್ಮದಿ ನೀಡುವ ಸುದ್ದಿಯೊಂದು ಹೊರಬಿದ್ದಿದೆ. ಈ ವರ್ಷ ಅಂದ್ರೆ 2023ನೇ ಸಾಲಿನಲ್ಲಿ ಭಾರತೀಯ ಉದ್ಯೋಗಿಗಳ ವೇತನದಲ್ಲಿ ಶೇ.10.2ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಅರ್ನ್ಸ್ಟ್ ಹಾಗೂ ಯಂಗ್ (ಇವೈ) ಸಂಸ್ಥೆಯ 'ಫ್ಯೂಚರ್ ಆಫ್ ಪೇ' ವರದಿ ತಿಳಿಸಿದೆ. ಆದರೆ, ಈ ಹೆಚ್ಚಳ ಕಳೆದ ಸಾಲಿಗಿಂತ ಕಡಿಮೆ. 2022ರಲ್ಲಿ ವೇತನ ಹೆಚ್ಚಳ ಶೇ.10.4ರಷ್ಟಿತ್ತು. ಬ್ಲೂ ಕಾಲರ್ ಹುದ್ದೆಗಳನ್ನು ಹೊರತುಪಡಿಸಿ ಉಳಿದ ಎಲ್ಲ ಹುದ್ದೆಗಳ ವೇತನ ಹೆಚ್ಚಳದ ಪ್ರಮಾಣ ಕಡಿಮೆಯಿರುವ ನಿರೀಕ್ಷೆಯಿದೆ. ಇ-ಕಾಮರ್ಸ್, ವೃತ್ತಿ ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನ ವಲಯಗಳು ಈ ವರ್ಷ ಅತ್ಯಧಿಕ ವೇತನ ಹೆಚ್ಚಳವನ್ನು ಕಾಣಲಿವೆ ಎಂದು ವರದಿ ತಿಳಿಸಿದೆ. ಅತ್ಯಧಿಕ ವೇತನ ಹೆಚ್ಚಳವಾಗುವ ಟಾಪ್ ಮೂರು ವಲಯಗಳು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿವೆ. ಇ-ಕಾಮರ್ಸ್ ವಲಯ ಶೇ.12.5ರಷ್ಟು ಅತ್ಯಧಿಕ ವೇತನ ಹೆಚ್ಚಳ ಕಾಣುವ ನಿರೀಕ್ಷೆಯಿದೆ. ಇದರ ಜೊತೆಗೆ ವೃತ್ತಿಪ ಸೇವೆಗಳು ಶೇ.11.9ರಷ್ಟು, ಮಾಹಿತಿ ತಂತ್ರಜ್ಞಾನ ಶೇ.10.8ರಷ್ಟು ವೇತನ ಹೆಚ್ಚಳ ಕಾಣುವ ನಿರೀಕ್ಷೆಯಿದೆ' ಎಂದು ಈ ವರದಿ ತಿಳಿಸಿದೆ.
2022ರಲ್ಲಿ ಇ-ಕಾಮರ್ಸ್, ವೃತ್ತಿ ಸೇವೆಗಳು ಹಾಗೂ ಮಾಹಿತಿ ತಂತ್ರಜ್ಞಾನ ಈ ಮೂರು ವಲಯಗಳು ಕ್ರಮವಾಗಿ ಶೇ.14.2, ಶೇ.13 ಹಾಗೂ ಶೇ.11.6ರಷ್ಟು ವೇತನ ಹೆಚ್ಚಳ ಕಂಡಿವೆ. ಇನ್ನು ಇತರ ವಲಯಗಳಲ್ಲಿ ವೇತನ ಹೆಚ್ಚಳದ ಪ್ರಮಾಣ ತುಸು ಕಡಿಮೆಏ ಇದೆ. ಆದರೂ ಉದ್ಯೋಗ ಕಡಿತದ ಈ ಸಮಯದಲ್ಲಿ ಇಷ್ಟು ಪ್ರಮಾಣದಲ್ಲಿ ವೇತನ ಹೆಚ್ಚಳವಾಗುತ್ತಿರೋದು ಸಮಾಧಾನಕರ ಸಂಗತಿ ಎಂದು ಹೇಳಲಾಗಿದೆ.
