Asianet Suvarna News

ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಆಂಧ್ರ ಮತ್ತೆ ನಂ.1: 17ನೇ ಸ್ಥಾನಕ್ಕೆ ಕರ್ನಾಟಕ ಕುಸಿತ!

ಉದ್ಯಮ ಸ್ನೇಹಿ ರಾಜ್ಯಗಳಲ್ಲಿ ಆಂಧ್ರ ಮತ್ತೆ ನಂ.1| ಹ್ಯಾಟ್ರಿಕ್‌ ಅವಧಿಗೆ ಆಂಧ್ರಕ್ಕೆ ಮೊದಲ ಶ್ರೇಯಾಂಕ| ಉ.ಪ್ರ. ನಂ.2, ತೆಲಂಗಾಣ ನಂ.3|  8ನೇ ಸ್ಥಾನದಿಂದ 17ನೇ ಸ್ಥಾನಕ್ಕೆ ಕರ್ನಾಟಕ ಕುಸಿತ

Andhra Pradesh retains top spot in ease of doing business 2019 ranking
Author
Bangalore, First Published Sep 6, 2020, 8:06 AM IST
  • Facebook
  • Twitter
  • Whatsapp

ನವದೆಹಲಿ(ಸೆ.06): ಉದ್ಯಮಸ್ನೇಹಿ ವಾತಾವರಣ ಹೊಂದಿರುವ ರಾಜ್ಯಗಳ ವಾರ್ಷಿಕ ರಾರ‍ಯಂಕಿಂಗ್‌ ಶನಿವಾರ ಪ್ರಕಟಗೊಂಡಿದ್ದು, ಆಂಧ್ರಪ್ರದೇಶ ಸತತ 3ನೇ ಬಾರಿಗೆ ಮೊದಲ ಸ್ಥಾನ ಗಳಿಸಿದೆ. ಆದರೆ ಕಳೆದ ಸಲ 8ನೇ ಸ್ಥಾನದಲ್ಲಿದ್ದ ಕರ್ನಾಟಕ ಈ ಸಲ 17ನೇ ಸ್ಥಾನಕ್ಕೆ ಇಳಿದಿದೆ.

2019ರ ಔದ್ಯಮಿಕ ಸುಧಾರಣೆ ಕ್ರಿಯಾಯೋಜನೆಗಳನ್ನು ರಾಜ್ಯಗಳು ಜಾರಿಗೊಳಿಸಿದ್ದನ್ನು ಆಧರಿಸಿ ಉದ್ದಿಮೆ ಹಾಗೂ ಆಂತರಿಕ ವ್ಯಾಪಾರ ಇಲಾಖೆ ಈ ಶ್ರೇಯಾಂಕ ಸಿದ್ಧಪಡಿಸಿದೆ. ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಿಸುವ ಉದ್ದೇಶದಿಂದ ಕಳೆದ 5 ವರ್ಷದಿಂದ ಶ್ರೇಯಾಂಕ ಪ್ರಕಟಗೊಳ್ಳುತ್ತಿದೆ.

ವಿಶೇಷವೆಂದರೆ ಬಿಜೆಪಿ ಆಡಳಿತದ ಉತ್ತರಪ್ರದೇಶ 10 ಸ್ಥಾನ ಜಿಗಿದಿದ್ದು, 2ನೇ ಸ್ಥಾನಕ್ಕೇರಿದೆ. ಕಳೆದ ಸಲ ಉತ್ತರ ಪ್ರದೇಶ 12ನೇ ಸ್ಥಾನದಲ್ಲಿತ್ತು.

ಕಳೆದ ಸಲ 2ನೇ ಸ್ಥಾನದಲ್ಲಿದ್ದ ತೆಲಂಗಾಣ 3ನೇ ಸ್ಥಾನಕ್ಕಿಳಿದಿದೆ. ಮಧ್ಯಪ್ರದೇಶ 4, ಜಾರ್ಖಂಡ್‌ 5, ಛತ್ತೀಸ್‌ಗಢ 6, ಹಿಮಾಚಲ ಪ್ರದೇಶ 7, ರಾಜಸ್ಥಾನ 8, ಪ.ಬಂಗಾಳ 9 ಹಾಗೂ ಗುಜರಾತ್‌ 10ನೇ ಸ್ಥಾನ ಪಡೆದಿವೆ.

ಕಳೆದ ಸಲ 23ನೇ ಸ್ಥಾನದಲ್ಲಿದ್ದ ದಿಲ್ಲಿ ಈ ಸಲ 12ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಗುಜರಾತ್‌ 5 ಸ್ಥಾನ ಕುಸಿದಿದೆ. ಅಸ್ಸಾಂ 20, ಜಮ್ಮು-ಕಾಶ್ಮೀರ 21, ಗೋವಾ 24, ಬಿಹಾರ 26 ಹಾಗೂ ಕೇರಳ 28ನೇ ಸ್ಥಾನ ಪಡೆದಿವೆ. ತ್ರಿಪುರಾ ಅತಿ ಕಟ್ಟಕಡೆಯ 36ನೇ ಸ್ಥಾನ ಗಳಿಸಿದೆ.

ವರದಿ ಬಿಡುಗಡೆ ಮಾಡಿ ಮಾತನಾಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ವಾಣಿಜ್ಯ-ಕೈಗಾರಿಕಾ ಸಚಿವ ಪೀಯೂಶ್‌ ಗೋಯಲ್‌, ‘ಈ ಪಟ್ಟಿಯನ್ನು ನೋಡಿದಾಗ ರಾಜ್ಯಗಳು ಉದ್ದಿಮೆಸ್ನೇಹಿ ವಾತಾವರಣ ನಿರ್ಮಿಸುವತ್ತ ದಾಪುಗಾಲು ಇಡುತ್ತಿವೆ ಎಂದು ತಿಳಿದುಬರುತ್ತದೆ’ ಎಂದು ಶ್ಲಾಘಿಸಿದರು.

ಆದರೆ, ಶ್ರೇಯಾಂಕದಲ್ಲಿ ಕುಸಿತ ಕಂಡಿರುವ ರಾಜ್ಯಗಳಿಗೆ ಇದು ಎಚ್ಚರಿಕೆ ಗಂಟೆ ಎಂದು ಗೋಯಲ್‌ ಹೇಳಿದರಲ್ಲದೆ, ಉದ್ದಿಮೆ ಸ್ಥಾಪನೆಗೆ ಇದ್ದ ತೊಡಕು ನಿವಾರಿಸಿ ಏಕಗವಾಕ್ಷಿ ವ್ಯವಸ್ಥೆ ಜಾರಿಗೊಳಿಸಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದರು. 2015ರಲ್ಲಿ ಮೊದಲ ಬಾರಿ ಶ್ರೇಯಾಂಕ ಪ್ರಕಟಗೊಂಡಾಗ ಗುಜರಾತ್‌ ನಂ.1, ಆಂಧ್ರಪ್ರದೇಶ 2 ಹಾಗೂ ತೆಲಂಗಾಣ 13ನೇ ಸ್ಥಾನದಲ್ಲಿದ್ದವು.

Follow Us:
Download App:
  • android
  • ios