Asianet Suvarna News Asianet Suvarna News

ಜಿಎಸ್‌ಟಿ ವಿರೋಧಿಸಿ ಎಪಿಎಂಸಿ ಕಾಳುಕಡಿ ಮಾರುಕಟ್ಟೆ ಬಂದ್‌

ಬ್ರಾಂಡೆಡ್‌ ಕಾಳುಕಡಿ ಹೊರತುಪಡಿಸಿ ಚಿಲ್ಲರೆ ಬೇಳೆಕಾಳಿಗೂ ಜಿಎಸ್‌ಟಿ ಬರೆ ಬೀಳಲಿದೆ

APMC Market Bandh to Against GST in Hubballi grg
Author
Bengaluru, First Published Jul 16, 2022, 8:25 AM IST

ಹುಬ್ಬಳ್ಳಿ(ಜು.16):  ಜಿಎಸ್‌ಟಿ ವಿರೋಧಿಸಿ ಇಲ್ಲಿನ ಅಮರಗೋಳ ಎಪಿಎಂಸಿ ವರ್ತಕರು ಕರೆ ನೀಡಿರುವ ಎರಡು ದಿನಗಳ ಬಂದ್‌ ಹಿನ್ನೆಲೆ ಶುಕ್ರವಾರ ಇಲ್ಲಿನ ಕಾಳುಕಡಿ, ಅಕ್ಕಿ ಮಾರುಕಟ್ಟೆ ಸಂಪೂರ್ಣ ಬಂದ್‌ ಆಗಿದ್ದರೆ, ಉಳಿದೆಲ್ಲ ವ್ಯಾಪಾರ-ವಹಿವಾಟು ಎಂದಿನಂತೆ ನಡೆದಿವೆ. ಎಪಿಎಂಸಿಯ ಹಲವು ಕಾಳುಕಡಿ ವ್ಯಾಪಾರಿಗಳು, ಅಕ್ಕಿ ವರ್ತಕರು ಟೆಂಡರ್‌, ವ್ಯಾಪಾರವನ್ನು ಸಂಪೂರ್ಣವಾಗಿ ಬಂದ್‌ ಮಾಡಿದ್ದರು. ಮಧ್ಯಾಹ್ನ ಕಿರಾಣಿ ಅಂಗಡಿಗಳ ವ್ಯಾಪಾರಿಗಳು ಮಳಿಗೆ ತೆರೆದರಾದರು ಇತರರು ಬಂದ್‌ ಮಾಡುವಂತೆ ಸೂಚಿಸಿದ ಕಾರಣ ಬಾಗಿಲು ಹಾಕಿದರು. ಇಲ್ಲಿನ ಅಕ್ಕಿ, ಬೇಳೆ, ಬೆಲ್ಲ, ಎಣ್ಣೆ, ಸಕ್ಕರೆ, ಮೈದಾ, ಗೋದಿ ಸೇರಿ 250ಕ್ಕೂ ಹೆಚ್ಚು ವರ್ತಕರು ಮಂಡಿಗಳನ್ನು ಬಂದ್‌ ಮಾಡಿದ್ದರು.

