ಬೆಂಗಳೂರು(ಏ.27): ಕೊರೋನಾ ವೈರಸ್‌ ಕಾರಣ ಹೇರಲಾಗಿರುವ ಲಾಕ್‌ಡೌನ್‌ ನಡುವೆಯೂ ‘ಅಕ್ಷಯ ತೃತೀಯಾ’ ಸಮೃದ್ಧಿಯ ಶುಭದಿನದಂದು ರಾಜ್ಯದಾದ್ಯಂತ .45 ಕೋಟಿ ಮೌಲ್ಯದ ಸುಮಾರು 100 ಕೆ.ಜಿ. ಚಿನ್ನ, 100 ಕೆ.ಜಿ. ಬೆಳ್ಳಿ ಮಾರಾಟ ಆಗಿದೆ. ಆದರೆ, ಈ ಹಿಂದಿನ ವರ್ಷಕ್ಕೆ ಹೋಲಿಸಿದ್ದಲ್ಲಿ ಶೇ.3ರಷ್ಟುಮಾತ್ರ ವಹಿವಾಟು ನಡೆದಿದ್ದು, ಉದ್ಯಮಕ್ಕೆ ಹಿನ್ನಡೆ ಆಗಿದೆ.

ಕಳೆದ ವರ್ಷದ ಅಕ್ಷಯ ತೃತೀಯಾದಂದು 1480 ಕೇಜಿ ಚಿನ್ನ ಹಾಗೂ 1500 ಕೇಜಿ ಬೆಳ್ಳಿ ಖರೀದಿ ಆಗಿ ರಾಜ್ಯಾದ್ಯಂತ 3900 ಕೋಟಿ ರು. ವಹಿವಾಟು ನಡೆದಿತ್ತು. ಬೆಂಗಳೂರಿನಲ್ಲೇ .1000 ಕೋಟಿ ರು. ಮೌಲ್ಯದ ಚಿನ್ನ ಮಾರಾಟವಾಗಿತ್ತು ಎಂದು ಆಭರಣ ಉದ್ದಿಮೆಯ ಪ್ರಮುಖರೇ ಹೇಳಿದ್ದರು. ಆದರೆ, ಈ ಬಾರಿ ಕೊರೋನಾ ವೈರಸ್‌ ಹಾವಳಿಗೆ ತತ್ತರಿಸಿದೆ. ‘ಈ ವರ್ಷದ ಅಕ್ಷಯ ತೃತೀಯ ದಿನದಂದು ಈ ಪ್ರಮಾಣ 45 ಕೋಟಿ ರು.ಗೆ ಇಳಿಕೆಯಾಗಿದ್ದು, ಕೇವಲ ಶೇ.3ರಷ್ಟುಮಾತ್ರ ವ್ಯಾಪಾರ ನಡೆದಿದೆ’ ಎಂದು ರಾಜ್ಯ ಆಭರಣ ವರ್ತಕರ ಒಕ್ಕೂಟ ತಿಳಿಸಿದೆ.

ಚಿನ್ನದ ದರ 82,000 ರು.!: ಏನಿದರ ಲೆಕ್ಕಾಚಾರ?

‘ಲಾಕ್‌ಡೌನ್‌ ಕಾರಣ ಚಿನ್ನದ ಅಂಗಡಿಗಳು ತೆರೆದಿರಲಿಲ್ಲ. ಹೀಗಾಗಿ ಬಹುತೇಕ ಮಳಿಗೆಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ನಡೆದಿದೆ. ಆನ್‌ಲೈನ್‌ನಲ್ಲಿ ತಮ್ಮಿಷ್ಟದ ಆಭರಣಗಳನ್ನು ಮುಂಗಡ ಬುಕ್ಕಿಂಗ್‌ ಮಾಡಿ ಗ್ರಾಹಕರು ರಸೀದಿ ಪಡೆದಿದ್ದಾರೆ. ಲಾಕ್‌ಡೌನ್‌ ತೆರವು ಬಳಿಕ ಮಳಿಗೆಗೆ ಬಂದು ತಮ್ಮ ಆಭರಣಗಳನ್ನು ಖರೀದಿಸಲಿದ್ದಾರೆ’ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಬಿ. ರಾಮಾಚಾರಿ ಮಾಹಿತಿ ನೀಡಿದರು.

