Asianet Suvarna News Asianet Suvarna News

ನೋಟ್ ಬ್ಯಾನ್: ಉತ್ತರ ಸಿಗದ ಪ್ರಶ್ನೆಗಳು, ಮೋದಿ ಅರಿಯದ ವಿಪಕ್ಷಗಳು!

ನೋಟು ಅಮಾನ್ಯೀಕರಣಕ್ಕೆ ಇಂದಿಗೆ ಬರೋಬ್ಬರಿ ಎರಡು ವರ್ಷ! ಪ್ರಧಾನಿ ನರೇಂದ್ರ ಮೋದಿ ನಿರ್ಧಾರ ಅಳೆಯಲು ಇದು ಸಕಾಲ! ನೋಟು ಅಮಾನ್ಯೀಕರಣದಿಂದ ಸಾಧಿಸಿದ್ದೇನು ಪ್ರಧಾನಿ?! ಅಮಾನ್ಯೀಕರಣಕ್ಕೆ ಕೊಟ್ಟ ಕಾರಣಗಳು ಈಡೇರಿವೆಯೇ?! ಮೋದಿ ಕೊಟ್ಟಿದ್ದ ಭರವಸೆಗಳು ಎಷ್ಟರ ಮಟ್ಟಿಗೆ ಈಡೇರಿವೆ?! ದೇಶದ ಅರ್ಥ ವ್ಯವಸ್ಥೆ ಸದೃಢಗೊಳ್ಳುತ್ತಿದೆಯೇ?! ಅಮಾನ್ಯೀಕರಣ ವಿರೋಧಿಸುತ್ತಿರುವ ವಿಪಕ್ಷಗಳ ಆರೋಪದಲ್ಲಿ ಹುರುಳಿದೆಯೇ?  

A Brief Analysis of 2 Years of Demonetization
Author
Bengaluru, First Published Nov 8, 2018, 12:24 PM IST
  • Facebook
  • Twitter
  • Whatsapp

ನವದೆಹಲಿ(ನ.8): ಅದು ನವೆಂಬರ್ 8, 2016. ಆಗಷ್ಟೇ ಕೆಲಸ ಮುಗಿಸಿ ಮನೆಗೆ ತೆರಳಿದ್ದ ಜನ, ಟಿವಿ ಮುಂದೆ ಕುಳಿತು ರಿಲ್ಯಾಕ್ಸ್ ಮಾಡುತ್ತಿದ್ದರು. ಕೆಲವರು ಮಕ್ಕಳೊಂದಿಗೆ ಆಡುತ್ತಾ ಜಾಲಿ ಮೂಡ್ ನಲ್ಲಿದ್ದರು. ಇನ್ನೂ ಕೆಲವು ಗೆಳೆಯರೊಂದಿಗೆ ಹರಟುತ್ತಾ ಕಾಲ ಕಳೆಯುತ್ತಿದ್ದರು.

ಏಕಾಏಕಿ ಟಿವಿ ಪರದೆ ಮೇಲೆ ಕಾಣಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ, ‘ಭಾಯಿಯೋ ಔರ್ ಬೆಹನೋ..’ ಎನ್ನುತ್ತಾ ಇಡೀ ದೇಶ ಅರ್ಧ ಸಂತಸ ಇನ್ನರ್ಧ ಆತಂಕದಲ್ಲಿ ಮುಳುಗುವಂತೆ ಮಾಡಿದ್ದರು.

ಅಂದು ಟಿವಿ ಪರದೆ ಮೇಲೆ ಕಾಣಿಸಿಕೊಂಡಿದ್ದ ಮೋದಿ, ನೋಟು ಅಮಾನ್ಯೀಕರಣವನ್ನು ಘೋಷಿಸಿದ್ದರು. ಆಗ ಚಾಲ್ತಿಯಲ್ಲಿದ್ದ ಹಳೆಯ 1000 ಮತ್ತು 500 ನೋಟುಗಳನ್ನು ಇನ್ನು ಮುಂದೆ ಮಾನ್ಯ ಅಲ್ಲ ಎಂದು ಪ್ರಧಾನಿ ಘೋಷಿಸಿದ್ದರು.

