ಅಕ್ಟೋಬರ್ ತಿಂಗಳಲ್ಲಿ 1,148 ಕೋಟಿ ರೂ. ಮೌಲ್ಯದ ಚುನಾವಣಾ ಬಾಂಡ್ ಮಾರಾಟ; ಹೈದರಾಬಾದ್ ನಲ್ಲಿ ದಾಖಲೆ ಖರೀದಿ
ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ಅಕ್ಟೋಬರ್ ನಲ್ಲಿ 1,148.38 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಿದೆ.ಇದರಲ್ಲಿ ಅತೀಹೆಚ್ಚು ಬಾಂಡ್ ಗಳು ಹೈದರಾಬಾದ್ ಶಾಖೆಯಲ್ಲಿ ಮಾರಾಟವಾಗಿವೆ.
ನವದೆಹಲಿ (ನ.2): ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಕ್ಟೋಬರ್ ನಲ್ಲಿ 1,148.38 ಕೋಟಿ ರೂ. ಮೊತ್ತದ ಚುನಾವಣಾ ಬಾಂಡ್ ಗಳನ್ನು ಮಾರಾಟ ಮಾಡಿದೆ. ಇದರಲ್ಲಿ ಅತೀಹೆಚ್ಚು ಪ್ರಮಾಣದ ಅಂದರೆ ಶೇ.33ರಷ್ಟು ಬಾಂಡ್ ಗಳನ್ನು ಹೈದರಾಬಾದ್ ಶಾಖೆಯಲ್ಲಿ ಮಾರಾಟ ಮಾಡಲಾಗಿದೆ. 2018ನೇ ಸಾಲಿನಲ್ಲಿ ಚುನಾವಣಾ ಬಾಂಡ್ ಗಳನ್ನು ಬಿಡುಗಡೆ ಮಾಡಿದ ಬಳಿಕ 28 ಹಂತಗಳಲ್ಲಿ ಮಾರಾಟ ಮಾಡಲಾಗಿದ್ದು, ಒಟ್ಟು 14,940.27 ಕೋಟಿ ರೂ. ಮೊತ್ತ ಸಂಗ್ರಹಿಸಲಾಗಿದೆ. ಉಳಿದ ನಗದೀಕರಣಗೊಳ್ಳದ ಬಾಂಡ್ ಗಳ ಅಂದಾಜು 23.88 ಕೋಟಿ ರೂ. ಮೊತ್ತವನ್ನು ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗೆ ಕಳುಹಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಜುಲೈನಲ್ಲಿ ನಡೆದ ಚುನಾವಣಾ ಬಾಂಡ್ ಗಳ ಮಾರಾಟದಲ್ಲಿ 812.80 ಕೋಟಿ ರೂ. ಮೌಲ್ಯದ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಈ ವರ್ಷದ ಏಪ್ರಿಲ್ ನಲ್ಲಿ 970.50 ಕೋಟಿ ರೂ. ಮೊತ್ತದ ಬಾಂಡ್ ಗಳನ್ನು ಮಾರಾಟ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆ (ಆರ್ ಟಿಇ) ಮೂಲಕ ಸಾಮಾಜಿಕ ಹೋರಾಟಗಾರ ಕಮಾಂಡ್ ಲೋಕೇಶ್ ಭಾತ್ರ ಅವರು ಪಡೆದ ಮಾಹಿತಿ ಅನ್ವಯ ಇತ್ತೀಚಿಗೆ ಎಸ್ ಬಿಐ 2,012 ಬಾಂಡ್ ಗಳನ್ನು ಮಾರಾಟ ಮಾಡಿದೆ. ಇದರಲ್ಲಿ 1,095 ಬಾಂಡ್ ಗಳು 1 ಕೋಟಿ ರೂ. ಮುಖಬೆಲೆಯದ್ದಾಗಿವೆ.
ಇನ್ನು ತಲಾ ಒಂದು ಲಕ್ಷ ರೂ. ಮುಖಬೆಲೆಯ 302 ಬಾಂಡ್ ಗಳು, ತಲಾ 10ಲಕ್ಷ ರೂ. ಮುಖಬೆಲೆಯ 503 ಬಾಂಡ್ ಗಳು, ತಲಾ 10,000ರೂ. ಮುಖಬೆಲೆಯ 55 ಬಾಂಡ್ ಗಳು ಹಾಗೂ ತಲಾ 1,000 ಮುಖಬೆಲೆಯ 57 ಬಾಂಡ್ ಗಳು ಮಾರಾಟವಾಗಿವೆ. 5,000 ರೂ. ಮುಖಬೆಲೆಯ ಬಾಂಡ್ ಗಳನ್ನು ಹೊರತುಪಡಿಸಿ ಉಳಿದ ಎಲ್ಲ ಬಾಂಡ್ ಗಳನ್ನು ಪಕ್ಷಗಳು ನಗದೀಕರಿಸಿವೆ. ಇನ್ನು ಜುಲೈನಲ್ಲಿ ಹೈದರಾಬಾದ್ ಶಾಖೆ ಅತೀಹೆಚ್ಚು ಮೊತ್ತದ ಅಂದರೆ 377.63 ಕೋಟಿ ರೂ. ಮೌಲ್ಯದ ಬಾಂಡ್ ಗಳನ್ನು ಮಾರಾಟ ಮಾಡಿದೆ. ಇನ್ನು ಬಾಂಡ್ ಗಳ ನಗದೀಕರಣದಲ್ಲಿ ದೆಹಲಿ ಬ್ರ್ಯಾಂಚ್ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದೆ. ಇದರ ನಂತರದ ಸ್ಥಾನದಲ್ಲಿ ಕೋಲ್ಕತ್ತ ಶಾಖೆಯಿದ್ದು, 171.28 ರೂ. ಮೌಲ್ಯದ ಬಾಂಡ್ ಗಳನ್ನು ನಗದೀಕರಿಸಿದೆ. 25 ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಗಳನ್ನು ನಗದೀಕರಿಸಲು ಬಾಕಿಯಿದೆ ಎಂದು ಎಸ್ ಬಿಐ ಆರ್ ಟಿಐ ಅಡಿಯಲ್ಲಿ ನೀಡಿರುವ ಮಾಹಿತಿಯಲ್ಲಿ ತಿಳಿಸಿದೆ.
