ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗಡುವು ವಿಸ್ತರಿಸಿದ ಸರ್ಕಾರ, ಜೂನ್ 14ರ ತನಕ ಕಾಲಾವಕಾಶ
ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ಗಡುವನ್ನು ಯುಐಡಿಎಐ ಜೂನ್ 14ರ ತನಕ ವಿಸ್ತರಿಸಿದೆ. ಹಾಗಾದ್ರೆ ಆಧಾರ್ ನಲ್ಲಿ ಉಚಿತವಾಗಿ ಮಾಹಿತಿ ಅಪ್ಡೇಟ್ ಮಾಡೋದು ಹೇಗೆ?
ನವದೆಹಲಿ (ಮಾ.15): ಆಧಾರ್ ಕಾರ್ಡ್ ಮಾಹಿತಿಗಳನ್ನು ಉಚಿತವಾಗಿ ಅಪ್ಡೇಟ್ ಮಾಡಲು ನೀಡಿದ್ದ ಗಡುವನ್ನು ಕೇಂದ್ರ ಸರ್ಕಾರ ಜೂನ್ 14ರ ತನಕ ವಿಸ್ತರಿಸಿದೆ. ಈ ಹಿಂದೆ ಆಧಾರ್ ಕಾರ್ಡ್ ಉಚಿತ ಅಪ್ಡೇಟ್ ಗೆ ಮಾರ್ಚ್ 14 ಅಂತಿಮ ಗಡುವಾಗಿತ್ತು. ಆದರೆ, ಮೈ ಆಧಾರ್ ಪೋರ್ಟಲ್ ನಲ್ಲಿ ಉಚಿತವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ನೀಡಿದ್ದ ಗಡುವನ್ನು ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಈಗ ಮತ್ತೊಮ್ಮೆ ವಿಸ್ತರಿಸಿದೆ. ಆಧಾರ್ ಮಾಹಿತಿ ಉಚಿತ ಅಪ್ಡೇಟ್ ಅಂತಿಮ ಗಡುವನ್ನು ವಿಸ್ತರಿಸುತ್ತಿರೋದು ಇದು ಎರಡನೆಯ ಬಾರಿಯಾಗಿದೆ. ಈ ಹಿಂದೆ 2023ರ ಡಿಸೆಂಬರ್ 15 ಅಂತಿಮ ಗಡುವಾಗಿತ್ತು. ಈ ಅಂತಿಮ ಗಡುವಿನೊಳಗೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಇತರ ಮಾಹಿತಿಗಳನ್ನು ಅಪ್ಡೇಟ್ ಮಾಡೋದು ಕಡ್ಡಾಯ. ಅಂದ ಹಾಗೇ ಈ ಸೌಲಭ್ಯ ಮೈ ಆಧಾರ್ ಪೋರ್ಟಲ್ ನಲ್ಲಿ ಮಾತ್ರ ಲಭ್ಯವಿದೆ. ಈ ಹಿಂದೆ ಆಧಾರ್ ಪೋರ್ಟಲ್ ನಲ್ಲಿ ಈ ಮಾಹಿತಿಗಳನ್ನು ಅಪ್ಡೇಟ್ ಮಾಡಲು 25ರೂ. ಶುಲ್ಕ ಪಾವತಿಸಬೇಕಿತ್ತು. ಕಳೆದ 10 ವರ್ಷಗಳಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡದವರು ಆದಷ್ಟು ಬೇಗ ಈ ಕೆಲಸ ಮಾಡುವಂತೆ ಯುಐಡಿಎಐ ಆಗಾಗ ಜನರನ್ನು ಒತ್ತಾಯಿಸುತ್ತಿದೆ. ಆಧಾರ್ ಸಂಬಂಧಿ ವಂಚನೆಗಳ ತಡೆಗೆ ಇದು ಅಗತ್ಯ ಎಂದು ಯುಐಡಿಎಐ ತಿಳಿಸಿದೆ.
ಆಧಾರ್ ನಲ್ಲಿ ಮಾಹಿತಿ ಅಪ್ಡೇಟ್ ಮಾಡೋದು ಹೇಗೆ?
*ಯುಐಡಿಎಐ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ.
*myaadhaar ಮೇಲೆ ಕ್ಲಿಕ್ ಮಾಡಿ.
*ಆ ಬಳಿಕ 'Update Aadhaar'ಆಯ್ಕೆ ಮಾಡಿ.
*ನಿಮ್ಮ ಆಧಾರ್ ಸಂಖ್ಯೆ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ನಮೂದಿಸಿ.
*ಆ ಬಳಿಕ 'Send OTP'ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಟಿಪಿ ನಮೂದಿಸಿ.
*Login ಬಟನ್ ಮೇಲೆ ಕ್ಲಿಕ್ ಮಾಡಿ.
