ನವದೆಹಲಿ[ಆ.24: ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದಕ್ಕೆ ಆ ಕಂಪನಿ ಬರೋಬ್ಬರಿ 4500 ಕೋಟಿ ರು. ಬಾಕಿ ಉಳಿಸಿಕೊಂಡಿರುವುದು ಕಾರಣ ಎಂಬ ವಿಷಯ ಬೆಳಕಿಗೆ ಬಂದಿದೆ.

ಸಾಮಾನ್ಯವಾಗಿ ಏರ್‌ ಇಂಡಿಯಾಗೆ ತೈಲ ಕಂಪನಿಗಳು ಬಾಕಿ ಪಾವತಿಗೆ 90 ದಿನ ಸಮಯಾವಕಾಶ ನೀಡುತ್ತವೆ. ಆದರೆ 200 ದಿನಗಳಾದರೂ ಏರ್‌ ಇಂಡಿಯಾ ಸಂಸ್ಥೆ ಬಾಕಿ ಪಾವತಿಸದ ಕಾರಣ ಆ ಮೊತ್ತ 4500 ಕೋಟಿ ರು.ಗೆ ಏರಿಕೆಯಾಗಿದೆ.

ಆದರೆ ಈಗ ಏರ್‌ ಇಂಡಿಯಾ 60 ಕೋಟಿ ರು. ನೀಡಲು ಮುಂದೆ ಬಂದಿದೆ. ಇದು ಏನೇನೂ ಅಲ್ಲ. ಹೀಗಾಗಿ ತೈಲ ಪೂರೈಕೆ ಸ್ಥಗಿತಗೊಳಿಸಲಾಗಿದೆ ಎಂದು ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಆಯಿಲ್‌, ಭಾರತ್‌ ಪೆಟ್ರೋಲಿಯಂ ಹಾಗೂ ಹಿಂದುಸ್ತಾನ್‌ ಪೆಟ್ರೋಲಿಯಂ ಕಂಪನಿಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.