ಮೇಕೆ, ಕತ್ತೆ, ಒಂಟೆ ಹಾಲಿನ ಐಸ್ ಕ್ರೀಮ್ ಉತ್ಪಾದಿಸಿ ವರ್ಷಕ್ಕೆ 12 ಕೋಟಿ ಗಳಿಸುತ್ತಿದ್ದಾರೆ ಆಂಧ್ರದ ಈ ಉದ್ಯಮಿ
ಆಂಧ್ರ ಮೂಲದ ಉದ್ಯಮಿಯೊಬ್ಬರು ಆರ್ಗ್ಯಾನಿಕ್ ಐಸ್ ಕ್ರೀಮ್ ತಯಾರಿಸಿ ವರ್ಷಕ್ಕೆ 12 ಕೋಟಿ ರೂ. ಗಳಿಸುತ್ತಿದ್ದಾರೆ. ಈ ಐಸ್ ಕ್ರೀಮ್ ಅನ್ನು ಹಸುವಿನ ಹಾಲಿನಿಂದ ಮಾತ್ರವಲ್ಲ, ಮೇಕೆ, ಒಂಟೆ, ಕತ್ತೆ ಹಾಲಿನಿಂದಲೂ ಸಿದ್ಧಪಡಿಸಲಾಗುತ್ತಿದೆ.
ಐಸ್ ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಎಲ್ಲರಿಗೂ ಅಚ್ಚುಮೆಚ್ಚು. ಆದರೆ, ಮಾರುಕಟ್ಟೆಯಲ್ಲಿ ಸಿಗುವ ಐಸ್ ಕ್ರೀಮ್ ನಲ್ಲಿ ರಾಸಾಯನಿಕಗಳು, ಅಪಾಯಕಾರಿ ಬಣ್ಣಗಳನ್ನು ಬಳಸುತ್ತಾರೆ ಎಂಬ ಭಯ ಅನೇಕರಿಗಿದೆ. ಇದೇ ಕಾರಣಕ್ಕೆ ಕೆಲವರು ಐಸ್ ಕ್ರೀಮ್ ಸವಿಯಲು ಹಿಂದೇಟು ಹಾಕುತ್ತಾರೆ. ಇಂಥ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಆಂಧ್ರ ಪ್ರದೇಶದ ನೆಲ್ಲೂರು ಮೂಲದ ಉದ್ಯಮಿ ಸುಹಾಸ್ ಬಿ. ಶೆಟ್ಟಿ ಆರ್ಗ್ಯಾನಿಕ್ ಐಸ್ ಕ್ರೀಮ್ ಗಳನ್ನು ಉತ್ಪಾದಿಸಲು ಪ್ರಾರಂಭಿಸಿದರು. ದೇಸಿ ಹಸು, ಕತ್ತೆ, ಒಂಟೆ, ಮೇಕೆ ಹಾಲಿನ ಜೊತೆಗೆ ಮಾವು, ಹಲಸು, ತೆಂಗಿನಕಾಯಿ, ಸಪೋಟಾ ಮುಂತಾದ ಹಣ್ಣುಗಳಿಂದ ಐಸ್ ಕ್ರೀಮ್ ಸಿದ್ಧಪಡಿಸಿ ಮಾರಾಟ ಮಾಡಿ ಈಗ ವರ್ಷಕ್ಕೆ 12 ಕೋಟಿ ರೂ. ಆದಾಯ ಗಳಿಸುತ್ತಿದ್ದಾರೆ. ಐಸ್ ಬರ್ಗ್ ಆರ್ಗ್ಯಾನಿಕ್ ಐಸ್ ಕ್ರೀಮ್ ಎಂಬ ಹೆಸರಿನ ಇವರ ಐಸ್ ಕ್ರೀಮ್ ಬ್ರ್ಯಾಂಡ್ ಆಂಧ್ರ ಪ್ರದೇಶ ಮಾತ್ರವಲ್ಲ, ಇತರ ರಾಜ್ಯಗಳಲ್ಲೂ ಜನಪ್ರಿಯತೆ ಗಳಿಸುತ್ತಿದೆ.
ಅಜ್ಜಿಯೇ ಉದ್ಯಮಕ್ಕೆ ಪ್ರೇರಣೆ
ಸುಹಾಸ್ ಶೆಟ್ಟಿ ಬಾಲ್ಯದಲ್ಲಿ ಅಜ್ಜಿ ಮಾಡಿಕೊಡುತ್ತಿದ್ದ ಐಸ್ ಕ್ರೀಮ್ ಸವಿದಿದ್ದರು. ಬೆಳೆದು ದೊಡ್ಡವರಾದ ಮೇಲೂ ಆ ರುಚಿಯನ್ನು ಅವರು ಮರೆತಿರಲಿಲ್ಲ. ಫಾರ್ಮಸಿಯಲ್ಲಿ ಪಿಎಚ್ ಡಿ ಪದವಿ ಪಡೆದ ಸುಹಾಸ್ ಫಾರ್ಮ್ ಕಂಪನಿ ಪ್ರಾರಂಭಿಸುವ ಉದ್ದೇಶ ಹೊಂದಿದ್ದರು. ಆದರೆ, ತನ್ನ ಆಸಕ್ತಿ ಬೇರೆಯದ್ದೇ ಆಗಿದೆ ಎಂಬುದು ಅವರ ಅರಿವಿಗೆ ಬಂತು. ಅಜ್ಜಿ ಮಾಡುತ್ತಿದ್ದ ಮಾದರಿಯಲ್ಲೇ ಐಸ್ ಕ್ರೀಮ್ ಸಿದ್ಧಪಡಿಸಿ ಮಾರಾಟ ಮಾಡಿದ್ರೆ ಹೇಗೆ ಎಂದು ಯೋಚಿಸಿದರು. ಅಜ್ಜಿ ತಯಾರಿಸುತ್ತಿದ್ದ ಮಾದರಿಯಲ್ಲೇ ದೇಸಿ ಹಸುವಿನ ಹಾಲಿನಿಂದ ಯಾವುದೇ ರಾಸಾಯನಿಕ ಬಳಸದೆ ಐಸ್ ಕ್ರೀಮ್ ಸಿದ್ಧಪಡಿಸುವ ಯೋಚನೆ ಅವರಿಗೆ ಬಂತು. ತನ್ನ ಸ್ವಂತ ಊರು ನೆಲ್ಲೂರಿನಲ್ಲಿ 2017ರಲ್ಲಿ ಮೊದಲ ಔಟ್ ಲೆಟ್ ತೆರೆಯುವ ಮೂಲಕ ಮಾರಾಟ ಪ್ರಾರಂಭಿಸಿದರು.
ಕೃಷಿಯೆಂದ್ರೆ ಮೂಗು ಮುರಿಯೋರಿಗೆ ಈ ಸಹೋದರಿಯರು ಮಾದರಿ;40ರ ಹರೆಯದಲ್ಲಿ ನೆಲ್ಲಿಕಾಯಿ ಬೆಳೆದು 11 ಲಕ್ಷ ಗಳಿಕೆ
ಐಸ್ ಕ್ರೀಮ್ ಗೆ ಹೆಚ್ಚಿದ ಬೇಡಿಕೆ
ಅಜ್ಜಿ ಕೂಡ ಈ ಹಿಂದೆ ಸಣ್ಣ ಪ್ರಮಾಣದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿದ್ದರು. ಹೀಗಾಗಿಐಸ್ ಕ್ರೀಮ್ ತಯಾರಿಕೆ, ವ್ಯಾಪಾರದ ಬಗ್ಗೆ ಮಾಹಿತಿ ಕಲೆ ಹಾಕಿದ ಸುಹಾಸ್ ನೆಲ್ಲೂರಿನಲ್ಲಿ ಪುಟ್ಟ ಔಟ್ ಲೆಟ್ ತೆರೆದರು. ಪ್ರಾರಂಭದಲ್ಲಿ ಗಟ್ಟಿ ಹಸುವಿನ ಹಾಲು ಬಳಸಿ 45 ಲೀಟರ್ ಐಸ್ ಕ್ರೀಮ್ ತಯಾರಿಸಿದರು. ಎರಡೇ ದಿನಗಳಲ್ಲಿ ಇಷ್ಟೂ ಐಸ್ ಕ್ರೀಮ್ ಖಾಲಿಯಾಯಿತು. ಹೀಗೆ ದಿನ ಕಳೆದಂತೆ ಸುಹಾಸ್ ಅವರ ಐಸ್ ಕ್ರೀಮ್ ಗೆ ಬೇಡಿಕೆ ಹೆಚ್ಚಿತು.