ಏನಾಗುತ್ತಿದೆ ಎನ್ನುವಷ್ಟರಲ್ಲೇ ದೇಶ ಮೋದಿ ನಿರ್ಧಾರ ಬೆಂಬಲಿಸುವಲ್ಲಿ ಮತ್ತು ವಿರೋಧಿಸುವಲ್ಲಿ ಸರಿಸುಮಾರಾಗಿ ಅರ್ಧ ಹೋಳಾಗಿತ್ತು. ನೋಟು ಅಮಾನ್ಯೀಕರಣಕ್ಕೆ ಕಾರಣಗಳನ್ನು ನೀಡಿದ್ದ ಪ್ರಧಾಣಿ ಮೋದಿ, ತಮ್ಮ ನಿರ್ಧಾರಕ್ಕೆ ಜನರ ಬೆಂಬಲ ಗಳಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದರು.

ನೋಟು ರದ್ದತಿಗೆ ಪ್ರಧಾನಿ ಮೋದಿ ಕೊಟ್ಟ ಪ್ರಮುಖ ಕಾರಣಗಳೆಂದರೆ  ಕಪ್ಪು ಹಣಕ್ಕೆ ಕಡಿವಾಣ, ವಿದೇಶದಲ್ಲಿರುವ ಕಪ್ಪು ಹಣದ ಮೇಲೆ ಪ್ರಹಾರ, ಗಡಿಯಲ್ಲಿನ ಭಯೋತ್ಪಾದನೆಗೆ ಮಟ್ಟ ಹಾಕುವುದು ಮತ್ತು ದೇಶದ ಅರ್ಥ ವ್ಯವಸ್ಥೆಯನ್ನು ಸದೃಢಗೊಳಿಸುವುದು.

ಮೋದಿ ಬೆನ್ನಿಗೆ ನಿಂತ ದೇಶ:

ಮೋದಿ ಅವರ ಭಾಷಣ ಕೇಳಿ ಜನ ಈ ನಿರ್ಧಾರವನ್ನು ಬೆಂಬಲಿಸುವಲ್ಲಿ ಹಿಂದೇಟು ಹಾಕಲಿಲ್ಲ. ತಮಗೆ ಎಷ್ಟೇ ಸಮಸ್ಯೆಯಾದರೂ ಮೋದಿ ಅವರ ಬೆನ್ನಿಗೆ ನಾವಿದ್ದೇವೆ ಎಂಬ ಸಂದೇಶವನ್ನು ಜನ ರವಾನಿಸಿದ್ದು ಐತಿಹಾಸಿಕವೇ ಆಗಿತ್ತು.

ಆದರೆ ನಂತರದ ಬೆಳವಣಿಗೆಗಳು ಕ್ರಮೇಣ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸುವಂತೆ ಮಾಡತೊಡಗಿದವು. ಪ್ರಮುಖವಾಗಿ ಹೊಸ ನೋಟುಗಳ ಅಲಭ್ಯತೆ, ಎಟಿಎಂಗಳಲ್ಲಿ ಹೊಸ ನೋಟುಯ ಕೊಳ್ಳಲು ಸರದಿಗಾಗಿ ಕಾಯಬೇಕಾದ ಪ್ರಸಂಗ, ದಿನಕ್ಕೆ ಇಂತಿಷ್ಟೇ ಹಣ ಎಂಬ ಬ್ಯಾಂಕ್‌ಗಳ ನಡೆಯಿಂದಾಗಿ ಜನ ರೋಸಿ ಹೋದರು.

ಅಷ್ಟೇ ಅಲ್ಲದೇ ನೋಟು ಅಮಾನ್ಯೀಕರಣದ ಬಳಿಕ ಬ್ಯಾಂಕ್‌ಗಳು ಹೊರ ತರುತ್ತಿದ್ದ ದಿನಕ್ಕೊಂದು ನಿಯಮಗಳು ಜನರಲ್ಲಿ ಗೊಂದಲ ಮೂಡಿಸಿದವು. ನೋಟು ಅಮಾನ್ಯೀಕರಣ ಸಮಾಜದ ಉನ್ನತ ವರ್ಗ ಮತ್ತು ಬೃಹತ್ ಕೈಗಾರಿಕೆಗಳ ಮೇಲೆ ಯಾವುದೇ ಪರಿಭಾಮ ಬೀರದಿದ್ದರೂ, ಮಧ್ಯಮ ಮತ್ತು ಕೆಳವರ್ಗ ಇದರಿಂದ ಅಪಾರ ಸಂಕಷ್ಟ ಎದುರಿಸಬೇಕಾಯಿತು. ಅಲ್ಲದೇ ಸಣ್ಣ ಮತ್ತು ಮಧ್ಯಮ ಹಾಗೂ ಗುಡಿ ಕೈಗಾರಿಕೆಗಳು ಬಹುತೇಕ ಮುಚ್ಚುವ ಪರಿಸ್ಥಿತಿಗೆ ಬಂದು ತಲುಪಿದವು.

