ಮುಂಬೈ[ಮಾ.16]: ಡಾಲರ್‌ ಎದುರು ರುಪಾಯಿ ಮೌಲ್ಯ ಚೇತರಿಕೆ, ವಿದೇಶಾಂಗ ನಿಧಿಯ ಒಳಹರಿವು ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿ ಧನಾತ್ಮಕ ಬೆಳವಣಿಗೆಗಳ ಮುನ್ಸೂಚನೆ ಪರಿಣಾಮ ಸತತ ಐದನೇ ದಿನವಾದ ಶುಕ್ರವಾರವೂ ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ 269 ಅಂಕಗಳ ಏರಿಕೆ ಕಂಡಿದೆ. ಇದರಿಂದಾಗಿ ಬಾಂಬೆ ಷೇರುಪೇಟೆ ಸೆನ್ಸೆಕ್ಸ್‌ ಕಳೆದ 6 ತಿಂಗಳ ಬಳಿಕ ಇದೇ ಮೊದಲ ಬಾರಿಗೆ 38000 ಗಡಿಯನ್ನು ದಾಟಿದೆ.

ಶುಕ್ರವಾರ ದಿನದ ವಹಿವಾಟು ಆರಂಭವಾದ ಬಳಿಕ ಒಂದು ಹಂತದಲ್ಲಿ ಸೆನ್ಸೆಕ್ಸ್‌ 500 ಅಂಕಗಳ ಏರಿಕೆ ಕಂಡಿತ್ತು. ಕೊನೆಗೆ 269 ಅಂಕಗಳ ಏರಿಕೆಯೊಂದಿಗೆ 38,024.32 ಅಂಕಗಳೊಂದಿಗೆ ಸೆನ್ಸೆಕ್ಸ್‌ನ ವಹಿವಾಟು ಮುಕ್ತಾಯವಾಯಿತು. ಅದೇ ರೀತಿ ರಾಷ್ಟ್ರೀಯ ಷೇರುಪೇಟೆ ನಿಫ್ಟಿಸಹ 83.60 ಅಂಕಗಳೊಂದಿಗೆ 11,426 ಅಂಕಗಳೊಂದಿಗೆ ತನ್ನ ದಿನದ ವಹಿವಾಟನ್ನು ಮುಕ್ತಾಯಗೊಳಿಸಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಸೆನ್ಸೆಕ್ಸ್‌ 38,090.64 ಅಂಕಗಳನ್ನು ತಲುಪಿತ್ತು. ಇದಾದ ನಂತರ ಸೆನ್ಸೆಕ್ಸ್‌ ಕುಸಿತದ ಹಾದಿ ಹಿಡಿದಿತ್ತು.