Asianet Suvarna News Asianet Suvarna News

ಲಾಕ್‌ಡೌನ್‌: ಅಕ್ಷಯ ತೃತೀಯ ದಿನದಂದು ಕೋಟಿ ಕೋಟಿ ನಷ್ಟ..!

ಧಾರವಾಡ ಜಿಲ್ಲೆಯಲ್ಲೇ ಅಕ್ಷಯ ತೃತೀಯ ದಿನದಂದು ಕನಿಷ್ಠವೆಂದರೂ 75 ರಿಂದ 80 ಕೋಟಿ ವರೆಗೂ ವಹಿವಾಟು| ಆದರೆ ಈ ವರ್ಷ ಕೊರೋನಾದ ಲಾಕ್‌ಡೌನ್‌ನಿಂದಾಗಿ ಈ ವಹಿವಾಟಿಗೆಲ್ಲ ಬಿದ್ದ ಬ್ರೇಕ್‌| ಆನ್‌ಲೈನ್‌ನಲ್ಲಿ ವಹಿವಾಟಿಗೂ ಸಿಗದ ಸ್ಪಂದನೆ|

Gold Trading Loss due to India LockDwon in Hubballi
Author
Bengaluru, First Published Apr 26, 2020, 7:27 AM IST

ಹುಬ್ಬಳ್ಳಿ(ಏ.26): ಲಾಕ್‌ಡೌನ್‌ನಿಂದಾಗಿ ಅಕ್ಷಯ ತೃತೀಯ ದಿನದಂದು ಆಗುತ್ತಿದ್ದ ಚಿನ್ನದ ವಹಿವಾಟಿಗೂ ಗರ ಬಡಿದಂತಾಗಿದೆ. ದೊಡ್ಡ ದೊಡ್ಡ ಸಂಸ್ಥೆಗಳ ಆನ್‌ಲೈನ್‌ ವಹಿವಾಟಿಗೂ ಜನರಿಂದ ಅಷ್ಟೊಂದು ಸ್ಪಂದನೆ ಸಿಗುತ್ತಿಲ್ಲ.

"

ಅಕ್ಷಯ ತೃತೀಯ ಚಿನ್ನ ಖರೀದಿಗೆ ಹೇಳಿ ಮಾಡಿಸಿದ ದಿನ. ಪ್ರತಿ ತಿಂಗಳು ಇಷ್ಟಿಷ್ಟು ಕೂಡಿಟ್ಟು ಅಕ್ಷಯ ತೃತೀಯ ದಿನದಂದು ಚಿನ್ನ ಖರೀದಿಸುವವರ ಸಂಖ್ಯೆ ಜಾಸ್ತಿ. ಈ ಕಾರಣದಿಂದಾಗಿ ಧಾರವಾಡ ಜಿಲ್ಲೆಯಲ್ಲೇ ಸಣ್ಣ ಪುಟ್ಟ ಸರಾಫ್‌ ಅಂಗಡಿ, ಮಲಬಾರ್‌, ತನಿಷ್ಕ ಸೇರಿದಂತೆ ದೊಡ್ಡ ದೊಡ್ಡ ಎಲ್ಲ ಶಾಪ್‌ಗಳನ್ನು ಹಿಡಿದರೂ ಕನಿಷ್ಠವೆಂದರೂ  75 ರಿಂದ 80 ಕೋಟಿ ವರೆಗೂ ವಹಿವಾಟು ಆಗುತ್ತಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಈ ವರ್ಷ ಕೊರೋನಾದ ಲಾಕ್‌ಡೌನ್‌ನಿಂದಾಗಿ ಈ ವಹಿವಾಟಿಗೆಲ್ಲ ಬ್ರೇಕ್‌ ಬಿದ್ದಂತಾಗಿದೆ.

