ಮುಂಬೈ[ಜು.02]: ಸಾಲದ ಸುಳಿಯಲ್ಲಿ ಒದ್ದಾಡುತ್ತಿರುವ ರಿಲಯನ್ಸ್‌ ಸಮೂಹದ ಅನಿಲ್‌ ಅಂಬಾನಿ, ಇದೀಗ ಸಾಲದ ಹೊರೆ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂಬೈನಲ್ಲಿರುವ ತಮ್ಮ ಸಂಸ್ಥೆಗಳ ಕೇಂದ್ರ ಕಚೇರಿಯನ್ನೇ ಮಾರಾಟ ಮಾಡಲು ಇಲ್ಲವೇ ದೀರ್ಘ ಕಾಲೀನ ಗುತ್ತಿಗೆ ನೀಡಲು ನಿರ್ಧರಿಸಿದ್ದಾರೆ.

ಮುಂಬೈನ ಸಾಂತ್ರಕೂಜ್‌ನಲ್ಲಿ ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ನ ಕೇಂದ್ರ ಕಚೇರಿ ಇದೆ. ಅದು ಸುಮಾರು 7 ಲಕ್ಷ ಚದರಡಿ ವಿಸ್ತೀರ್ಣ ಹೊಂದಿದೆ. ಇದನ್ನು ಒಂದು ವೇಳೆ ಮಾರಾಟ ಮಾಡಿದರೆ 1500- 2000 ಕೋಟಿ ರು. ಬರುವ ನಿರೀಕ್ಷೆ ಇದೆ. ಒಂದು ವೇಳೆ ಮಾರಾಟವಾಗದೇ ಇದ್ದಲ್ಲಿ ದೀರ್ಘ ಅವಧಿಗೆ ಗುತ್ತಿಗೆ ನೀಡಿ ಹಣ ಸಂಗ್ರಹಿಸುವ ಗುರಿಯೂ ಇದೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್‌ ಇನ್ಫ್ರಾಸ್ಟ್ರಕ್ಚರ್‌ 6000 ಕೋಟಿ ರು.ಗೂ ಹೆಚ್ಚಿನ ಸಾಲಹೊಂದಿದೆ. ಇನ್ನೊಂದು ವರ್ಷದಲ್ಲಿ ಈ ಸಾಲದ ಪ್ರಮಾಣವನ್ನು ಶೆ.50ರಷ್ಟುಇಳಿಸುವ ಗುರಿ ಕಂಪನಿಯದ್ದು.