ಮುಂಬೈ[ಮೇ.11]: ಪ್ರಯಾಣದ ದಿನ ಅಥವಾ ಪ್ರಯಾಣಕ್ಕೆ ಕೆಲವೇ ತಾಸುಗಳ ಮುನ್ನ ವಿಮಾನ ಟಿಕೆಟ್‌ಗಳ ಬೆಲೆ ಗಗನಕ್ಕೇರುವುದು ಮಾಮೂಲಿ. ಇದೀಗ ಜೆಟ್‌ ಏರ್‌ವೇಸ್‌ ಸೇವೆ ಬಂದ್‌ ಆಗಿರುವುದರಿಂದ ಕಡೇ ಗಳಿಗೆಯಲ್ಲಿ ವಿಮಾನ ಖರೀದಿಸಲು ಹೋದರೆ ಟಿಕೆಟ್‌ ಬೆಲೆ ಇನ್ನೂ ಹೆಚ್ಚಾಗಿರುತ್ತದೆ. ಇಂತಹ ಹೊತ್ತಿನಲ್ಲಿ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿಯೊಂದನ್ನು ನೀಡಿದೆ. ಪ್ರಯಾಣಕ್ಕೆ ಕೆಲವೇ ತಾಸುಗಳ ಮುನ್ನ ಟಿಕೆಟ್‌ ಖರೀದಿಸುವವರಿಗೆ ಭಾರಿ ಡಿಸ್ಕೌಂಟ್‌ ನೀಡುವುದಾಗಿ ಪ್ರಕಟಿಸಿದೆ.

ಈ ಡಿಸ್ಕೌಂಟ್‌ ಶೇ.50ರಷ್ಟುಇರುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಆದರೆ ಏರ್‌ ಇಂಡಿಯಾ ಆ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ. ವಿಮಾನ ನಿರ್ಗಮನಕ್ಕೆ ಮೂರು ತಾಸುಗಳು ಇರುವಾಗ ವಿಮಾನ ಟಿಕೆಟ್‌ಗಳನ್ನು ಭಾರಿ ರಿಯಾಯಿತಿ ದರದಲ್ಲಿ ನೀಡುವುದಾಗಿ ಹೇಳಿದೆ. ಶುಕ್ರವಾರ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ಸಾಮಾನ್ಯವಾಗಿ ಕಡೇ ಕ್ಷಣದಲ್ಲಿ ಖರೀದಿಸುವ ಟಿಕೆಟ್‌ಗಳ ಬೆಲೆ ಮೂಲ ಬೆಲೆಗಿಂತ ಶೇ.40ರಷ್ಟುಅಧಿಕವಾಗಿರುತ್ತದೆ. ಜೆಟ್‌ ಏರ್‌ವೇಸ್‌ ಸೇವೆ ಸ್ಥಗಿತಗೊಂಡ ಬಳಿಕ ಇದು ಇನ್ನೂ ಹೆಚ್ಚಾಗಿದೆ.

ತೀವ್ರ ಆರ್ಥಿಕ ನಷ್ಟದಿಂದಾಗಿ ಜೆಟ್‌ ಏರ್‌ವೇಸ್‌ ವಿಮಾನಗಳು ತಾತ್ಕಾಲಿಕವಾಗಿ ಹಾರಾಟ ಸ್ಥಗಿತಗೊಳಿಸಿದ ಬೆನ್ನಲ್ಲೇ, ಪ್ರಯಾಣಿಸಬೇಕಾದ ದಿನಾಂಕದ ಕೊನೆ ಘಳಿಗೆಯಲ್ಲಿ ವಿಮಾನದ ಟಿಕೆಟ್‌ ದರ ದುಬಾರಿಯಾಗುತ್ತಿದೆ. ಆದರೆ, ಇದೀಗ ಪ್ರಯಾಣಿಕರ ನೆರವಿಗೆ ಸರ್ಕಾರ ಸ್ವಾಮ್ಯದ ಏರ್‌ ಇಂಡಿಯಾ ಧಾವಿಸಿದೆ. ಕೊನೇ ಘಳಿಗೆಯಲ್ಲಿ ಕಾಯ್ದಿಸಲಾಗುವ ಟಿಕೆಟ್‌ಗೆ ಭಾರೀ ಪ್ರಮಾಣದ ರಿಯಾಯ್ತಿ ನೀಡಲು ಏರಿಂಡಿಯಾ ಮುಂದಾಗಿದೆ. ಈ ಟಿಕೆಟ್‌ಗಳನ್ನು ಮೊಬೈಲ್‌ ಆ್ಯಪ್‌, ಏಜೆಂಟ್‌ಗಳು, ವೆಬ್‌ಸೈಟ್‌ ಹಾಗೂ ಕೌಂಟರ್‌ಗಳಲ್ಲಿ ಕಾಯ್ದಿರಿಸಬಹುದಾಗಿದೆ. ಇದಕ್ಕೂ ಮುನ್ನ ಏರಿಂಡಿಯಾ ಅಧಿಕಾರಿಯೊಬ್ಬರು, ಕೊನೇ ಘಳಿಗೆಯ ವಿಮಾನದ ಟಿಕೆಟ್‌ ಅನ್ನು ಶೇ.50ರಷ್ಟುರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದರು.