Zomato ಬೆನ್ನಲ್ಲೇ ವಿವಾದಕ್ಕೀಡಾದ ಮೆಕ್‌ಡಿ, ಟ್ವಿಟರ್‌ನಲ್ಲಿ #BoycottMcDonalds ಟ್ರೆಂಡ್!’
Zomato ಬೆನ್ನಲ್ಲೇ ವಿವಾದಕ್ಕೀಡಾದ McDonalds India| ಟ್ವಿಟರ್‌ನಲ್ಲಿ #BoycottMcDonalds ಟ್ರೆಂಡ್!| ಸ್ಪಷ್ಟನೆ ಕೊಟ್ಟರೂ ಸುಮ್ಮನಾಗದ ನೆಟ್ಟಿಗರು
ನವದೆಹಲಿ[ಆ.24]: ಕೆಲ ದಿನಗಳ ಹಿಂದೆ Zomato ನಲ್ಲಿ ದನದ ಮಾಂಸ ಹಾಗೂ ಧರ್ಮಕ್ಕೆ ಸಂಬಂಧಿಸಿದಂತೆ ಹಲವಾರು ವಿಚಾರಗಳು ಸದ್ದು ಮಾಡಿದ್ದವು. ಇದಾದ ಬಳಿಕ ಹಲವಾರು ಮಂದಿ Zomatoವನ್ನು ಸೋಶಿಯಲ್ ಮೀಡಿಯಾದಲ್ಲಿ ಬಹಿಷ್ಕರಿಸಿದ್ದರು. ಇದರ ಬೆನ್ನಲ್ಲೇ McDonalds India ಕೂಡಾ ಇಂತಹುದೇ ವಿವಾದವೊಂದಕ್ಕೆ ಆಹಾರವಾಗುತ್ತಿದೆ. ಮೆಕ್ ಡಿ ತನ್ನ ಗ್ರಾಹಕರಿಗೆ ಹಲಾಲ್ ಮಾಂಸ ನೀಡುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದು, ಸದ್ಯ ಟ್ವಿಟರ್ ನಲ್ಲಿ #BoycottMcDonalds ಎಂಬ ಅಭಿಯಾನ ಟ್ರೆಂಡ್ ಆಗಿದೆ.
ಏನಿದು ಪ್ರಕರಣ?
ಸೋಶಿಯಲ್ ಮೀಡಿಯಾ ಪ್ಲಾಟ್ ಫಾರಂನಲ್ಲಿ ಬಳಕೆದಾರನೊಬ್ಬ McDonalds India ಬಳಿ 'ಭಾರತದಲ್ಲಿರುವ ನಿಮ್ಮ ಎಲ್ಲಾ ರೆಸ್ಟೋರೆಂಟ್ ಗಳು ಹಲಾಲ್ ಸರ್ಟಿಫೈಡಾ?' ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ 'McDonalds India ಗೆ ಸಂಪರ್ಕಿಸಿದ ನಿಮಗೆ ಧನ್ಯವಾದಗಳು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ನಮಗೆ ಖುಷಿಯಾಗುತ್ತದೆ. ಭಾರತದಾದ್ಯಂತ ನಮ್ಮೆಲ್ಲಾ ರೆಸ್ಟೋರೆಂಟ್ ಗಳಲ್ಲಿ ಬಳಸುವ ಮಾಂಸ ಉತ್ಕೃಷ್ಟ ಗುಣಮಟ್ಟದ್ದು ಹಾಗೂ ಸರ್ಕಾರದಿಂದ ಮಾನ್ಯತೆ ಪಡೆದ ಡೀಲರ್ ಗಳಿಂದ ತರಿಸಿಕೊಳ್ಳುತ್ತೇವೆ. ಇವೆಲ್ಲವೂ HACCP ಸರ್ಟಿಫೈಡ್ ಮಾಂಸ' ಎಂದಿದ್ದಾರೆ.
ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ McDonalds India 'ನಮ್ಮೆಲ್ಲಾ ರೆಸ್ಟೋರೆಂಟ್ ಗಳಲ್ಲಿ ಹಲಾಲ್ ಸರ್ಟಿಫಿಕೇಟ್ ಇದೆ. ಇದಕ್ಕೂ ಮೇಲಾಗಿ ನೀವು ನಮ್ಮ ರೆಸ್ಟೋರೆಂಟ್ ಮ್ಯಾನೇಜರ್ ಗಳ ಬಳಿ ಈ ಸರ್ಟಿಫಿಕೇಟ್ ತೋರಿಸುವಂತೆ ಕೇಳಬಹುದು' ಎಂದಿದ್ದಾರೆ.
McDonalds India ಇಷ್ಟೆಲ್ಲಾ ಸ್ಪಷ್ಟನೆ ನೀಡಿದ್ದರೂ ಬಳಕೆದಾರರು ಸೋಶಿಯಲ್ ಮೀಡಿಯಾಗಳಲ್ಲಿ #BoycottMcDonalds ಅಭಿಯಾನ ಮುಂದುವರೆಸಿದ್ದಾರೆ.