‘ಚಿನ್ನದ ಮೇಲೆ ಇದೇ ಮೊದಲ ಬಾರಿಗೆ ಅಕ್ಷಯ ತೃತೀಯದಂದು ಆಭರಣ ವಿಮೆ ಮಾಡಿಸಿದ್ದರಿಂದ ಸ್ವಲ್ಪ ಮಟ್ಟಿಗೆ ವ್ಯಾಪಾರ ವಹಿವಾಟು ನಡೆದಿದೆ. ಇದಲ್ಲದೆ ಮೊದಲೇ ನಿಗದಿಪಡಿಸಿದಂತೆ ಆಭರಣಕ್ಕಾಗಿ ಮಾಸಿಕ ಕಂತಿನಲ್ಲಿ ಹಣ ಕಟ್ಟಿದ್ದ ಗ್ರಾಹಕರಿಗೆ ಸಿಹಿಯೊಂದಿಗೆ ಆಭರಣಗಳನ್ನು ಮನೆಗೇ ತಲುಪಿಸಲಾಯಿತು’ ಎಂದು ತಿಳಿಸಿದರು.

ಸ್ಯಾನಿಟೈಸರ್‌ನೊಂದಿಗೆ ಒಡವೆ ಪಾರ್ಸೆಲ್…!:

ಈ ದಿನ ಚಿನ್ನಾಭರಣ ವರ್ತಕರು ಗ್ರಾಹಕರಿಗೆ ಆಭರಣಗಳನ್ನು ತಲುಪಿಸುವುದರೊಂದಿಗೆ ಸಾಮಾಜಿಕ ಕಳಕಳಿ ಮೆರೆದಿದ್ದಾರೆ. ಮುಂಗಡ ಬುಕ್ಕಿಂಗ್‌ ಮಾಡಿದವರು ಹಾಗೂ ಆನ್‌ಲೈನ್‌ನಲ್ಲಿ ಬಂಗಾರ ಖರೀದಿಸಿದವರಿಗೆ ಸಂಪ್ರದಾಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಪಾರ್ಸಲ್‌ ತಲುಪಿಸಲಾಗಿದೆ.

ಕೆಲ ವ್ಯಾಪಾರಿಗಳು ಸಿಹಿಯೊಂದಿಗೆ 6 ಪೀಸ್‌ ಮಾಸ್ಕ್‌ಗಳು ಮತ್ತು 6 ಪೀಸ್‌ ಸ್ಯಾನಿಟೈಸರ್‌ಗಳನ್ನು ಪ್ಯಾಕ್‌ ಮಾಡಿ, 1 ಗ್ರಾಂ ಚಿನ್ನದ ನಾಣ್ಯವನ್ನು ಪಾರ್ಸೆಲ್‌ ಕಳಿಸಿದ್ದಾರೆ. ಜತೆಗೆ ಕೆಲವರು ವಿಡಿಯೋ ಕಾಲ್‌ ಮೂಲಕ ಬುಕ್‌ ಮಾಡಿದ ಚೈನ್‌ ಮತ್ತು ಚಿನ್ನ ಖರದಿಯ ರಸೀದಿ ಪ್ರಮಾಣ ಪತ್ರಗಳನ್ನು ಪಾರ್ಸಲ್‌ ಕಳಿಸಲಾಗಿದೆ. ಹೀಗಾಗಿ ವರ್ತಕರು ತೋರಿರುವ ಈ ಸಾಮಾಜಿಕ ಕಾಳಜಿ ನಡೆಗೆ ಗ್ರಾಹಕರು ಸಂತಸ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌: ಅಕ್ಷಯ ತೃತೀಯ ದಿನದಂದು ಕೋಟಿ ಕೋಟಿ ನಷ್ಟ..!

ಕೊರೊನಾ ವೈರಸ್‌ ಬಾಧೆಯಿಲ್ಲದ ಹಸಿರು ವಲಯ ಪ್ರದೇಶಗಳಲ್ಲಿ ಆಭರಣ ಮಳಿಗೆಗಳನ್ನು ಎರಡು ಗಂಟೆಗಳ ಕಾಲ ತೆರೆಯಬಹುದು ಎಂದು ಹೇಳಲಾಗಿತ್ತು. ಹೀಗಾಗಿ ಕೆಲವೆಡೆ ಮಳಿಗೆಗಳನ್ನು ತೆರೆದರೆ, ಹಲವರು ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಮಳಿಗೆಗಳನ್ನು ತೆರೆಯುವ ಗೋಜಿಗೇ ಹೋಗಲಿಲ್ಲ. ಕೇವಲ ಆನ್‌ಲೈನ್‌ ವಹಿವಾಟು ಮಾತ್ರ ನಡೆಯಿತು.