ಜೀವನ ಪ್ರಮಾಣ ಪತ್ರ ಸಲ್ಲಿಕೆ ಸೇರಿದಂತೆ ಈ 4 ಹಣಕಾಸು ಕೆಲಸಗಳಿಗೆ ನವೆಂಬರ್ ತಿಂಗಳಲ್ಲಿ ಅಂತಿಮ ಗಡುವು
ಏನಿದು ಚುನಾವಣಾ ಬಾಂಡ್?
ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆ ನೀಡುವುದಕ್ಕೆ ಪರ್ಯಾಯವಾಗಿ ಚುನಾವಣಾ ಬಾಂಡ್ ಗಳನ್ನು ಬಳಸಲಾಗುತ್ತಿದೆ. ರಾಜಕೀಯ ದೇಣಿಗೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್ ಗಳನ್ನು ಪರಿಚಯಿಸಲಾಗಿದೆ. ದೇಶದಲ್ಲಿ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ವ್ಯವಸ್ಥೆಯ ಶುದ್ಧೀಕರಣಕ್ಕೆ 2017ರಲ್ಲಿ ಬಾಂಡ್ ಗಳನ್ನು ಪರಿಚಯಿಸಲಾಗಿತ್ತು.
ಯಾರು ಖರೀದಿಸಬಹುದು?
ಭಾರತದ ಯಾವುದೇ ನಾಗರಿಕ ಅಥವಾ ಸಂಸ್ಥೆ ಅಥವಾ ಕಂಪನಿ ಚುನಾವಣಾ ಬಾಂಡ್ ಗಳನ್ನು ಖರೀದಿಸಬಹುದು. ಒಬ್ಬ ವ್ಯಕ್ತಿ ಚುನಾವಣಾ ಬಾಂಡ್ ಗಳನ್ನು ಏಕಾಂಗಿಯಾಗಿ ಅಥವಾ ಇನ್ನೊಬ್ಬ ವ್ಯಕ್ತಿ ಜೊತೆಗೆ ಜಂಟಿಯಾಗಿ ಖರೀದಿಸಬಹುದು. ಎಲ್ಲ ಕೆವೈಸಿ ನಿಯಮಗಳನ್ನು ಪೂರ್ಣಗೊಳಿಸಿದ ಹಾಗೂ ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ ಬಳಿಕವಷ್ಟೇ ಚುನಾವಣಾ ಬಾಂಡ್ ಗಳನ್ನು ಖರೀದಿಸಲು ಅವಕಾಶ ನೀಡಲಾಗುತ್ತದೆ. ಇನ್ನು ಚುನಾವಣಾ ಬಾಂಡ್ ನಲ್ಲಿ ಖರೀದಿದಾರನ ಹೆಸರು ಇರೋದಿಲ್ಲ. ಈ ಬಾಂಡ್ ಗಳು ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ ತಿಂಗಳಲ್ಲಿ 10 ದಿನಗಳ ಕಾಲ ಖರೀದಿಗೆ ಲಭ್ಯವಿರುತ್ತದೆ.
ಎಸ್ ಬಿಐ ಕಾರ್ಡ್ ಜೊತೆಗೆ ರಿಲಯನ್ಸ್ ರಿಟೇಲ್ ಒಪ್ಪಂದ; ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ
ಯಾರು ಸ್ವೀಕರಿಸಬಹುದು?
ಚುನಾವಣಾ ಬಾಂಡ್ ಗಳನ್ನು ಸ್ವೀಕರಿಸಲು 1951ರ ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 29ಎ ಅಡಿಯಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಹಿಂದಿನ ಲೋಕಸಭಾ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ಶೇ.1ಕ್ಕಿಂತ ಕಡಿಮೆ ಮತಗಳನ್ನು ಪಡೆದಿರುವ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ ಸ್ವೀಕರಿಸಲು ಅವಕಾಶವಿಲ್ಲ.