ವಾಷಿಂಗ್ಟನ್‌[ಏ.28]: ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೆ ಬರುವ ನಿರೀಕ್ಷೆ ಹುಟ್ಟುಹಾಕಿದ ಬೆನ್ನಲ್ಲೇ, ಅಮೆರಿಕದ ದೈತ್ಯ ಕಂಪನಿಗಳು ಭಾರತದತ್ತ ಮುಖಮಾಡಿವೆ. ಲೋಕಸಭೆ ಚುನಾವಣೆಯ ಬಳಿಕ ಅಮೆರಿಕದ ಸುಮಾರು 200 ಕಂಪನಿಗಳು ತಮ್ಮ ಉತ್ಪಾದನಾ ಕೇಂದ್ರವನ್ನು ಚೀನಾದಿಂದ ಭಾರತಕ್ಕೆ ವರ್ಗಾಯಿಸಲಿವೆ.

ಕಮ್ಯುನಿಸ್ಟ್‌ ಚೀನಾಕ್ಕೆ ಪರ್ಯಾಯ ಹೂಡಿಕೆಗೆ ಕಂಪನಿಗಳಿಗೆ ಭಾರತದಲ್ಲಿ ಯಥೇಚ್ಛ ಅವಕಾಶಗಳು ಇರುವ ಕಾರಣ ಅಮೆರಿಕದ ಕಂಪನಿಗಳು ಭಾರತದಲ್ಲಿ ಹೂಡಿಕೆಗೆ ಆಸಕ್ತಿ ತೋರಿವೆ ಎಂದು ಅಮೆರಿಕ- ಭಾರತ ಕಾರ್ಯತಂತ್ರ ಹಾಗೂ ಸಹಭಾಗಿತ್ವ ವೇದಿಕೆ (ಯುಎಸ್‌ಐಎಸ್‌ಪಿಎಫ್‌) ತಿಳಿಸಿದೆ.

ಅಮೆರಿಕದ ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡುವ ಮೂಲಕ ಚೀನಾಕ್ಕೆ ಹೇಗೆ ಪರ್ಯಾಯ ಸೃಷ್ಟಿಸಬಹುದು ಎಂಬ ಬಗ್ಗೆ ಯುಎಸ್‌ಐಎಸ್‌ಪಿಎಫ್‌ನೊಂದಿಗೆ ಮಾತನಾಡಿವೆ. ಈ ನಿಟ್ಟಿನಲ್ಲಿ ಭಾರತದಲ್ಲಿ ಹೊಸ ಸರ್ಕಾರ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ತರುವ ಅಗತ್ಯವಿದೆ. ಭಾರತ ಮತ್ತು ಅಮೆರಿಕ ಮಧ್ಯೆ ಮುಕ್ತ ವ್ಯಾಪಾರಿ ಒಪ್ಪಂದಕ್ಕೆ ಅನುವು ಮಾಡಿಕೊಡಬೇಕು ಎಂಬುದಾಗಿ ನಾವು ಮುಂಬರುವ ಸರ್ಕಾರಕ್ಕೆ ಸಲಹೆ ನೀಡುತ್ತಿದ್ದೇವೆ ಎಂದು ಯುಎಸ್‌ಐಎಸ್‌ಪಿಎಫ್‌ ಅಧ್ಯಕ್ಷ ಮುಕೇಶ್‌ ಅಘಿ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.