ಮತ್ತೊಂದು ಬಹುರಾಷ್ಟ್ರೀಯ ಸಂಸ್ಥೆಗೆ ಭಾರತೀಯನ ಸಾರಥ್ಯ; ರಾಹುಲ್ ರಾಯ್ ಚೌಧರಿ ಗ್ರಾಮರ್ಲಿ ನೂತನ ಸಿಇಒ
ತಂತ್ರಜ್ಞಾನ ಕೌಶಲಗಳಾದ ಎಐ ಹಾಗೂ ಕ್ಲೌಡ್ ಕಂಪ್ಯೂಟಿಂಗ್ ಗೆ ಅತ್ಯಧಿಕ ಬೇಡಿಕೆಯಿದೆ ಎಂದು ಈ ವರದಿ ಹೇಳಿದೆ. ಇದು ಮೂಲ ಇಂಜಿನಿಯರಿಂಗ್ ಗಿಂತ ಶೇ.15-20ರಷ್ಟು ಹೆಚ್ಚು ಬೇಡಿಕೆ ಹೊಂದಿದೆ. ರಿಸ್ಕ್ ಮಾಡೆಲಿಂಗ್, ಡೇಟಾ ಆರ್ಕಿಟೆಕ್ಚರ್ ಹಾಗೂ ಬ್ಯುಸಿನೆಸ್ ಅನಾಲಿಟಿಕ್ಸ್ ಸೇರಿದಂತೆ ವಿಶ್ಲೇಷನ ಕೌಶಲ್ಯಗಳಿಗೆ ಪ್ರೀಮಿಯಂಗಿಂತ ಶೇ.20-25ರಷ್ಟು ಹೆಚ್ಚಿನ ಬೇಡಿಕೆಯಿದೆ ಎಂದು ವರದಿ ತಿಳಿಸಿದೆ. ಭಾರತದಲ್ಲಿ ಸುಮಾರು ಅರ್ಧದಷ್ಟು ಅಂದರೆ ಶೇ.48ರಷ್ಟು ಕಂಪನಿಗಳು ಬೇಡಿಕೆಯಿರುವ ಕೌಶಲ್ಯ ಹೊಂದಿರೋರಿಗೆ ಪ್ರೀಮಿಯಂ ವೇತನ ಆಫರ್ ಮಾಡುತ್ತಿವೆ. ಬೇಡಿಕೆಯಲ್ಲಿರುವ ಕೌಶಲ್ಯಗಳಿಗೆ ಒನ್ ಟೈಮ್ ಹಾಗೂ ರಿಟೆನ್ಷನ್ ಬೋನಸ್ ಕೂಡ ನೀಡಲಾಗುತ್ತಿದೆ.
ಇನ್ನು ಭಾರತದಲ್ಲಿ 2023 ರಲ್ಲಿ ನವೀಕರಿಸಬಹುದಾದ ಇಂಧನ, ಇ-ಕಾಮರ್ಸ್, ಡಿಜಿಟಲ್ ಸೇವೆಗಳು, ಆರೋಗ್ಯ ಸಂರಕ್ಷಣೆ, ದೂರಸಂಪರ್ಕ, ಶೈಕ್ಷಣಿಕ ಸೇವೆಗಳು, ಚಿಲ್ಲರೆ ಮತ್ತು ಲಾಜಿಸ್ಟಿಕ್ಸ್ ಮತ್ತು ಹಣಕಾಸು ತಂತ್ರಜ್ಞಾನ ಉದ್ಯೋಗಿಗಳಿಗೆ ಅತ್ಯಂತ ಭರವಸೆ ಮೂಡಿಸಿರುವ ವಲಯಗಳಲ್ಲಿ ಸೇರಿವೆ ಎಂದು 'ಫ್ಯೂಚರ್ ಆಫ್ ಪೇ' ವರದಿ ಮಾಹಿತಿ ನೀಡಿದೆ.
ಸಾರ್ವಜನಿಕ ಪರೀಕ್ಷೆಗೆ ಚಾಟ್‌ಜಿಪಿಟಿ ಪ್ರತಿಸ್ಪರ್ಧಿ ಬಾರ್ಡ್ ಲಭ್ಯ; ಉದ್ಯೋಗಿಗಳಿಗೆ ಗೂಗಲ್ ಸಿಇಒ ಎಚ್ಚರಿಕೆ ಮೇಲ್
ಭಾರತದ ಆರ್ಥಿಕತೆ ನಿರಂತರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಅತ್ಯುನ್ನತ ಕೌಶಲ್ಯ ಹೊಂದಿರುವ ಉದ್ಯೋಗಿಗಳಿಗೆ ವಿವಿಧ ವಲಯಗಳಲ್ಲಿ ಬೇಡಿಕೆ ಹೆಚ್ಚಿದೆ. ಉನ್ನತ ಬುದ್ಧಿಮತ್ತೆ ಜೊತೆಗೆ ಅವಶ್ಯ ಕೌಶಲ್ಯಗಳು ಹಾಗೂ ಅತ್ಯುತ್ತಮ ಕಾರ್ಯನಿರ್ವಹಣೆಯ ಇತಿಹಾಸ ಹೊಂದಿರೋರಿಗೆ ಹೆಚ್ಚಿನ ಬೇಡಿಕೆ ಹಾಗೂ ಉತ್ತಮ ವೇತನ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ವೃತ್ತಿಪರ ಸೇವಾ ಸಂಸ್ಥೆ ಅರ್ನ್ಸ್ಟ್ ಅಂಡ್ ಯಂಗ್ ಈ 'ಫ್ಯೂಚರ್ ಆಫ್ ಪೇ' ವರದಿ ತಯಾರಿಗೂ ಮೊದಲು 2022ರ ಡಿಸೆಂಬರ್ ನಿಂದ 2023ರ ಫೆಬ್ರವರಿ ನಡುವೆ ವಿವಿಧ ಕಂಪನಿಗಳ 150ಕ್ಕೂ ಹೆಚ್ಚು ಮುಖ್ಯಸ್ಥರಿಂದ ವೇತನಕ್ಕೆ ಸಂಬಂಧಿಸಿದ ಮಾಹಿತಿ ಕಲೆ ಹಾಕಿದೆ.