5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುತ್ತಿದ್ದೀರಾ? ಹಾಗಾದ್ರೆ ಈ 8 ಸರಳ ಹಂತಗಳನ್ನು ಅನುಸರಿಸಿ
ಇಂದು ಆಧಾರ್ ಕಾರ್ಡ್ ಪ್ರಮುಖ ಗುರುತು ದೃಢೀಕರಣ ದಾಖಲೆಯಾಗಿದೆ. ಮಕ್ಕಳಿಗೆ ಕೂಡ ಶಾಲಾ ಪ್ರವೇಶಾತಿ ಸೇರಿದಂತೆ ವಿವಿಧ ಉದ್ದೇಶಗಳಿಗೆ ಆಧಾರ್ ಕಾರ್ಡ್ ಅಗತ್ಯ. ಹಾಗಾದ್ರೆ ಐದು ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಗೆ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ.

Business Desk:ಆಧಾರ್ ಕಾರ್ಡ್ ಇಂದು ಪ್ರಮುಖವಾದ ದಾಖಲೆಯಾಗಿದೆ. ಇದು 12 ಅಂಕೆಗಳ ವಿಶಿಷ್ಟ ಗುರುತಿನ ಚೀಟಿಯಾಗಿದ್ದು, ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ವಿತರಿಸುತ್ತದೆ. ಆಧಾರ್ ಅನ್ನು ದೇಶದಲ್ಲಿ ಪ್ರಮುಖ ದೃಢೀಕರಣ ದಾಖಲೆಯಾಗಿ ಬಳಸಲಾಗುತ್ತದೆ. ಬ್ಯಾಂಕ್ ಖಾತೆ ತೆರೆಯಲು, ಪಾಸ್ ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಸಂಪರ್ಕಕ್ಕೆ, ಸರ್ಕಾರದ ಸಬ್ಸಿಡಿಗಳನ್ನು ಪಡೆಯಲು ಹಾಗೂ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಾರ್ಡ್ ಅತ್ಯಗತ್ಯ. ಒಟ್ಟಾರೆ ಇಂದು ಯಾವುದೇ ಒಂದು ಕೆಲಸಕ್ಕೆ ಹೋದ್ರೂ ಆಧಾರ್ ಕಾರ್ಡ್ ಅಗತ್ಯ. ಐದು ವರ್ಷದೊಳಗಿನ ಮಕ್ಕಳಿಗೆ ಕೂಡ ಆಧಾರ್ ಕಾರ್ಡ್ ನೀಡಲಾಗುತ್ತದೆ. ಇಂದು ಶಾಲೆಗಳಲ್ಲಿ ಕೂಡ ಮಕ್ಕಳ ದಾಖಲೀಕರಣಕ್ಕೆ ಆಧಾರ್ ಕಾರ್ಡ್ ಕೇಳುತ್ತಾರೆ. ಹೀಗಾಗಿ ಇಂದು ಬಹುತೇಕರು ಐದು ವರ್ಷಗಳೊಳಗಿನ ಮಕ್ಕಳಿಗೆ ಕೂಡ ಆಧಾರ್ ಕಾರ್ಡ್ ಮಾಡಿಸುತ್ತಾರೆ. ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್‌ಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಐದು ವರ್ಷ ದಾಟಿದ ನಂತರ, ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ.
ಮಕ್ಕಳಿಗೆ ಆಧಾರ್ ಪಡೆಯಲು ಹೀಗೆ ಮಾಡಿ
ನೀವು ನಿಮ್ಮ ಮಕ್ಕಳಿಗೆ ಆಧಾರ್ ಕಾರ್ಡ್ ಕೊಡಿಸಲು ಯೋಚಿಸುತ್ತಿದ್ದರೆ ಈ ಎಂಟು ಸರಳ ನೋಂದಣಿ ಹಂತಗಳನ್ನು ಅನುಸರಿಸುವ ಮೂಲಕ ಆಧಾರ್ ಕಾರ್ಡ್ ಪಡೆಯಬಹುದು.
ಹಂತ 1: ಸಮೀಪದ ಆಧಾರ್ ನೋಂದಣಿ ಕೇಂದ್ರಕ್ಕೆ ಭೇಟಿ ನೀಡಿ. https://uidai.gov.in/en ಭೇಟಿ ನೀಡುವ ಮೂಲಕ ಸಮೀಪದ ನೋಂದಣಿ ಕೇಂದ್ರದ ಮಾಹಿತಿ ಪಡೆಯಬಹುದು.
ಹಂತ 2: ಆಧಾರ್ ನೋಂದಣಿ ಅರ್ಜಿಯನ್ನು ಭರ್ತಿ ಮಾಡಿ ಹಾಗೂ ಅದರಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ.
ಹಂತ 3: ಐದು ವರ್ಷದೊಳಗಿನ ಮಕ್ಕಳ ನೋಂದಣಿಗೆ ತಾಯಿ ಅಥವಾ ತಂದೆಯ ಆಧಾರ್ ಮಾಹಿತಿಗಳು ಅಗತ್ಯ.
ಹಂತ 4: ನೋಂದಣಿ ಕೇಂದ್ರದಲ್ಲಿ ನಿಮ್ಮ ಮಗುವಿನ ಫೋಟೋ ತೆಗೆಯಲಾಗುತ್ತದೆ.