ಇಷ್ಟಾದರೂ ದೇಶಕ್ಕಾಗಿ ಇದೇ ಮಧ್ಯಮ ಮತ್ತು ಕೆಳ ವರ್ಗದ ಜನ ಮೋದಿ ಬೆನ್ನಿಗೆ ಬೆಂಬಲವಾಗಿ ಗಟ್ಟಿಯಾಗಿ ನಿಂತಿದ್ದು ನಿಜಕ್ಕೂ ಅಭೂತಪೂರ್ವ. ಜನತೆಯ ಈ ಬೆಂಬಲ ಕಂಡು ವಿಶ್ವದ ಇತರ ರಾಷ್ಟ್ರಗಳು ಬೆಚ್ಚಿ ಬಿದ್ದಿದ್ದು ಸುಳ್ಳಲ್ಲ. ಇದೇ ಕಾರಣಕ್ಕೆ ವಿದೇಶಿ ಮಾಧ್ಯಮಗಳು, ಆರ್ಥಿಕ ತಜ್ಞರು ಕೂಡ ಮೋದಿ ನಿರ್ಧಾರವನ್ನು ಬೆಂಬಲಿಸತೊಡಗಿದರು.

ದೇಶದ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿದ್ದ ಶೇ.86ರಷ್ಟು 1000 ಮತ್ತು 500 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದಲ್ಲದೇ ದೇಶದ ಅರ್ಥ ವ್ಯವಸ್ಥೆಯನ್ನು ಸ್ಥಿತ್ಯಂತರವಾಗಿ ಇಡುವಲ್ಲಿ ಮೋದಿ ಸರ್ಕಾರ ಬಹುತೇಕ ಯಶಸ್ವಿಯಾಗಿದೆ.

ಸಾಧಿಸಿದ್ದೇನು?, ಸಾಧಿಸಬೇಕಾಗಿದ್ದೇನು?:

ನೋಟು ಅಮಾನ್ಯೀಕರಣಗೊಂಡು ಇಂದಿಗೆ ಬರೋಬ್ಬರಿ ಎರಡು ವರ್ಷ ಸಂದಿದೆ. ಮೋದಿ ನಿರ್ಧಾರದ ಪ್ರಸ್ತುತತೆಯನ್ನು ಅಳೆಯಲು ಇದು ಸಕಾಲ. ನೋಟು ಅಮಾನ್ಯೀಕರಣದ ದಿನ ಪ್ರಧಾಣಿ ಮೋದಿ ನೀಡಿದ್ದ ಕಾರಣಗಳಲ್ಲಿ ಎಷ್ಟು ಭರವಸೆಗಳು ಈಡೇರಿವೆ ಎಷ್ಟು ಭರವಸೆಗಳು ಸುಳ್ಳಾಗಿವೆ ಎಂಬುದರತ್ತ ಚಿತ್ತ ಹರಿಸಬೇಕಿದೆ.

ಪ್ರಮುಖವಾಗಿ ಕಪ್ಪುಹಣದ ಕುರಿತು ನೋಡಿದರೆ ನೋಟು ಅಮಾನ್ಯೀಕರಣದಿಂದ ಕಪ್ಪುಹಣದ ಮೇಲೆ ನಿಯಂತ್ರಣ ಸಾಧಿಸುವಲ್ಲಿ ಬಹುತೇಕ ಯಶಸ್ವಿಯಾಗಿದೆ ಎಂದೇ ಹೇಳಬೇಕಾಗುತ್ತದೆ. ನೋಟು ಅಮಾನ್ಯೀಕರಣದ ನಂತರ ಜಾರಿಗೆ ತಂದ ಹಲವು ಕಠಿಣ ನಿಬಂಧನೆಗಳು ಕಪ್ಪು ಕುಳಗಳ ನಿದ್ದೆಗಡೆಸಿದ್ದು ಸುಳ್ಳಲ್ಲ.