ಕಾಳುಕಡಿ ವ್ಯಾಪಾರಿಗಳು ಪೂರ್ಣವಾಗಿ ಬಂದ್‌ ಮಾಡಿದ್ದರು. ಟೆಂಡರ್‌, ಲೋಡಿಂಗ್‌ ಹಾಗೂ ಅನ್‌ ಲೋಡಿಂಗ್‌ ಕೂಡ ಮಾಡಲಿಲ್ಲ. ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆಗೆ ತಂದಿರಲಿಲ್ಲ. ಅಕ್ಕಿಹೊಂಡದ ಮಾರುಕಟ್ಟೆಯಲ್ಲಿ ಕೂಡ ವ್ಯಾಪಾರ ಬಂದಾಗಿತ್ತು. ಹೀಗಾಗಿ ಇಲ್ಲಿ ಯಾವುದೇ ವ್ಯಾಪಾರ ನಡೆಯಲಿಲ್ಲ. ಉಳಿದಂತೆ ಇಲ್ಲಿನ ಈರುಳ್ಳಿ, ಆಲೂಗಡ್ಡೆ, ಹೂವು-ಹಣ್ಣು ಮಾರುಕಟ್ಟೆ, ತರಕಾರಿ ಮಾರುಕಟ್ಟೆಎಂದಿನಂತೆ ನಡೆಯಿತು. ಬೆಳಗ್ಗೆ ಟೆಂಡರ್‌ ಪ್ರಕ್ರಿಯೆ, ಸಂಜೆವರೆಗೆ ಚಿಲ್ಲರೆ ವ್ಯಾಪಾರ ನಡೆಯಿತು.

ಆಹಾರಧಾನ್ಯಗಳ ಮೇಲೆ ಜಿಎಸ್‌ಟಿಗೆ ವಿರೋಧ: ಎರಡು ದಿನ ರೈಸ್ ಮಿಲ್ ಬಂದ್

ಕಾಳುಕಡಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಗಂಗನಗೌಡ ಪಾಟೀಲ್‌ ಮಾತನಾಡಿ, ಬಂದ್‌ಗೆ ಉತ್ತಮ ಬೆಂಬಲ ದೊರೆತಿದೆ. ತರಕಾರಿ ಮತ್ತು ಹೂ-ಹಣ್ಣು ವ್ಯಾಪಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಒಂದು ದಿನ ಬಂದ್‌ ಇಟ್ಟರೂ ಮಳೆಗಾಲದ ಕಾರಣ ತರಕಾರಿ ನಾಶವಾಗಿ ಕೋಟ್ಯಂತರ ರುಪಾಯಿ ನಷ್ಟಆಗುತ್ತದೆ. ಹೀಗಾಗಿ ಅವರಿಗೆ ಬಂದ್‌ ಮಾಡುವಂತೆ ಹೆಚ್ಚು ಒತ್ತಾಯ ಮಾಡುವುದಿಲ್ಲ. ಶನಿವಾರ ಎಪಿಎಂಸಿಯ ಪ್ರಾಂಗಣದಲ್ಲಿ ಪ್ರತಿಭಟನೆ ಮಾಡಲು ಅಥವಾ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಬ್ರಾಂಡೆಡ್‌ ಕಾಳುಕಡಿ ಹೊರತುಪಡಿಸಿ ಚಿಲ್ಲರೆ ಬೇಳೆಕಾಳಿಗೂ ಜಿಎಸ್‌ಟಿ ಬರೆ ಬೀಳಲಿದೆ. ಜಿಎಸ್‌ಟಿ ಕಾರಣಕ್ಕೆ ಗ್ರಾಹಕರಿಗೆ ಹೊರೆಯಾಗಲಿದೆ. ಈ ಕುರಿತು ಜನತೆಗೆ ಜಾಗೃತಿ ಮೂಡಿಸುವ ಸಲುವಾಗಿ ಬಂದ್‌ ಮಾಡಿ ಹೋರಾಟ ಮಾಡಿದ್ದೇವೆ. ಸರ್ಕಾರ ಈಗಲೆ ಎಚ್ಚೆತ್ತು ಕ್ರಮವಹಿಸಬೇಕು. ಸಂಕಷ್ಟದಲ್ಲಿರುವ ಜನತೆಗೆ ತೊಂದರೆ ಆಗಬಾರದು ಎಂದು ಆಹಾರ ಧಾನ್ಯ ವರ್ತಕರ ಸಂಘದ ಅಧ್ಯಕ್ಷ ಎಂ.ವಿ. ಬೊರಟ್ಟಿ ಹೇಳಿದರು.
 

Follow Us:
Download App:
  • android
  • ios