ಮೇಕೆ, ಒಂಟೆ, ಕತ್ತೆ ಹಾಲಿನ ಐಸ್ ಕ್ರೀಮ್
ಐಸ್ ಬರ್ಗ್ ಐಸ್ ಕ್ರೀಮ್ ಶೇ.100ರಷ್ಟು ನೈಸರ್ಗಿಕ ಹಾಗೂ ಸಾವಯವ ಐಸ್ ಕ್ರೀಮ್ ಆಗಿದೆ. ಈ ಐಸ್ ಕ್ರೀಮ್ ನಲ್ಲಿ ಸಕ್ಕರೆ ಬದಲಿಗೆ ನೈಸರ್ಗಿಕ ಸಿಹಿ ಬಳಸಲಾಗುತ್ತದೆ. ಹಾಗೆಯೇ ಈ ಉತ್ಪನ್ನಗಳಲ್ಲಿ ಯಾವುದೇ ರಾಸಾಯನಿಕ ಸಂರಕ್ಷಕಗಳನ್ನು ಬಳಸೋದಿಲ್ಲ. ಇನ್ನು ಪ್ರಾರಂಭದಲ್ಲಿ ದೇಸಿ ಹಸುವಿನ ಹಾಲಿನಿಂದ ಐಸ್ ಕ್ರೀಮ್ ತಯಾರಿಸುತ್ತಿದ್ದ ಸುಹಾಸ್, ಆ ಬಳಿಕ ಒಂಟೆ, ಕತ್ತೆ, ಮೇಕೆ ಹಾಲಿನಿಂದ ಐಸ್ ಕ್ರೀಮ್ ತಯಾರಿಸಲು ಪ್ರಾರಂಭಿಸಿದರು. ಇನ್ನು ಮಾವು, ಹಲಸು, ಸಪೋಟಾ, ತೆಂಗಿನಕಾಯಿ ಬಳಸಿ ಕೂಡ ಐಸ್ ಕ್ರೀಮ್ ಸಿದ್ಧಪಡಿಸಲಾಗುತ್ತಿದೆ.
ಸರ್ಕಾರಿ ನೌಕರಿ ಬಿಟ್ಟು ಡಿಟರ್ಜೆಂಟ್ ಪೌಡರ್ ಮಾರುತ್ತಿದ್ದ ವ್ಯಕ್ತಿ ಈಗ 23,000 ಕೋಟಿ ಮೌಲ್ಯದ ಕಂಪನಿ ಒಡೆಯ!
ಸೌರಶಕ್ತಿ ಬಳಕೆ
ಇನ್ನು ಐಸ್ ಬರ್ಗ್ ಐಸ್ ಕ್ರೀಮ್ ಫ್ಯಾಕ್ಟರಿ ಸೋಲಾರ್ ವಿದ್ಯುತ್ ನಿಂದಲೇ ಕಾರ್ಯನಿರ್ವಹಿಸುತ್ತಿದೆ. ಇನ್ನು ಯಂತ್ರೋಪಕರಣಗಳನ್ನು ಸ್ವಚ್ಛಗೊಳಿಸಿದ ತ್ಯಾಜ್ಯನೀರನ್ನು ETP ಸ್ಥಾವರ ಬಳಸಿಕೊಂಡು ಮರುಬಳಕೆ ಮಾಡಲಾಗುತ್ತಿದೆ. ಹೀಗೆ ಮರುಬಳಕೆ ಮಾಡಿದ ನೀರನ್ನು ತೋಟಗಾರಿಕೆಗೆ ಬಳಸಲಾಗುತ್ತಿದೆ.
12 ಕೋಟಿ ಆದಾಯ
ಐಸ್ ಬರ್ಗ್ ಬ್ರ್ಯಾಂಡ್ ಪ್ರಸ್ತುತ 70 ಮಳಿಗೆಗಳನ್ನು ಹೊಂದಿದೆ. ಇದರಲ್ಲಿ ಕಂಪನಿ ಮಾಲೀಕತ್ವದ ಹಾಗೂ ಫ್ರಾಂಚೈಸಿ ಮಳಿಗೆಗಳು ಸೇರಿವೆ. ಇನ್ನು ಈ ಬ್ರ್ಯಾಂಡ್ ವರ್ಷಕ್ಕೆ 12 ಕೋಟಿ ಆದಾಯ ಗಳಿಸುತ್ತಿದೆ.