ನವದೆಹಲಿ[ಆ.14]: ಇಲ್ಲಿನ ಚಿನಿವಾರ ಪೇಟೆಯಲ್ಲಿ ಬೆಳ್ಳಿಯ ದರ ಮಂಗಳವಾರ ಒಂದೇ ದಿನ 2000 ರು.ನಷ್ಟುಏರಿಕೆಯಾಗುವ ಮೂಲಕ ಪ್ರತಿ ಕೇಜಿಗೆ 45,000 ರು. ತಲುಪಿದೆ. ಇದು ಬೆಳ್ಳಿಯ ಸಾರ್ವಕಾಲಿಕ ಗರಿಷ್ಠ ದರವಾಗಿದೆ.

ಮತ್ತೊಂದೆಡೆ ಚಿನ್ನದ ದರ 100 ರು. ಕುಸಿಯುವ ಮೂಲಕ ಪ್ರತೀ 10 ಗ್ರಾಂ ಚಿನ್ನದ ದರ 38,370 ರು. ನಿಗದಿಯಾಗಿತ್ತು. ಕೈಗಾರಿಕೆಗಳು ಮತ್ತು ನಾಣ್ಯಗಳ ಉತ್ಪಾದಕರಿಂದ ಭಾರೀ ಪ್ರಮಾಣದ ಬೇಡಿಕೆ ವ್ಯಕ್ತವಾಗಿದ್ದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಬೆಳ್ಳಿಗೆ ಹೆಚ್ಚು ಮೌಲ್ಯ ಬಂದಿತ್ತು ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಈ ಬಗ್ಗೆ ಮಂಗಳವಾರ ಪ್ರತಿಕ್ರಿಯಿಸಿದ ಅಖಿಲ ಭಾರತ ಸರಾಫ ಸಂಘಟನೆ ಉಪಾಧ್ಯಕ್ಷ ಸುರೇಂದ್ರ ಜೈನ್‌, ‘ಬೆಳ್ಳಿ ದರವು 45 ಸಾವಿರ ರು. ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ದರ ದಾಖಲಾಗಿದೆ. ಸಾಗರೋತ್ತರದಿಂದ ಭಾರೀ ಪ್ರಮಾಣದ ಬೇಡಿಕೆಯಿಂದಾಗಿ ಬೆಳ್ಳಿ ದರ ದುಬಾರಿಯಾಗಿದೆ’ ಎಂದರು.