ನಿಮ್ಮಆಧಾರ್ ಕಾರ್ಡ್ ಎಲ್ಲೆಲ್ಲ ಬಳಕೆಯಾಗಿದೆ? ದುರ್ಬಳಕೆ ಆಗಿದೆಯಾ? ತಿಳಿಯಲು ಹೀಗೆ ಮಾಡಿ
ಹಂತ 5: ಹಂತ 3ರಲ್ಲಿ ಆಧಾರ್ ಮಾಹಿತಿಗಳನ್ನು ಸಲ್ಲಿಕೆ ಮಾಡಿರುವ ಪೋಷಕರ ಆಧಾರ್ ಕಾರ್ಡ್ ನಿಂದ ವಿಳಾಸ ಹಾಗೂ ಇತರ ಭೌಗೋಲಿಕ ಮಾಹಿತಿಗಳನ್ನು ಭರ್ತಿ ಮಾಡಲಾಗುತ್ತದೆ.
ಹಂತ 6: ಮಗುವಿನ ಜನನ ಪ್ರಮಾಣಪತ್ರ ಅಥವಾ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಪ್ರಮಾಣಪತ್ರದ ಪ್ರತಿಯನ್ನು ಸಲ್ಲಿಕೆ ಮಾಡಿ.
ಹಂತ 7: ನೋಂದಣಿ ಸಂಖ್ಯೆಯನ್ನು ಒಳಗೊಂಡಿರುವ ಸ್ವೀಕೃತಿ ಸ್ಲಿಪ್ ಅನ್ನು ಆಧಾರ್ ಎಕ್ಸಿಕ್ಯುಟಿವ್ ನೀಡುತ್ತಾರೆ.
ಹಂತ 8: ಆಧಾರ್ ಕಾರ್ಡ್ ಸಿದ್ಧಗೊಂಡಿದೆಯಾ ಎಂದು ಅದರ ಸ್ಟೇಟಸ್ ಚೆಕ್ ಮಾಡಲು ನೋಂದಣಿ ಸಂಖ್ಯೆಯನ್ನು ಬಳಸಬಹುದು.
ಆಧಾರ್ ಸೇವೆಗಳಿಗೆ ನಿಮ್ಮ ಮಗುವನ್ನು ನೋಂದಣಿ ಮಾಡುವ ಪ್ರಕ್ರಿಯೆಯನ್ನು ನೀವು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೀರಿ. ಒಮ್ಮೆಗೆ ಅರ್ಜಿ ಪ್ರಕ್ರಿಯೆ ಮುಂದುವರಿದ ಬಳಿಕ ನೀವು ಯುಐಡಿಎಐ ಅಧಿಕೃತ ವೆಬ್ ಸೈಟ್ ನಿಂದ ನಿಮ್ಮ ಮಗುವಿನ ಆಧಾರ್ ಕಾರ್ಡ್ ಡಿಜಿಟಲ್ ಪ್ರತಿಯನ್ನು ಡೌನ್ ಲೋಡ್ ಮಾಡಬಹುದು.
ನೀಲಿ ಬಣ್ಣದಲ್ಲಿರುತ್ತೆ
ಐದು ವರ್ಷದೊಳಗಿನ ಮಕ್ಕಳ ಆಧಾರ್ ಕಾರ್ಡ್ ನೀಲಿ ಬಣ್ಣದಲ್ಲಿರುತ್ತದೆ. ಇದಕ್ಕೆ ಬಾಲ್ ಆಧಾರ್ ಎಂದು ಕರೆಯುತ್ತಾರೆ. ಮಗುವಿನ ವಯಸ್ಸು 5 ವರ್ಷಕ್ಕಿಂತ ಹೆಚ್ಚಾದ್ಮೇಲೆ ಈಗ ಮಾಡಿದ ಆಧಾರ್ ಕಾರ್ಡ್ ಅಮಾನ್ಯವಾಗುತ್ತದೆ. ಹೀಗಾಗಿ ಐದು ವರ್ಷದ ಬಳಿಕ ನವೀಕರಿಸೋದು ಅಗತ್ಯ.
ಸಣ್ಣ ಉಳಿತಾಯ ಯೋಜನೆಗಳಿಗೆ ಆಧಾರ್ ಲಿಂಕ್ ಮಾಡಲು ಸೆ.30 ಅಂತಿಮ ಗಡುವು, ತಪ್ಪಿದ್ರೆ ಖಾತೆ ನಿಷ್ಕ್ರಿಯ
5,15 ವರ್ಷವಾದಾಗ ನವೀಕರಣ ಅಗತ್ಯ
ಐದು ವರ್ಷ (Five years )ದಾಟಿದ ನಂತರ, ಮಗುವಿನ ಬಯೋಮೆಟ್ರಿಕ್ಸ್ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ಐದು ವರ್ಷದ ನಂತರ ಆಧಾರ್ ನವೀಕರಿಸಬೇಕಾಗುತ್ತದೆ. ಆಗ ಮಕ್ಕಳ ಹೆಬ್ಬೆಟ್ಟಿನ ಗುರುತು ಹಾಗೂ ಕಣ್ರೆಪ್ಪೆ (Eyelash) ಗುರುತನ್ನು ಪಡೆಯಲಾಗುತ್ತದೆ. ಮಕ್ಕಳಿಗೆ 15 ವರ್ಷವಾಗ್ತಿದ್ದಂತೆ ಮತ್ತೆ ಆಧಾರ್ ನವೀಕರಣ ಮಾಡಬೇಕಾಗುತ್ತದೆ.