ಆದರೆ ಭಯೋತ್ಪಾದನೆಗೆ ಕಡಿವಾಣ ಹಾಕುವಲ್ಲಿ ಸರ್ಕಾರ ಅಷ್ಟೊಂದು ಯಶಸ್ವಿಯಾಗಿಲ್ಲ ಎಂಬುದು ಹಲವರ ಅಂಬೋಣ. ಕಾರಣ ಕಣಿವೆಯಲ್ಲಿ ಇಂದಿಗೂ ಉಗ್ರರ ಉಪಟಳ ಅಧಿಕವಾಗಿದೆ. ಅಲ್ಲದೇ ಗಡಿಯಾಚೆಯಿಂದ ಉಗ್ರರ ಒಳನುಸುಳುವಿಕೆ ಇಂದಿಗೂ ನಿಂತಿಲ್ಲ.

ಇನ್ನು ದೇಶದ ಅರ್ಥ ವ್ಯವಸ್ಥೆಯತ್ತ ಚಿತ್ತ ಹರಿಸುವುದಾದರೆ, ದೇಶದ ಆರ್ಥಿಕ ಅಭಿವೃದ್ಧಿ ಆರಂಭದಲ್ಲಿ ಕೊಂಚ ಡೋಲಾಯಮಾನವಾಗಿದ್ದರೂ, ಅದನ್ನು ಮತ್ತೆ ಸರಿದಾರಿಗೆ ತರುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ದೇಶದ ಜಿಡಿಪಿ ಬೆಳವಣಿಗೆ ಕಾಪಾಡುವಲ್ಲಿ ಮತ್ತು ಬೆಳವಣಿಗೆ ದರ ವೃದ್ಧಿಸುವಲ್ಲಿ ಸರ್ಕಾರ ಸಫಲವಾಗಿದೆ.

ಅದರಂತೆ ನೋಟು ಅಮಾನ್ಯೀಕರಣದ ಬಳಿಕ ಜಾರಿಗೆ ತಂದ ತೆರಿಗೆ ವ್ಯವಸ್ಥೆ ಸುಧಾರಣೆಯಿಂದ ಜನತೆ ತೆರಿಗೆ ಅಭಿಯಾನದಲ್ಲಿ ಹೆಚ್ಚೆಚ್ಚು ಭಾಗವಹಿಸುವಂತಾಗಿದ್ದು ಮೋದಿ ಅವರ ಜಯ ಎಂತಲೇ ವಿಶ್ಲೇಷಿಸಬಾಕಾಗುತ್ತದೆ.

ದುಡಿಯುವ ಕೈಗಳಿಗೆ ತುಂಬಬೇಕಿದೆ ಶಕ್ತಿ:

ಇದೇ ವೇಳೆ ನೋಟು ಅಮಾನ್ಯೀಕರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಅಸಂಘಟಿತ ಕಾರ್ಮಿಕ ವಲಯವನ್ನು ಮೇಲೆತ್ತುವ ಕಾರ್ಯ ನಡೆಯಬೇಕಿದೆ ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಪ್ರಮುಖವಾಗಿ ಸಣ್ಣ, ಮಧ್ಯಮ ಹಾಗೂ ಗುಡಿ ಕೈಗಾರಿಕೆಯ ಉತ್ತೇಜನಕ್ಕೆ ಸರ್ಕಾರ ಅತ್ಯಂತ ವೇಗವಾಗಿ ಕ್ರಮಗಳನ್ನು ಕೈಗೊಳ್ಳಬೇಕಿದೆ. ಇದೇ ಕಾರಣಕ್ಕಾಗಿ ಪ್ರಧಾನಿ ಮೋದಿ ಇತ್ತೀಚಿಗೆ 50 ನಿಮಿಷದಲ್ಲಿ 1 ಕೋಟಿ ರೂ. ಸಾಲದ ಯೋಜನೆ ಘೋಷಣೆ ಮಾಡಿ ಈ ವರ್ಗದ ಸಹಾಯಕ್ಕೆ ಮುಂದಾಗಿದ್ದಾರೆ.

