ಬೆಂಗಳೂರು(ಮೇ.21): ಲಾಕ್‌ಡೌನ್‌ ಸಡಿಲಿಕೆ ನಂತರ ರಾಜ್ಯದಲ್ಲಿ ಚಿನ್ನಾಭರಣ ವ್ಯಾಪಾರ ವಹಿವಾಟು ಚುರುಕುಗೊಂಡಿದ್ದು, ಚಿನ್ನದ ಬೆಲೆ ನಿಧಾನವಾಗಿ ಹೆಚ್ಚಾಗತೊಡಗಿದೆ. 24 ಕ್ಯಾರೆಟ್‌ ಚಿನ್ನ ಪ್ರತಿ ಗ್ರಾಮ್‌ಗೆ 4750 ರು., ಬೆಳ್ಳಿ ಕೆ.ಜಿ.ಗೆ 49 ಸಾವಿರ ರು. ನಿಗದಿಯಾಗಿದೆ.

ಚಿನ್ನ, ಬೆಳ್ಳಿ ವರ್ತಕರಿಗೆ ಈಗ ಲಾಕ್‌ಡೌನ್‌ ಸಡಿಲಿಕೆ ಕೊಂಚ ನೆಮ್ಮದಿ ನೀಡಿದೆ. ಕಳೆದ ಎರಡು ತಿಂಗಳಿನಿಂದ ವ್ಯಾಪಾರವಿಲ್ಲದೆ ಸಮಸ್ಯೆಗೆ ಸಿಲುಕಿದ್ದ ವರ್ತಕರು, ಇದೀಗ ವ್ಯಾಪಾರ ಚುರುಕುಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಗ್ರಾಹಕರು ಕೊರೋನಾ ಭೀತಿಯ ನಡುವೆಯೂ ಮಳಿಗೆಗೆ ಭೇಟಿ ನೀಡಿ ಆಭರಣಗಳನ್ನು ಖರೀದಿಸುತ್ತಿದ್ದಾರೆ.

ದಿನಸಿ ಪದಾರ್ಥಗಳ ಬೆಲೆ ಭಾರೀ ಏರಿಕೆ, ಗ್ರಾಹಕ ಕಂಗಾಲು!

ಕಳೆದ ಮೂರ್ನಾಲ್ಕು ದಿನಗಳಿಂದ ಚಿನ್ನದ ಬೆಲೆ 400 ರು. ಹೆಚ್ಚಾಗಿದೆ. ಒಂದು ಕೆ.ಜಿ. ಬೆಳ್ಳಿ 49 ಸಾವಿರಕ್ಕೆ ಮಾರಾಟವಾಗುತ್ತಿದೆ. ಬೆಳ್ಳಿ ಬೆಲೆಯಲ್ಲಿ 1340 ರು. ಹೆಚ್ಚಳ ಕಂಡಿದೆ. 24 ಕ್ಯಾರೆಟ್‌ ಚಿನ್ನ ಗ್ರಾಂ 4750 ರು., 22 ಕ್ಯಾರೆಟ್‌ ಚಿನ್ನ ಗ್ರಾಂ. 4600 ರು.ಗೆ ಖರೀದಿಯಾಗುತ್ತಿದೆ. ವಿವಿಧ ಸಮಾರಂಭಗಳು ರದ್ದುಗೊಂಡಿರುವುದರಿಂದ ಉಳಿದ ಹಣದಲ್ಲೇ ಗ್ರಾಹಕರು ಚಿನ್ನ ಖರೀದಿಸುತ್ತಿದ್ದಾರೆ. ಸದ್ಯ ಕೃಷಿ ಚಟುವಟಿಕೆಗಳ ಆರಂಭದ ಕಾಲ. ಹೀಗಾಗಿ ಗಿರವಿ ಇಡುವವರ ಪ್ರಮಾಣದಲ್ಲಿ ಶೇ.1ರಷ್ಟುಹೆಚ್ಚಳವಾಗಿದೆ. ಚಿನ್ನದ ವ್ಯಾಪಾರ ಭವಿಷ್ಯದಲ್ಲೂ ಉತ್ತಮವಾಗಿ ನಡೆಯುವ ವಿಶ್ವಾಸವಿದೆ ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ.ಬಿ.ರಾಮಾಚಾರಿ ತಿಳಿಸಿದರು.

ವರ್ತಕರು ಮಳಿಗೆಗಳಲ್ಲಿ ಮಾಸ್ಕ್‌, ಸ್ಯಾನಿಟೈಸರ್‌, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ. ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ ವ್ಯಾಪಾರ ನಡೆಯುತ್ತದೆ ಎಂದು ಅವರು ಹೇಳಿದರು.