ಲಾಕ್‌ಡೌನ್‌ ಎಫೆಕ್ಟ್‌: ಕಿಸಾನ್‌ ಸಮ್ಮಾನ ಯೋಜನೆ, ರೈತರ ಖಾತೆಗೆ ಹಣ ಜಮೆ

ಹುಬ್ಬಳ್ಳಿ-ಧಾರವಾಡ ಸರಾಫ್‌ ಸಂಘದಲ್ಲಿ 180 ಜ್ಯುವೆಲರಿ ಶಾಪ್‌ಗಳ ಮಾಲೀಕರು ಸದಸ್ಯತ್ವವನ್ನು ಹೊಂದಿದ್ದಾರೆ. ಅಕ್ಷಯ ತೃತೀಯ ದಿನದಂದೇ ಈ ಎಲ್ಲ 180 ಶಾಪ್‌ಗಳಲ್ಲಿ ಕನಿಷ್ಠವೆಂದರೂ 25 ರಿಂದ 30 ಕೋಟಿ ವಹಿವಾಟು ನಡೆಯುತ್ತಿತ್ತು. ಆದರೆ ಅದಕ್ಕೆಲ್ಲ ಈಗ ಬ್ರೇಕ್‌ ಬಿದ್ದಿದೆ. ಅಕ್ಷಯ ತೃತೀಯ ದಿನದಂದು ಮಾತ್ರ ಮಾರಾಟ ಮಾಡಲು ಅವಕಾಶ ಮಾಡಿಕೊಡಿ ಎಂದು ಸರಾಫ್‌ ಸಂಘದ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಕೂಡ ಮಾಡಲಾಗಿತ್ತು. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗಲ್ಲ. ಕೊರೋನಾ ಉಲ್ಬಣಗೊಂಡರೆ ನಿಯಂತ್ರಿಸುವುದು ಕಷ್ಟವಾಗುತ್ತದೆ. ಆದಕಾರಣ ಅನುಮತಿ ನೀಡಲ್ಲ ಎಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ. ಇದರಿಂದಾಗಿ ವ್ಯಾಪಾರಕ್ಕೆ ಬ್ರೇಕ್‌ ಬಿದ್ದಂತಾಗಿದೆ.

ಆನ್‌ಲೈನ್‌ ಖರೀದಿಗೆ ಅವಕಾಶ:

ಇನ್ನೂ ದೊಡ್ಡ ದೊಡ್ಡ ಸಂಸ್ಥೆಗಳಾದ ಮಲಬಾರ್‌ ಗೋಲ್ಡ್‌, ತನಿಷ್ಕ ಸೇರಿದಂತೆ ಮತ್ತಿತರರ ಸಂಸ್ಥೆಗಳಲ್ಲಿ ಪ್ರತಿವರ್ಷ ಅಕ್ಷಯ ತೃತೀಯ ಒಂದೇ ದಿನ 50 ಕೋಟಿಗೂ ಅಧಿಕ ವಹಿವಾಟು ಆಗುತ್ತಿತ್ತು ಎನ್ನಲಾಗಿದೆ. ಈ ವರ್ಷ ಅನುಮತಿ ಇಲ್ಲದ ಕಾರಣಕ್ಕಾಗಿ ಆನ್‌ಲೈನ್‌ನಲ್ಲಿ ವಹಿವಾಟು ನಡೆಸುತ್ತಿವೆ. ಕಳೆದ 3-4 ದಿನಗಳಿಂದ ಆನ್‌ಲೈನ್‌ನಲ್ಲಿ ಚಿನ್ನ ಖರೀದಿ ವ್ಯವಹಾರ ನಡೆಯುತ್ತಿದೆ. ಇವತ್ತಿನ ದರಕ್ಕೆ ಆನ್‌ಲೈನ್‌ನಲ್ಲಿ ದುಡ್ಡು ಕಟ್ಟಿಚಿನ್ನ ಖರೀದಿಯ ಬುಕ್ಕಿಂಗ್‌ ಮಾಡಿಕೊಳ್ಳಬೇಕು. ಲಾಕ್‌ಡೌನ್‌ ಮುಗಿದ ಬಳಿಕ 30 ದಿನಗಳೊಳಗೆ ಆ ಚಿನ್ನವನ್ನು ಶೋ ರೂಮ್‌ನಿಂದ ಒಯ್ಯಬಹುದಾಗಿದೆ. ಇದಕ್ಕೆ ಮೇಕಿಂಗ್‌ ಚಾರ್ಜ್‌ನಲ್ಲಿ ಶೇ. 30 ರಷ್ಟು ವಿನಾಯಿತಿ ನೀಡಲಾಗಿದೆ. ಆದರೂ ಆನ್‌ಲೈನ್‌ನಲ್ಲಿ ಖರೀದಿಯಲ್ಲಿ ಅಷ್ಟೊಂದು ಜನರು ಆಸಕ್ತಿ ತೋರುತ್ತಿಲ್ಲ ಎಂದು ಹೇಳಲಾಗುತ್ತಿದೆ.

ಮದುವೆ ಸೀಜನ್‌:

ಬರೀ ಅಕ್ಷಯ ತೃತೀಯ ಒಂದೇ ಅಲ್ಲ. ಮಾರ್ಚ್‌- ಏಪ್ರಿಲ್‌ ಮದುವೆ ಸೀಜನ್‌. ಹೀಗಾಗಿ ಸಾಕಷ್ಟು ಚಿನ್ನದ ವಹಿವಾಟು ನಡೆಯುತ್ತಿತ್ತು. ಅದೆಲ್ಲದಕ್ಕೂ ಈ ವರ್ಷ ಬ್ರೇಕ್‌ ಬಿದ್ದಂತಾಗಿದೆ. ಇದೀಗ ಮೇನಲ್ಲಿ ಲಾಕ್‌ಡೌನ್‌ ಒಪನ್‌ ಆದ ಮೇಲೆ ವಹಿವಾಟು ಹೇಗೆ ನಡೆಯುತ್ತದೆ ಎಂಬುದನ್ನು ನೋಡಬೇಕು ಎಂದು ಸರಾಫ್‌ ಸಂಘದವರು ಅಭಿಪ್ರಾಯಪಡುತ್ತಾರೆ. ಒಟ್ಟಿನಲ್ಲಿ ಈ ಸಲ ಲಾಕ್‌ಡೌನ್‌ನಿಂದಾಗಿ ಅಕ್ಷಯ ತೃತೀಯ ದಿನಕ್ಕೂ ಬಿಸಿ ಮುಟ್ಟಿದಂತಾಗಿರುವುದಂತೂ ಸತ್ಯ.

ಅಕ್ಷಯ ತೃತೀಯ ದಿನದಂದು ಧಾರವಾಡ ಜಿಲ್ಲೆಯಲ್ಲಿ 25 ರಿಂದ 30 ಕೋಟಿ ವಹಿವಾಟು ಆಗುತ್ತಿತ್ತು. ಮದುವೆ ಸೀಜನ್‌ ಸೇರಿ ಬರೋಬ್ಬರಿ 100 ಕೋಟಿಗೂ ಅಧಿಕ ವಹಿವಾಟಿಗೆ ಹೊಡೆತ ಬಿದ್ದಂತಾಗಿದೆ ಎಂದು ಸರಾಫ ಸಂಘದ ಅಧ್ಯಕ್ಷ ಪರಶುರಾಮ್‌ ಚಿಲ್ಲಾಳ ಹೇಳಿದ್ದಾರೆ. 

ನಮ್ಮ ಸಂಸ್ಥೆಯಲ್ಲಿ ಆನ್‌ಲೈನ್‌ನಲ್ಲಿ ವಹಿವಾಟು ಪ್ರಾರಂಭಿಸಿದ್ದೇವೆ. ಕಳೆದ 3-4 ದಿನಗಳಿಂದ ಆನ್‌ಲೈನ್‌ನಲ್ಲಿ ನಡೆಸಲಾಗುತ್ತಿದೆ. ಆದರೆ ಆನ್‌ಲೈನ್‌ನಲ್ಲಿ ಅಷ್ಟಾಗಿ ಖರೀದಿಯಾಗುತ್ತಿಲ್ಲ ಎಂದು ಮಲಬಾರ್‌ ಗೋಲ್ಡ್‌ ವ್ಯವಸ್ಥಾಪಕ ಶಶಾಂಕ ಹೇಳಿದ್ದಾರೆ. 
 

Follow Us:
Download App:
  • android
  • ios