*ನಿಮಗೆ ಯಾವ ಮಾಹಿತಿಯನ್ನು ನವೀಕರಿಸಬೇಕು ಅದನ್ನು ಆಯ್ಕೆ ಮಾಡಿ. ಉದಾಹರಣೆಗೆ ವಿಳಾಸ ಬದಲಾಯಿಸಬೇಕಿದ್ದರೆ 'Address Update' ಆಯ್ಕೆ ಮಾಡಿ.
*ಈಗ ನಿಮ್ಮ ವಿಳಾಸ ದೃಢೀಕರಣ ದಾಖಲೆಯ ಸ್ಕ್ಯಾನ್ ಪ್ರತಿ ಅಪ್ಲೋಡ್ ಮಾಡಿ.
*ಆ ಬಳಿಕ 'Submit'ಬಟನ್ ಮೇಲೆ ಕ್ಲಿಕ್ ಮಾಡಿ.
*ಈಗ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಅಪ್ಡೇಟ್ ರಿಕ್ವೆಸ್ಟ್ ಸಂಖ್ಯೆ (URN) ಬರುತ್ತದೆ.
ಆಧಾರ್-ಪ್ಯಾನ್ ಜೋಡಣೆ ವಿಳಂಬ, ಸರ್ಕಾರದ ಬೊಕ್ಕಸ ಸೇರಿದ 600 ಕೋಟಿ;ಇನ್ನೂ ಲಿಂಕ್ ಆಗಿಲ್ಲ 11.48 ಕೋಟಿ ಪ್ಯಾನ್
ಯಾವೆಲ್ಲ ದಾಖಲೆಗಳು ಅಗತ್ಯ?
ಆಧಾರ್ ಪೋರ್ಟಲ್ ನಲ್ಲಿ ಒಬ್ಬ ವ್ಯಕ್ತಿ ಯಾವೆಲ್ಲ ದಾಖಲೆಗಳನ್ನು ಸಲ್ಲಿಕೆ ಮಾಡಬೇಕು ಎಂಬ ಮಾಹಿತಿ ನೀಡಲಾಗಿದೆ. ಗುರುತು ಹಾಗೂ ವಿಳಾಸ ದೃಢೀಕರಣಕ್ಕೆ ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸರ್ಕಾರ ನೀಡಿರುವ ಗುರುತು ಚೀಟಿ/ಪ್ರಮಾಣಪತ್ರ ಹಾಗೂ ಪಾಸ್ ಪೋರ್ಟ್ ಸಲ್ಲಿಕೆ ಮಾಡಬಹುದು. ಹಾಗೆಯೇ ಪ್ಯಾನ್ ಕಾರ್ಡ್, ಚಾಲನಾ ಪರವಾನಗಿ, ದ್ವಿತೀಯ ಅಥವಾ ಹಿರಿಯ ಶಾಲೆಯ ಮಾರ್ಕ್ಸ್ ಶೀಟ್/ ಫೋಟೋ ಹೊಂದಿರುವ ಶಾಲೆ ಬಿಟ್ಟಿರುವ ಪ್ರಮಾಣಪತ್ರ ಹಾಗೂ ಸರ್ಕಾರ ನೀಡಿರುವ ಐಡಿ ಕಾರ್ಡ್ ಅಥವಾ ಪ್ರಮಾಣಪತ್ರ ಕೂಡ ಗುರುತು ದೃಢೀಕರಣಕ್ಕೆ ನೆರವು ನೀಡುತ್ತದೆ. ಇನ್ನು ವಿಳಾಸ ದೃಢೀಕರಣಕ್ಕೆ ವಿದ್ಯುತ್/ನೀರು/ ಗ್ಯಾಸ್ ಬಿಲ್ (ಕಳೆದ ಮೂರು ತಿಂಗಳ), ಬ್ಯಾಂಕ್/ ಪೋಸ್ಟ್ ಆಫೀಸ್ ಪಾಸ್ ಬುಕ್, ಬಾಡಿಗೆ/ಲೀಸ್/ರಜೆ ಹಾಗೂ ಪರವಾನಗಿ ಒಪ್ಪಂದ ವಿಳಾಸ ದೃಢೀಕರಣಕ್ಕೆ ನೆರವು ನೀಡುತ್ತದೆ.
ಆಧಾರ್-ಪ್ಯಾನ್ ಜೋಡಣೆ ವಿಳಂಬ, ಸರ್ಕಾರದ ಬೊಕ್ಕಸ ಸೇರಿದ 600 ಕೋಟಿ;ಇನ್ನೂ ಲಿಂಕ್ ಆಗಿಲ್ಲ 11.48 ಕೋಟಿ ಪ್ಯಾನ್
ಆಧಾರ್ 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಕೇಂದ್ರ ಸರ್ಕಾರ ಇದನ್ನು ದೇಶದ ನಾಗರಿಕರಿಗೆ ನೀಡುತ್ತದೆ. ಆಧಾರ್ ಅನ್ನು ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ.