ಕೆಲವೊಮ್ಮೆ ಅನ್ಯ ದೇಶಕ್ಕೆ ಭೇಟಿ ನೀಡಿದಾಗಲೇ ನಮ್ಮ ದೇಶದ ವಿಶೇಷತೆ, ಶ್ರೇಷ್ಠತೆ ಅರ್ಥವಾಗೋದು. ಇದಕ್ಕೆ ನಿದರ್ಶನ ಎಂಬಂತೆ ಇತ್ತೀಚೆಗಷ್ಟೇ ಅಮೆರಿಕ ಭೇಟಿಯಿಂದ ಹಿಂತಿರುಗಿರುವ ಎಡಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ರಾಧಿಕಾ ಗುಪ್ತಾ ಭಾರತದ ಹೋಟೆಲ್ ಗಳ ಆತಿಥ್ಯವನ್ನು ಕೊಂಡಾಡಿ ಟ್ವೀಟ್ ಮಾಡಿದ್ದಾರೆ.
ಮುಂಬೈ (ಮಾ.22): ಎಡಲ್ವೀಸ್ ಮ್ಯೂಚುವಲ್ ಫಂಡ್ ಸಿಇಒ ಹಾಗೂ ಎಂಡಿ ರಾಧಿಕಾ ಗುಪ್ತಾ ಭಾರತದ ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳ ಆತಿಥ್ಯವನ್ನು ಹಾಡಿ ಹೊಗಳಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಕ್ಕೆ ಭೇಟಿ ನೀಡಿ ಹಿಂತಿರುಗಿರುವ ರಾಧಿಕಾ ಗುಪ್ತಾ, ಟ್ವಿಟ್ಟರ್ ನಲ್ಲಿ ಭಾರತದ ಹೋಟೆಲ್ ಗಳ ಅತಿಥಿ ಸತ್ಕಾರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಒಂದು ಮಗುವಿನ ತಾಯಿಯಾಗಿರುವ ರಾಧಿಕಾ ಗುಪ್ತಾ 'ಭಾರತ ಆತಿಥ್ಯದ ಮೂಲಕ ನಮ್ಮನ್ನು ಹಾಳು ಮಾಡುತ್ತಿದೆ. ಅಮೆರಿಕಕ್ಕೆ ನನ್ನ ಒಂದು ಪ್ರವಾಸ ನಮ್ಮ ಹೋಟೆಲ್ ಗಳಲ್ಲಿ ಎಷ್ಟು ಅಸಾಧಾರಣವಾದ ಸೇವಾ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬುದನ್ನು ನನಗೆ ನೆನಪಿಸಿತು' ಎಂದು ಟ್ವೀಟ್ ಮಾಡಿದ್ದಾರೆ. ಗುಪ್ತಾ ಅವರ ಈ ಪೋಸ್ಟ್ ಗೆ ಟ್ವಿಟ್ಟರ್ ನಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. 40 ವರ್ಷದ ರಾಧಿಕಾ ಗುಪ್ತಾ ಅವರಿಗೆ 9 ತಿಂಗಳ ಮಗುವಿದೆ. ಟ್ವಿಟ್ಟರ್ ನಲ್ಲಿ ಸಾಕಷ್ಟು ಫಾರ್ಲೋವರ್ಸ್ ಹೊಂದಿರುವ ರಾಧಿಕಾ ಗುಪ್ತಾ ತಮ್ಮ ತಾಯ್ತನದ ಅನುಭವಗಳು, ಉದ್ಯೋಗಸ್ಥ ಮಹಿಳೆಯರ ಸವಾಲುಗಳು, ತಾಯಿಯಾಗಿ ಕುಟುಂಬ ಹಾಗೂ ಉದ್ಯೋಗದಲ್ಲಿ ಸಮತೋಲನ ಕಾಯ್ದುಕೊಳ್ಳುವ ವಿಚಾರವಾಗಿ ಟ್ವಿಟ್ಟರ್ ನಲ್ಲಿ ತಮ್ಮ ಅನುಭವಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ.
ಮುಂಬೈಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಿದ ಬಗ್ಗೆಯೂ ರಾಧಿಕಾ ಗುಪ್ತಾ ಅನುಭವ ಹಂಚಿಕೊಂಡಿದ್ದಾರೆ. ಏರ್ ಇಂಡಿಯಾದ ಸೇವೆ ನನ್ನನ್ನು ಮುದಗೊಳಿಸಿತು. ಈ ಬಗ್ಗೆ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. 16 ಗಂಟೆಗಳ ತನ್ನ ಪ್ರಯಾಣವನ್ನು ಆರಾಮದಾಯಕವಾಗಿಸಿದ ಏರ್ ಇಂಡಿಯಾ ಏರ್ ಲೈನ್ಸ್ ಗೆ ಗುಪ್ತಾ ಧನ್ಯವಾದ ಅರ್ಪಿಸಿದ್ದಾರೆ. 'ಮುಂಬೈಯಿಂದ ಸ್ಯಾನ್ ಫ್ರಾನ್ಸಿಸ್ಕೋ ಪ್ರಯಾಣದಲ್ಲಿ ಏರ್ ಇಂಡಿಯಾದ ಸೇವೆಯಿಂದ ತುಂಬಾ ಪ್ರಭಾವಿತಳಾಗಿದ್ದೇನೆ. 16 ಗಂಟೆಗಳು ಸುದೀರ್ಘ ಅವಧಿಯ ಪ್ರಯಾಣವಾಗಿದ್ದರೂ ಸಿಬ್ಬಂದಿ ತುಂಬಾ ಕಾಳಜಿಯಿಂದ ಸತ್ಕರಿಸುವ ಮೂಲಕ ಆರಾಮದಾಯಕವಾಗಿಸಿದರು. ಥ್ಯಾಕ್ ಯೂ ಗೈಸ್' ಎಂದು ಗುಪ್ತ ಟ್ವೀಟ್ ಮಾಡಿದ್ದಾರೆ.
ರಾಧಿಕಾ ಗುಪ್ತಾ ಅವರ ಟ್ವೀಟ್ ಗೆ ಏರ್ ಇಂಡಿಯಾ ಕೂಡ ತಕ್ಷಣ ಪ್ರತಿಕ್ರಿಯಿಸಿದ್ದು, 'ನಮ್ಮ ಸಿಬ್ಬಂದಿ ನಿಮ್ಮನ್ನು ಅತ್ಯಂತ ಶ್ರದ್ಧೆ ಹಾಗೂ ಕಾಳಜಿಯಿಂದ ನೋಡಿಕೊಂಡಿದ್ದು ನಮಗೆ ಖುಷಿ ನೀಡಿದೆ. ನಾವು ನಿಮ್ಮ ಮೆಚ್ಚುಗೆಯನ್ನು ಖಂಡಿತಾ ನಮ್ಮ ತಂಡಕ್ಕೆ ತಿಳಿಸುತ್ತೇವೆ. ಆಕಾಶವನ್ನು ಇನ್ನೊಮ್ಮೆ ನಿಮ್ಮೊಂದಿಗೆ ಶೀಘ್ರವಾಗಿ ಹಂಚಿಕೊಳ್ಳುವ ಭರವಸೆಯನ್ನು ನಾವು ಹೊಂದಿದ್ದೇವೆ' ಎಂದು ಹೇಳಿದೆ.
