ಬೆಂಗಳೂರು[ಫೆ.09]: ಬಜೆಟ್ ಮಂಡನೆ ದಿನ ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದ್ದರೂ ಬಜೆಟ್ ಅಂಗೀಕಾರವಾಗುವ ದಿನದವರೆಗೂ ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ ತಪ್ಪಿದ್ದಲ್ಲ.

ಶುಕ್ರವಾರ ಬಜೆಟ್ ಮಂಡನೆ ಹಾಗೂ ಅದಕ್ಕೂ ಮೊದಲು ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೂ ಹಲವು ಶಾಸಕರು ಗೈರು ಹಾಜರಾಗಿದ್ದರು. ಇದನ್ನೇ ಮುಂದಿಟ್ಟುಕೊಂಡು ಬಿಜೆಪಿ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗಿದ್ದು, ಅಧಿವೇಶನದ ಕೊನೆಯ ದಿನ ತನ್ನ ತಂತ್ರ ಕಾರ್ಯರೂಪಕ್ಕೆ ತರಲು ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿಯ ವಿಶ್ವಸನೀಯ ಮೂಲಗಳ ಪ್ರಕಾರ, ಮುಂಬೈನಲ್ಲಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಅತೃಪ್ತ ಶಾಸಕರು ರಾಜಿನಾಮೆ ನೀಡುವುದು ಖಚಿತ. ಆದರೆ, ಯಾವಾಗ ಎಂಬ ಮುಹೂರ್ತ ಮಾತ್ರ ನಿಗದಿಯಾಗಬೇಕಾಗಿದೆ. ಅತೃಪ್ತರನ್ನು ಶಾಸಕತ್ವದಿಂದ ಅನರ್ಹಗೊಳಿಸುವಂಥ ಪ್ರಯತ್ನ ನಡೆದರೂ ಅವರು ಹಿಂದೆ ಸರಿಯುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಲಾಗುತ್ತಿದೆ.

ಮೇಲ್ನೋಟಕ್ಕೆ ಬಜೆಟ್ ಮಂಡನೆ ಪ್ರಕ್ರಿಯೆ ಮುಗಿದ ಕೂಡಲೇ ಸರ್ಕಾರಕ್ಕೆ ಎದುರಾಗಿದ್ದ ಆತಂಕ ನಿವಾರಣೆಯಾಯಿತು ಎಂದು ಭಾವಿಸುವಂತಿಲ್ಲ. ಸಮ್ಮಿಶ್ರ ಸರ್ಕಾರ ದ ಪಾಲುದಾರ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ಪಾಳೆಯಗಳಲ್ಲಿ ಶುಕ್ರವಾರ ಮಧ್ಯಾಹ್ನದ ನಂತರ ತುಸು ನಿರಾಳ ಭಾವನೆ ಕಂಡು ಬಂದಿತು. ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಸುದೀರ್ಘ ಬಜೆಟ್ ಮಂಡಿಸಿದ ನಂತರ ಪತ್ರಿಕಾಗೋಷ್ಠಿ ಮುಗಿಸಿ ವಿಶ್ರಾಂತಿಗೆ ತೆರಳಿದರು. ಉಭಯ ಪಕ್ಷಗಳ ಸದಸ್ಯರೂ ಮೂರು ದಿನಗಳ ಕಲಾಪದ ಒತ್ತಡದಿಂದ ನಿರುಮ್ಮಳರಾದರು.