ವಿಪಕ್ಷಗಳ ಆರೋಪ ನಿಜವೇ?:

ಈ ಮಧ್ಯೆ ನೋಟು ಅಮಾನ್ಯೀಕರಣವನ್ನು ವಿರೋಧಿಸುತ್ತಿರುವ ಪ್ರತಿಪಕ್ಷಗಳು, ಪ್ರಮುಖವಾಗಿ ಕಾಂಗ್ರೆಸ್ ಇಂದು ದೇಶಾದ್ಯಂತ ಕಪ್ಪು ದಿನ ಆಚರಿಸಲು ನಿರ್ಧರಿಸಿದೆ. ಅದರಂತೆ ಇತರ ಪ್ರಮುಖ ವಿರೋಧ ಪಕ್ಷಗಳೂ ಸರ್ಕಾರದ ನಿರ್ಧಾರ ಅತ್ಯಂತ ಅಮಾನವೀಯ ಎಂದು ಬಣ್ಣಿಸಿವೆ.

ಈ ವಿಷಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿರುವ ಕಾಂಗ್ರೆಸ್, ನೋಟು ಅಮಾನ್ಯೀಕರಣದ ಎರಡನೇ ವರ್ಷಾಚರಣೆ ದಿನವೇ ಬಾಲಿವುಡ್ ಚಿತ್ರ ‘ಥಗ್ಸ್ ಆಫ್ ಹಿಂದೂಸ್ಥಾನ’ ಬಿಡುಗಡೆಯಾಗುತ್ತಿರುವುದು ಕಾಕತಾಳೀಯ ಎಂದು ಮೋದಿ ಸರ್ಕಾರದತ್ತ ವ್ಯಂಗ್ಯದ ಬಾಣ ಬಿಟ್ಟಿದೆ.

ಅಧಿಕ ಮೌಲ್ಯದ ನೋಟುಗಳ ಅನಾಣ್ಯೀಕರಣದಿಂದ ಆದ ವೆಚ್ಚ ಮತ್ತು ನಷ್ಟವನ್ನು ಈ ದೇಶದ ಪ್ರತಿಯೊಬ್ಬ ಪ್ರಜೆ ಕೂಡ ಭರಿಸಿದ್ದಾರೆ. ಪ್ರಧಾನಿ ಮೋದಿಯವರ ಕೆಲವು ಆಪ್ತ ಉದ್ಯಮಿಗಳಿಗೆ ಮಾತ್ರ ಲಾಭವಾಗಿದೆ. ನಮ್ಮ ದೇಶದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವಕ್ಕೆ ಅನಾಣ್ಯೀಕರಣ ಕಪ್ಪು ದಿನವಾಗಿದೆ ಎಂಬುದು ನೋಟು ಅಮಾನ್ಯೀಕರಣವನ್ನು ವಿರೋಧಿಸುವವರ ನಿಲುವಾಗಿದೆ.

ಮೋದಿ ಗೆದ್ದಿದ್ದಾರಾ?:

ಅದೇನೆ ಇರಲಿ ನೋಟು ಅಮಾನ್ಯೀಕರಣ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸರ್ಕಾರವೊಂದು ತೆಗೆದುಕೊಂಡು ಅತ್ಯಂತ ದಿಟ್ಟ ಮತ್ತು ಕ್ರಾಂತಿಕಾರಿ ನಿರ್ಧಾರ ಎಂಬುದರಲ್ಲಿ ಎರಡು ಮಾತಿಲ್ಲ. ಈ ನಿರ್ಧಾರದಲ್ಲಿರುವ ಕೆಲವು ಲೋಪದೋಷಗಳನ್ನು ಸರಿಪಡಿಸಿ ಮತ್ತೆ ಅರ್ಥ ವ್ಯವಸ್ಥೆಗೆ ವೇಗ ನೀಡಿದರೆ ಖಂಡಿತ ನೋಟು ಅಮಾನ್ಯೀಕರಣದ ಉದ್ದೇಶ ಈಡೇರಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.

Follow Us:
Download App:
  • android
  • ios