ರಾಧಿಕಾ ಗುಪ್ತಾ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಟ್ವಿಟ್ಟರ್ ಬಳಕೆದಾರರು (Twitter handle @Niveshak_ )'ಪ್ರವಾಸಿಗರು ಭಾರತದ ದೇಸಿ ಹೋಟೆಲ್ ಗಳಿಗೆ ಭೇಟಿ ನೀಡಿದಾಗ ವೈಭವದ ಸತ್ಕಾರ ಪಡೆಯುತ್ತಾರೆ. ಇದೇ ಕಾರಣಕ್ಕೆ ಫಿರಂಗಿಗಳು ಭಾರತದ ಹೋಟೆಲ್ ಗಳಿಗೆ ಭೇಟಿ ನೀಡಿದಾಗ ಇಲ್ಲಿನ ವೈಭವದ ಸತ್ಕಾರವನ್ನು ನೋಡಿ ತಮ್ಮ ಕಣ್ಣು ಹಾಗೂ ಕಿವಿಗಳನ್ನು ತಾವೇ ನಂಬದಂತಾಗುತ್ತಾರೆ' ಎಂದು ಹೇಳಿದ್ದಾರೆ.
ಬಿಸ್ಲೆರಿ ಖರೀದಿಸಲ್ಲ ಟಾಟಾ: ಬಾಟಲಿ ನೀರು ಉದ್ಯಮಕ್ಕೆ ಜಯಂತಿ ಚೌಹಾಣ್ ಮುಖ್ಯಸ್ಥೆ..!
ಜನವರಿಯಲ್ಲಿ ರಾಧಿಕಾ ತಮ್ಮ ಕಚೇರಿಯಲ್ಲಿ ಮಗು ಚಾಪೆಯ ಮೇಲೆ ಮಲಗಿರುವ ಫೋಟೋ ಟ್ವೀಟ್ ಮಾಡಿದ್ದರು. ಈ ಮೂಲಕ ರಾಧಿಕಾ, ತಾಯ್ತನ ಮತ್ತು ಕಚೇರಿ ಕೆಲಸವನ್ನು ಒಟ್ಟಿಗೆ ಹೇಗೆ ಬ್ಯಾಲೆನ್ಸ್ ಮಾಡುತ್ತಿದ್ದಾರೆ ಎಂಬ ಬಗ್ಗೆ ಹೇಳಿಕೊಂಡಿದ್ದರು. ಈ ಟ್ವೀಟ್ ಸಾಕಷ್ಟು ವೈರಲ್ ಆಗಿರುವ ಜೊತೆಗೆ ಮೆಚ್ಚುಗೆ ಕೂಡ ಗಳಿಸಿತ್ತು. 'ತಂದೆ-ತಾಯಿ ಇಬ್ಬರೂ ಕೆಲಸ ಮಾಡಬೇಕಾದ ಪರಿಸ್ಥಿತಿಯಿರುವಾಗ ಮತ್ತು ನಿಮಗೆ ಸಹಾಯ ಮಾಡಲು ಯಾರೂ ಇಲ್ಲ ಎಂದಾದಾಗ ನೀವೇನು ಮಾಡಬಹುದು ? ನೀವು ತಾಯಿ ಮತ್ತು CEO ಆಗಿರುವ ಈ ಜೀವನ (Life)ವನ್ನು ಹೇಗೆ ನಿರ್ವಹಿಸುತ್ತೀರಿ ಎಂದು ಆಗಾಗ ಜನರು ನನ್ನನ್ನು ಕೇಳುತ್ತಾರೆ. ತಾಯಿ ಮತ್ತು ಕಚೇರಿಯ ಕೆಲಸವನ್ನು ಬ್ಯಾಲೆನ್ಸ್ ಮಾಡಲು ಸ್ವಲ್ಪ ಯೋಜನೆ, ಸಾಕಷ್ಟು ತಾಳ್ಮೆಯಿರುವುದು ಅಗತ್ಯ. ಮಗುವಿನ ನಗು ಮತ್ತೆಲ್ಲಾ ಸಮಸ್ಯೆಯನ್ನು ಮರೆಯುವಂತೆ ಮಾಡುತ್ತದೆ' ಎಂದು ಅವರು ಟ್ವೀಟ್ ಮಾಡಿದ್ದರು.
